ADVERTISEMENT

ಸಾಲ ಮರುಪಾವತಿ: ಗ್ರೀಕ್‌ನಲ್ಲಿ ಮತದಾನ ಆರಂಭ

​ಪ್ರಜಾವಾಣಿ ವಾರ್ತೆ
Published 5 ಜುಲೈ 2015, 7:52 IST
Last Updated 5 ಜುಲೈ 2015, 7:52 IST

ಅಥೆನ್ಸ್ (ಐಎಎನ್‌ಎಸ್): ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಗ್ರೀಕ್‌ನಲ್ಲಿ ‘ಸಾಲ ಮರುಪಾವತಿ ಯೋಜನೆ’ ಸಂಬಂಧ  ಇಂದು  ಜನಮತಗಣನೆ  ಆರಂಭವಾಗಿದೆ.

‘ಜನಮತಗಣನೆಯಲ್ಲಿ ಸಾಲ ಮರುಪಾವತಿ ಯೋಜನೆಗೆ ‘ಇಲ್ಲ’ ಎನ್ನಿ’ ಎಂದು ಗ್ರೀಕ್ ಪ್ರಧಾನಿ ಅಲೆಕ್ಸಿಸ್ ಸಿಪ್ರಾಸ್ ಕರೆ ನೀಡಿರುವುದರಿಂದ ಗ್ರೀಕ್‌  ಜನರು ಉತ್ಸಾಹದಿಂದ ಮತ ಚಲಾವಣೆ ಮಾಡುತ್ತಿದ್ದಾರೆ.
ಸುಮಾರು 8.5 ಮಿಲಿಯನ್‌ ಜನರು ಮತ ಚಲಾವಣೆ ಮಾಡುವ ಅರ್ಹತೆ ಪಡೆದಿದ್ದಾರೆ ಎಂದು ಗ್ರೀಕ್‌ ಸಚಿವಾಲಯ ತಿಳಿಸಿದೆ.

ಗ್ರೀಕ್‌ ಜನರಲ್ಲಿ ಒಡಕು ಮೂಡಿದ್ದು ಸಾಲ ಮರುಪಾವತಿ ಮಾಡಬೇಕು ಎಂದು ಮತ್ತು ಸಾಲ ಮರುಪಾವತಿ ಮಾಡಬಾರದು ಎಂಬ ಎರಡು ಬಣಗಳು ಸೃಷ್ಟಿಯಾಗಿವೆ.

ಇಂದಿನ ಜನಮತಗಣನೆಯಲ್ಲಿ ಗ್ರೀಕರು ಸಾಲ ಮರುಪಾವತಿ ಕುರಿತಂತೆ ಪರ ಮತ್ತು ವಿರೋಧವಾಗಿ ಮತ ಚಲಾಯಿಸುತ್ತಿದ್ದಾರೆ.

ಜನಮತಗಣನೆಗೆ  ಪೂರ್ವಭಾವಿಯಾಗಿ ಅಥೆನ್ಸ್‌ನಲ್ಲಿ ಶನಿವಾರ  ನಡೆದ ಮೆರವಣಿಗೆಯಲ್ಲಿ ಗ್ರೀಕ್ ಪ್ರಧಾನಿ ಮಾತನಾಡಿ ‘ಹಣಕಾಸು ಸಂಸ್ಥೆಗಳು ವಿಧಿಸುತ್ತಿರುವ ಷರತ್ತುಗಳ ವಿರುದ್ಧವಾಗಿ ನೀವು ಮತ ನೀಡಿ’ ಎಂದು  ಜನರಲ್ಲಿ ಆಗ್ರಹಿಸಿದರು.

‘ಇಲ್ಲ’ ಎಂಬ ಮತ ಗ್ರೀಕನ್ನು ದಿವಾಳಿಮಾಡುವುದಿಲ್ಲ. ಗ್ರೀಕ್ ಐರೋಪ್ಯ ಒಕ್ಕೂಟದಲ್ಲಿ ಉಳಿಯಬೇಕೆ ಎಂಬುವುದನ್ನಷ್ಟೇ ನಾವು ಭಾನುವಾರ ನಿರ್ಧರಿಸುವುದಿಲ್ಲ. ಯೂರೋಪ್‌ನಲ್ಲಿ ಇತರರಿಗೆ ಸಮಾನರಾಗಿ ಉಳಿಯುವುದನ್ನೂ ನಿರ್ಧರಿಸುತ್ತೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT