ADVERTISEMENT

ವಿವಾದದ ಲಾಭ ಪಡೆಯಲು ಅನ್ಯರ ಹುನ್ನಾರ

ಚೀನಾ–ಭಾರತ ಗಡಿ ಬಿಕ್ಕಟ್ಟು: ಸರ್ಕಾರಿ ಸ್ವಾಮ್ಯದ ಪತ್ರಿಕೆಯ ಲೇಖನದಲ್ಲಿ ಉಲ್ಲೇಖ

ಪಿಟಿಐ
Published 26 ಜುಲೈ 2017, 19:30 IST
Last Updated 26 ಜುಲೈ 2017, 19:30 IST

ಬೀಜಿಂಗ್: ದಕ್ಷಿಣ ಚೀನಾ ಸಮುದ್ರದ ವಿಚಾರದಲ್ಲಿ ಅನುಸರಿಸಿದ ತಂತ್ರವನ್ನೇ ಅನುಸರಿಸಿ ಚೀನಾ ಮತ್ತು ಭಾರತದ ಗಡಿ ವಿವಾದದಲ್ಲಿ ಲಾಭ ಪಡೆದುಕೊಳ್ಳಲು ಕೆಲವು ದೇಶಗಳು ಹುನ್ನಾರ ನಡೆಸುತ್ತಿವೆ ಎಂದು ಸರ್ಕಾರಿ ಸ್ವಾಮ್ಯದ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ಅಂಕಣದಲ್ಲಿ ಬರೆದಿದೆ.

‘ಲಾಭ ಪಡೆದುಕೊಳ್ಳಲು ಅಮೆರಿಕ, ಆಸ್ಟ್ರೇಲಿಯಾ ನೇರವಾಗಿಯೇ ಯತ್ನಿಸುತ್ತಿವೆ. ಅಲ್ಲದೆ ಇನ್ನೂ ಕೆಲವು ದೇಶಗಳು ಈ ವಿಚಾರವಾಗಿ ಮೂಗು ತೂರಿಸುತ್ತಿವೆ’ ಎಂದು ಅದು ಬರೆದಿದೆ.

‘ಶಾಂತಿಯುತವಾಗಿ ವಿವಾದ ಬಗೆಹರಿಸಿಕೊಳ್ಳಲು ಆಸ್ಟ್ರೇಲಿಯಾ ವಿದೇಶಾಂಗ ಸಚಿವೆ ಜೂಲಿ ಬಿಷಪ್ ಕರೆ ನೀಡಿದ್ದಾರೆ. ಅವರು ಬಿಕ್ಕಟ್ಟಿನ ಸ್ವರೂಪವನ್ನು ಮಸುಕು ಮಾಡುತ್ತಿದ್ದಾರೆ ಮತ್ತು ಭಾರತಕ್ಕೆ ಬೆಂಬಲ ನೀಡುವ ಸೋಗು ಹಾಕಿದ್ದಾರೆ’ ಎಂದು ಲೇಖನದಲ್ಲಿ ಹೇಳಲಾಗಿದೆ.

ADVERTISEMENT

‘ಭಾರತದೊಂದಿಗಿನ ಬಾಂಧವ್ಯದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಗಮನ ನೀಡಿದೆ. ವ್ಯಾಪಾರ ಮತ್ತು ವಲಸೆಗೆ ಸಂಬಂಧಿಸಿದ ವಿಚಾರದಲ್ಲಿ ಆ ಎರಡು ರಾಷ್ಟ್ರಗಳ ನಡುವೆ ಇನ್ನೂ ಭಿನ್ನ ನಿಲುವುಗಳಿವೆ. ಈ ಬಿಕ್ಕಟ್ಟಿನಲ್ಲಿ ಅಮೆರಿಕಕ್ಕೆ ಏನೂ ಲಾಭವಿಲ್ಲ’ ಎಂದು ಅದು ಹೇಳಿದೆ.

‘ಭಾರತ ಮತ್ತು ಚೀನಾ ಎರಡೂ ರಾಷ್ಟ್ರಗಳಿಗೆ ಯುದ್ಧ ಬೇಕಿಲ್ಲ’ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಮುಂದುವರಿದು, ‘1962ರಲ್ಲಿ ಭಾರತ–ಚೀನಾ ಯುದ್ಧದ ಹಿಂದೆ ಅಮೆರಿಕ ಮತ್ತು ಸೋವಿಯತ್ ಒಕ್ಕೂಟದ ಕಾಣದ ಕೈಗಳಿದ್ದವು’ ಎಂದು ನೆನಪಿಸಿದೆ.

***

ಅರ್ಥಪೂರ್ಣ ಮಾತುಕತೆ ಅಸಾಧ್ಯ
ಬೀಜಿಂಗ್ :
ದೋಕಲಮ್ ಪ್ರದೇಶದಿಂದ ಭಾರತವು ಬೇಷರತ್ತಾಗಿ ಹಿಂದೆ ಸರಿಯದಿದ್ದರೆ ಭಾರತದೊಂದಿಗೆ ಅರ್ಥಪೂರ್ಣ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಚೀನಾ ಹೇಳಿದೆ.

‘ಈ ವಿಚಾರವಾಗಿ ನಮ್ಮ ನಿಲುವು ಏನು ಎಂಬುದನ್ನು ವಿದೇಶಾಂಗ ಸಚಿವ ವಾಂಗ್ ಯಿ ಸ್ಪಷ್ಟಪಡಿಸಿದ್ದಾರೆ. ಇದಕ್ಕಿಂತ ಹೆಚ್ಚಿನದೇನೂ ಹೇಳುವುದಕ್ಕಿಲ್ಲ’ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ ಹೇಳಿದ್ದಾರೆ.

‘ಭಾರತದ ಗಡಿಯೊಳಕ್ಕೆ ಚೀನಾ ಪ್ರವೇಶಿಸಿಲ್ಲ ಎಂದು ಭಾರತದ ಹಿರಿಯ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಭಾರತ ತನ್ನ ಸೇನೆಯನ್ನು ಹಿಂದೆ ಕರೆಸಿಕೊಳ್ಳಬೇಕು’ ಎಂದು ಮಂಗಳವಾರ ವಾಂಗ್ ಹೇಳಿದ್ದರು.

***

ಡೊಭಾಲ್‌– ಕ್ಸಿ ಭೇಟಿ
ಬೀಜಿಂಗ್‌:
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಅವರು ಬ್ರಿಕ್ಸ್‌ ರಾಷ್ಟ್ರಗಳ ಉನ್ನತ ಭದ್ರತಾ ಅಧಿಕಾರಿಗಳ ಜೊತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರನ್ನು ಶುಕ್ರವಾರ ಭೇಟಿ ಮಾಡಲಿದ್ದಾರೆ.

ಈ ವಿಷಯವನ್ನು ಇಲ್ಲಿನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 27 ಮತ್ತು 28ರಂದು ನಡೆಯಲಿರುವ ಬ್ರಿಕ್ಸ್‌ ರಾಷ್ಟ್ರಗಳ ಸಭೆಯಲ್ಲಿ ಡೊಭಾಲ್‌ ಪಾಲ್ಗೊಳ್ಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.