ADVERTISEMENT

ಸಿಯಾಚಿನ್‌: ಪಾಕ್‌ ಯುದ್ಧ ವಿಮಾನ ಹಾರಾಟ?

ಪಿಟಿಐ
Published 24 ಮೇ 2017, 19:44 IST
Last Updated 24 ಮೇ 2017, 19:44 IST
– ಸಾಂದರ್ಭಿಕ ಚಿತ್ರ
– ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್‌: ಪಾಕಿಸ್ತಾನದ ಯುದ್ಧ ವಿಮಾನಗಳು ಸಿಯಾಚಿನ್‌ ಆಗಸದಲ್ಲಿ ಬುಧವಾರ ಹಾರಾಟ ನಡೆಸಿವೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.

ಆದರೆ, ಭಾರತದ ವಾಯುಪಡೆ ಮೂಲಗಳು ಇದನ್ನು ನಿರಾಕರಿಸಿದೆ. ‘ದೇಶದ ವಾಯು ಗಡಿಯ ಉಲ್ಲಂಘನೆಯಾಗಿಲ್ಲ’ ಎಂದು ಹೇಳಿದೆ.

ಭಾರತದ ಗಡಿಗೆ ಸಮೀಪದಲ್ಲಿರುವ  ಸೇನಾ ನೆಲೆಗಳನ್ನು ಪಾಕಿಸ್ತಾನ ವಾಯುಪಡೆಯು ಕಾರ್ಯಾಚರಣೆಗೆ ಸನ್ನದ್ಧಗೊಳಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಮಾ ಟಿವಿ ವರದಿ ಮಾಡಿದೆ.

ಪಾಕ್‌ ವಾಯುಪಡೆಯ ಮುಖ್ಯಸ್ಥ ಸೊಹೇಲ್‌ ಅಮನ್‌ ಅವರು ಸ್ಕರ್ದು ವಾಯುನೆಲೆಗೆ ಭೇಟಿ ನೀಡಿದ ದಿನವೇ ಈ ಬೆಳವಣಿಗೆ ನಡೆದಿದೆ.

‘ಮುಂದಿನ ಪೀಳಿಗೆಗಳೂ ಮರೆಯದ ಪಾಠ ಕಲಿಸುತ್ತೇವೆ’: ‘ಗಡಿಯಲ್ಲಿ ವೈರಿ ರಾಷ್ಟ್ರವು  ಅಪ್ರಚೋದಿತ ಆಕ್ರಮಣಕಾರಿ ವರ್ತನೆ ತೋರಿದರೆ, ಅದರ ಮುಂದಿನ ತಲೆಮಾರುಗಳೂ ನೆನಪಿಟ್ಟುಕೊಳ್ಳುವ ರೀತಿಯಲ್ಲಿ ಉತ್ತರ ನೀಡುತ್ತೇವೆ’ ಎಂದು ಪಾಕಿಸ್ತಾನದ ವಾಯುಪಡೆಯ ಮುಖ್ಯಸ್ಥ ಸೊಹೇಲ್‌ ಅಮನ್‌ ಭಾರತವನ್ನು ಎಚ್ಚರಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನಗಳ ನಡುವಣ ಉದ್ವಿಗ್ನ ಸ್ಥಿತಿ ಮತ್ತಷ್ಟು ಹೆಚ್ಚಿರುವುದರ ನಡುವೆಯೇ ಅವರು ಈ ಹೇಳಿಕೆ ನೀಡಿದ್ದಾರೆ.

‘ಯಾವುದೇ ದಾಳಿ ಎದುರಿಸಲು ಪಾಕಿಸ್ತಾನದ ವಾಯುಪಡೆ ಸರ್ವ ಸನ್ನದ್ಧವಾಗಿದೆ. ದೇಶದ  ಗಡಿ ರಕ್ಷಿಸುವ ಸಾಮರ್ಥ್ಯ ಅದಕ್ಕಿದೆ’ ಎಂದು ಸೊಹೇಲ್‌ ಹೇಳಿದ್ದಾರೆ.

ಗಡಿ ಭಾಗ ಸ್ಕರ್ದುವಿನಲ್ಲಿರುವ ಖಾದ್ರಿ ವಾಯುನೆಲೆಗೆ ಬುಧವಾರ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಈ ಎಚ್ಚರಿಕೆ ನೀಡಿದ್ದಾರೆ ಎಂದು ರೇಡಿಯೊ ಪಾಕಿಸ್ತಾನ ವರದಿ ಮಾಡಿದೆ.

ಭೇಟಿಯ ಸಂದರ್ಭದಲ್ಲಿ ವಾಯು ಪಡೆಯ ಸಮರಾಭ್ಯಾಸದಲ್ಲಿ ಅವರು ಭಾಗಿಯಾದರಲ್ಲದೇ, ಮಿರಾಜ್‌ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ. ಅಲ್ಲದೇ, ವಾಯುಪಡೆಯ ಕಾರ್ಯಾಚರಣೆ ಸನ್ನದ್ಧತೆಯ ಪರಿಶೀಲನೆಯನ್ನೂ ಅವರು ಮಾಡಿದ್ದಾರೆ ಎಂದು ವರದಿ ಹೇಳಿದೆ.

