ADVERTISEMENT

ದಾಳಿ ಪ್ರಕರಣ: ಕ್ರಿಕೆಟಿಗ ಇಮ್ರಾನ್‌ ಖಾನ್‌ಗೆ ಜಾಮೀನು

ಏಜೆನ್ಸೀಸ್
Published 2 ಜನವರಿ 2018, 14:40 IST
Last Updated 2 ಜನವರಿ 2018, 14:40 IST
ಎಪಿ ಚಿತ್ರ
ಎಪಿ ಚಿತ್ರ   

‌ಇಸ್ಲಾಮಾಬಾದ್‌: ಪಾಕಿಸ್ತಾನ ಟಿವಿ ಚಾನಲ್‌(ಪಿಟಿವಿ) ಮುಖ್ಯ ಕಚೇರಿಯ ಮೇಲೆ 2014ರಲ್ಲಿ ನಡೆದಿದ್ದ ದಾಳಿ ಪ್ರಕರಣದಲ್ಲಿ ಜಾಮೀನು ಕೋರಿ ಮಾಜಿ ಕ್ರಿಕೆಟಿಗ ಹಾಗೂ ತೆಹ್ರಿಕ್‌–ಇ–ಇನ್ಸಾಫ್‌ ಮುಖ್ಯಸ್ಥ ಇಮ್ರಾನ್‌ ಖಾನ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ಇಲ್ಲಿನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಸ್ವೀಕರಿಸಿದೆ.

ಪ್ರಕರಣದ ವಿಚಾರಣೆ ಆಲಿಸಿದ ನ್ಯಾಯಮೂರ್ತಿ ಶಾರುಖ್‌ ಅರ್ಜುಂದ್‌ ಅವರು ಇಮ್ರಾನ್‌ ಖಾನ್‌ಗೆ ಜಾಮೀನು ನೀಡಲು ಸಮ್ಮತಿಸಿದ್ದಾರೆ.

ಜಾಮೀನು ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಇಮ್ರಾನ್‌, ‘ಈ ನಿರ್ಧಾರ ನಾನು ಸತ್ಯವಂತ, ತಪ್ಪು ಮಾಡಿಲ್ಲ ಹಾಗೂ ಭಯೋತ್ಪಾದಕನಲ್ಲ ಎಂಬುದನ್ನು ಸಾಬೀತು ಮಾಡಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ನಾನು ಕಾನೂನಿಗೆ ಬದ್ಧವಾಗಿರುವುದರಿಂದಲೇ ಅದಕ್ಕೆ ಪ್ರಿಯವಾದವನಾಗಿದ್ದೇನೆ’ ಎಂದೂ ಹೇಳಿದ ಖಾನ್‌ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ವಿರುದ್ಧ ಗುಡುಗಿದ್ದಾರೆ.

‘ನನ್ನ ಹೆಸರು ಖಾನ್‌. ನಾನು ಭಯೋತ್ಪಾದಕನಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನ್ಯಾಯಾಲಯವೂ ನಾನು ತಪ್ಪು ಮಾಡಿಲ್ಲ ಎಂಬುದನ್ನು ಪುನರುಚ್ಛರಿಸಿದೆ. ನಾನು ಅವರನ್ನು(ಷರೀಫ್‌) ಜವಾಬ್ದಾರಿಯುತವಾಗಿ ಹಿಡಿದಿರುವ ಕಾರಣಕ್ಕಾಗಿ ನನ್ನ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ನಾನು ನನ್ನ ಜೀವನದಲ್ಲಿ ಏನೊಂದನ್ನೂ ಕದ್ದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಡಿಸೆಂಬರ್‌ 13ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯ ಇಮ್ರಾನ್‌ ಜಾಮೀನು ಅವಧಿಯನ್ನು ಜನವರಿ 2ರ ವರೆಗೆ ಮುಂದೂಡಿತ್ತು. ಇಮ್ರಾನ್ ಮಂಗಳವಾರ ವಿಚಾರಣೆ ಆರಂಭವಾಗುವುದಕ್ಕೂ ಮೊದಲು ಐದನೇ ಬಾರಿಗೆ ಜಾಮೀನು ಮೇಲ್ಮನವಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.