ADVERTISEMENT

ಅಹಿಂಸೆಯ ಕಡೆಗೆ

ಅಮೃತವಾಕ್ಕು

ಡಾ.ಎಂ.ಎ ಜಯಚಂದ್ರ
Published 1 ಅಕ್ಟೋಬರ್ 2015, 19:30 IST
Last Updated 1 ಅಕ್ಟೋಬರ್ 2015, 19:30 IST
ಅಹಿಂಸೆಯ ಕಡೆಗೆ
ಅಹಿಂಸೆಯ ಕಡೆಗೆ   

ಮಹಾತ್ಮಗಾಂಧೀಜಿ ಅವರ ಸತ್ಯಾನ್ವೇಷಣೆಯ ಜೀವನ ವಿಶ್ವಮಹಾಕಾವ್ಯಕ್ಕೆ ಅರ್ಹ ವಸ್ತುವಾಗಿದೆ.  ಅವರ ಬದುಕು, ವಿಚಾರಗಳು ಕಾಲಕಾಲಕ್ಕೆ ವಿಕಾಸಗೊಂಡು ಪರಿಪಕ್ವಗೊಂಡವು.  ಎಲ್ಲ ಪ್ರಮುಖ ಧರ್ಮಗಳ ಪ್ರಭಾವಕ್ಕೆ ಅವರು ಒಳಗಾಗಿದ್ದರು.  ಜೈನಧರ್ಮದ ಅಹಿಂಸಾ ಸಿದ್ಧಾಂತ ಅವರನ್ನು  ಗಹನವಾಗಿ ಆವರಿಸಿತ್ತು. 

ಹಾಲು-ಸಕ್ಕರೆ ಒಂದಾಗಿ ಬೆರೆಯುವಂತೆ ಅಹಿಂಸೆಯು ಗುಜರಾತಿನ ಸಂಸ್ಕೃತಿಯಲ್ಲಿ ಒಂದಾಗಿ ಬೆರೆತಿತ್ತು. ಶ್ರೀಕೃಷ್ಣನ ತಂದೆಯ ಹಿರಿಯಣ್ಣನಾದ ಮಹಾರಾಜ ಸಮುದ್ರವಿಜಯನ ಸುಪುತ್ರನೇ, 22ನೇ ತೀರ್ಥಂಕರನಾಗುವ ನೇಮಿಕುಮಾರ.  ಆತನ ಮದುವೆಯ ದಿಬ್ಬಣ ಹೊರಟಿತ್ತು.  ಮಾರ್ಗಮಧ್ಯೆ ಪ್ರಾಣಿಸಮೂಹದ ಆಕ್ರಂದನ ಕೇಳಿಸಿತು. ವಿವಾಹಕ್ಕೆ ಆಗಮಿಸುವ ಅತಿಥಿಗಳ ಔತಣಕ್ಕಾಗಿ ಅವುಗಳನ್ನು ತರಲಾಗಿದೆ  ಎಂಬುದನ್ನು  ತಿಳಿದೊಡನೆಯೇ ಆತನಿಗೆ ವೈರಾಗ್ಯ ಮೂಡಿತು.  ಅವುಗಳನ್ನು ಬಂಧನದಿಂದ ಮುಕ್ತಗೊಳಿಸಿ, ತಾನು ಸಂಸಾರ ಬಂಧನದಿಂದ ಮುಕ್ತನಾಗಲು ತಪಸ್ಸಿಗೆ ತೆರಳಿದ.

ಗುಜರಾತ್‌ ಪ್ರಾಂತ್ಯದಲ್ಲಿರುವ ಊರ್ಜಯಂತಗಿರಿಯಲ್ಲಿ ಪರಿನಿರ್ವಾಣ ಹೊಂದಿದ.  ಆ ಸಿದ್ಧಕ್ಷೇತ್ರದ ಸುತ್ತಮುತ್ತ ಅಹಿಂಸೆಯ ಪ್ರಭಾವ  ವ್ಯಾಪಿಸಿತು. ಕಲಿಕಾಲಸರ್ವಜ್ಞ, ಜೈನಾಚಾರ್ಯ ಹೇಮಚಂದ್ರರ ನೇರ ಜೈನಶಿಷ್ಯನಾಗಿದ್ದ ರಾಜ ಕುಮಾರಪಾಲನು ಅನೇಕ ವರ್ಷಗಳ ಕಾಲ ಗುಜರಾತನ್ನು ಆಳಿದನು.  ಅನೇಕ ಅಹಿಂಸಾತ್ಮಕ ಸುಧಾರಣೆಗಳನ್ನು ತಂದಿದ್ದನು.  ಗುಜರಾತಿನ ಸಂಸ್ಥಾನವೊಂದರಲ್ಲಿ ಗಾಂಧೀಜಿಯವರ ತಂದೆ  ದಿವಾನರಾಗಿದ್ದರು.  ಅವರ ಭೇಟಿಗೆ ಇಸ್ಲಾಂ, ವೈದಿಕ, ಜೈನ ವಿದ್ವಾಂಸರು ಬರುತ್ತಿದ್ದರು.  ಅವರೊಂದಿಗೆ ಧರ್ಮ ಚರ್ಚೆ ನಡೆಯುತ್ತಿತ್ತು.  ಅದರ ಪ್ರಭಾವವೂ ಬಾಲಕ ಗಾಂಧಿಯ ಮೇಲಾಗಿತ್ತು.

