ADVERTISEMENT

ಲಂಕಾದಲ್ಲಿ ಭೂಕುಸಿತ: 200 ಜನರು ಸಮಾಧಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2014, 12:39 IST
Last Updated 30 ಅಕ್ಟೋಬರ್ 2014, 12:39 IST

ಕೊಲಂಬೊ (ಪಿಟಿಐ): ಶ್ರೀಲಂಕಾದಲ್ಲಿ ಸುರಿದ ಭಾರಿ ಮಳೆಗೆ ಭೀಕರ ಭೂಕುಸಿತ ಉಂಟಾಗಿದ್ದು, ಸುಮಾರು 200 ಜನರು ಸಜೀವ ಸಮಾಧಿಯಾಗಿದ್ದಾರೆ. ಈ ತಾಣದಲ್ಲಿ ಭಾರತ ಮೂಲದ ಕಾರ್ಮಿಕರು ಪ್ರಧಾನವಾಗಿ ವಾಸಿಸುತ್ತಿದ್ದರು ಎನ್ನಲಾಗಿದ್ದು, ಸೇನೆ ಸೇರಿದಂತೆ ವಿವಿಧ ಭದ್ರತಾ ಪಡೆಗಳು ಗುರುವಾರ ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ.

ಬದುಲ್ಲಾ ಜಿಲ್ಲೆಯ ಮೀರಿಯಾಬೆಡ್ಡಾ ಚಹಾ ಎಸ್ಟೇಟ್‌ನಲ್ಲಿ ಬುಧವಾರ ಈ ಅವಘಡ ಸಂಭವಿಸಿದ್ದು, 120 ಕಾರ್ಮಿಕರ ಮನೆಗಳು ನಾಮಾವಶೇಷಗೊಂಡಿವೆ.

ಇತ್ತೀಚಿನ ಮಾಹಿತಿಯ ಪ್ರಕಾರ, ಘಟನಾ ಸ್ಥಳದಲ್ಲಿ 192 ಜನರು ಕಾಣೆಯಾಗಿದ್ದಾರೆ ಎನ್ನಲಾಗಿದ್ದು, ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ ಎಂದು ವಿಪತ್ತು ನಿರ್ವಹಣಾ ಕೇಂದ್ರದ ಸಹಾಯಕ ನಿರ್ದೇಶಕ ಪ್ರದೀಪ್ ಕೊಡಿಪ್ಪಿಲಿ ತಿಳಿಸಿದ್ದಾರೆ.

ADVERTISEMENT

817 ನಿರ್ವಸಿತ ಜನರನ್ನು ಅಂಪಿಟಿಕಾಂಡ ಹಾಗೂ ಕೊಸ್ಲಾಂಡದಲ್ಲಿರುವ ಎರಡು ಶಿಬಿರಗಳಲ್ಲಿ ಇರಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಬದುಕುಳಿದವರ ಸಾಧ್ಯತೆಗಳು ತುಂಬಾ ಕ್ಷೀಣವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರಾದರೂ ರಾಷ್ಟ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ (ಎನ್‌ಬಿಆರ್‌ಒ) ಐದು ತಂಡಗಳೊಂದಿಗೆ ಸೇನೆ ಹಾಗೂ ಪೊಲೀಸರು ಸತತ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.

ಸೈನಿಕರೊಂದಿಗೆ ಶ್ರೀಲಂಕಾ ವಾಯುಪಡೆಯ ತುಕಡಿಗಳು, ಪೊಲೀಸರು, ಆರೋಗ್ಯ ತಂಡಗಳು ಹಾಗೂ ನಾಗರಿಕ ಪರಿಹಾರ ತಂಡಗಳೂ ಕೂಡ ಶೋಧ ಕಾರ್ಯದಲ್ಲಿ ತೊಡಗಿವೆ.

ಐದು ಬೃಹತ್‌ ಸಾಮರ್ಥ್ಯದ ನೆಲ ಅಗಿಯುವ ಯಂತ್ರಗಳು ಭೂಕುಸಿತ ಸ್ಥಳಕ್ಕೆ ಬಂದಿದ್ದು, ಬೆಳಿಗ್ಗೆಯಿಂದ ರಕ್ಷಣಾ ಕಾರ್ಯ ಆರಂಭಿಸಿವೆ.

‘ಶೋಧ ಕಾರ್ಯಕ್ಕಾಗಿ ಈಗಿರುವ 500 ಸೈನಿಕರದಲ್ಲದೇ ಹೆಚ್ಚುವರಿಯಾಗಿ 200 ಯೋಧರನ್ನು ಕರೆಯಿಸುತ್ತಿದ್ದೇವೆ’ ಎಂದು ಈ ವಿಭಾಗದ ಹಿರಿಯ ಸೇನಾಧಿಕಾರಿ ಮೇಜರ್ ಜನರಲ್‌ ಮಾನೊ ಪೆರಾರಾ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸತತ ಮಳೆಯಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ವ್ಯಾಪಕ ಮಳೆಯಿಂದ ಸುತ್ತಲಿನ ಪರ್ವತಗಳೂ ಅಸ್ಥಿರಗೊಳ್ಳುತ್ತಿವೆ ಎಂದೂ ಅವರು ತಿಳಿಸಿದ್ದಾರೆ.

‘ಅವಶೇಷಗಳಡಿ ಸಿಲುಕಿರುವ ಸಂತ್ರಸ್ತರಿಗೆ ಉಸಿರಾಡಲು ಗಾಳಿ ಹಿಡಿದಿಡುವಂಥ ಯಾವುದೇ ಗಟ್ಟಿಯಾದ ಕಟ್ಟಡಗಳಿರಲಿಲ್ಲ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.