ADVERTISEMENT

ಭಾರತೀಯ ಉದ್ಯೋಗಿಗಳಿಗೆ ಮತ್ತೆ ಸಂಕಷ್ಟ

ಅಮೆರಿಕ: ಎಚ್‌1ಬಿ ವೀಸಾ ಅವಧಿ ವಿಸ್ತರಣೆಗೆ ನಿರ್ಬಂಧ?

ಪಿಟಿಐ
Published 3 ಜನವರಿ 2018, 19:30 IST
Last Updated 3 ಜನವರಿ 2018, 19:30 IST
ಭಾರತೀಯ ಉದ್ಯೋಗಿಗಳಿಗೆ ಮತ್ತೆ ಸಂಕಷ್ಟ
ಭಾರತೀಯ ಉದ್ಯೋಗಿಗಳಿಗೆ ಮತ್ತೆ ಸಂಕಷ್ಟ   

ವಾಷಿಂಗ್ಟನ್‌: ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ‘ಅಮೆರಿಕ ಮೊದಲು’ ನೀತಿಯ ಭಾಗವಾಗಿ ಎಚ್‌1ಬಿ ವೀಸಾ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಲು ಅಮೆರಿಕ ಮುಂದಾಗಿದೆ. ಇದರ ಅಡಿಯಲ್ಲಿ ಎಚ್‌1ಬಿ ವೀಸಾ ಅವಧಿ ವಿಸ್ತರಣೆ ಮೇಲೆ ನಿರ್ಬಂಧ ಹೇರಲು ಅದು ಯೋಚಿಸುತ್ತಿದೆ.

ಇದು, ಅಮೆರಿಕದಲ್ಲಿ ನೆಲೆಸಿರುವ ಭಾರತದ ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದ ಸಾವಿರಾರು ವೃತ್ತಿಪರರು ಮತ್ತು ಐಟಿ ಸಂಸ್ಥೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಮಾಧ್ಯಮ ವರದಿ ಹೇಳಿದೆ.

ಸದ್ಯ, ಗ್ರೀನ್‌ ಕಾರ್ಡ್‌ಗಾಗಿ (ಅಮೆರಿಕದ ಪೌರತ್ವಕ್ಕೆ ಅವಕಾಶ ಇಲ್ಲ, ಆದರೆ ಅಲ್ಲಿ ಶಾಶ್ವತವಾಗಿ ನೆಲೆಸುವುದು ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವ ಕಾರ್ಡ್‌) ಅರ್ಜಿ ಸಲ್ಲಿಸಿದವರಿಗೆ ಕಾರ್ಡ್‌ ಸಿಗದಿದ್ದರೆ ಅವರು ಹೊಂದಿರುವ ಎಚ್‌1ಬಿ ವೀಸಾ ಅವಧಿಯನ್ನು ವಿಸ್ತರಿಸುವುದಕ್ಕೆ ಅವಕಾಶ ಇದೆ.

ADVERTISEMENT

ಈಗ ಪ್ರಸ್ತಾಪಿಸಿರುವ ನಿಯಮ ಜಾರಿಗೆ ಬಂದರೆ ಗ್ರೀನ್‌ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿರುವ ಸಾವಿರಾರು ಜನರ ಎಚ್‌1ಬಿ ವೀಸಾಗಳ ಅವಧಿ ವಿಸ್ತರಣೆ ಆಗುವುದಿಲ್ಲ. ಹೀಗಾದರೆ, ಎಚ್‌1ಬಿ ವೀಸಾದ ಅಡಿಯಲ್ಲಿ ಅಮೆರಿಕದಲ್ಲಿ ನೆಲೆಸಿರುವವರು ಸ್ವದೇಶಕ್ಕೆ ಮರಳಬೇಕಾಗುತ್ತದೆ.

ಹೊಸ ಪ್ರಸ್ತಾವನೆಯನ್ನು ಆಂತರಿಕ ಭದ್ರತಾ ಇಲಾಖೆಯಲ್ಲಿ (ಡಿಎಚ್‌ಎಸ್‌) ಆಂತರಿಕವಾಗಿ ಹಂಚಿಕೊಳ್ಳಲಾಗಿದೆ ಎಂದು ಅಮೆರಿಕದ ಸುದ್ದಿ ಸಂಸ್ಥೆ ಮೆಕ್‌ಕ್ಲ್ಯಾಚಿ ಡಿಸಿ ಬ್ಯೂರೋ ವರದಿ ಮಾಡಿದೆ.

ಎಚ್‌1ಬಿ ವೀಸಾಗಳ ದುರ್ಬಳಕೆ ತಡೆಯುವುದಕ್ಕಾಗಿ ಮತ್ತು ಈಗಾಗಲೇ ಗ್ರೀನ್‌ ಕಾರ್ಡ್‌ ಹೊಂದಿರುವವರ ವೀಸಾ ಅವಧಿ ವಿಸ್ತರಿಸುವುದಕ್ಕೆ ತಡೆ ಹೇರುವ ಉದ್ದೇಶದಿಂದ ಟ್ರಂಪ್‌ ಸರ್ಕಾರ ಈ ಪ್ರಸ್ತಾವನೆ ಮುಂದಿಟ್ಟಿದೆ.

