ADVERTISEMENT

ದತ್ತಾಂಶ ಆಧುನಿಕ ಜಗದ ಸಂಪತ್ತು: ಮೋದಿ

ಪಿಟಿಐ
Published 23 ಜನವರಿ 2018, 20:01 IST
Last Updated 23 ಜನವರಿ 2018, 20:01 IST
ದತ್ತಾಂಶ ಆಧುನಿಕ ಜಗದ ಸಂಪತ್ತು: ಮೋದಿ
ದತ್ತಾಂಶ ಆಧುನಿಕ ಜಗದ ಸಂಪತ್ತು: ಮೋದಿ   

ದಾವೋಸ್‌ : ದತ್ತಾಂಶಗಳು ಈ ಆಧುನಿಕ ಯುಗದ ಅತಿ ದೊಡ್ಡ ಸಂಪತ್ತಾಗಿದ್ದು, ದತ್ತಾಂಶಗಳ ಮೇಲೆ ನಿಯಂತ್ರಣ ಹೊಂದಿದವರು ಸಹಜವಾಗಿ ಇಡೀ ವಿಶ್ವವನ್ನೇ ನಿಯಂತ್ರಿಸುವ ಸಾಮರ್ಥ್ಯ ಪಡೆಯುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.

ದಾವೋಸ್‌ನಲ್ಲಿ ಮಂಗಳವಾರ ಆರಂಭವಾದ ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಸೈಬರ್‌ ಸುರಕ್ಷತೆಗೆ ಅಪಾಯಗಳು ಹೆಚ್ಚುತ್ತಿವೆ. ಇದನ್ನು ತಡೆಯುವುದು ತುರ್ತು ಅಗತ್ಯಗಳಲ್ಲಿ ಒಂದಾಗಿದೆ ಎಂದರು.

ತಂತ್ರಜ್ಞಾನ ಮತ್ತು ದತ್ತಾಂಶಗಳು ಜನರ ಜೀವನವನ್ನು ಮಾತ್ರ ಬದಲಿಸಿಲ್ಲ. ರಾಷ್ಟ್ರಗಳ ರಾಜಕೀಯ ಶಕ್ತಿ, ಸಾಮರ್ಥ್ಯಗಳನ್ನೂ ಬದಲಾಯಿಸಿದೆ ಎಂದು ಮೋದಿ ಹೇಳಿದರು.

ADVERTISEMENT

ಪ್ರಜಾಪ್ರಭುತ್ವ ಜೀವನ ಪದ್ಧತಿ: ಭಾರತದಲ್ಲಿ ಪ್ರಜಾಪ್ರಭುತ್ವ ಕೇವಲ ರಾಜಕೀಯ ವ್ಯವಸ್ಥೆಯಾಗಿ ಮಾತ್ರ ಉಳಿದುಕೊಂಡಿಲ್ಲ. ಅದು ಜೀವನ ಪದ್ಧತಿಯಾಗಿದೆ. ಜನರ ಜೀವನದಲ್ಲಿ ಬೆರೆತು ಹೋಗಿದೆ ಎಂದು ಅವರು ಹೆಮ್ಮೆಪಟ್ಟರು.

‘ವಸುದೈವ ಕುಟುಂಬಕಂ‘ (ಇಡೀ ವಿಶ್ವವೇ ಒಂದು ಕುಟುಂಬ) ಎಂಬ ಭಾರತದ ತತ್ವ ಜಾಗತಿಕ ಸಮಸ್ಯೆಗಳ ಪರಿಹಾರಕ್ಕೆ ಇಂದು ಹೆಚ್ಚು
ಪ್ರಸ್ತುತವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಗೌಡರ ಹೆಸರು ಪ್ರಸ್ತಾಪಿಸಿದ ಮೋದಿ

ದಾವೋಸ್‌ ವಿಶ್ವ ಆರ್ಥಿಕ ವೇದಿಕೆ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಹೆಸರು ಪ್ರಸ್ತಾಪಿಸಿದರು.

ಅಂದಿನ ಪ್ರಧಾನಿ ದೇವೇಗೌಡ ಅವರು 1997ರಲ್ಲಿ ದಾವೋಸ್‌ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಅದಾದ 20 ವರ್ಷಗಳ ನಂತರ ತಾವು ಈ ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವುದಾಗಿ ಹೇಳಿದರು.

ಅಂದಿನ ಭಾರತದ ಆರ್ಥಿಕ ಪ್ರಗತಿಗೂ (ಜಿಡಿಪಿ) ಇಂದಿನ ಪ್ರಗತಿಗೂ ಭಾರಿ ವ್ಯತ್ಯಾಸವಿದ್ದು, ಭಾರತದ ಜಿಡಿಪಿ ಆರುಪಟ್ಟು ಹೆಚ್ಚಾಗಿದೆ ಎಂದರು.

ಮೋದಿಗೆ ರಾಹುಲ್‌ ಪ್ರಶ್ನೆ

ಭಾರತದ ಜನಸಂಖ್ಯೆಯ ಶೇ 1ರಷ್ಟಿರುವ ಜನರ ಕೈಯಲ್ಲಿ ದೇಶದ ಶೇ 73ರಷ್ಟು ಸಂಪತ್ತು ಏಕೆ ಇದೆ ಎಂಬ ಸತ್ಯವನ್ನು ದಾವೋಸ್‌ನಲ್ಲಿ ಜನರಿಗೆ ಹೇಳಿ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸವಾಲು ಹಾಕಿದ್ದಾರೆ.

ಪ್ರಧಾನಿ ಮೋದಿ ಭಾಷಣಕ್ಕೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ರಾಹುಲ್‌ ಗಾಂಧಿ ಇದಕ್ಕೆ ಸಂಬಂಧಿಸಿದ ವರದಿಯನ್ನು ಅಂಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.