ADVERTISEMENT

ಸುಂದರ್‌ ಪಿಚೈ ವಾರ್ಷಿಕ ವೇತನ ₹ 1285.5 ಕೋಟಿ

ಪಿಟಿಐ
Published 29 ಏಪ್ರಿಲ್ 2017, 19:30 IST
Last Updated 29 ಏಪ್ರಿಲ್ 2017, 19:30 IST
ಸುಂದರ್‌ ಪಿಚೈ
ಸುಂದರ್‌ ಪಿಚೈ   

ಹ್ಯೂಸ್ಟನ್‌: ಗೂಗಲ್‌ ಕಂಪೆನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಸುಂದರ್‌ ಪಿಚೈ ಅವರು ಕಳೆದ ವರ್ಷ 200 ಮಿಲಿಯನ್‌ ಡಾಲರ್‌(ಸುಮಾರು ₹ 1285.5 ಕೋಟಿ) ವೇತನ ಪಡೆದಿದ್ದಾರೆ. 2015ಕ್ಕೆ ಹೋಲಿಸಿದರೆ ದುಪ್ಪಟ್ಟು ವೇತನ ನೀಡಲಾಗಿದೆ.

‘ಪಿಚೈ ನೇತೃತ್ವದಲ್ಲಿ ಬಿಡುಗಡೆಯಾದ ಹೊಸ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಯಶಸ್ವಿಯಾಗಿದ್ದನ್ನು ಪರಿಗಣಿಸಿ, ಕಂಪೆನಿಯ ವೇತನ ಸಮಿತಿಯು ಭರ್ಜರಿ ವೇತನ ನಿಗದಿಪಡಿಸಿದೆ’ ಎಂದು ಸಿಎನ್‌ಎನ್‌ ವರದಿ ಮಾಡಿದೆ.

ಪಿಚೈ ಮುಖ್ಯಸ್ಥರಾದ ಬಳಿಕ ಯೂಟ್ಯೂಬ್‌ ವ್ಯವಹಾರ ಹಾಗೂ ಜಾಹೀರಾತು ಆದಾಯದಲ್ಲಿ ದೊಡ್ಡ ಮಟ್ಟಿನ ಏರಿಕೆ ದಾಖಲಿಸಿತು. ‘ಮೆಷಿನ್‌ ಲರ್ನಿಂಗ್‌’ ಮೇಲೆ ಹೂಡಿಕೆ ಹಾಗೂ ಹಾರ್ಡ್‌ವೇರ್‌, ‘ಕ್ಲೌಡ್‌ ಕಂಪ್ಯೂಟಿಂಗ್‌ ’ ವ್ಯವಹಾರದಲ್ಲೂ ಏರಿಕೆ ದಾಖಲಿಸಿತು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಗೂಗಲ್‌ ಕಂಪೆನಿಯು 2016ರಲ್ಲಿ ತನ್ನದೇ ಹೊಸ  ಸ್ಮಾರ್ಟ್‌ಫೋನ್‌, ವರ್ಚುವಲ್‌ ರಿಯಾಲಿಟಿ ಹೆಡ್‌ಸೆಟ್‌ ಇತ್ಯಾದಿ ಉತ್ಪನ್ನಗಳನ್ನು ಬಿಡುಗಡೆಗೊಳಿಸಿತ್ತು. ಈ ಎಲ್ಲ ಬೆಳವಣಿಗೆಯಲ್ಲಿ ಪಿಚೈ ಅವರ ಮಹತ್ತರ ಪಾತ್ರ ಪರಿಗಣಿಸಿ ವೇತನ ನೀಡಲಾಗಿದೆ.

ಗೂಗಲ್‌ನ ಇತರೆ ಆದಾಯ ವಿಭಾಗವಾದ ಹಾರ್ಡ್‌ವೇರ್‌ ಹಾಗೂ ಕ್ಲೌಡ್‌ ಸರ್ವೀಸ್‌ ವಿಭಾಗದಲ್ಲಿ ಕಳೆದ ತ್ರೈಮಾಸಿಕದಲ್ಲಿ 3.1 ಬಿಲಿಯನ್‌ ಡಾಲರ್‌ (ಸುಮಾರು ಎರಡೂವರೆ ಸಾವಿರ ಕೋಟಿ) ಆದಾಯ ದಾಖಲಿಸಿತ್ತು. ಅದರ ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಆದಾಯವು ಶೇಕಡಾ 50ರಷ್ಟು ಏರಿಕೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.