ADVERTISEMENT

ಯಾವುದು ಬೇಕು? ನಿರ್ಧರಿಸಿ

ಡಾ.ಎಂ.ಎ ಜಯಚಂದ್ರ
Published 28 ಜುಲೈ 2016, 19:30 IST
Last Updated 28 ಜುಲೈ 2016, 19:30 IST

ಲಲಿತ ಎಂದರೆ ಮನೋಹರವಾದ, ಘಟೆ ಎಂದರೆ ಸಮೂಹ.  ಕೌಶಂಬಿ ನಗರದ ಐನೂರು ಯುವಕರ ಗುಂಪಿಗೆ ಲಲಿತಘಟೆ ಎಂಬ ಹೆಸರು ಪ್ರಚಲಿತ ವಾಗಿತ್ತು.  ಆ ಘಟೆಯಲ್ಲಿ ರಾಜನ, ಸಾಮಂತರ, ಮಾಂಡಳಿಕರ, ಧನಿಕರ ಮಕ್ಕಳೆಲ್ಲ ಸೇರಿದ್ದರು.

  ಅವರು ರೂಪು, ತೇಜಸ್ಸು, ಯೌವನ, ಶ್ರೀಯಲ್ಲಿ ಒಬ್ಬರು ಮತ್ತೊಬ್ಬರಂತೆ ಇದ್ದರು.  ಸಮಾನ ಮನಸ್ಕರಾಗಿದ್ದರು.  ವನಕ್ರೀಡೆಗಾಗಲಿ, ಜಲಕ್ರೀಡೆಗಾಗಲಿ, ಯಾವುದೇ ಕಾರ್ಯಕ್ಕಾಗಲಿ ಒಟ್ಟಿಗೆ ಹೋಗಿ ಬರುತ್ತಿದ್ದರು.  ಅವರೆಲ್ಲ ಪಂಡಿತರಾಗಿದ್ದರೂ ಸದ್ಧರ್ಮದೃಷ್ಟಿ ಹೊಂದಿರಲಿಲ್ಲ.

ಅವರು ಒಮ್ಮೆ ಬೇಟೆಯಾಡಲು, ಊರ ಹೊರಗಿನ ಅಡವಿಗೆ ಹೋದರು.  ಹೊತ್ತು ಮುಳುಗುವ ಹೊತ್ತಾದರೂ ಸಣ್ಣದಾಗಲಿ ದೊಡ್ಡದಾಗಲಿ ಒಂದು ಮೃಗವೂ ದೊರೆಯಲಿಲ್ಲ.

ಕಾಡೆಲ್ಲ ಸುತ್ತಾಡಿ ಸುಸ್ತಾಗಿ ಬೀಡಿಗೆ ಹಿಂದಿರುಗಿದರು.  ಮತ್ತೆ ಪ್ರಯತ್ನಿಸಲು ಮರುದಿವಸ ಹೋದರು.  ಬೇಟೆ ಸಿಗಲಿಲ್ಲ.  ಹೀಗೆ ಏಳುದಿನ ಮತ್ತೆ ಮತ್ತೆ ಪ್ರಯತ್ನಿಸಿದರೂ ಫಲ ದೊರೆಯಲಿಲ್ಲ.

ಇತ್ತ ಆ ದಟ್ಟ ಅರಣ್ಯದಲ್ಲಿ ಒಬ್ಬ ಜೈನ ದಿಗಂಬರ ಮುನಿಯಿದ್ದರು.  ಅವರು ತಾಯಿಯ ಗರ್ಭದಲ್ಲಿರುವಾಗಲೇ, ಆ ಮಹಾತಾಯಿಗೆ ಜೀವಗಳನ್ನು ಕೊಲ್ಲದಿರುವ ಬಸುರಬಯಕೆಯಾಗಿ ಊರಲ್ಲಿ ನಾಡಲ್ಲಿ ಎಲ್ಲೆಲ್ಲೂ ಡಂಗುರ ಹೊಯ್ಸಿ ಪ್ರಾಣಿಗಳಿಗೆ ಅಭಯಘೋಷಣೆ ಮಾಡಿಸಿದ್ದರಂತೆ !  ಆದ್ದರಿಂದ ಅವರಿಗೆ ಅಭಯಘೋಷ ಎಂಬ ನಾಮಕರಣವಾಗಿತ್ತು. 

ಇಂಥವರು ಆ ಅಡವಿಯಲ್ಲಿ ಒಂದು ಸಮತಟ್ಟಾದ ಬಂಡೆಯ ಮೇಲೆ ಕುಳಿತು ಆಗಮ(ಶಾಸ್ತ್ರ)  ವನ್ನು ಅನುಕ್ರಮವಾಗಿ ಹೇಳುತ್ತಾ, ಅದರ ಅರ್ಥವನ್ನು ಪರಿಭಾವಿಸುತ್ತಾ, ಸ್ವಾಧ್ಯಾಯ ಮಾಡುತ್ತಿದ್ದರು.


