ADVERTISEMENT

ಜಪಾನ್‌ ವ್ಯಕ್ತಿಗೆ 13 ಮಕ್ಕಳ ಪೋಷಣೆ ಹಕ್ಕು

ಏಜೆನ್ಸೀಸ್
Published 21 ಫೆಬ್ರುವರಿ 2018, 20:04 IST
Last Updated 21 ಫೆಬ್ರುವರಿ 2018, 20:04 IST

ಬ್ಯಾಂಕಾಕ್ : ಥಾಯ್ಲೆಂಡ್‌ನಲ್ಲಿ ಬಾಡಿಗೆ ತಾಯಂದಿರ ಮೂಲಕ 13 ಮಕ್ಕಳನ್ನು ಪಡೆದ ಜಪಾನ್ ವ್ಯಕ್ತಿಯೊಬ್ಬನಿಗೆ ಇಲ್ಲಿನ ನ್ಯಾಯಾಲಯವು ‘ಒಂಟಿ ಪೋಷಕತ್ವದ ಹಕ್ಕು’ ನೀಡಿ, ಅವರನ್ನು ಜಪಾನ್‌ಗೆ ಕರೆದೊಯ್ಯಲೂ ಅನುಮತಿ ನೀಡಿದೆ.

‘ಮಕ್ಕಳನ್ನು ಪಡೆದ ವ್ಯಕ್ತಿ ಶ್ರೀಮಂತ. ಅವರ ಪಾಲನೆಗೆ ದಾದಿಯರನ್ನು ನೇಮಿಸಿಕೊಂಡಿದ್ದಾರೆ. ಇದೂ ಅಲ್ಲದೆ ಆತ ಕೆಟ್ಟ ನಡತೆಯ ಹಿನ್ನೆಲೆ ಹೊಂದಿಲ್ಲ’ ಎಂದು ನ್ಯಾಯಾಲಯ ಹೇಳಿದೆ.

ಇಲ್ಲಿನ ಅಪಾರ್ಟ್‌ಮೆಂಟ್‌ವೊಂದರ ಮೇಲೆ 2014ರಲ್ಲಿ ದಾಳಿ ನಡೆಸಿದ ಪೊಲೀಸರು ಮನೆ ತುಂಬ ಮಕ್ಕಳಿರುವುದನ್ನು ಪತ್ತೆ ಹಚ್ಚಿದ್ದರು. ‘ಬೇಬಿ ಪ್ಯಾಕ್ಟರಿ’ ಹಗರಣ ಎಂದು ಪ್ರಕರಣ ಅಂದು ಖ್ಯಾತಿ ಗಳಿಸಿತ್ತು. ಇಲ್ಲಿರುವ ಮಕ್ಕಳ ಆರೈಕೆಯನ್ನು ಸಂಪೂರ್ಣವಾಗಿ ದಾದಿಯರೇ ನೋಡಿಕೊಳ್ಳುತ್ತಿದ್ದರು.

ADVERTISEMENT

ಜಪಾನ್‌ ಮಾಹಿತಿ ತಂತ್ರಜ್ಞಾನ ಉದ್ಯಮಿಯ ಪುತ್ರ ಮಿಟ್ಸುಟೊಕಿ ಶಿಗೆತಾ (28) ಈ ಪ್ರಕರಣದ ಕೇಂದ್ರ ಬಿಂದುವಾಗಿದ್ದರು. ಪ್ರಕರಣದ ನಂತರ ಥಾಯ್ಲೆಂಡ್ ತೊರೆದಿದ್ದ ಈತ, ಯಾವ ಕಾರಣಕ್ಕೆ ತಾನು ಅಷ್ಟು ಮಕ್ಕಳಿಗೆ ತಂದೆ ಆದೆ ಎಂದು ಸ್ಪಷ್ಟಪಡಿಸಿಲ್ಲ.

’ಮಿಟ್ಸುಟೊಕಿ ಬಾಡಿಗೆ ತಾಯಂದಿರ ಮೂಲಕ 19 ಮಕ್ಕಳನ್ನು ಪಡೆದಿದ್ದಾನೆ. ಅವರಲ್ಲಿ 13 ಥಾಯ್ಲೆಂಡ್‌ನಲ್ಲಿ ಹಾಗೂ ಆರು ಮಕ್ಕಳು ಕಾಂಬೋಡಿಯಾ ಮತ್ತು ಜಪಾನ್‌ನಲ್ಲಿ ಇದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ’ ಎಂದು ಥಾಯ್ಲೆಂಡ್ ಸಾಮಾಜಿಕ ಅಭಿವೃದ್ಧಿ ಮತ್ತು ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದರು.

ಕಠಿಣ ಕಾನೂನು ನಿಯಂತ್ರಣಗಳಿಲ್ಲದ ಥಾಯ್ಲೆಂಡ್ ’ಬಾಡಿಗೆ ತಾಯಿ ಉದ್ಯಮದ ಸ್ವರ್ಗ‘ ಎಂದು ಗುರ್ತಿಸಿಕೊಳ್ಳುತ್ತಿರುವ ಕುರಿತು ಈ ಪ್ರಕರಣ ಬೆಳಕು ಚೆಲ್ಲಿತು. ಅಲ್ಲದೆ, ಹಣ ನೀಡಿ ಥಾಯ್ಲೆಂಡ್‌ನಲ್ಲಿ ಬಾಡಿಗೆ ತಾಯಂದಿರಿಂದ ಮಗು ಪಡೆದುಕೊಳ್ಳಲು ವಿದೇಶಿಗರು ಬರುವುದನ್ನು ತಡೆಯಲೂ ಪ್ರಕರಣ ಪ್ರೇರೇಪಣೆ ಆಯಿತು.

ಮಿಟ್ಸುಟೊಕಿ ಅವರು ನ್ಯಾಯಾಲಯದಲ್ಲಿ ಖುದ್ದು ಹಾಜರಿರಲಿಲ್ಲ. ಮಕ್ಕಳನ್ನು ಹಸ್ತಾಂತರಿಸಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸುವುದಾಗಿ ಅವರ ಪರ ವಕೀಲರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.