ADVERTISEMENT

‘ಜನಮತಗಣನೆ ನಡೆಯಲಿ’

ಕಾಶ್ಮೀರ ಹಿಂಸಾಚಾರ: ಪಾಕಿಸ್ತಾನದಲ್ಲಿ ಕರಾಳ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST
ಪಾಕಿಸ್ತಾನದಲ್ಲಿ ನಡೆದ ಪ್ರತಿಭಟನೆ
ಪಾಕಿಸ್ತಾನದಲ್ಲಿ ನಡೆದ ಪ್ರತಿಭಟನೆ   

ಇಸ್ಲಾಮಾಬಾದ್‌ (ಪಿಟಿಐ): ‘ಕಾಶ್ಮೀರ ಕೇವಲ ಭಾರತದ ಆಂತರಿಕ ವಿಷಯವಲ್ಲ. ಅಲ್ಲಿನ ಜನರ ಹಕ್ಕುಗಳನ್ನು ಗೌರವಿಸಲು ಭಾರತ ಜನಮತಗಣನೆ ನಡೆಸಬೇಕು’ ಎಂದು ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌ ಆಗ್ರಹಿಸಿದ್ದಾರೆ.

ಹಿಜಬುಲ್‌ ಕಮಾಂಡರ್‌ ಬುರ್ಹಾನ್‌ ವಾನಿ ಹತ್ಯೆ ಖಂಡಿಸಿ ಬುಧವಾರ ದೇಶದಾದ್ಯಂತ ನಡೆದ ಕರಾಳ ದಿನಾಚರಣೆ ಅಂಗವಾಗಿ ಅವರು ಈ ಸಂದೇಶ ನೀಡಿದ್ದು, ಕಾಶ್ಮೀರ ಕುರಿತು ಭಾರತದ ಧೋರಣೆಯನ್ನು ಟೀಕಿಸಿದ್ದಾರೆ.

‘ಕಾಶ್ಮೀರಿ ಜನತೆಗೆ ಬೆಂಬಲ ವ್ಯಕ್ತಪಡಿಸಲು ನಾವು ಕರಾಳ ದಿನ ಆಚರಿಸಲಾಯಿತು. ಕಾಶ್ಮೀರಿ ಜನತೆ ತಮ್ಮ ಹಕ್ಕುಗಳಿಗಾಗಿ ನಡೆಸುತ್ತಿರುವ ಹೋರಾಟದಲ್ಲಿ ನಾವು ಪಾಲ್ಗೊಂಡಿದ್ದೇವೆ ಎನ್ನುವುದನ್ನು  ಸಾಬೀತುಪಡಿಸಲು ಕರಾಳ ದಿನಾಚರಣೆ ಮೂಲಕ ಜಗತ್ತಿಗೆ ಸಂದೇಶ ನೀಡುತ್ತಿದ್ದೇವೆ’ ಎಂದು ಹೇಳಿದ್ದಾರೆ.

‘ಭಾರತ, ಭದ್ರತಾ ಪಡೆಗಳ ಮೂಲಕ ಕಾಶ್ಮೀರಿ ಜನತೆಯ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ವಿಶ್ವಸಂಸ್ಥೆ ಕಾಶ್ಮೀರ ವಿವಾದಿತ ಪ್ರದೇಶ ಎಂದು ಘೋಷಿಸಿದೆ. ಹೀಗಾಗಿ, ಭಾರತ ಜನಮತಗಣನೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

ಕರಾಳ ದಿನಾಚರಣೆ: ಭದ್ರತಾ ಪಡೆಗಳ ಗುಂಡಿನ ದಾಳಿಯಲ್ಲಿ ಹತ್ಯೆಗೀಡಾದ ವಾನಿಯನ್ನು ಹುತಾತ್ಮ ಎಂದು ಕರೆದಿದ್ದ ಪಾಕಿಸ್ತಾನ, ಬುಧವಾರ ಕರಾಳ ದಿನ ಆಚರಿಸಲು ಕರೆ ನೀಡಿತ್ತು.

ಎಲ್ಲ ಸರ್ಕಾರಿ ಅಧಿಕಾರಿಗಳು ಕಪ್ಪು ಪಟ್ಟಿ ಧರಿಸಿಕೊಂಡು ಕಚೇರಿಗೆ ಬಂದಿದ್ದರು. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಸೇರಿದಂತೆ ದೇಶದಾದ್ಯಂತ ರ್‍ಯಾಲಿಗಳು ಹಾಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ವಿದೇಶಗಳಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಗಳಲ್ಲೂ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಪಾಕಿಸ್ತಾನ ಸರ್ಕಾರ ಸೂಚನೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.