ADVERTISEMENT

ರಾಜೀನಾಮೆ ನೀಡಲು ಮುಗಾಬೆ ನಿರಾಕರಣೆ

ಏಜೆನ್ಸೀಸ್
Published 17 ನವೆಂಬರ್ 2017, 19:24 IST
Last Updated 17 ನವೆಂಬರ್ 2017, 19:24 IST
ರಾಜೀನಾಮೆ ನೀಡಲು ಮುಗಾಬೆ ನಿರಾಕರಣೆ
ರಾಜೀನಾಮೆ ನೀಡಲು ಮುಗಾಬೆ ನಿರಾಕರಣೆ   

ಹರಾರೆ: ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ್ದು, ಸೇನೆಯ ಹಿರಿಯ ಅಧಿಕಾರಿಗಳು ಶುಕ್ರವಾರ ಅವರೊಂದಿಗೆ ನಡೆಸಿದ ಮಾತುಕತೆ ವಿಫಲವಾಗಿದೆ.

ಮಾತುಕತೆಗಾಗಿ ಮುಗಾಬೆ ಅವರನ್ನು ಖಾಸಗಿ ನಿವಾಸದಿಂದ ಭದ್ರತಾ ಸಿಬ್ಬಂದಿ ಸಂಸತ್‌ಗೆ ಕರೆದುಕೊಂಡು ಬಂದಿದ್ದರು. ದಕ್ಷಿಣ ಆಫ್ರಿಕಾ ಅಭಿವೃದ್ಧಿ ಸಮುದಾಯ (ಎಸ್‌ಎಡಿಸಿ) ಪ್ರಾದೇಶಿಕ ಸಂಘದ ಪ್ರತಿನಿಧಿಗಳು ಸಹ ಮಾತುಕತೆಯಲ್ಲಿ ಪಾಲ್ಗೊಂಡಿದ್ದರು.

‘ಮುಗಾಬೆ ರಾಜೀನಾಮೆಗೆ ನಿರಾಕರಿಸುತ್ತಿದ್ದಾರೆ. ಬಹುಶಃ ಅವರು ಇದಕ್ಕಾಗಿ ಸಮಯ ಕೋರುತ್ತಿದ್ದಾರೆ’ ಎಂದು ಸೇನಾಪ‍ಡೆಯ ಮೂಲಗಳು ತಿಳಿಸಿವೆ.

ADVERTISEMENT

ಪ್ರಸ್ತುತ ಜಿಂಬಾಬ್ವೆ ಆಡಳಿತ ಸೇನಾಪಡೆ ನಿಯಂತ್ರಣದಲ್ಲಿದ್ದು, ರಾಜಧಾನಿ ಹರಾರೆಯಲ್ಲಿ ಸಶಸ್ತ್ರ ವಾಹನಗಳು ಗಸ್ತು ತಿರುಗುವುದನ್ನು ಮುಂದುವರಿಸಿವೆ.

ಸಾರ್ವಜನಿಕವಾಗಿ ಕಾಣಿಸಿಕೊಂಡ ಮುಗಾಬೆ: ಜಿಂಬಾಬ್ವೆಯನ್ನು ಸೇನೆ ನಿಯಂತ್ರಣಕ್ಕೆ ತೆಗೆದುಕೊಂಡ ನಂತರ ಮೊದಲ ಬಾರಿಗೆ ಮುಗಾಬೆ ಅವರು ಶುಕ್ರವಾರ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಹರಾರೆಯ ಹೊರವಲಯದಲ್ಲಿ ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು, ವೇದಿಕೆ ಏರಿ ಜನರೊಂದಿಗೆ ರಾಷ್ಟ್ರಗೀತೆ ಹಾಡಿದರು. ಮುಗಾಬೆ ಅವರ ರಕ್ಷಣಾ ಸಿಬ್ಬಂದಿ ಈ ವೇಳೆ ಹಾಜರಿದ್ದರು.

ಮಾತುಕತೆ ಪ್ರಗತಿಯಲ್ಲಿ: ರಾಜೀನಾಮೆ ನೀಡುವಂತೆ ಮುಗಾಬೆ ಅವರ ಮನವೊಲಿಸುವ ಪ್ರಯತ್ನ ಪ್ರಗತಿಯಲ್ಲಿದೆ ಎಂದು ಸೇನೆ ಹೇಳಿದೆ.

ಅಧಿಕಾರವನ್ನು ನೂತನ ಸರ್ಕಾರಕ್ಕೆ ಹಸ್ತಾಂತರಿಸಲು ಮುಗಾಬೆ ಅವರನ್ನು ಒಪ್ಪಿಸುವ ಸಲುವಾಗಿ ಮಾತುಕತೆ ನಡೆಸುವ ಪ್ರಯತ್ನ ನಡೆದಿದೆ. ಆಡಳಿತಾರೂಢ ಪಕ್ಷ ಮುಂದಿನ ತಿಂಗಳು ಸಭೆ ಸೇರಲಿದೆ. ಮುಗಾಬೆ ಅವರ ಅಧಿಕಾರಾವಧಿ ಮುಂದಿನ ವರ್ಷ ಪೂರ್ಣಗೊಳ್ಳಲಿದೆ. ಆದರೆ, ಇನ್ನೂ ಚುನಾವಣಾ ದಿನಾಂಕ ನಿಗದಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.