ಇವರನ್ನು ಆ ದಟ್ಟ ಅಡವಿಯಲ್ಲಿ ದೂರದಿಂದ ಮಬ್ಬುಮಬ್ಬಾಗಿ ಕಂಡ ಲಲಿತಘಟೆ,  ‘ಇದೊಂದು ಅಪೂರ್ವವಾದ ಕರಿಯ ಪ್ರಾಣಿ’ - ಎಂದು   ಭಾವಿಸಿತು.  ಕೊನೆಗೂ ಬೇಟೆ ಲಭಿಸಿತೆಂಬ ಸಂತಸದಲ್ಲಿ ಎಲ್ಲರೂ ಬಿಲ್ಲುಗಳನ್ನು ಏರಿಸಿ, ಬಾಣ ಹೂಡಿ ಪ್ರಯೋಗಿಸುವಷ್ಟರಲ್ಲಿ ಎಲ್ಲ ಬಿಲ್ಲುಗಳು ಮುರಿದು ಬಿದ್ದವು. 

ಅಲ್ಲದೆ ಅವರಷ್ಟು ಜನರು ಹಿಂದಕ್ಕೆ ಉರುಳಿ ಬಿದ್ದರು.  ಏನು ಆಶ್ಚರ್ಯ !  ಹತ್ತಿರ ಹೋಗಿ ಪರೀಕ್ಷಿಸೋಣವೆಂದು ಮೆಲ್ಲಮೆಲ್ಲನೆ ಬಂದು ನೋಡಿದರು.  ಅರೆ !  ಇವರು ಋಷಿಗಳು !  ಬೇಟೆಯ ಪ್ರಾಣಿಯಲ್ಲ !

ಅವರ ತಪಕ್ಕೆ, ಶಾಂತತೆಗೆ ಪ್ರಭಾವಿತರಾದರು.  ತಾವೂ ಉಪಶಾಂತರಾಗಿ ಕುಳಿತು, ‘ಧರ್ಮದ ಮರ್ಮ ತಿಳಿಸಿರಿ’- ಎಂದು ಬೇಡಿದರು.  ಆಗ ಆಚಾರ್ಯ ಭಗವಂತರು ಉಪದೇಶಿಸಿದರು-


‘ಜತ್ಥ ದಯಾ ಸೋ ಧಮ್ಮೋ/ ಎಲ್ಲಿ ದಯೆಯು ಇದೆಯೋ, ಅದು ಧರ್ಮ.  ತಓ ಜತ್ಥ ವಿಸಯ-ನಿಗ್ಗಹೋ ಸೋ ವಿ ಧಮ್ಮೋ/ಬಳಿಕ ಎಲ್ಲಿ ವಿಷಯ-ನಿಗ್ರಹವಿದೆಯೋ ಅದು ಕೂಡ ಧರ್ಮವಾಗಿದೆ.

 ಣತ್ಥಿ ಸಂದೇಹೋ/ ಇದರಲ್ಲಿ ಸಂದೇಹವೇ ಇಲ್ಲ’ ಎಂದರು.  ಅನಂತರ ಪುಣ್ಯ - ಪಾಪ ಕರ್ಮಗಳ ಸ್ವರೂಪವನ್ನು ಸಂಕ್ಷಿಪ್ತವಾಗಿ ನಿರೂಪಿಸಿ, ಅಂತ್ಯದಲ್ಲಿ ಮಾಣಿಕ್ಯದಂಥ ಒಂದು ಗಾಹೆಯನ್ನು ಸುಸ್ವರದಲ್ಲಿ ಪಠಿಸಿದರು-

‘ಜೀವನು ಪಾಪಕರ್ಮದಿಂದ ನರಕ ಮತ್ತು ತಿರಿಯಕ (ಪ್ರಾಣಿ) ಗತಿಗಳನ್ನು;  ಧರ್ಮದಿಂದ ದೇವಲೋಕವನ್ನು; ಪಾಪ-ಪುಣ್ಯಗಳ ಮಿಶ್ರಣದಿಂದ  ಮನುಷ್ಯ ಗತಿಯನ್ನು; ಪಾಪ-ಪುಣ್ಯಗಳ ವಿನಾಶದಿಂದ ನಿರ್ವಾಣವನ್ನು ಪಡೆ
ಯುತ್ತಾನೆ.

ಆದ್ದರಿಂದ ನಿಮಗೆ ನರಕಗತಿ, ತಿರ್ಯಕಗತಿ, ದೇವಗತಿ, ಮನುಷ್ಯಗತಿಗಳಲ್ಲಿ ಯಾವ ಗತಿ(ಜನ್ಮ) ಬೇಕು? ಅಥವಾ ನಿರ್ವಾಣ ಬೇಕೆ? ಎನ್ನುವುದನ್ನು  ನೀವೇ ನಿರ್ಧರಿಸಿ, ನಿಮ್ಮ ನಿಮ್ಮ ಜೀವನವನ್ನು ನೀವು ನೀವೇ ರೂಪಿಸಿಕೊಳ್ಳಿ’ ಎಂದರು.                                                                  v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT