ADVERTISEMENT

ರಾಜ್ಯದ ಮೂವರು ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಇಂಟೆಲ್‌ ಸೈನ್ಸ್‌ ಅಂತರರಾಷ್ಟ್ರೀಯ ಪ್ರಶಸ್ತಿ ಪ್ರಕಟ

ಪಿಟಿಐ
Published 20 ಮೇ 2017, 19:30 IST
Last Updated 20 ಮೇ 2017, 19:30 IST

ವಾಷಿಂಗ್ಟನ್‌: ಪ್ರೌಢಶಾಲಾ ಮಟ್ಟದ  ಅತೀ ದೊಡ್ಡ ಅಂತರರಾಷ್ಟ್ರೀಯ ವಿಜ್ಞಾನ ಸ್ಪರ್ಧೆ ಹಾಗೂ ಎಂಜಿನಿಯರಿಂಗ್‌ ಸಮಾವೇಶದಲ್ಲಿ  ಬೆಂಗಳೂರಿನ ಸಾಹಿತಿ ಪಿಂಗಳಿ ಹಾಗೂ ಉಡುಪಿಯ ಚೈತನ್ಯ ಹಾಗೂ ಗೀವ್‌ ಜಾರ್ಜ್‌ ಪ್ರಶಸ್ತಿ ಪಡೆದಿದ್ದಾರೆ.

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ‘ಕೆರೆಗಳ ನಿಗಾ ವ್ಯವಸ್ಥೆ’ ಅಭಿವೃದ್ಧಿಪಡಿಸಿದಕ್ಕಾಗಿ ‘ಪರಿಸರ ವಿಜ್ಞಾನ ವಿಭಾಗ’ದಲ್ಲಿ ಬೆಂಗಳೂರಿನ ಇನ್‌ವೆಂಚರ್‌ ಅಕಾಡೆಮಿಯ ವಿದ್ಯಾರ್ಥಿನಿ ಈ ಪ್ರಶಸ್ತಿ ಪಡೆದಿದ್ದಾರೆ.

‘ಸ್ಮಾರ್ಟ್‌ಫೋನ್‌ ಆಧರಿತ, ಮಲ್ಟಿಸ್ಪೆಕ್ಟ್ರಲ್‌ ಇಮೇಜಿಂಗ್ ಸಿಸ್ಟಮ್’  ಕಂಡುಹಿಡಿದ ಉಡುಪಿಯ ಲಿಟಲ್‌ ರಾಕ್‌ ಇಂಡಿಯನ್‌ ಸ್ಕೂಲ್‌ನ ಚೈತನ್ಯ ಹಾಗೂ ಗ್ರೀವ್‌ ಜಾರ್ಜ್‌ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಕಳೆದೊಂದು ವಾರದಿಂದ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಶ್ವದ ವಿವಿಧ ಭಾಗಗಳಿಂದ ಬಂದಿದ್ದ 1,700 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸ್ಪರ್ಧೆಯ ಪ್ರಮುಖ ನಾಲ್ಕು ವಿಭಾಗದಲ್ಲಿ ಭಾರತದ ವಿದ್ಯಾರ್ಥಿಗಳೇ ವಿಜೇತರಾಗಿ ಹೊರಹೊಮ್ಮಿದ್ದಾರೆ.

‘ಗಣಿತ, ವಿಜ್ಞಾನ ಸ್ಪರ್ಧೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಪ್ರದರ್ಶಿಸಿದ್ದಾರೆ’ ಎಂದು ಸೊಸೈಟಿ ಫಾರ್‌ ಸೈನ್ಸ್‌ ಆ್ಯಂಡ್‌ ಪಬ್ಲಿಕ್‌ ಸಂಸ್ಥೆಯ ಅಧ್ಯಕ್ಷೆ ಮಾಯಾ ಅಜ್ಮೆರಾ ಸಂತಸ ವ್ಯಕ್ತಪಡಿಸಿದ್ದಾರೆ. ಲಾಸ್‌ ಏಂಜಲೀಸ್‌ನ ಕನ್ವೆನ್ಷನ್‌ ಸೆಂಟರ್‌ನಲ್ಲಿ ಶುಕ್ರವಾರ ಪ್ರಶಸ್ತಿ ವಿತರಣೆ ನಡೆಯಿತು.

ಪರಿಸರ ಎಂಜಿನಿಯರಿಂಗ್‌ ವಿಭಾಗದಲ್ಲಿ  ಜೈವಿಕ ವಿದಳನ ಕಂಡುಹಿಡಿದ ಜೆಮ್‌ಶೆಡ್‌ಪುರದ 12ನೇ ತರಗತಿ ವಿದ್ಯಾರ್ಥಿ ಪ್ರಶಾಂತ್‌ ರಂಗನಾಥನ್‌ ಪ್ರಶಸ್ತಿ ಪಡೆದಿದ್ದು, ಇದರಿಂದ ದೇಶದ ರೈತರಿಗೆ ನೆರವಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.