ADVERTISEMENT

ಸ್ವ ರಕ್ಷಣೆಗೆ ಭಾರತ ಹಿಂದೇಟು ಹಾಕದು: ಪ್ರಧಾನಿ ಮೋದಿ ಹೇಳಿಕೆ

ಏಜೆನ್ಸೀಸ್
Published 26 ಜೂನ್ 2017, 6:52 IST
Last Updated 26 ಜೂನ್ 2017, 6:52 IST
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತೀಯ ಸಮುದಾಯದ ಜನರು ಸ್ವಾಗತ ಕೋರಿದ ಕ್ಷಣ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತೀಯ ಸಮುದಾಯದ ಜನರು ಸ್ವಾಗತ ಕೋರಿದ ಕ್ಷಣ   

ವಾಷಿಂಗ್ಟನ್: ಸ್ವ ರಕ್ಷಣೆಯ ವಿಷಯದಲ್ಲಿ ಭಾರತ ಹಿಂದೇಟು ಹಾಕದು ಎಂದು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಸೇನೆ ನಡೆಸಿದ್ದ ನಿರ್ದಿಷ್ಟ ದಾಳಿಯನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವರ್ಜೀನಿಯಾದ ರಿಟ್ಜ್ ಕಾರ್ಲ್‌ಟನ್‌ನಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಗಡಿ ನಿಯಂತ್ರಣ ರೇಖೆಯಾಚೆ ನಡೆಸಿದ ನಿರ್ದಿಷ್ಟ ದಾಳಿಯು ಭಾರತವು ತನ್ನನ್ನು ತಾನು ರಕ್ಷಿಸಿಕೊಳ್ಳಬಲ್ಲದು ಎಂಬುದನ್ನು ಸಾಬೀತುಪಡಿಸಿದೆ. ಅಗತ್ಯವಿದ್ದಲ್ಲಿ ತನ್ನ ಶಕ್ತಿ ಪ್ರದರ್ಶಿಸಲು ಭಾರತ ಮುಂದಾಗುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಹೇಳಿದ್ದಾರೆ.

ಪರೋಕ್ಷವಾಗಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಿರ್ದಿಷ್ಟ ದಾಳಿಗೆ ಜಗತ್ತಿನ ಯಾವ ರಾಷ್ಟ್ರವೂ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಭಯೋತ್ಪಾದನೆಯ ವಿರುದ್ಧ ಒಮ್ಮತ ಮೂಡಿಸುವಲ್ಲಿ ಭಾರತದ ಯಶಸ್ಸನ್ನು ಇದು ತೋರಿಸುತ್ತದೆ ಎಂದಿದ್ದಾರೆ.

ADVERTISEMENT

‘20 ವರ್ಷಗಳ ಹಿಂದೆ ಭಯೋತ್ಪಾದನೆ ಬಗ್ಗೆ ಭಾರತ ಮಾತನಾಡಿದಾಗ ಹೆಚ್ಚಿನ ದೇಶಗಳು ಅದೊಂದು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಎಂದಿದ್ದಲ್ಲದೆ ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ. ಈಗ ಭಯೋತ್ಪಾದನೆ ಎಂದರೇನು ಎಂಬುದನ್ನು ಉಗ್ರಗಾಮಿಗಳೇ ಅವರಿಗೆ ಅರಿವು ಮಾಡಿಕೊಟ್ಟಿದ್ದಾರೆ, ನಾವು ವಿವರಿಸಬೇಕಿಲ್ಲ’ ಎಂದು ಮೋದಿ ಹೇಳಿದ್ದಾರೆ.

‘ಭಾರತವು ಭಯೋತ್ಪಾದನೆಯ ಸಂತ್ರಸ್ತ ರಾಷ್ಟ್ರ. ಭಯೋತ್ಪಾದನೆಯಿಂದ ಭಾರತಕ್ಕಾಗಿರುವ ಹಾನಿಯನ್ನು ಜಗತ್ತಿಗೆ ಮನವರಿಕೆ ಮಾಡಿಕೊಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಈಗ ಜಗತ್ತು ನಮ್ಮನ್ನು ತಡೆಯಲಾರದು’ ಎಂದು ಪ್ರಧಾನಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.