ಗಾಂಧೀಜಿ ವೈಷ್ಣವರಾಗಿದ್ದ ಮೋಢಾ ಬನಿಯಾ ಜಾತಿಗೆ  ಸೇರಿದ್ದರು.  ಅದೇ ಜಾತಿಗೆ ಸೇರಿದ್ದ ಬೇಚಾರಜಿ ಸ್ವಾಮಿ ಎಂಬುವರು ಜೈನ ಸಾಧುವಾಗಿದ್ದರು. ಅವರ ಸಮ್ಮುಖದಲ್ಲಿ ಯುವಕ ಗಾಂಧಿ ಮದ್ಯ-ಮಾಂಸ-ಪರಸ್ತ್ರೀಸಂಗ ಪರಿತ್ಯಾಗದ ಪ್ರತಿಜ್ಞೆ ಮಾಡಿದ್ದರು.  ಗಾಂಧೀಜಿ ಇಂಗ್ಲೆಂಡಿನಿಂದ ಬಂದಮೇಲೆ ರಾಯಚಂದಭಾಯಿ ಅವರ ಪರಿಚಯವಾಯಿತು.  ರಾಯಚಂದರು ಓರ್ವ ರತ್ನಪಡಿ ವ್ಯಾಪಾರಿ, ಕವಿ, ಜೈನ ದಾರ್ಶನಿಕ ಹಾಗೂ ಆಧ್ಯಾತ್ಮಿಕ ಮಾರ್ಗದರ್ಶಿಯಾಗಿದ್ದರು.  ಅವರೊಂದಿಗೆ ಗಾಂಧೀಜಿ ಧರ್ಮ, ಅಹಿಂಸೆ, ದೇವರು, ಆತ್ಮಸಾಕ್ಷಾತ್ಕಾರ ಇತ್ಯಾದಿ ವಿಷಯಗಳನ್ನು ಆಪ್ತವಾಗಿ ಚರ್ಚಿಸುತ್ತಿದ್ದರು. 

ದಕ್ಷಿಣ ಆಫ್ರಿಕದಲ್ಲಿ ಗಾಂಧೀಜಿ ಧಾರ್ಮಿಕವಾಗಿ ಗೊಂದಲದಲ್ಲಿದ್ದ ಸಂದರ್ಭದಲ್ಲಿ ಗೆಳೆಯ ರಾಯಚಂದರಿಗೆ  22 ಪ್ರಶ್ನೆಗಳನ್ನು ಕಳುಹಿಸಿ, ಉತ್ತರ ಪಡೆದು ತಮ್ಮ ಗೊಂದಲ ನಿವಾರಿಸಿಕೊಂಡರು. ಗಾಂಧೀಜಿ ಅಪರಿಗ್ರಹಿ ಜೈನ ಶ್ವೇತಾಂಬರ ಸಾಧುಗಳಂತೆ ಹೊಲಿಗೆ ಹಾಕದ ಎರಡು ತುಂಡು ಬಿಳಿಬಟ್ಟೆಗಳನ್ನು ತಮ್ಮ ಉಡುಪನ್ನಾಗಿ ಮಾಡಿಕೊಂಡರು.   ಸಸ್ಯಾಹಾರದ ಪ್ರಚಾರಕರಾದರು.  ಅದುವರೆಗೆ ರಾಜಕೀಯರಂಗದಲ್ಲಿ ಬಳಕೆಯಾಗದೆಯಿದ್ದ ಉಪವಾಸ, ಅಹಿಂಸೆ, ಸರ್ವೋದಯ ಇತ್ಯಾದಿಗಳ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ಬರಲು ಶ್ರಮಿಸಿದರು.  

ಮಹಾವೀರರು ಮತ್ತು ಅಹಿಂಸೆಗೆ ಅವಿನಾಭಾವವಿರುವಂತೆ,  ಇಂದು ಗಾಂಧೀಜಿಗೆ ಮತ್ತು ಅಹಿಂಸೆಗೆ   ಅವಿನಾಭಾವ ಪ್ರಾಪ್ತವಾಗಿದೆ.  ಆದ್ದರಿಂದಲೇ ವಿಶ್ವಸಂಸ್ಥೆಯು ಇಂದಿನ ವಿಶ್ವವು ಅಹಿಂಸೆಯ ಕಡೆಗೆ ಸಾಗಬೇಕಾಗಿದೆ ಎಂಬುದನ್ನು ಧ್ವನಿಸುವಂತೆ, ಗಾಂಧೀ ಜಯಂತಿಯನ್ನು ಅಂತರರಾಷ್ಟ್ರೀಯ ಅಹಿಂಸಾ ದಿನಾಚರಣೆಯಾಗಿ ಆಚರಿಸಲು ಘೋಷಿಸಿದೆ.  ಇದು ಭಾರತೀಯ ಅಹಿಂಸಾ ಸಂಸ್ಕೃತಿಗೆ ಸಂದ ಗೌರವವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT