ADVERTISEMENT

ಹಣೆಗೆ ಗುಂಡೇಟು ತಿಂದರೂ ಬದುಕುಳಿದ!

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2014, 19:30 IST
Last Updated 18 ಡಿಸೆಂಬರ್ 2014, 19:30 IST

ಪೆಶಾವರ (ಪಿಟಿಐ): ‘ಉಗ್ರರು ಒಳಗೆ ಬಂದು ಮನಬಂದಂತೆ ಗುಂಡು ಹಾರಿಸತೊಡಗಿದಾಗ ನಾನು ಸೇನಾ ಶಾಲೆಯ ಸಭಾಂಗಣದಲ್ಲಿನ ಕುರ್ಚಿಯ ಅಡಿ ಅಡಗಿ ಕುಳಿತಿದ್ದೆ. ಉಗ್ರರಿಂದ ತಪ್ಪಿಸಿಕೊಳ್ಳಲು ಕುರ್ಚಿಯ ಹಿಂದೆ ಬಗ್ಗಿ ಕುಳಿತಿದ್ದ ಶಿಕ್ಷಕಿಗೆ ಹಿಂದಿನಿಂದ ದಾಳಿಕೋರನೊಬ್ಬ ಮೂರು ಗುಂಡು ಹಾರಿಸಿದ್ದನ್ನು ನೋಡಿದೆ’

– ಇದು ಹಣೆಗೆ ಗುಂಡೇಟು ತಿಂದು ಅದೃಷ್ಟವಶಾತ್‌ ಬದುಕುಳಿದ 9ನೇ ತರಗತಿ ವಿದ್ಯಾರ್ಥಿ ಸೈಯದ್‌ ಬಾಕಿರ್‌ ನಕ್ವಿ ತೆರೆದಿಟ್ಟ ಭೀಕರ ಘಟನೆಯ ನೆನಪು. ಕಣ್ಣೆದುರೇ ನಡೆದ ಹತ್ಯಾಕಾಂಡದಿಂದ ಆಘಾತಕ್ಕೊಳ­ಗಾಗಿರುವ ಬಾಕಿರ್‌, ಹೆದರಿಕೆಯಿಂದ ಕ್ಷೀಣಗೊಂಡ ದನಿಯಿಂದಲೇ ಸುದ್ದಿಸಂಸ್ಥೆಯೊಂದಿಗೆ ಅಲ್ಲಿನ ದೃಶ್ಯಗಳನ್ನು ಬಿಚ್ಚಿಟ್ಟನು. ಒಳಗೆ ನುಗ್ಗಿದ ಉಗ್ರರು ಮೊದಲು ವೇದಿಕೆ ಮೇಲೆ ನಿಂತಿದ್ದವರ ಮೇಲೆ ಗುಂಡು ಹಾರಿಸಿದರು. ನಂತರ ಸಭಾಂಗಣದ ಕುರ್ಚಿಗಳಲ್ಲಿ ಕುಳಿತಿದ್ದವರನ್ನು ಗುರಿಯಾಗಿರಿಸಿ­ದರು. ಆ ವೇಳೆ ತಾನು ಸಭಾಂಗಣದ ಮಧ್ಯಭಾಗದಲ್ಲಿ ಇದ್ದಿದ್ದಾಗಿ ಆತ ಹೇಳಿದನು.