ಕಳೆದ ವರ್ಷದ ಸೆಪ್ಟೆಂಬರ್‌ 18ರಂದು ಉರಿಯಲ್ಲಿ ಭಾರತೀಯ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿ 18 ಯೋಧರನ್ನು ಹತ್ಯೆ ಮಾಡಿದ ನಂತರ ಉಭಯ ರಾಷ್ಟ್ರಗಳ ನಡುವಣ ಬಿಕ್ಕಟ್ಟು ಬಿಗಡಾಯಿಸಿದೆ.

ಈ ದಾಳಿಗೆ ಪ್ರತೀಕಾರವಾಗಿ ಹತ್ತು ದಿನಗಳ ನಂತರ ಸೇನೆಯು ‘ನಿರ್ದಿಷ್ಟ ದಾಳಿ’ ನಡೆಸಿ, ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಿತ್ತು. ಈ ತಿಂಗಳ ಆರಂಭದಲ್ಲಿ ಪಾಕ್‌ ಭದ್ರತಾ ಪಡೆಗಳು ಇಬ್ಬರು ಯೋಧರ ಶಿರಚ್ಛೇದ ಮಾಡಿದ್ದಕ್ಕೆ ಪ್ರತಿಯಾಗಿ ನೌಶೇರಾ ವಲಯದಲ್ಲಿರುವ ಗಡಿ ನಿಯಂತ್ರಣ ರೇಖೆ ಬಳಿಯಲ್ಲಿರುವ ಪಾಕಿಸ್ತಾನ ಸೇನಾ ಚೌಕಿಗಳ ಮೇಲೆ ಸೇನೆಯು ಇತ್ತೀಚೆಗೆ ಫಿರಂಗಿ ದಾಳಿ ನಡೆಸಿತ್ತು. ಈ ವಿಚಾರವನ್ನು ಅದು ಮಂಗಳವಾರ ಬಹಿರಂಗ ಪಡಿಸಿತ್ತು.

ಪಾಕ್‌ ವಿರುದ್ಧ ಪ್ರತೀಕಾರದ ಕ್ರಮಕ್ಕೆ ಭಾರತ ಯೋಚನೆ: ಅಮೆರಿಕ
ವಾಷಿಂಗ್ಟನ್‌ :
‘ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ಏಕಾಂಗಿಯಾಗಿಸಲು ಮತ್ತು ಅದರ ವಿರುದ್ಧ ಪ್ರತೀಕಾರದ ಕ್ರಮ ಕೈಗೊಳ್ಳುವ ಬಗ್ಗೆ ಭಾರತ ಯೋಚಿಸುತ್ತಿದೆ’ ಎಂದು ಅಮೆರಿಕದ ರಕ್ಷಣಾ ಗುಪ್ತಚರ ಸಂಸ್ಥೆಯ ನಿರ್ದೇಶಕ ಲೆಫ್ಟಿನೆಂಟ್‌ ಜನರಲ್‌  ವಿನ್ಸೆಂಟ್‌ ಸ್ಟೀವರ್ಟ್‌ ಹೇಳಿದ್ದಾರೆ.

ಜಗತ್ತಿನಾದ್ಯಂತ ಇರುವ ಬೆದರಿಕೆಗಳ ಕುರಿತಾಗಿ ನಡೆದ ಉನ್ನತಾಧಿಕಾರ ಹೊಂದಿರುವ ಸೆನೆಟ್‌ನ ಶಸ್ತ್ರಾಸ್ತ್ರ ಸೇವೆಗಳ ಸಮಿತಿ ಸಭೆಯಲ್ಲಿ ಮಾತನಾಡಿರುವ ಸ್ಟೀವರ್ಟ್‌, ‘ಹಿಂದೂ ಮಹಾ ಸಾಗರ ಪ್ರಾಂತ್ಯದಲ್ಲಿ ತನ್ನ ಹಿತಾಸಕ್ತಿಗಳನ್ನು ರಕ್ಷಿಸುವುದು ಮತ್ತು ಏಷ್ಯಾದಾದ್ಯಂತ ತನ್ನ ರಾಜತಾಂತ್ರಿಕ ಮತ್ತು ಆರ್ಥಿಕ ಪ್ರಭಾವವನ್ನು ಮರುಸ್ಥಾಪಿಸು ವುದಕ್ಕಾಗಿ ಭಾರತ ಸೇನೆಯನ್ನು ಆಧುನೀಕರಣಗೊಳಿಸುತ್ತಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಭಾರತದಲ್ಲಿ ನಡೆದ ಹಲವಾರು ಭಯೋತ್ಪಾದಕ ದಾಳಿಯಿಂದಾಗಿ ಭಾರತ–ಪಾಕಿಸ್ತಾನ ನಡುವಣ ಸಂಬಂಧ ಹಳಸಿದೆ’ ಎಂದು ಅವರು ಹೇಳಿದ್ದಾರೆ.

‘ಮುಂದುವರಿದಿರುವ ಉಗ್ರರ ದಾಳಿಯ ಬೆದರಿಕೆ, ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಕಾರಣಕ್ಕೆ 2017ರಲ್ಲಿ ಎರಡೂ ದೇಶಗಳ ನಡುವಣ ರಾಜತಾಂತ್ರಿಕ ಬಿಕ್ಕಟ್ಟು ಇನ್ನಷ್ಟು ಬಿಗಡಾಯಿಸಲಿದೆ’ ಎಂದು ಹೇಳಿದ್ದಾರೆ.

‘ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ  ಕಾಶ್ಮೀರದ ಸೇನಾ ನೆಲೆಯೊಂದರ ಮೇಲೆ ಉಗ್ರರು ದಾಳಿ ನಡೆಸಿದ ನಂತರ, ಭಾರತ ಉಗ್ರರ ವಿರುದ್ಧ ನಡೆಸಿದ್ದ ಕಾರ್ಯಾಚರಣೆಗೆ  ಭಾರಿ ಪ್ರಚಾರ ಸಿಕ್ಕಿತ್ತು’ ಎಂದು ಅವರು ಹೇಳಿದ್ದಾರೆ.

ಭಾರತದತ್ತ ಪ್ರತಿ ದಾಳಿ: ವಿಡಿಯೊ ಬಹಿರಂಗ ಪಡಿಸಿದ ಪಾಕ್‌
ಇಸ್ಲಾಮಾಬಾದ್‌:
ನೌಶೇರಾ ವಲಯದ ಗಡಿ ನಿಯಂತ್ರಣ ರೇಖೆಯ ಬಳಿಯಲ್ಲಿ ಪಾಕಿಸ್ತಾನದ ಸೇನಾ ಚೌಕಿಗಳ ಮೇಲೆ ನಡೆಸಿದ ದಾಳಿಯ ವಿಡಿಯೊವನ್ನು ಭಾರತೀಯ ಸೇನೆ ಬಿಡುಗಡೆಗೊಳಿಸಿದ ಬೆನ್ನಲ್ಲೇ, ಭಾರತದ ಸೇನಾ ಚೌಕಿಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗಿದ್ದು ಎನ್ನಲಾದ ಪ್ರತಿ ದಾಳಿಯ ವಿಡಿಯೊವನ್ನು ಪಾಕಿಸ್ತಾನ ಬುಧವಾರ ಬಹಿರಂಗ ಪಡಿಸಿದೆ.

ಪಾಕಿಸ್ತಾನದ ಸೇನಾ ವಕ್ತಾರ ಮೇಜರ್‌ ಜನರಲ್‌ ಆಸಿಫ್‌ ಗಫೂರ್‌ ಅವರು ಟ್ವಿಟರ್‌ನಲ್ಲಿ ವಿಡಿಯೊವನ್ನು ಪ್ರಕಟಿಸಿದ್ದಾರೆ. ಅಲ್ಲದೇ, ಮೇ 13ರಂದು ಮುಗ್ಧ ನಾಗರಿಕರನ್ನು ಗುರಿಯಾಗಿಸಿಕೊಂಡು ಭಾರತ ದಾಳಿ ನಡೆಸಿತ್ತು ಎಂದು ಆರೋಪಿಸಿದ್ದಾರೆ.

‘ಪಾಕಿಸ್ತಾನ ಸೇನೆಯು ಇದಕ್ಕೆ ತಕ್ಕ ಉತ್ತರ ನೀಡಿದ್ದು, ನೌಶೇರಾ ವಲಯದಲ್ಲಿ ಭಾರತೀಯ ಸೇನಾ ಚೌಕಿಗಳನ್ನು ನಾಶ ಗೊಳಿಸಿದೆ’ ಎಂದು ಅವರು ಟ್ವೀಟ್‌
ಮಾಡಿದ್ದಾರೆ.

ಭಾರಿ ಪ್ರಮಾಣದ ಫಿರಂಗಿ ದಾಳಿಯಿಂದಾಗಿ ಅರಣ್ಯ ಮತ್ತು ಬೆಟ್ಟ ಪ್ರದೇಶದಲ್ಲಿರುವ ಸೇನಾ ಚೌಕಿಗಳು  ಸಂಪೂರ್ಣವಾಗಿ ಧ್ವಂಸವಾಗುವ ದೃಶ್ಯಗಳು ವಿಡಿಯೊದಲ್ಲಿವೆ.
* * *
ವೈರಿ ರಾಷ್ಟ್ರಯಾವುದೇ ದುಸ್ಸಾಹಸಕ್ಕೆ ಕೈ ಹಾಕಿದರೆ ಪಾಕಿಸ್ತಾನ ತಕ್ಕ ಉತ್ತರ ನೀಡಲಿದೆ. ವೈರಿಗಳು ನೀಡುವ ಹೇಳಿಕೆಗಳಿಗೆ ಪಾಕಿಸ್ತಾನ ತಲೆಕೆಡಿಸಿಕೊಳ್ಳಬೇಕಾಗಿಲ್ಲ.
ಸೊಹೇಲ್‌ ಅಮನ್‌,
ಪಾಕ್‌ ವಾಯುಪಡೆ ಮುಖ್ಯಸ್ಥ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.