ADVERTISEMENT

ಸಾಧನೆಗಿಂತ ಪ್ರಚಾರದ ಅಬ್ಬರವೇ ಹೆಚ್ಚು

ಮೋದಿ ಸಾಧನೆ: ಮಂತ್ರಕ್ಕಿಂತ ಉಗುಳೇ ಜಾಸ್ತಿ- ಅಮೆರಿಕ ಮಾಧ್ಯಮಗಳ ಟೀಕೆ

​ಪ್ರಜಾವಾಣಿ ವಾರ್ತೆ
Published 26 ಮೇ 2015, 19:30 IST
Last Updated 26 ಮೇ 2015, 19:30 IST

ನ್ಯೂಯಾರ್ಕ್‌(ಪಿಟಿಐ): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಒಂದು ವರ್ಷದ ಸಾಧನೆಗಿಂತ ಪ್ರಚಾರದ ಅಬ್ಬರವೇ ಜಾಸ್ತಿ ಯಾಗಿದೆ ಎಂದು ಅಮೆರಿಕದ ಬಹುತೇಕ ಮಾಧ್ಯಮಗಳು ಲೇವಡಿ ಮಾಡಿವೆ.

ದೇಶದ ಉತ್ಪಾದನಾ ವಲಯದ ಪ್ರಗತಿ ದೃಷ್ಟಿಯಿಂದ ಚೀನಾ ಮಾದರಿಯಲ್ಲಿ ಜಾರಿಗೆ ತರಲಾದ ಮೋದಿ ಮಹತ್ವಾಕಾಂಕ್ಷೆಯ ‘ಭಾರತದಲ್ಲಿ ತಯಾರಿಸಿ’ (ಮೇಕ್‌ ಇನ್‌ ಇಂಡಿಯಾ) ಯೋಜನೆ ಇಲ್ಲಿಯವರೆಗೆ ಕೇವಲ ಘೋಷಣೆಯಾಗಿ ಮಾತ್ರ ಉಳಿದಿದೆ. ಸಾಧನೆ ಮತ್ತು ಫಲಿತಾಂಶ ಮಾತ್ರ ಶೂನ್ಯ. ಇನ್ನು ಉದ್ಯೋಗ ಸೃಷ್ಟಿಸುವ ಭರವಸೆ ಕೇವಲ ಭರವಸೆಯಾಗಿಯೇ ಉಳಿದಿದೆ ಎಂದು ಮಾಧ್ಯಮಗಳು ಮೋದಿ ಸರ್ಕಾರದ ವಿರುದ್ಧ ಛಾಟಿ ಬೀಸಿವೆ.

‘ಭಾರತದಲ್ಲಿ ಮೋದಿ ಒಂದು ವರ್ಷ: ಮುಗಿದ ಮಧುಚಂದ್ರ ಅವಧಿ– ಮುಂದಿವೆ ಬೆಟ್ಟದಷ್ಟು ಸವಾಲು’
– ಇದು ವಾಲ್‌ಸ್ಟ್ರೀಟ್‌ ಜರ್ನಲ್‌ ಪತ್ರಿಕೆಯ  ತಲೆಬರಹ. ಬದಲಾವಣೆಯ ಭಾರಿ ಭರವಸೆ ಮತ್ತು ಆರ್ಥಿಕ ಪುನಶ್ಚೇತನದ ಆಶಯದೊಂದಿಗೆ ಭಾರತೀಯ ಮತದಾರರು ಮೋದಿ ಅವರ ಕೈಗೆ ದೇಶದ ಅಧಿಕಾರ ಚುಕ್ಕಾಣಿ ನೀಡಿ ಒಂದು ವರ್ಷವಾಯಿತು.   ಆದರೆ, ಸಂಕೀರ್ಣ ಹಾಗೂ ಗೊಂದಲಮಯವಾದ ದೇಶದ ವಾಸ್ತವ ಸ್ಥಿತಿ ಅವರನ್ನು ಧೈರ್ಯಗುಂದಿಸಿವೆ ಎಂದು ವಾಲ್‌ಸ್ಟ್ರೀಟ್ ಜರ್ನಲ್ ಹೇಳಿದೆ.

