ಇಸ್ಲಾಮಾಬಾದ್ (ಪಿಟಿಐ): ಧರ್ಮನಿಂದನೆಯ ಆರೋಪದಲ್ಲಿ ನಟಿ ವೀಣಾ ಮಲ್ಲಿಕ್ ಸೇರಿದಂತೆ ನಾಲ್ವರಿಗೆ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ 26 ವರ್ಷಗಳ ಶಿಕ್ಷೆ ವಿಧಿಸಿದೆ.
ಕಾರ್ಯಕ್ರಮವೊಂದರಲ್ಲಿ ವೀಣಾ ಮಲ್ಲಿಕ್ ಮತ್ತು ಆಕೆಯ ಪತಿ ಬಷೀರ್ ಅವರ ಅಣಕು ಮದುವೆಯನ್ನು ಜಿಯೊ ವಾಹಿನಿ ಕಳೆದ ಮೇ ತಿಂಗಳಿನಲ್ಲಿ ಪ್ರಸಾರ ಮಾಡಿತ್ತು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಧಾರ್ಮಿಕ ಗೀತೆಯೊಂದು ಪ್ರಸಾರವಾಗುತ್ತಿತ್ತು. ಇದು ಇಸ್ಲಾಂ ಧರ್ಮವನ್ನು ನಿಂದಿಸುವಂತಿದೆ ಎಂದು ವೀಣಾ ಹಾಗೂ ಬಷೀರ್ ದಂಪತಿ, ಜಿಯೊ ವಾಹಿನಿ ಮಾಲೀಕ ಶಕಿಲುರ್ ರೆಹಮಾನ್ ಹಾಗೂ ಕಾರ್ಯಕ್ರಮದ ನಿರ್ವಹಣೆ ಉಸ್ತುವಾರಿ ವಹಿಸಿಕೊಂಡಿದ್ದ ಶಾಹಿಸ್ತಾ ವಾಹಿದಿ ಅವರ ವಿರುದ್ಧ ದೂರು ದಾಖಲಿಸಲಾಗಿತ್ತು.
ವಿಚಾರಣೆ ನಡೆಸಿದ ನ್ಯಾಯಾಧೀಶ ಶಹಬಾಜ್ ಖಾನ್, ಈ ನಾಲ್ವರೂ ಧರ್ಮ ನಿಂದನೆ ಮಾಡಿರುವುದು ಸಾಬೀತಾಗಿದೆ ಎಂದು
‘ಆಗಬಾರದ್ದೇನೂ ಆಗಿಲ್ಲ. ಉನ್ನತ ಕೋರ್ಟ್ ಮೇಲೆ ನಂಬಿಕೆ ಇದ್ದು, ಅಂತಿಮ ತೀರ್ಪಿನಲ್ಲಿ ನ್ಯಾಯ ಸಿಗಲಿದೆ-’ –ವೀಣಾ ಮಲ್ಲಿಕ್ |
ನಾಲ್ವರಿಗೂ ತಲಾ 26 ವರ್ಷ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದರು.
ಅಲ್ಲದೆ, ಆರೋಪಿಗಳಿಗೆ ತಲಾ 10.3 ಲಕ್ಷ ಪಾಕಿಸ್ತಾನಿ ರೂಪಾಯಿ ದಂಡ ವಿಧಿಸಲಾಗಿದೆ. ದಂಡ ಪಾವತಿಸುವಲ್ಲಿ ವಿಫಲರಾದರೆ ಅವರ ಆಸ್ತಿಗಳನ್ನು ಮಾರಿ ಹಣ ಸಂಗ್ರಹಿಸಬೇಕು ಎಂದು 40 ಪುಟದ ತೀರ್ಪಿನಲ್ಲಿ ಆದೇಶಿಸಲಾಗಿದೆ.
ಆರೋಪಿಗಳು ಗಿಲ್ಗಿತ್ ಬಾಲಿಸ್ತಾನ್ನ ಪ್ರಾದೇಶಿಕ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಬಹುದಾಗಿದೆ ಎಂದು ನ್ಯಾಯಾಧೀಶರು ಹೇಳಿದರು.
ಈ ನಾಲ್ವರೂ ಪಾಕಿಸ್ತಾನದಿಂದ ಹೊರಗಿದ್ದಾರೆ ಎಂದು ವರದಿಯಾಗಿದೆ. ರೆಹಮಾನ್ ಯುಎಇನಲ್ಲಿ ವಾಸಿಸುತ್ತಿದ್ದರೆ, ಉಳಿದ ಮೂವರೂ ಉಗ್ರ ಸಂಘಟನೆಗಳ ಬೆದರಿಕೆಯಿಂದಾಗಿ ವಿದೇಶದಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ. ಆರೋಪಗಳು ಕೇಳಿಬಂದಾಗಲೇ ವಾಹಿದಿ ಮತ್ತು ಜಿಯೊ ಸಮೂಹ ಕ್ಷಮೆಯಾಚಿಸಿದ್ದರೂ, ಮೂಲಭೂತವಾದಿಗಳು ಅದನ್ನು ತಿರಸ್ಕರಿಸಿದ್ದರು.
ಕರಾಚಿ ಮತ್ತು ಇಸ್ಲಾಮಾಬಾದ್ ಸೇರಿದಂತೆ ಹಲವು ನಗರಗಳಲ್ಲಿಯೂ ಈ ನಾಲ್ವರ ವಿರುದ್ಧ ಧರ್ಮ ನಿಂದನೆ ದೂರುಗಳು ದಾಖಲಾಗಿವೆ.
ಹಲವು ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ವೀಣಾ ಮಲ್ಲಿಕ್, ಕನ್ನಡದ ‘ಸಿಲ್ಕ್’ ಚಿತ್ರದಲ್ಲಿಯೂ ನಟಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.