ADVERTISEMENT

ಸಂಗಾತಿ ಬೇಕಿದ್ದರೆ, ದಲ್ಲಾಳಿ ಜತೆ ಪ್ರಯಾಣಿಸಿ...

ಏಜೆನ್ಸೀಸ್
Published 21 ಜುಲೈ 2017, 19:30 IST
Last Updated 21 ಜುಲೈ 2017, 19:30 IST
ಸಂಗಾತಿ ಬೇಕಿದ್ದರೆ, ದಲ್ಲಾಳಿ ಜತೆ ಪ್ರಯಾಣಿಸಿ...
ಸಂಗಾತಿ ಬೇಕಿದ್ದರೆ, ದಲ್ಲಾಳಿ ಜತೆ ಪ್ರಯಾಣಿಸಿ...   

ಇಸ್ಲಾಮಾಬಾದ್‌: ಮದುವೆಯಾಗಲು ಸೂಕ್ತ ಸಂಗಾತಿಗಾಗಿ ಹುಡುಕಾಡಿ, ಹತಾಶರಾದವರಿಗೆ ಇಲ್ಲಿದೆ ಸಿಹಿಸುದ್ದಿ. ನಿಮಗೊಪ್ಪುವ ಮನದನ್ನೆ ಆಯ್ಕೆಗಾಗಿ  ಅಲ್ಲಿಲ್ಲಿ ಓಡಾಡಬೇಕಿಲ್ಲ.

ಮದುವೆ ದಲ್ಲಾಳಿಯ ಜತೆಗೆ ಕಾರಿನಲ್ಲಿ ಪ್ರಯಾಣಿಸಿ, ನಿಮಗೊಪ್ಪುವ ಯುವತಿಯನ್ನು ಆಯ್ಕೆ ಮಾಡುವ ಅವಕಾಶವನ್ನು ಆ್ಯಪ್‌ ಆಧರಿತ ಟ್ಯಾಕ್ಸಿ ಸೇವೆ ಕಲ್ಪಿಸಿದೆ.

ಇಷ್ಟು ಹೇಳಿದ ತಕ್ಷಣ, ನೀವು ಖುಷಿಪಡಬೇಕಿಲ್ಲ. ಇಂತಹ ವಿಭಿನ್ನವಾದ ಸೇವೆಗೆ ಚಾಲನೆ ಸಿಕ್ಕಿರುವುದು ನೆರೆಯ  ಪಾಕಿಸ್ತಾನದಲ್ಲಿ.

ADVERTISEMENT

ಮುಸ್ಲಿಂ ರಾಷ್ಟ್ರಗಳಲ್ಲಿ  ಜನಪ್ರಿಯಗೊಂಡಿರುವ ಉಬರ್‌ ಮಾದರಿಯ ಟ್ಯಾಕ್ಸಿ ಆ್ಯಪ್‌ ಸೇವೆ ‘ಕರೀಂ’ ಪ್ರಯಾಣಿಕರಿಗೆ ಇಂತಹ ಅವಕಾಶ ನೀಡಿದೆ. ‘ನಿಮ್ಮ ಪ್ರಯಾಣ ವೇಳೆ ಮದುವೆ ದಲ್ಲಾಳಿ ಮಹಿಳೆಯೂ ಜತೆಗಿರಬೇಕೆಂದು ಬಯಸುತ್ತೀರಾ ? ಎಂದು ಜಾಹೀರಾತು ನೀಡಿದೆ.

ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ದಲ್ಲಾಳಿಗಳು ಮದುವೆ ವಯಸ್ಸಿನ ಹುಡುಗ – ಹುಡುಗಿಯ ಶೈಕ್ಷಣಿಕ ವಿವರ, ಕುಟುಂಬದ ಆರ್ಥಿಕ ಹಿನ್ನೆಲೆ ಸೇರಿದಂತೆ ಸಮಗ್ರ ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಂಡಿರುತ್ತಾರೆ. ಮದುವೆಯಾಗಲು ಇಚ್ಚಿಸುವವರು ಈ ದಲ್ಲಾಳಿಯನ್ನು ಸಂಪರ್ಕಿಸಿ, ತಮಗಿಚ್ಚಿಸಿದವರನ್ನು ಸಂಗಾತಿಯನ್ನಾಗಿ ಪಡೆಯಬಹುದು. ಈ ಸೇವೆ ಪಡೆಯುವವರು ಶುಲ್ಕ ಪಾವತಿಸಬೇಕು. ‘ಕರೀಂ’ ಟ್ಯಾಕ್ಸಿ ಸೇವೆಯೂ ಇದನ್ನು ಹೊಸ ಮಾದರಿಯಲ್ಲಿ ಪ್ರಯಾಣಿಕರಿಗೆ ನೀಡಿದೆ.

ಎರಡು ದಿನಗಳ ಹಿಂದೆ ಈ ಸೇವೆಗೆ ಚಾಲನೆ ನೀಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಒಳಗಾಗಿದೆ. ಹೊಸಸೇವೆಯನ್ನು ಯುವಸಮುದಾಯ ಸ್ವಾಗತಿಸಿದ್ದರೆ, ಸಂಪ್ರದಾಯವಾದಿಗಳು ಅಸಮಾಧಾನ ಹೊರಹಾಕಿದ್ದಾರೆ.

‘ಪ್ರಯಾಣದ ಸಂದರ್ಭದಲ್ಲಿ ದಲ್ಲಾಳಿ ಜತೆಗೆ ತಾವು ಇಚ್ಚಿಸುವ ಸಂಗಾತಿಯ ನಡತೆ ಹಾಗೂ ಆಕೆಯ ಹಿನ್ನೆಲೆಯನ್ನು ಹಂಚಿಕೊಳ್ಳಬಹುದು. ಅವರಿಗೆ ಹೊಂದಿಕೆಯಾಗುವ ಜೋಡಿ ಸಿಕ್ಕಿದ ಬಳಿಕ ಮತ್ತೆ ಅವರನ್ನು ಸಂಪರ್ಕಿಸುತ್ತಾರೆ’ ಎಂದು ಟ್ಯಾಕ್ಸಿ ಸೇವೆಯ ಸಾರ್ವಜನಿಕ ಸಂಪರ್ಕ ಸೇವೆಯ ಮುಖ್ಯಸ್ಥ ಸಿಬ್ಯಾಟಿಯನ್‌ ನಕ್ವಿ ತಿಳಿಸಿದ್ದಾರೆ.

ಕಳೆದ ಜನವರಿಯಲ್ಲಿ ಇದೇ ಟ್ಯಾಕ್ಸಿಸೇವೆಯೂ ವೈದ್ಯರ ಜತೆ ಪ್ರಯಾಣ ಮಾಡುವ ಅವಕಾಶ ಕಲ್ಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.