ADVERTISEMENT

ಸ್ವೀಡನ್‌ ಪ್ರಧಾನಿ ಸ್ಟೆಫನ್‌ ಲೊವೆನ್‌–ಮೋದಿ ಐತಿಹಾಸಿಕ ಭೇಟಿ

ಪಿಟಿಐ
Published 17 ಏಪ್ರಿಲ್ 2018, 10:54 IST
Last Updated 17 ಏಪ್ರಿಲ್ 2018, 10:54 IST
ಸ್ವೀಡನ್‌ ಪ್ರಧಾನಿ ಸ್ಟೆಫನ್‌ ಲೊವೆನ್‌–ಮೋದಿ ಐತಿಹಾಸಿಕ ಭೇಟಿ
ಸ್ವೀಡನ್‌ ಪ್ರಧಾನಿ ಸ್ಟೆಫನ್‌ ಲೊವೆನ್‌–ಮೋದಿ ಐತಿಹಾಸಿಕ ಭೇಟಿ   

ಸ್ಟಾಕ್‌ಹೋಂ: ಕಾಮನ್‌ವೆಲ್ತ್‌ ರಾಷ್ಟ್ರಗಳ ಮುಖ್ಯಸ್ಥರ ಸಭೆ(ಸಿಎಚ್‌ಒಜಿಎಂ)ಯಲ್ಲಿ ಪಾಲ್ಗೊಳ್ಳುವುದು ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ಐದು ದಿನಗಳ ಪ್ರವಾಸ ನಿಮಿತ್ತ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸ್ವೀಡನ್‌ ಪ್ರಧಾನಿ ಸ್ಟೆಫನ್‌ ಲೊವೆನ್‌ ಅವರನ್ನು ಭೇಟಿ ಮಾಡಿದರು.

ಸ್ವೀಡನ್‌ನ ರಾಜಧಾನಿ ಸ್ಟಾಕ್‌ಹೋಂಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವೀಡನ್‌ ಪ್ರಧಾನಿ ಸ್ಟೆಫೆನ್‌ ಲೊವೆನ್‌ ಅವರು ವಿಮಾನನಿಲ್ದಾಣದಲ್ಲಿ ಸ್ವಾಗತಕೋರಿ, ಬರಮಾಡಿಕೊಂಡರು.

ಇದೇ ವೇಳೆ ಸ್ಟಾಕ್‌ಹೋಂನಲ್ಲಿರುವ ಭಾರತೀಯರು ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಪ್ರಧಾನಿ ಅವರಿಗೆ ಹಸ್ತಲಾಘವ ಮಾಡಿ ಹರ್ಷ ವ್ಯಕ್ತಪಡಿಸಿದರು.

ADVERTISEMENT

ಬಳಿಕ ಮೋದಿ ಮತ್ತು ಸ್ಟೆಫನ್‌ ಅವರು ವಿಮಾನನಿಲ್ದಾಣದಿಂದ ಹೋಟೆಲ್‌ಗೆ ಒಂದೇ ವಾಹನದಲ್ಲಿ ಪ್ರಯಾಣ ಬೆಳೆಸಿದ್ದಾರೆ. 

ಮೋದಿ ಹಾಗೂ ಸ್ಟೆಫನ್‌ ಇಬ್ಬರೂ ನಾಯಕರು ಸ್ಟಾಕ್‌ಹೋಂನಲ್ಲಿರುವ ಸಾಜರ್‌ ಹೌಸ್‌ನಿಂದ ಸಮೀಪದ ರೊಸೆನ್ಬಾದೆಗೆ ಕಾರಿನಲ್ಲಿ ಹೋಗದೆ ಪರಸ್ಪರ ಕುಶಲೋಪರಿಯೊಂದಿಗೆ ನಡಿಗೆಯಲ್ಲಿ ತೆರಳಿದರು.

