ADVERTISEMENT

100ಕ್ಕೂ ಹೆಚ್ಚು ಉಗ್ರರ ಹತ್ಯೆ

ಬಾಂಬ್‌ ದಾಳಿ ಬಳಿಕ ಪಾಕ್‌ ಕಾರ್ಯಾಚರಣೆ

ಪಿಟಿಐ
Published 17 ಫೆಬ್ರುವರಿ 2017, 19:30 IST
Last Updated 17 ಫೆಬ್ರುವರಿ 2017, 19:30 IST
ಬಾಂಬ್ ದಾಳಿ ಖಂಡಿಸಿ ಶುಕ್ರವಾರ ಪೆಶಾವರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಾಂಬ್ ದಾಳಿ ಖಂಡಿಸಿ ಶುಕ್ರವಾರ ಪೆಶಾವರದಲ್ಲಿ ಪ್ರತಿಭಟನೆ ನಡೆಸಲಾಯಿತು.   
ಕರಾಚಿ: ಸಿಂಧ್ ಪ್ರಾಂತ್ಯದಲ್ಲಿ ಲಾಲ್‌ ಷಹಬಾಜ್‌ ಖಲಂದರ್ ದರ್ಗಾ ಮೇಲೆ ಗುರುವಾರ ಸಂಜೆ ಆತ್ಮಾಹುತಿ ಬಾಂಬ್ ದಾಳಿಯ ಬಳಿಕ ನಡೆಸಿದ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಶಂಕಿತ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.
 
ಗುರುವಾರ ರಾತ್ರಿಯಿಂದ ಪಾಕಿಸ್ತಾನ ಸೇನೆ ಪಂಜಾಬ್ ಪ್ರಾಂತ್ಯವೂ ಸೇರಿ ದೇಶದಾದ್ಯಂತ ಉಗ್ರ ನಿಗ್ರಹ ಕಾರ್ಯಾಚರಣೆ ನಡೆಸಿದೆ. ಆಫ್ಘಾನಿಸ್ತಾನ  ಗಡಿ ಪ್ರದೇಶದ ಶಾಲ್ಮಾನ್ ಪ್ರದೇಶದಿಂದ ಕಾರ್ಯಾಚರಣೆ ಆರಂಭಿಸಲಾಗಿತ್ತು.
 
ಕಥೋರ್‌, ಕರಾಚಿ, ಖೈಬರ್‌ ಫಖ್ತುಂಕ್ವಾ, ಒರಾಕಝೈ, ಬನ್ನು, ಖುರ್ರಂ, ಕ್ವೆಟ್ಟಾ ಮುಂತಾದೆಡೆ ಏಕಕಾಲದಲ್ಲಿ ದಾಳಿಗಳನ್ನು ನಡೆಸಲಾಗಿದೆ. ಉಗ್ರರಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ಭಯೋತ್ಪಾದಕರಿಗೆ ಸಂದೇಶ: ದಾಳಿಗೆ ತುತ್ತಾಗಿದ್ದ ಸೂಫಿ ಲಾಲ್‌ ಷಹಬಾಜ್‌ ಖಲಂದರ್ ದರ್ಗಾದಲ್ಲಿ ಶುಕ್ರವಾರವೂ ‘ಧಮಾಲ್’ ನೃತ್ಯ ಪ್ರದರ್ಶನ ನಡೆಸುವ ಮೂಲಕ ಭಕ್ತರು ಭಯೋತ್ಪಾದಕರಿಗೆ ಕಠಿಣ ಸಂದೇಶ ರವಾನಿಸಿದರು.
 
ಸೂರ್ಯಾಸ್ತದ ಸಂದರ್ಭದ ಪ್ರಾರ್ಥನೆಯ ಬಳಿಕ ನೃತ್ಯ ಪ್ರದರ್ಶನ ನಡೆಸಲಾಯಿತು. ನಸುಕಿನ 3.30ಕ್ಕೆ ದರ್ಗಾದ ಮೇಲ್ವಿಚಾರಕ ಸಯ್ಯದ್ ಮೆಹದಿ ರಾಜಾ ಷಾ ಸಾಂಪ್ರದಾಯದಂತೆ ಗಂಟೆ ಬಾರಿಸಿ ದರ್ಗಾದ ಬಾಗಿಲು ತೆರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.