ADVERTISEMENT

ಸ್ವದೇಶಿ ಮಂತ್ರ ಜಪಿಸಿದ ಟ್ರಂಪ್

ಪಿಟಿಐ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
ಸ್ವದೇಶಿ ಮಂತ್ರ ಜಪಿಸಿದ ಟ್ರಂಪ್
ಸ್ವದೇಶಿ ಮಂತ್ರ ಜಪಿಸಿದ ಟ್ರಂಪ್   

ವಾಷಿಂಗ್ಟನ್ : ‘ಅಮೆರಿಕದ ಉತ್ಪನ್ನಗಳನ್ನೇ ಖರೀದಿಸಿ, ಅಮೆರಿಕದವರಿಗೇ ಉದ್ಯೋಗ ನೀಡಿ’  ಎನ್ನುವುದು ಈಗ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹೊಸ ಮಂತ್ರ.

‘ಬೋಯಿಂಗ್ 787 ಡ್ರೀಮ್‌ಲೈನರ್’ ವಿಮಾನ ಅನಾವರಣಗೊಳಿಸಿ ಮಾತನಾಡಿದ ಅವರು, ‘ವಿದೇಶಿಯರಿಂದ ನಡೆಯುವ ವಂಚನೆ ತಡೆಯಲು ಕಠಿಣ ವ್ಯಾಪಾರ ನಿಯಮಗಳನ್ನು ಜಾರಿಗೊಳಿಸಲಾಗುವುದು’ ಎಂದು ತಿಳಿಸಿದರು.
‘ನಮ್ಮ ಕಾರ್ಖಾನೆಗಳಲ್ಲಿ, ನಮ್ಮ ಉದ್ಯೋಗಿಗಳೇ ತಯಾರಿಸಿದ ಹಾಗೂ ಅಮೆರಿಕದಲ್ಲಿ ತಯಾರಿಸಲಾಗಿದೆ ಎನ್ನುವ ಮುದ್ರೆಯುಳ್ಳ ಉತ್ಪನ್ನಗಳನ್ನು ನಾವು ಬಯಸುತ್ತೇವೆ. ನಿಮ್ಮ ಅಧ್ಯಕ್ಷನಾಗಿ ನಾನು ಅಮೆರಿಕದವರ ಶಕ್ತಿ, ಸಾಮರ್ಥ್ಯವನ್ನು ಅನಾವರಣಗೊಳಿಸಿ ಅವರು ಉದ್ಯೋಗಕ್ಕೆ ಮರಳುವಂತೆ ಮಾಡಲಿದ್ದೇನೆ’ ಎಂದು ಟ್ರಂಪ್ ಹೇಳಿದರು.

‘ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಭರವಸೆ ನೀಡಿದಂತೆ, ಅಮೆರಿಕದವರ ಉದ್ಯೋಗವನ್ನು ಮರಳಿ ತರಲು ಎಲ್ಲ ರೀತಿಯ ಪ್ರಯತ್ನ ಮಾಡಲಿದ್ದೇನೆ. ಆ ನಿಟ್ಟಿನಲ್ಲಿ ಈಗಾಗಲೇ ಪ್ರಯತ್ನ ಆರಂಭಿಸಲಾಗಿದೆ’ ಎಂದು ಅವರು ಹೇಳಿದರು.

ADVERTISEMENT

‘ಮಾಧ್ಯಮವು ಅಮೆರಿಕದ ಜನರ ಶತ್ರು’: ಮಾಧ್ಯಮಗಳ ವಿರುದ್ಧದ ವಾಗ್ದಾಳಿಯನ್ನು ಟ್ರಂಪ್ ಅವರು ಮುಂದುವರಿಸಿದ್ದಾರೆ.  ‘ಸುಳ್ಳು ಸುದ್ದಿ ಪ್ರಕಟಿಸುವ ಮಾಧ್ಯಮವು ನನ್ನ ಶತ್ರುವಲ್ಲ. ಅದು ಅಮೆರಿಕದ ಜನರ ಶತ್ರು’ ಎಂದು ಅವರು ಟ್ವೀಟ್ ಮಾಡಿದ್ದಾರೆ.
‘ನನ್ನ ಆಡಳಿತ ಸುಧಾರಿತ ಯಂತ್ರದಂತೆ ಕೆಲಸ ಮಾಡುತ್ತಿದೆ. ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಅಪ್ರಾಮಾಣಿಕ ಮಾಧ್ಯಮಗಳು ಸುಳ್ಳು ವರದಿ ಮಾಡುತ್ತಿವೆ’ ಎಂದು ಅವರು ಶುಕ್ರವಾರ ಆರೋಪಿಸಿದ್ದರು.

ನಿಕ್ಕಿ ಗೆ ಮೆಚ್ಚುಗೆ
ವಾಷಿಂಗ್ಟನ್ (ಪಿಟಿಐ): ‘ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಅವರು ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿಯಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ’ ಎಂದು ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಟ್ರಂಪ್ ಅವರು ಭಾರತೀಯ ಮೂಲದ ಅಮೆರಿಕದ ರಾಜಕಾರಣಿಯ ರಾಜತಾಂತ್ರಿಕ ಕಾರ್ಯವನ್ನು   ಸಾರ್ವಜನಿಕವಾಗಿ ಹೊಗಳಿರುವುದು ಇದೇ ಮೊದಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.