ಸ್ಟಾಕ್ಹೋಂ (ಎಪಿ): ‘ಸೂಕ್ಷ್ಮದರ್ಶಕದ ದೃಷ್ಟಿಯನ್ನು ತೀಕ್ಷ್ಣ’ಗೊಳಿಸಿದ ಮೂವರು ವಿಜ್ಞಾನಿಗಳು ಈ ಬಾರಿಯ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಅಮೆರಿಕದ ಎರಿಕ್ ಬೆಟ್ಜಿಗ್ ಮತ್ತು ವಿಲಿಯಂ ಮೊಯೆರ್ನರ್ ಹಾಗೂ ಜರ್ಮನಿಯ ಸ್ಟಿಫನ್ ಹೆಲ್ ಈ ಗೌರವಕ್ಕೆ ಪಾತ್ರರಾದವರು.
ಈ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಸೂಕ್ಷ್ಮದರ್ಶಕವು ಸಾಂಪ್ರದಾಯಿಕ ದ್ಯುತಿಸೂಕ್ಷ್ಮದರ್ಶಕದ ದೃಷ್ಟಿ ಸಾಮರ್ಥ್ಯದ ಮಿತಿಯನ್ನು ವಿಸ್ತರಿಸಿದೆ ಎಂದು ದಿ ರಾಯಲ್ ಸ್ವೀಡಿಸ್ ಅಕಾಡೆಮಿ ಹೇಳಿದೆ.
‘ಸಾಂಪ್ರದಾಯಿಕ ದ್ಯುತಿ ಸೂಕ್ಷ್ಮದರ್ಶಕದಿಂದ ಸೂಕ್ಷ್ಮಾತಿಸೂಕ್ಷ್ಮ ಕಣಗಳನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈ ವಿಜ್ಞಾನಿಗಳ ಆವಿಷ್ಕಾರದಿಂದಾಗಿ ಇದೇ ಸೂಕ್ಷ್ಮದರ್ಶಕಗಳನ್ನು ಬಳಸಿ ನ್ಯಾನೊ ಕಣಗಳನ್ನೂ ನೋಡಲು ಸಾಧ್ಯವಾಗಿದೆ’ ಎಂದು ಸ್ವೀಡಿಸ್ ಅಕಾಡೆಮಿ ತಿಳಿಸಿದೆ.
54 ವರ್ಷದ ಬೆಟ್ಜಿಗ್ ಅವರು ವರ್ಜಿನಿಯಾದ ಆಶ್ಬರ್ನ್ನ ಹೊವಾರ್ಡ್ ಹ್ಯೂಸ್ ಮೆಡಿಕಲ್ ವೈದ್ಯಕೀಯ ಸಂಸ್ಥೆಯಲ್ಲಿ ಉದ್ಯೋಗಿ.
ಮೊಯೆರ್ನರ್ ಅವರು ಕ್ಯಾಲಿಫೋರ್ನಿಯಾದ ಸ್ಟ್ಯಾನ್ಫೊರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್. 51 ವರ್ಷದ ಹೆಲ್ ಅವರು ಜರ್ಮನಿಯ ಮ್ಯಾಕ್ಸ್ ಪ್ಲ್ಯಾಂಕ್ ಇನ್ಸ್ಟಿಟ್ಯೂಟ್ ಫಾರ್ ಬಯೋಪಿಸಿಕಲ್ ಕೆಮೆಸ್ಟ್ರಿಯ ನಿರ್ದೇಶಕರು. ‘ನನಗೆ ಆಶ್ಚರ್ಯವಾಗಿದೆ. ಈ ಸುದ್ದಿ ನಂಬಲು ಸಾಧ್ಯವಾಗುತ್ತಿಲ್ಲ’ ಎಂದು ಹೆಲ್ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.