‘ಅಮೆರಿದಕದಲ್ಲಿರುವ ಸಾವಿರಾರು ಐಟಿ ತಂತ್ರಜ್ಞರು ತಾವಾಗಿಯೇ ದೇಶ ಬಿಟ್ಟು ಹೋಗುವ ಸಂದರ್ಭ ಸೃಷ್ಟಿಸಿ ಆ ಮೂಲಕ ಅಮೆರಿಕನ್ನರಿಗೆ ಉದ್ಯೋಗ ಸೃಷ್ಟಿಸುವ ಯೋಜನೆ ಇದರ ಹಿಂದಿದೆ’ ಎಂದು ಆಂತರಿಕ ಭದ್ರತೆ ಇಲಾಖೆಯ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಟ್ರಂಪ್‌ ನೀತಿ: ಎಚ್‌1ಬಿ ವೀಸಾಗಳನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂಬ ವಿಚಾರವನ್ನು ಡೊನಾಲ್ಡ್‌ ಟ್ರಂಪ್‌ ಅವರು ಪ್ರಮುಖ ಚುನಾವಣಾ ವಿಷಯನ್ನಾಗಿಸಿದ್ದರು.

ಅಧ್ಯಕ್ಷರಾದ ಬಳಿಕ ಎಚ್‌1ಬಿ ವೀಸಾ ನಿಯಮಗಳನ್ನು ಕಠಿಣಗೊಳಿಸುವ ಸರ್ಕಾರಿ ಆದೇಶಕ್ಕೂ ಸಹಿ ಹಾಕಿದ್ದರು.

ಭಾರತೀಯರಿಗೇಕೆ ಕಷ್ಟ?
* ಕೌಶಲ ಹೊಂದಿದ ಹೊರದೇಶಗಳ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಅಮೆರಿಕದ ಕಂಪನಿಗಳಿಗೆ ಎಚ್‌1ಬಿ ವೀಸಾ ಅವಕಾಶ ನೀಡುತ್ತದೆ

* ಭಾರತ, ಚೀನಾ ಸೇರಿದಂತೆ ವಿವಿಧ ರಾಷ್ಟ್ರಗಳ ಸಾವಿರಾರು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ತಂತ್ರಜ್ಞಾನ ಕಂಪೆನಿಗಳು ಈ ವೀಸಾವನ್ನೇ ಅವಲಂಬಿಸಿವೆ

* ಮೂರು ವರ್ಷಗಳಿಂದ ಆರು ವರ್ಷಗಳ ಅವಧಿಗೆ ವಿದೇಶಿ ಉದ್ಯೋಗಿಗೆ ಈ ವೀಸಾ ನೀಡಲಾಗುತ್ತದೆ

* ಎಚ್‌1ಬಿ ವೀಸಾದಾರರು ಗ್ರೀನ್‌ ಕಾರ್ಡ್‌ಗೆ ಸಲ್ಲಿಸಿರುವ ಅರ್ಜಿ ಇತ್ಯರ್ಥವಾಗದಿದ್ದರೆ ಅವರ ಉದ್ಯೋಗ ವೀಸಾವನ್ನು ಅನಿರ್ದಿಷ್ಟಾವಧಿವರೆಗೆ ವಿಸ್ತರಿಸಲು ಅವಕಾಶ ಇದೆ

* ಅಮೆರಿಕವು ಪ್ರತಿ ವರ್ಷ 65 ಸಾವಿರ ಉದ್ಯೋಗಿಗಳಿಗೆ ಎಚ್‌1ಬಿ ವೀಸಾ ನೀಡುತ್ತದೆ. ಇದರಲ್ಲಿ ಅರ್ಧಕ್ಕೂ ಹೆಚ್ಚು ಫಲಾನುಭವಿಗಳು ಭಾರತೀಯರೇ ಆಗಿದ್ದಾರೆ

* ಎಚ್‌1ಬಿ ವೀಸಾದಾರರ ಪರ ವಕೀಲರಾ‌ದ ಲಿಯೊನ್‌ ಫ್ರೆಸ್ಕೊ ಪ್ರಕಾರ, 10 ಲಕ್ಷಕ್ಕೂ ಹೆಚ್ಚು ಮಂದಿ ಗ್ರೀನ್‌ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ಹೆಚ್ಚಿನವರು ಭಾರತೀಯರು. 10 ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಅವರು ಗ್ರೀನ್‌ ಕಾರ್ಡ್‌ಗೆ ಕಾಯುತ್ತಿದ್ದಾರೆ

* ಈಗ ಪ್ರಸ್ತಾವಿತ ನಿಯಮವು ಎಚ್‌1ಬಿ ವೀಸಾ ಅವಧಿ ವಿಸ್ತರಣೆ ಮೇಲೆ ನಿರ್ಬಂಧ ವಿಧಿಸುವುದರಿಂದ ಇದೇ ವೀಸಾ ನಂಬಿಕೊಂಡಿರುವ ಭಾರತೀಯರು ಸಂಕಷ್ಟಕ್ಕೆ ಸಿಲುಕಲಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.