ADVERTISEMENT

ಸಂರ್ಘರ್ಷ ಮುಕ್ತ ವಿಶ್ವ ನಿರ್ಮಾಣ ಅಗತ್ಯ

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಭಾರತ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2016, 19:30 IST
Last Updated 29 ಜುಲೈ 2016, 19:30 IST

ವಿಶ್ವಸಂಸ್ಥೆ  (ಪಿಟಿಐ): ಶಾಂತಿ ಮತ್ತು ಭದ್ರತೆಯನ್ನು ಅಭಿವೃದ್ಧಿ ಪ್ರಕ್ರಿಯೆಯಿಂದ ಪ್ರತ್ಯೇಕಿಸಲಾಗದು ಎಂದು ಹೇಳಿರುವ ಭಾರತ, ಸಂಘರ್ಷ ತಡೆದು ಶಾಂತಿ ಸ್ಥಾಪನೆಗೆ ಸಮಗ್ರ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ  ‘ಆಫ್ರಿಕಾದಲ್ಲಿ ಶಾಂತಿ ಸ್ಥಾಪನೆ’ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ವಿಶ್ವಸಂಸ್ಥೆ ರಾಯಭಾರಿಯ ಭಾರತದ ಉಪ ಕಾಯಂ ಪ್ರತಿನಿಧಿ ತನ್ಮಯ ಲಾಲ್‌ ಅವರು, ಸಂಘರ್ಷ ತಡೆಗಟ್ಟಿ ಶಾಂತಿ ಸ್ಥಾಪನೆಗೆ ಸಮಗ್ರ ಕ್ರಮ ಅನಿವಾರ್ಯ ಎಂದು ಹೇಳಿದರು.

ಮಹತ್ವಾಕಾಂಕ್ಷೆಯ ಸುಸ್ಥಿರ ಅಭಿವೃದ್ಧಿ ಉದ್ದೇಶಗಳು ವಿಶ್ವಸಂಸ್ಥೆಯಲ್ಲಿ ನಡೆದ ಚರ್ಚೆಗಳಷ್ಟೇ ಸಮರ್ಪಕವಾಗಿ  ಜಾರಿ ಯಾಗಲಿಲ್ಲ ಎಂದು ಲಾಲ್‌ ಅಸಮಾಧಾನ ವ್ಯಕ್ತಪಡಿಸಿದರು.

ಸದಾಶಯದ ದಾರಿ ತಪ್ಪಿದ್ದರಿಂದ ಇಂದಿನ ಜಗತ್ತು ಶಾಂತಿ ಮತ್ತು ಸಮೃದ್ಧಿಯಿಂದ ವಂಚಿತವಾಗಿದೆ ಭಯೋತ್ಪಾದಕ ಗುಂಪುಗಳು ಗಡಿಯಾಚೆಗೆ ನುಸುಳಿಹೋಗುವುದು, ಹೆಚ್ಚುತ್ತಿರುವ ನಿರಾಶ್ರಿತರ ಬಿಕ್ಕಟ್ಟು  ಸಿದ್ಧಾಂತಗಳನ್ನು ತಿರಸ್ಕರಿಸುವ ಪ್ರವೃತ್ತಿ ಸರ್ವವ್ಯಾಪಿಯಾಗುತ್ತದೆ ಎಂದು ಲಾಲ್‌ ಹೇಳಿದರು.

ಸುರಕ್ಷೆ ಮತ್ತು ಶಾಂತಿ ಸ್ಥಾಪನೆಯಲ್ಲಿ ಸುಸ್ಥಿರ ಅಭಿವೃದ್ಧಿ ನೈಜ ಅರ್ಥದಿಂದ ದೂರವಾಗಿದೆ. ಜಗತ್ತಿನಲ್ಲಿಂದು ಗಡಿಯುದ್ದಕ್ಕೂ ಭದ್ರತೆ ಮತ್ತು ಶಾಂತಿಯನ್ನು  ಒಟ್ಟೊಟ್ಟಿಗೆ  ಪರಿಪಾಲಿ ಸುವುದಕ್ಕೆ ಒತ್ತು ನೀಡಬೇಕು. ಈ ವಿಷಯವನ್ನು ಅರ್ಥೈಸಿಕೊಂಡು ರಾಜಕೀಯವಾಗಿ ಪರಿಹಾರ ಕಂಡುಕೊಳ್ಳದಿದ್ದರೆ  ಸಂಘರ್ಷ ಮುಂದುವರಿದು ನಮ್ಮ ಮುಂದಿನ ಸಮಷ್ಟಿಯ ಭವಿಷ್ಯಕ್ಕೆ ಧಕ್ಕೆ ಉಂಟು ಆಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದರು.

ಆಫ್ರಿಕಾದೊಂದಿಗಿನ ಭಾರತದ ದೀರ್ಘಾವಧಿಯ ಸಂಬಂಧವನ್ನು ಉಲ್ಲೇಖಿಸಿದ ಲಾಲ್‌, ಎರಡೂ ದೇಶ ಗಳು ವಸಾಹತುಶಾಹಿ ನಿರ್ಮೂಲನೆ, ವರ್ಣಭೇದ ನೀತಿ ನಿರ್ಮೂಲನೆ, ದೇಶ ಗಳ ಅಭಿವೃದ್ಧಿ ಹಕ್ಕು ಕುರಿತು ಜೊತೆ ಯಾಗಿ ಕಾರ್ಯನಿರ್ವಹಿಸಿವೆ ಮತ್ತು ಅಭಿವೃದ್ಧಿಗತಿಯಲ್ಲಿ ಮಹತ್ವದ ಪಾಲು ದಾರರಾಗಿದ್ದೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.