'ಇದೊಂದು ಐತಿಹಾಸ! 30 ವರ್ಷಗಳ ಬಳಿಕ ಮೊದಲ ದ್ವಿಪಕ್ಷೀಯ ಭೇಟಿಗೆ ಬಂದಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವೀಡನ್‌ ಪ್ರಧಾನಿ ಸ್ಟೆಫನ್‌ ಲೊವೆನ್‌ ಅವರು ವೈಯಕ್ತಿಕವಾಗಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದಾರೆ. ಸ್ವೀಡನ್‌ ಮತ್ತು ಭಾರತ ಜಂಟಿಯಾಗಿ ಆಯೋಜಿಸಿರುವ ಶೃಂಗಸಭೆಯಲ್ಲಿ ಮೊದಲಬಾರಿಗೆ ಭಾಗವಹಿಸುತ್ತಿದ್ದಾರೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ರವೀಶ್‌ ಕುಮಾರ್‌ ಟ್ವೀಟ್‌ ಮಾಡಿದ್ದಾರೆ.

ಬ್ರಿಟನ್‌ ಪ್ರಧಾನಿ ತೆರೆಸಾ ಮೇ ಅವರು ಸೋಮವಾರ ಕಾಮನ್‌ವೆಲ್ತ್‌ ವ್ಯಾಪಾರ ವೇದಿಕೆ(ಸಿಬಿಎಫ್‌) ಉದ್ಘಾಟಿಸಿದ್ದಾರೆ. ಜತೆಗೆ ಕಾಮನ್‌ವೆಲ್ತ್‌ ರಾಷ್ಟ್ರಗಳ ಮುಖ್ಯಸ್ಥರ ಸಭೆಗೂ (ಸಿಎಚ್‌ಒಜಿಎಂ)ಚಾಲನೆ ದೊರೆತಿದೆ.

ಲಂಡನ್‌ನಲ್ಲಿ ಬ್ರಿಟನ್‌ ಆಯೋಜಿಸುತ್ತಿರುವ ಶೃಂಗಸಭೆಯಲ್ಲಿ ಭಾರತ ಸೇರಿದಂತೆ 52 ಸದಸ್ಯ ರಾಷ್ಟ್ರಗಳು ಪಾಲ್ಗೊಳ್ಳುತ್ತಿವೆ. ‘ಸಮಾನ ಭವಿಷ್ಯದೆಡೆಗೆ’ ಎಂಬುದು ಶೃಂಗಸಭೆಯ ಆಶಯ.

ಭಾರತೀಯ ಉದ್ದಿಮೆ ಒಕ್ಕೂಟದ ಅಧ್ಯಕ್ಷ ರಾಕೇಶ್‌ ಭಾರ್ತಿ ಮಿತ್ತಲ್‌ ನೇತೃತ್ವದಲ್ಲಿ ಭಾರತದಿಂದ 40 ಸದಸ್ಯರ ನಿಯೋಗವು ಸಿಬಿಎಫ್‌ನಲ್ಲಿ ಭಾಗವಹಿಸುತ್ತಿದೆ.

ಸ್ಟಾಕ್‌ಹೋಂನಲ್ಲಿ ಸ್ವೀಡನ್‌ ಪ್ರಧಾನಿ ಸ್ಟೆಫನ್‌ ಲೊವೆನ್‌ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವರು.

ಸ್ಟಾಕ್‌ಹೋಂನಲ್ಲಿರುವ ಭಾರತೀಯರು ಮೋದಿ ಅವರನ್ನು ಸ್ವಾಗತಿಸಿದರು.

ಮೋದಿ ಹಾಗೂ ಸ್ಟೆಫನ್‌ ಸಾಜರ್‌ ಹೌಸ್‌ನಿಂದ ಸಮೀಪದ ರೊಸೆನ್ಬಾದೆಗೆ ಕಾರಿನಲ್ಲಿ ಹೋಗದೆ ಕುಶಲೋಪರಿಯೊಂದಿಗೆ ನಡಿಗೆಯಲ್ಲಿ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.