ADVERTISEMENT

55 ಉಗ್ರರ ಗಲ್ಲಿಗೆ ಪಾಕ್‌ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2014, 19:30 IST
Last Updated 22 ಡಿಸೆಂಬರ್ 2014, 19:30 IST

ಇಸ್ಲಾಮಾಬಾದ್‌(ಪಿಟಿಐ): ಭಯೋ­ತ್ಪಾದನಾ ಕೃತ್ಯಗಳಲ್ಲಿ ತೊಡಗಿರುವ ಉಗ್ರರಿಗೆ ತಕ್ಕ ಪಾಠ ಕಲಿಸಲು ಮುಂದಾ­ಗಿರುವ ಪಾಕಿಸ್ತಾನ ಕನಿಷ್ಠ 55 ಉಗ್ರರಿಗೆ ಮರಣ ದಂಡನೆ ಜಾರಿಗೊಳಿಸಲು ಸಿದ್ಧತೆ ನಡೆಸಿದೆ. ಪಾಕಿಸ್ತಾನದ ಜೈಲುಗಳಲ್ಲಿ ಮರಣ ದಂಡನೆ ವಿಧಿಸಲಾಗಿರುವ 500ಕ್ಕೂ ಹೆಚ್ಚು ಉಗ್ರರಿದ್ದಾರೆ. ಅವರಲ್ಲಿ 55  ಉಗ್ರರ ಕ್ಷಮಾದಾನದ ಅರ್ಜಿಯನ್ನು ತಿರಸ್ಕರಿಸಲಾಗಿದೆ. 

ಅಧ್ಯಕ್ಷ ಮಮ್ನೂನ್‌ ಹುಸೇನ್‌ ಅವರು 55 ಉಗ್ರರ ಕ್ಷಮಾದಾನ ಅರ್ಜಿ­ಯನ್ನು ತಿರಸ್ಕರಿ­ಸಿದ್ದಾರೆ ಎಂದು ಒಳಾಡಳಿತ ಸಚಿವಾ­ಲಯದ ಅಧಿಕಾರಿಯೊಬ್ಬರು ತಿಳಿಸಿ­ದ್ದಾರೆ. ಹೀಗಾಗಿ ಈ ಉಗ್ರರಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಲು ಅವಕಾಶ ದೊರೆತಿದೆ.

2008ರ ನಂತರ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆ ಜಾರಿಗೆ ತಡೆ ನೀಡಲಾಗಿತ್ತು. ಹೀಗಾಗಿ 2012ರ ನಂತರ ಆಸಿಫ್‌ ಅಲಿ ಜರ್ದಾರಿ ಅವರು ಅಧ್ಯಕ್ಷರಾಗಿದ್ದಾಗ ಕ್ಷಮಾದಾನ ಅರ್ಜಿಯ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲು ನಿರಾಕರಿಸಿದ್ದರು. 

ವಿವಿಧ ನ್ಯಾಯಾಲಯಗಳು 500ಕ್ಕೂ ಹೆಚ್ಚು ಉಗ್ರರಿಗೆ ಮರಣದಂಡನೆ ವಿಧಿಸಿವೆ. ಗಲ್ಲು ಶಿಕ್ಷೆಗೆ ತಾತ್ಕಾಲಿಕ ತಡೆ ಇದ್ದುದರಿಂದ ಉಗ್ರರಿಗೆ ಶಿಕ್ಷೆ ಜಾರಿಯಾಗಿರಲಿಲ್ಲ. ಇತ್ತೀಚೆಗೆ ಪೆಶಾ­ವರದ ಸೇನಾ ಶಾಲೆಯ ಮೇಲೆ ಉಗ್ರರು ಭೀಕರ ದಾಳಿ ನಡೆಸಿದ್ದರು. ಅದರಲ್ಲಿ 148 ಮಂದಿ ಮೃತಪಟ್ಟಿದ್ದರು. ಅವರಲ್ಲಿ ಹೆಚ್ಚಿನವರು ಮಕ್ಕಳು. ಈ ಕೃತ್ಯದ ನಂತರ ಉಗ್ರರ ವಿರುದ್ಧ ಪಾಕಿಸ್ತಾನ ಸರ್ಕಾರ ಬಿಗಿ ನಿಲುವು ತಳೆದಿದೆ. ಗಲ್ಲು ಶಿಕ್ಷೆ ಜಾರಿಗೆ ಇದ್ದ ತಡೆಯನ್ನು ತೆಗೆದು ಹಾಕಿದೆ.

ಪಾಕಿಸ್ತಾನದ ಮಾಜಿ ಸೇನಾ ಆಡಳಿತಗಾರ ಪರ್ವೇಜ್ ಮುಷರಫ್ ಅವರ ಮೇಲೆ ದಾಳಿ ನಡೆಸಿದ ಆರೋಪದಲ್ಲಿ ನಾಲ್ವರು ಉಗ್ರರಿಗೆ ಭಾನುವಾರ ಗಲ್ಲುಶಿಕ್ಷೆ ಜಾರಿ ಮಾಡಲಾಗಿದೆ. ಈ ­ಶಿಕ್ಷೆ ಜಾರಿ ತಡೆಯನ್ನು ತೆಗೆದು ಹಾಕಿರುವುದಕ್ಕೆ ಮಾನವ ಹಕ್ಕುಗಳ ಗುಂಪುಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.