ADVERTISEMENT

‘2018ರಲ್ಲಿ ಭಾರಿ ಭೂಕಂಪನಗಳ ಸಂಖ್ಯೆ ಹೆಚ್ಚಳ?’

ಪಿಟಿಐ
Published 20 ನವೆಂಬರ್ 2017, 19:30 IST
Last Updated 20 ನವೆಂಬರ್ 2017, 19:30 IST

ವಾಷಿಂಗ್ಟನ್: 2018ನೇ ಇಸವಿಯಲ್ಲಿ ಜಗತ್ತಿನಾದ್ಯಂತ ವಿನಾಶಕಾರಿ ಭೂಕಂಪಗಳ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಭೂಮಿಯ ಪರಿಭ್ರಮಣೆಯ ವೇಗದಲ್ಲಿ ಆಗುತ್ತಿರುವ ವ್ಯತ್ಯಾಸ ಇದಕ್ಕೆ ಕಾರಣ ಎಂದು ಅವರು ಕಂಡುಕೊಂಡಿದ್ದಾರೆ.

ಈ ಏರಿಳಿತಗಳು ತೀರಾ ಸಣ್ಣವು. ಇದರಿಂದ ದಿನದ ಅವಧಿಯಲ್ಲಿ ಒಂದು ಮಿಲಿಸೆಕೆಂಡ್‌ ಮಾತ್ರ ಹೆಚ್ಚಲಿದೆ. ಆದರೆ ಇದರಿಂದ ಅಪಾರ ಪ್ರಮಾಣದ ಭೂಗತಶಕ್ತಿಯು ಬಿಡುಗಡೆಯಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

‘ಭೂಮಿಯ ಪರಿಭ್ರಮಣೆ ಹಾಗೂ ಭೂಕಂಪನ ಪ್ರಕ್ರಿಯೆ ನಡುವೆ ಪರಸ್ಪರ ಸಂಬಂಧವಿದೆ. ಇದು ವಿಧ್ವಂಸಕಾರಿ ಭೂಕಂಪನಗಳಿಗೆ ದಾರಿ ಮಾಡಿಕೊಡಲಿದೆ’ ಎಂದು ಅಮೆರಿಕ ಕೊಲರಾಡೊ ವಿಶ್ವವಿದ್ಯಾಲಯದ ರೋಜರ್ ಬಿಲ್ಹಾಮ್ ಹೇಳಿದ್ದಾರೆ.

ADVERTISEMENT

1900ರಿಂದೀಚೆಗೆ ನಡೆದ ಏಳು ಹಾಗೂ ಅದಕ್ಕಿಂತ ಹೆಚ್ಚು ತೀವ್ರತೆಯ ಭೂಕಂಪನಗಳನ್ನು ಸಂಶೋಧಕರು ಅಧ್ಯಯನಕ್ಕೊಳಪಡಿಸಿದ್ದಾರೆ.

ಇತರ ಸಮಯಕ್ಕೆ ಹೋಲಿಸಿದರೆ ಅತಿದೊಡ್ಡ ಭೂಕಂಪನಗಳು ಸಂಭವಿಸಿದ 5 ಅವಧಿಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಈ ಏರಿಳಿತದ ಅವಧಿ ಸುಮಾರು ಐದು ವರ್ಷಗಳದ್ದು. ಮುಂದಿನ ವರ್ಷ ಇದು ಭೂಮಿಯನ್ನು ಬಾಧಿಸಲಿದೆ.

ಭೂಮಿಯ ತಿರುಗುವಿಕೆಯ ವೇಗವನ್ನು ಪರಮಾಣು ಗಡಿಯಾರದ ಮೂಲಕ ನಿಖರವಾಗಿ ಲೆಕ್ಕಹಾಕಬಹುದು ಎನ್ನುತ್ತಾರೆ ಬಿಲ್ಹಾಮ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.