ADVERTISEMENT

32 ಕೋಟಿ ಜನರಲ್ಲಿ ಹೆಪಟೈಟಿಸ್‌ ಸೋಂಕು: ವಿಶ್ವ ಆರೋಗ್ಯ ಸಂಸ್ಥೆ ವರದಿ

ಏಜೆನ್ಸೀಸ್
Published 22 ಏಪ್ರಿಲ್ 2017, 19:30 IST
Last Updated 22 ಏಪ್ರಿಲ್ 2017, 19:30 IST

ಜಿನೀವಾ: ಜಗತ್ತಿನಲ್ಲಿ 32.5 ಕೋಟಿ ಜನರು ಹೆಪಟೈಟಿಸ್‌ ಬಿ ಮತ್ತು ಸಿ  ವೈರಾಣು ಸೋಂಕು (ಪಿತ್ತಜನಕಾಂಗದ ಉರಿಯೂತ) ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಹೇಳಿದೆ.

ಹೆಪಟೈಟಿಸ್‌ ವೈರಾಣು ಬಗ್ಗೆ ಹೆಚ್ಚಿನ ಸಂಖ್ಯೆಯ ಜನರಲ್ಲಿ ತಿಳಿವಳಿಕೆಯ ಕೊರತೆ ಇದೆ. ವೈರಾಣುಗಳ ಕಾರಣ ಸಾವಿನ ಪ್ರಮಾಣವೂ ಹೆಚ್ಚುತ್ತಿದೆ ಎಂದು ಡಬ್ಲ್ಯುಎಚ್‌ಒ ವರದಿ ತಿಳಿಸಿದೆ.

ಹೆಪಟೈಟಿಸ್‌ ಅತ್ಯಂತ ಗಂಭೀರ  ಬೆದರಿಕೆಯಾಗಿದ್ದು, ಮಾರಣಾಂತಿಕ ಕಾಯಿಲೆಗಳ ಸಾಲಿನಲ್ಲಿ ಎಚ್‌ಐವಿ ಮತ್ತು ಕ್ಷಯರೋಗದ ನಂತರದ ಸ್ಥಾನದಲ್ಲಿದೆ. ಹೀಗಾಗಿ ಇದಕ್ಕೆ ತುರ್ತು ಸ್ಪಂದಿಸಬೇಕಾದ ಅಗತ್ಯವಿದೆ ಎಂದು ಹೇಳಿದೆ.

ADVERTISEMENT

ಹೆಪಟೈಟಿಸ್‌ ರೋಗ ಲಕ್ಷಣಗಳನ್ನು ತೋರಿಸುವುದಿಲ್ಲ. ಆದರೆ ಬಿ ಮತ್ತು ಸಿ ಸೋಂಕುಗಳಿಗೆ ಸೂಕ್ತ ಕಾಲದಲ್ಲಿ ಚಿಕಿತ್ಸೆ ದೊರಕದಿದ್ದರೆ ಯಕೃತ್ತಿನ ರೋಗ ಮತ್ತು ಕ್ಯಾನ್ಸರ್‌ಗೆ ಕಾರಣವಾಗುವ ಅಪಾಯವಿರುತ್ತದೆ. ಅರಿವಿನ ಕೊರತೆ ವೈರಾಣುಗಳ ಪ್ರಸಾರಕ್ಕೆ ಕಾರಣವಾಗುತ್ತಿದೆ.

ಹೆಪಟೈಟಿಸ್‌ ಬಿ, ರಕ್ತ ಮತ್ತು ವೀರ್ಯದಂತಹ ದೇಹದೊಳಗಿನ ದ್ರವ ಅಂಶಗಳ ಮೂಲಕ ಹರಡುತ್ತದೆ. ಇಲ್ಲಿ ಶೇ 9ರಷ್ಟು ಜನರಿಗೆ ಮಾತ್ರ ಸೋಂಕು ತಗುಲಿದ್ದು ಗೊತ್ತಾಗುತ್ತದೆ.

ಹೆಪಟೈಟಿಸ್‌ ಸಿ ವೈರಾಣು ಪ್ರಾಥಮಿಕವಾಗಿ ರಕ್ತದ ಮೂಲಕ ಹರಡುತ್ತದೆ. ಶೇ 20ರಷ್ಟು ಜನರಿಗೆ ಮಾತ್ರ ಈ ಸೋಂಕು ತಗುಲಿದ್ದು ಅರಿವಿಗೆ ಬರುತ್ತದೆ.
ಪಶ್ಚಿಮ ಪೆಸಿಫಿಕ್‌ ಪ್ರದೇಶ ಮತ್ತು ಆಗ್ನೇಯ ಏಷ್ಯಾಗಳಲ್ಲಿ ಹೆಪಟೈಟಿಸ್‌ ಬಿ ಹೆಚ್ಚಾಗಿ ಕಾಣಿಸುತ್ತಿದೆ. ಹೆಪಟೈಟಿಸ್‌ ಬಿ ವೈರಾಣುವಿಗೆ ಪರಿಣಾಮಕಾರಿ ಲಸಿಕೆ ಕಂಡುಹಿಡಿಯಲಾಗಿದೆ. ಆದರೆ ಹೆಪಟೈಟಿಸ್‌ ಸಿ ವೈರಾಣುವಿಗೆ ಲಸಿಕೆ ಇಲ್ಲ.

ಪಶ್ಚಿಮ ಮೆಡಿಟರೇನಿಯನ್ ಪ್ರದೇಶದಲ್ಲಿ 1.5 ಕೋಟಿ ಜನರಲ್ಲಿ ಹೆಪಟೈಟಿಸ್‌ ಸಿ ವೈರಾಣು ಪತ್ತೆಯಾಗಿದೆ. ಯುರೋಪ್‌ನಲ್ಲಿ ವೈರಾಣು 1.4 ಕೋಟಿ ಜನರಿಗೆ ಸೋಂಕು ತಗುಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.