ADVERTISEMENT

ಮೊಬೈಲ್‌ಗಿಂತ ದೊಡ್ಡ ಎಲೆಕ್ಟ್ರಾನಿಕ್‌ ಸಾಧನ ಸಾಗಣೆಗೆ ಅಮೆರಿಕ ನಿಷೇಧ

ಅಮೆರಿಕ ಸರ್ಕಾರ ಆದೇಶ

ಪಿಟಿಐ
Published 21 ಮಾರ್ಚ್ 2017, 20:30 IST
Last Updated 21 ಮಾರ್ಚ್ 2017, 20:30 IST
ಮೊಬೈಲ್‌ಗಿಂತ ದೊಡ್ಡ ಎಲೆಕ್ಟ್ರಾನಿಕ್‌ ಸಾಧನ ಸಾಗಣೆಗೆ ಅಮೆರಿಕ ನಿಷೇಧ
ಮೊಬೈಲ್‌ಗಿಂತ ದೊಡ್ಡ ಎಲೆಕ್ಟ್ರಾನಿಕ್‌ ಸಾಧನ ಸಾಗಣೆಗೆ ಅಮೆರಿಕ ನಿಷೇಧ   
ವಾಷಿಂಗ್ಟನ್‌:  ದುಬೈ ಸೇರಿದಂತೆ ಎಂಟು ಮುಸ್ಲಿಂ ರಾಷ್ಟ್ರಗಳ 10 ವಿಮಾನ ನಿಲ್ದಾಣಗಳಿಂದ ಅಮೆರಿಕಕ್ಕೆ ಬರುವ  ವಿಮಾನಗಳಲ್ಲಿ  ಪ್ರಯಾಣಿಕರು ಎಲೆಕ್ಟ್ರಾನಿಕ್‌ ಸಾಧನಗಳ ಸಾಗಾಟ ಮಾಡುವುದರ ಮೇಲೆ ನಿಷೇಧ ಹೇರಿ ಅಮೆರಿಕ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. 
 
ಎಲೆಕ್ಟ್ರಾನಿಕ್‌ ಸಾಧನಗಳಲ್ಲಿ ಬಾಂಬ್‌ ಅಳವಡಿಸಿ, ಸ್ಫೋಟಿಸಲು ಉಗ್ರರು  ಯೋಜನೆ ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಕಾರಣ ಈ ಕ್ರಮ ಕೈಗೊಂಡಿರುವುದಾಗಿ ಟ್ರಂಪ್‌ ಆಡಳಿತ ಹೇಳಿದೆ. 
 
ಭದ್ರತೆ ದೃಷ್ಟಿಯಿಂದ ಪ್ರಯಾಣಿಕರು ತರುವ ಸ್ಮಾರ್ಟ್‌ಫೋನ್‌ಗಿಂತಲೂ ದೊಡ್ಡದಾದ ಯಾವುದೇ ಎಲೆಕ್ಟ್ರಾನಿಕ್‌ ಸಾಧನವನ್ನು  ವಿಮಾನದೊಳಗೆ ಪ್ರವೇಶಿಸುವ ಮೊದಲು ತಪಾಸಣೆಗೆ ಒಳಪಡಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ. 
 
ಕೈರೊ (ಈಜಿಪ್ಟ್‌), ದುಬೈ ಹಾಗೂ ಅಬುಧಾಬಿ (ಯುಎಇ), ಇಸ್ತಾಂಬುಲ್‌ (ಟರ್ಕಿ), ದೋಹಾ (ಕತಾರ್‌), ಅಮ್ಮಾನ್‌ (ಜೋರ್ಡಾನ್‌),  ಕುವೈತ್‌ ನಗರ, ಕಾಸಾಬ್ಲಾಂಕ್‌ (ಮೊರಾಕ್ಕೊ), ಜೆಡ್ಡಾ, ಹಾಗೂ ರಿಯಾದ್ (ಸೌದಿ ಅರೇಬಿಯಾ)  ನಿಲ್ದಾಣಗಳಿಂದ ಪ್ರಯಾಣಿಸುವವರಿಗೆ ಈ ನಿಷೇಧ ಅನ್ವಯವಾಗಲಿದೆ.
 
ಈ ಒಂಬತ್ತು ವಿಮಾನ ನಿಲ್ದಾಣಗಳಿಂದ ಅಮೆರಿಕದ ಯಾವುದೇ ವಿಮಾನಗಳು ಸಂಚರಿಸುವುದಿಲ್ಲ ಹಾಗಾಗಿ ಈ ಆದೇಶ ಅಮೆರಿಕ ವಿಮಾನಗಳಿಗೆ ಅನ್ವಯವಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. 
 
ನಿಷೇಧ ಹೇರಿದ ಬ್ರಿಟನ್‌ (ಲಂಡನ್‌ ವರದಿ): ಬ್ರಿಟನ್‌ ಕೂಡಾ ಅಮೆರಿಕದ ಹಾದಿ ತುಳಿದಿದ್ದು, ಆರು ಮುಸ್ಲಿಂ ರಾಷ್ಟ್ರಗಳಿಂದ ಬರುವ ವಿಮಾನಗಳಲ್ಲಿ ಪ್ರಯಾಣಿಕರು ಎಲೆಕ್ಟ್ರಾನಿಕ್‌ ಸಾಧನಗಳ ಸಾಗಾಟ ಮಾಡುವುದರ ಮೇಲೆ ನಿಷೇಧ ಹೇರಿದೆ.
**
ನಿಷೇಧ ವ್ಯಾಪ್ತಿಗೆ..
ಲ್ಯಾಪ್‌ಟ್ಯಾಪ್‌, ಟ್ಯಾಬ್ಲೆಟ್‌,ಪೊರ್ಟಬಲ್‌ ಆಟದ ಉಪಕರಣಗಳು, ಡಿವಿಡಿ, ಪ್ರಿಂಟರ್‌, ಸ್ಕ್ಯಾನರ್‌ಗಳು ನಿಷೇಧದ ವ್ಯಾಪ್ತಿಗೆ ಬರಲಿವೆ. ಹಾರಾಟಕ್ಕೆ ಅನುಮತಿ ಇಲ್ಲ: 96 ಗಂಟೆಯೊಳಗೆ ಈ ಆದೇಶ ಪಾಲಿಸದೇ ಇದ್ದರೆ ಅಂತಹ ವಿಮಾನಯಾನ ಸಂಸ್ಥೆಗಳಿಗೆ ಅಮೆರಿಕದೊಳಗೆ ಹಾರಾಟಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು  ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.