ಬಹುತೇಕ ಶಿಕ್ಷಕರೇ ಇದ್ದ ಮೊದಲ ಸಾಲಿನ ಮೇಲೆ ಗುಂಡಿನ ಮಳೆಗರೆದ ಉಗ್ರರು, ಜೀವಭಯದಿಂದ ದಿಕ್ಕಾ­ಪಾಲಾಗಿ ಓಡತೊಡಗಿದ ಮಕ್ಕಳತ್ತ ಗುಂಡು ಹಾರಿಸಿ­ದರು. ಬಾಕಿರ್‌ ಮತ್ತು 12ನೇ ತರಗತಿ ಓದುತ್ತಿದ್ದ ಆತನ ಅಣ್ಣ ಸೈಯದ್‌ ಸಿತ್ವತ್‌ ಅಲಿ ಶಾ ಇಬ್ಬರೂ ಬದುಕುಳಿ­ದರು. ಆದರೆ ಕಾಲೇಜು ಶಿಕ್ಷಕಿಯಾಗಿರುವ ಅವರ ತಾಯಿ ಸಯೀದಾ ಫರ್‍ಹಾತ್‌ ಜಫೇರಿ ದಾಳಿಕೋರರಿಗೆ ಬಲಿಯಾದರು.
ತಾನು ಅಡಗಿ ಕುಳಿತಿದ್ದ ಸಾಲಿನ ಕುರ್ಚಿಗಳ ಬಳಿ ಬಂದ ಒಬ್ಬ ಉಗ್ರ ತನ್ನ ಪಕ್ಕವೇ ಕುಳಿತಿದ್ದ ವಿದ್ಯಾರ್ಥಿಯ ತಲೆಗೆ ಗುರಿಯಿಟ್ಟು ಗುಂಡು ಹಾರಿಸಿ ಸಾಯಿಸಿದ ಎಂದು ಬಾಕಿರ್‌ ತಿಳಿಸಿದ್ದಾನೆ.

‘ನಾನು ತೀವ್ರವಾಗಿ ಭಯಗೊಂಡಿದ್ದೆ. ನಾನೇ ಮುಂದಿನ ಗುರಿ ಎಂದು ನಿರೀಕ್ಷಿಸಿದ್ದೆ. ಆದರೆ ಆ ಉಗ್ರ ಬೇರೊಂದು ಸಾಲಿನ ಮತ್ತೊಬ್ಬ ವಿದ್ಯಾರ್ಥಿಯತ್ತ ನಡೆದ. ಆದರೂ, ಒಂದು ನಿಮಿಷದಲ್ಲಿ ಹಿಂದಿರುಗಿದ ಆತ ನನ್ನನ್ನು ಪತ್ತೆ ಹಚ್ಚಿದ. ನನ್ನೆಡೆಗೆ ಬಂದು ನನ್ನತ್ತ ಬಂದೂಕು ನಳಿಗೆ ಇರಿಸಿದ. ತಲೆಗೆ ಇರಿಸಿದ್ದ ಗುರಿ ನಾನು ತುಸು ಜಾರಿಕೊಂಡಿದ್ದರಿಂದ ಹಣೆಗೆ ತಗುಲಿತು. ತುಂಬಾ ನೋವಾಯಿತು. ತಲೆಯಿಂದ ರಕ್ತ ಸುರಿಯಲಾರಂಭಿಸಿತು. ನನ್ನ ತಲೆಗೇ ಹೊಡೆದಿದ್ದೇನೆ ಎಂದು ಭಾವಿಸಿದ ಉಗ್ರ ಅಲ್ಲಿಂದ ಆಚೆಗೆ ಹೊರಟ’ ಎಂದು ಬಾಕಿರ್‌, ಸಾವಿನಂಚಿಗೆ ತಲುಪಿ ಬದುಕಿದ ಘಟನೆಯನ್ನು ವಿವರಿಸಿದ್ದಾನೆ.

ಪ್ರಜ್ಞೆಯಿದ್ದರೂ ಸತ್ತಂತೆಯೇ ನಟಿಸಿದ್ದಾಗಿ ಬಾಕಿರ್‌ ಹೇಳಿಕೊಂಡಿದ್ದಾನೆ. ಉಗ್ರರನ್ನು ಕೊಂದ ಬಳಿಕ ಸಭಾಂಗಣ ಪ್ರವೇಶಿಸಿದ ಸೇನಾ ಸಿಬ್ಬಂದಿ ಬಾಕಿರ್‌ನನ್ನು ಆಸ್ಪತ್ರೆಗೆ ಸಾಗಿಸಿದರು. ‘ಅದೃಷ್ಟ ದೇವತೆ ನಮ್ಮನ್ನುಳಿಸಿದಂತೆ ನಮ್ಮ ಅಮ್ಮನನ್ನೂ ಈ ಹತ್ಯಾಕಾಂಡದಿಂದ ಉಳಿಸ­ಬೇಕಿತ್ತು’ ಎಂದು ಈ ಸಹೋದರರು ದುಃಖದಿಂದ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.