ADVERTISEMENT

‘ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆ ಪುನರಾರಂಭಿಸಿ’

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 19:30 IST
Last Updated 19 ಏಪ್ರಿಲ್ 2015, 19:30 IST

ಲಾಹೋರ್‌ (ಪಿಟಿಐ): ಪ್ರಮುಖ ಸಮಸ್ಯೆಗಳ ನಿವಾರಣೆಗಾಗಿ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಗೆ ಭಾರತ ಮತ್ತೆ ಚಾಲನೆ ನೀಡಬೇಕು ಎಂದು ಪಾಕಿಸ್ತಾನ ಹೇಳಿದೆ.

‘ಭಾರತದ ವಿದೇಶಾಂಗ ಕಾರ್ಯದರ್ಶಿ ಮಾರ್ಚ್‌ 3ರಂದು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಆದರೆ ಇದು ಸೌಹಾರ್ದಯು ಭೇಟಿ ಮಾತ್ರವಾಗಿತ್ತು. ಅಧಿಕೃತ ಮಾತುಕತೆಗಳು  ಪುನರಾರಂಭವಾಗಬೇಕಿವೆ’ ಎಂದು  ಪ್ರಧಾನಿ ನವಾಜ್‌ ಷರೀಫ್‌ ಅವರ ಸಲಹೆಗಾರ ಸರ್ತಾಜ್‌ ಅಜೀಜ್‌ ಹೇಳಿದ್ದಾರೆ.

ಮುಸ್ಲಿಮರು ಮತ್ತು ಸಿಖ್ಖರ‌ ಮೈತ್ರಿಗೆ ಸಂಬಂಧಿಸಿದ ವಿಚಾರಸಂಕಿರಣದಲ್ಲಿ ಮಾತನಾಡಿದ ಅವರು,  ‘ಪಾಕಿಸ್ತಾನ ಎಲ್ಲಾ ವಿಷಯಗಳ ಬಗ್ಗೆ ಭಾರತ ಜತೆ ಮಾತುಕತೆ ಆರಂಭಿಸಲು ಬಯಸುತ್ತದೆ. ಶಾಂತಿಯುತ ವಾತಾವರಣ ಇದ್ದರೆ ಬಡತನ, ಅನಕ್ಷರತೆ ಮತ್ತು ಅನ್ಯಾಯದಂತಹ ಪಿಡುಗುಗಳನ್ನು ನಿವಾರಿಸಲು ಸಾಧ್ಯ’ ಎಂದಿದ್ದಾರೆ.

‘ಉಭಯ ರಾಷ್ಟ್ರಗಳ ಪ್ರಧಾನಿಗಳಾ ನವಾಜ್‌ ಷರೀಫ್‌ ಮತ್ತು ನರೇಂದ್ರ ಮೋದಿ ಅವರು ಕಳೆದ ವರ್ಷ ದ ಭೇಟಿ ಸಂದರ್ಭದಲ್ಲಿ ಒಪ್ಪಿಕೊಂಡಂತೆ ಮಾತುಕತೆ ಪ್ರಕ್ರಿಯೆ ಪುನರಾರಂಭಿಸಬೇಕು’ ಎಂದು ಅವರು ಭಾರತವನ್ನು ಒತ್ತಾಯಿಸಿದ್ದಾರೆ.

ದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನರ್‌ ಅವರು ಕಾಶ್ಮೀರದ ಪ್ರತ್ಯೇಕತಾವಾದಿಗಳ ಜತೆ ಮಾತುಕತೆ ನಡೆಸಿದ್ದರಿಂದ ಭಾರತವು ಕಳೆದ ಆಗಸ್‌್ಟನಲ್ಲಿ ನಿಗದಿಯಾಗಿದ್ದ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯನ್ನು ರದ್ದುಗೊಳಿಸಿತ್ತು.

ಇಸ್ಲಾಮಾಬಾದ್‌ ವರದಿ: ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದನ್ನು ಪಾಕಿಸ್ತಾನ ಖಂಡಿಸಿದೆ ಅಲ್ಲದೆ ಪ್ರತ್ಯೇಕತಾವಾದಿಗಳ ಬಂಧನ ಆತಂಕಕಾರಿ ವಿಷಯ ಎಂದು ಹೇಳಿದೆ.

‘ಕಾಶ್ಮೀರದಲ್ಲಿ ವ್ಯವಸ್ಥಿತವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದು ಕಳವಳಕಾರಿ. ಪ್ರತಿಭಟನಾಕಾರರ ಮೇಲೆ ಭಾರತದ ಭದ್ರತಾ ಪಡೆಯವರು ಗುಂಡು ಹಾರಿಸಿದ್ದನ್ನು ನಾವು ಖಂಡಿಸುತ್ತೇವೆ’ ಎಂದು ವಿದೇಶಾಂಗ ಕಚೇರಿಯ ವಕ್ತಾರೆ ತಸ್ನೀಮ್‌ ಅಸ್ಲಾಂ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.