ಬರೀ ಬಡಾಯಿ - ಸಾಧನೆ ಶೂನ್ಯ: ಮೋದಿ ಬಡಾಯಿ ಕೊಚ್ಚಿಕೊಳ್ಳುವ ‘ಮೇಕ್ ಇನ್‌ ಇಂಡಿಯಾ’ ಕೇವಲ ಮಾಧ್ಯಮಗಳಲ್ಲಿಯ ಅಬ್ಬರವೇ ಹೊರತು ವಾಸ್ತವದಲ್ಲಿ ಏನೇನೂ ಬೆಳವಣಿಗೆಯಾಗಿಲ್ಲ ಎಂದು ಪತ್ರಿಕೆ ವಿಮರ್ಶೆ ಮಾಡಿದೆ.

ಇನ್ನು, ಭಾರತದ ಆರ್ಥಿಕ ವ್ಯವಸ್ಥೆ ಮತ್ತು ಹಣದುಬ್ಬರ ನಿಯಂತ್ರಣದಲ್ಲಿ ಹೇಳಿಕೊಳ್ಳುವಂಥ ಪ್ರಗತಿಯಾಗಿಲ್ಲ.  ಅದು ಇನ್ನೂ ತೆವಳುತ್ತಲೇ  ಸಾಗಿದೆ. 

ಕಳೆದ ಐದು ತಿಂಗಳಿನಿಂದ ಸತತ ರಫ್ತು ಪ್ರಮಾಣ ಕುಸಿಯುತ್ತಿದೆ. ಕಾರ್ಪೊರೇಟ್‌ ಆದಾಯ ಆಶಾದಾಯಕ ಬೆಳವಣಿಗೆಯಾಗಿಲ್ಲ.

ಭಾರತದ ಷೇರು ಮಾರುಕಟ್ಟೆಯಲ್ಲಿ ಹೂಡಿದ್ದ ಸುಮಾರು ₹ 12 ಸಾವಿರ ಕೋಟಿಯನ್ನು ವಿದೇಶಿ ಸಂಸ್ಥೆಗಳು ಹಿಂತೆಗೆದುಕೊಂಡಿವೆ ಎಂದು ಪತ್ರಿಕೆಯ ವರದಿ ಹೇಳಿದೆ.

ವಾಸ್ತವದ ಇಕ್ಕಟ್ಟಿನಲ್ಲಿ ಪ್ರಧಾನಿ: ಮೋದಿ ಈಗ ಕಟುವಾದ ವಾಸ್ತವ ಸ್ಥಿತಿಯನ್ನು ಎದುರಿಸಲೇಬೇಕಾಗಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ವಿಶ್ಲೇಷಣೆ ಹೇಳಿದೆ.

ವಿಶ್ವದ ಬಲಾಢ್ಯ ಆರ್ಥಿಕ ಶಕ್ತಿ ಯಾಗಿ ಬೆಳೆಯುತ್ತಿರುವ ಭಾರತ ಈ ವರ್ಷ ಚೀನಾವನ್ನು ಹಿಂದಿಕ್ಕಬಹುದು ಎಂದು ಇತರ ರಾಷ್ಟ್ರಗಳು ಎದುರು ನೋಡುತ್ತಿವೆ. ಆದರೆ, ಭಾರತದಲ್ಲಿ ಉದ್ಯೋಗ ಸೃಷ್ಟಿಯ ಪ್ರಮಾಣದಲ್ಲಿ ಕುಸಿತ ಕಂಡುಬಂದಿದೆ.  ವಾಣಿಜ್ಯೋದಮದ ಪರಿಸ್ಥಿತಿ ಕಾಯ್ದು ನೋಡುವ ಹಂತದಲ್ಲಿದೆ. ಮೋದಿ ಮಹತ್ವಾಕಾಂಕ್ಷೆಯ ಎರಡು ಮಸೂದೆಗಳಿಗೆ  ವಿರೋಧ ಪಕ್ಷಗಳು ಅಡ್ಡಗಾಲು ಹಾಕುವ ಮೂಲಕ ಅವರ ಕೈಕಟ್ಟಿ ಹಾಕಿವೆ. ಮೇಲಾಗಿ ಮೋದಿಗೆ ‘ಕಾರ್ಪೊರೇಟ್‌ ಹಿತೈಷಿ’ ಹಾಗೂ ‘ಬಡವರು ಮತ್ತು ರೈತರ ವಿರೋಧಿ’ ಎಂಬ ಹಣೆಪಟ್ಟಿ ಹಚ್ಚಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್‌  ಹೇಳಿದೆ.

