ADVERTISEMENT

ಮಗನಿಗೆ ಬಿಳಿಯ ವೈದ್ಯರೇ ಚಿಕಿತ್ಸೆ ನೀಡಬೇಕೆಂದು ಪಟ್ಟು ಹಿಡಿದ ಕೆನಡಾ ಮಹಿಳೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 8:40 IST
Last Updated 22 ಜೂನ್ 2017, 8:40 IST
ಮಗನಿಗೆ ಬಿಳಿಯ ವೈದ್ಯರೇ ಚಿಕಿತ್ಸೆ ನೀಡಬೇಕೆಂದು ಪಟ್ಟು ಹಿಡಿದ ಕೆನಡಾ ಮಹಿಳೆ
ಮಗನಿಗೆ ಬಿಳಿಯ ವೈದ್ಯರೇ ಚಿಕಿತ್ಸೆ ನೀಡಬೇಕೆಂದು ಪಟ್ಟು ಹಿಡಿದ ಕೆನಡಾ ಮಹಿಳೆ   

ಮಿಸ್ಸಿಸೌಗ್/ ಕೆನಡಾ: ಕೆನಡಾದ ಒಂಟಾರಿಯೊ ಪ್ರಾಂತ್ಯದ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ತಮ್ಮ ಮಗನಿಗೆ ಬಿಳಿಯ ವೈದ್ಯರೇ ಚಿಕಿತ್ಸೆ ನೀಡಬೇಕು ಪಟ್ಟು ಹಿಡಿದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಭಾನುವಾರ ಮಹಿಳೆಯೊಬ್ಬರು ಆಸ್ಪತ್ರೆಗೆ ತಮ್ಮ ಮಗನನ್ನು ಕರೆದುಕೊಂಡು ಬಂದಿದ್ದರು. ಬಾಲಕನನ್ನು ಪಾಕಿಸ್ತಾನ ಮೂಲದ ವೈದ್ಯರೊಬ್ಬರು ಪರೀಕ್ಷಿಸಲು ಮುಂದಾಗಿದ್ದರು. ಈ ವೇಳೆ ಮಹಿಳೆ, ‘ನನ್ನ ಮಗನಿಗೆ ಪಾಕಿಸ್ತಾನದ ವೈದ್ಯರು ಚಿಕಿತ್ಸೆ ನೀಡುವುದು ಬೇಡ. ಬಿಳಿಯ ವೈದ್ಯರೇ ನನ್ನ ಮಗನಿಗೆ ಚಿಕಿತ್ಸೆ ನೀಡಬೇಕು’ ಎಂದು ಪಟ್ಟು ಹಿಡಿದಿದ್ದರು.

ಪಾಕಿಸ್ತಾನ ಮೂಲದ ಆ ವೈದ್ಯ ‘ಕಂದು ಬಣ್ಣದ ಹಲ್ಲಿನವರು’ ಎಂಬ ಕಾರಣಕ್ಕೆ ಮಗನಿಗೆ ಚಿಕಿತ್ಸೆ ಕೊಡಿಸಲು ಮಹಿಳೆ ಹಿಂದೇಟು ಹಾಕಿದ್ದಾರೆ. ಬಿಳಿಯ ಬಣ್ಣದ ವೈದ್ಯರು ಬರಲು ಸಂಜೆ 4 ಗಂಟೆಯಾಗುತ್ತದೆ ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ. ಇದರಿಂದ ಇನ್ನಷ್ಟು ಕುಪಿತರಾದ ಮಹಿಳೆ, ‘ಇಷ್ಟು ದೊಡ್ಡ ಆಸ್ಪತ್ರೆಯಲ್ಲಿ ಒಬ್ಬರೂ ಬಿಳಿಯ ವೈದ್ಯರು ಇಲ್ಲವೇ? ಎದೆ ನೋವಿನಿಂದ ಬಳಲುತ್ತಿರುವ ನನ್ನ ಮಗ ಸಂಜೆ 4 ಗಂಟೆಯವರೆಗೂ ಇಲ್ಲಿ ಕಾಯ್ದು ಕೂರಬೇಕೆ?’ ಎಂದು ಪ್ರಶ್ನಿಸಿದ್ದಾರೆ.

ಮಹಿಳೆಯ ಈ ವರ್ತನೆಯನ್ನು ಕಂಡು ವ್ಯಕ್ತಿಯೊಬ್ಬರು ಅವರ ಬಳಿ ಬಂದು, ‘ನಿಮ್ಮ ವರ್ತನೆ ಅಸಭ್ಯವಾಗಿದ್ದು, ನೀವು ಜನಾಂಗೀಯ ನಿಂದನೆಯಲ್ಲಿ ತೊಡಗಿದ್ದೀರಿ. ನಿಮ್ಮ ಮಗನಿಗೆ ಈಗ ಬೇಕಿರುವುದು ವೈದ್ಯರು ಅವರು ಯಾವ ಬಣ್ಣದವರಾಗಿದ್ದರೇನು’ ಎಂದು ಹೇಳಿದ್ದಾರೆ.

ADVERTISEMENT

ಆ ವ್ಯಕ್ತಿಯ ಮೇಲೂ ಕೂಗಾಡಿದ ಆ ಮಹಿಳೆ, ‘ನೀವು ಕಂದು ಬಣ್ಣದವರು, ನೀವು ಕಂದು ಬಣ್ಣದವರು. ನಾನು ಬಿಳಿಯವಳು ಎಂಬ ಕಾರಣಕ್ಕೆ ನನ್ನ ಮೇಲೆ ದಾಳಿ ನಡೆಸುತ್ತಿದ್ದೀರಿ’ ಎಂದು ರಂಪಾಟ ಮಾಡಿದ್ದಾರೆ.

‘ಬಿಳಿಯ ವೈದ್ಯರೇ ತಮ್ಮ ಮಗನಿಗೆ ಚಿಕಿತ್ಸೆ ನೀಡಬೇಕು ಎಂದು ಪಟ್ಟು ಹಿಡಿದ ಮಹಿಳೆಯ ಈ ನಡೆ ಜನಾಂಗೀಯ ನಿಂದನೆಯಾಗಿದೆ’ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಡೀ ಘಟನೆಯನ್ನು ವಿಡಿಯೊ ಮಾಡಿದ ಭಾರಧ್ವಾಜ್ ಎಂಬುವರು, ‘ನಾನು ಸಹಾಯ ಮಾಡಲು ಆಗಲಿಲ್ಲ. ವಿಡಿಯೊ ಮಾಡಿದ್ದೇನೆ. ಇದು ನಿಜವಾಗಿಯೂ ಅನುಚಿತ ವರ್ತನೆ. ಇದನ್ನು ಜನರ ಗಮನಕ್ಕೆ ತರದೇ ಇರಲು ಸಾಧ್ಯವಿಲ್ಲ’ ಎಂದಿದ್ದಾರೆ.

ಈ ಘಟನೆ ಬಗ್ಗೆ ಟ್ವೀಟ್ ಮಾಡಿರುವ ಒಂಟಾರಿಯೊದ ಆಡಳಿತ ಮುಖ್ಯಸ್ಥೆ ಕಥ್ಲೀನ್ ವಿನ್ನೆ ಅವರು, ‘ಒಂಟಾರಿಯಾದ ಯಾವುದೇ ಪ್ರದೇಶದಲ್ಲಿ ಜನಾಂಗೀಯ ನಿಂದನೆಯಂಥ ಘಟನೆ ನಡೆದಿಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.