ಭರವಸೆ ನೀಡಿ ಕೈಕಟ್ಟಿಸಿಕೊಂಡರು: ಬೆಟ್ಟದಷ್ಟು ಭರವಸೆಗಳ ಆಸರೆಯಲ್ಲಿಯೇ ಒಂದು ವರ್ಷ ಕಳೆದ ಮೋದಿ ಭಾರತದ ಅಗತ್ಯಕ್ಕೆ ತಕ್ಕಂತೆ ತಮ್ಮ ರಾಜಕೀಯವನ್ನು ಬದಲಿಸಿಕೊಳ್ಳಬೇಕಿದೆ. ತಮ್ಮ ಸಾಮರ್ಥ್ಯಕ್ಕೂ ಮೀರಿದ ಭರವಸೆ ನೀಡುವ ಮೂಲಕ ಮೋದಿ ಸಮಸ್ಯೆ ಸೃಷ್ಟಿಸಿಕೊಂಡಿದ್ದಾರೆ ಎಂದು ಅದು ಹೇಳಿದೆ.

ಬಂಡವಾಳ ಹೂಡಿಕೆದಾರರನ್ನು ಸೆಳೆಯಲು ಮೋದಿ ಕೇವಲ ನ್ಯೂಯಾರ್ಕ್‌ ನಿಂದ ಪ್ಯಾರೀಸ್, ಪ್ಯಾರೀಸ್‌ನಿಂದ ಸಿಡ್ನಿ ಸುತ್ತಿದ್ದಾರೆಯೇ ಹೊರತು ಅವರಿಂದ ಹೂಡಿಕೆದಾರಿಗೆ ನಿರೀಕ್ಷಿತ ಭರವಸೆ ಸಿಗಲಿಲ್ಲ ಎಂದು ಪತ್ರಿಕೆ  ಮೋದಿ ಸಾಧನೆಗಳ ಕುರಿತು ಕಟು ವಿಮರ್ಶೆ ಮಾಡಿದೆ.

ವ್ಯಕ್ತಿಗಿಂತ ಛಾಯೆ ದೊಡ್ಡದು
‘ಇಂದು ಮೋದಿ ನೈಜ ವ್ಯಕ್ತಿತ್ವಕ್ಕಿಂತ ಅವರ ವರ್ಚಸ್ಸು ಅಥವಾ ಛಾಯೆ ಅತ್ಯಂತ ದೊಡ್ಡದಾಗಿ ಬಿಂಬಿತವಾಗಿದೆ. ಮೋದಿ  ಅವರನ್ನು ಅತಿಮಾನುಷ ಶಕ್ತಿಯ ವ್ಯಕ್ತಿ (ಸೂಪರ್‌ಮ್ಯಾನ್) ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ, ವಾಸ್ತವದಲ್ಲಿ ‘ಸೂಪರ್‌ಮ್ಯಾನ್’ ಅಸ್ತಿತ್ವದಲ್ಲಿಯೇ ಇಲ್ಲ. ಅದು ಕೇವಲ ಕಾಲ್ಪನಿಕ ಪಾತ್ರವಷ್ಟೇ. ಅದೇ ರೀತಿ ಮೋದಿ ವ್ಯಕ್ತಿತ್ವ ಕೂಡ ಕಾಲ್ಪನಿಕ ಮಾತ್ರ. ಅವರ ಸೂಪರ್‌ಮ್ಯಾನ್ ಮುಖವಾಡ ಕಳಚಿ ಬೀಳಲಿದೆ’ ಎಂದು   ಸಿದ್ಧ ಉಡುಪು ರಫ್ತು  ಕಂಪೆನಿಯ ಮಾಲೀಕ ವಿಮರ್ಶ್ ರಾಜ್ದಾನ್ ಅಭಿಪ್ರಾಯವನ್ನು ಪತ್ರಿಕೆ ಪ್ರಕಟಿಸಿದೆ.

ಮುಖ್ಯಾಂಶಗಳು
* ಸೂಪರ್‌ಮ್ಯಾನ್ ಮುಖವಾಡ ಕಳಚುವ ಸಮಯ

* ಭರವಸೆ ನೀಡಿ ಕೈಕಟ್ಟಿಸಿಕೊಂಡ ಮೋದಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.