- ಲೀಲಾವತಿ, ಹಾಸನ
‘ಧರ್ಮ’. ನಮ್ಮ ದೇಶದಲ್ಲಿ ಈ ಶಬ್ದದಷ್ಟು ಅಪಾರ್ಥಕ್ಕೆ ಒಳಗಾಗಿರುವ ಶಬ್ದ ಇನ್ನೊಂದು ಇಲ್ಲ ಎನ್ನಬಹುದು. ಇದಕ್ಕೆ ಕಾರಣವೂ ಇಲ್ಲದಿಲ್ಲ. ‘ಧರ್ಮ’- ಇದು ಅತ್ಯಂತ ಸಂಕೀರ್ಣ ಪದ. ಹಲವು ನೆಲೆಗಳ ಅರ್ಥವನ್ನು ಅದು ಹೊಂದಿದೆ; ಸುಲಭವಾಗಿ ಅರ್ಥೈಸಲು ಆಗದು. ಆದುದರಿಂದ ಅದನ್ನು ಉಪಯೋಗಿಸಿದ ಸಂದರ್ಭವನ್ನು ನೋಡಿಕೊಂಡೇ ಅರ್ಥ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ‘Religion’ ಎಂಬುದಕ್ಕೆ ಪರ್ಯಾಯವಾಗಿ ಅದನ್ನು ಬಳಸುತ್ತಿರುತ್ತೇವೆ. ಆದರೆ ಧರ್ಮಕ್ಕೆ ಇನ್ನೂ ವ್ಯಾಪಕವಾದ ಅರ್ಥಪರಂಪರೆ ಇದೆ.
ಎಲ್ಲವನ್ನೂ ತಾಳುವಂಥದ್ದು, ಧರಿಸುವಂಥದ್ದು, ಆಧಾರವಾಗಿರುವಂಥದ್ದು ಯಾವುದೋ ಅದು ‘ಧರ್ಮ’. ಇದು ಅದರ ಮೂಲಾರ್ಥ. ಇದನ್ನೇ Cosmic Order ಎನ್ನಬಹುದು. ಇದೊಂದು ವಿಶ್ವವ್ಯವಸ್ಥೆ; ದೇಶ–ಕಾಲಗಳನ್ನು ಮೀರಿದ ತತ್ತ್ವ.
ನಾವು ಹಿಂದೂಧರ್ಮ, ಬೌದ್ಧ ಧರ್ಮ, ಇಸ್ಲಾಂಧರ್ಮ ಎಂದೆಲ್ಲ ಹೇಳುವಾಗ ‘ಧರ್ಮ’ದ ಮೂಲಾರ್ಥಕ್ಕಿಂತ ಬೇರೆಯಾದ ಮತ್ತೊಂದು ಸ್ತರದ ಅರ್ಥವೇ ಅಲ್ಲಿರುತ್ತದೆ ಎನ್ನುವುದನ್ನು ಗಮನಿಸಬೇಕು. ಹೀಗೆಯೇ ರಾಜಧರ್ಮ, ಗೃಹಸ್ಥಾಶ್ರಮಧರ್ಮ, ಸಂನ್ಯಾಸಧರ್ಮ - ಹೀಗೆ ಹೇಳುವಾಗಲೂ ಇನ್ನೊಂದು ಸ್ತರದ ಅರ್ಥವೇ ಇರುತ್ತದೆ. ಆದುದರಿಂದ ಧರ್ಮ ಎಂದರೇನು ಎಂದು ಆಯಾ ಸಂದರ್ಭವನ್ನು ಹಿಡಿದೇ ಅರ್ಥ ಮಾಡತಕ್ಕದ್ದು.
ವೈಯಕ್ತಿಕ ಸ್ತರದ ಆಚಾರ-ವಿಚಾರ-ನಂಬಿಕೆಗಳನ್ನೇ ‘ಮತ'’ ಎನ್ನುವುದು. ಮತ ಒಂದು ಜನಾಂಗದಿಂದ ಮತ್ತೊಂದು ಜನಾಂಗಕ್ಕೆ ಭಿನ್ನವಾಗಿರುವುದು ಸಹಜ. ಅಂತೆಯೇ ದೇಶ-ಕಾಲ-ಸಂಸ್ಕೃತಿಗಳಿಗೆ ಅನುಗುಣವಾಗಿ ಮತದ ಕಲ್ಪನೆ ಬದಲಾಗಬಹುದು. ಇಂದು ನಾವು ಧರ್ಮ ಎಂದು ವ್ಯವಹರಿಸುವುದೆಲ್ಲವೂ ವಾಸ್ತವವಾಗಿ ಮತವೇ ಆಗಿರುತ್ತದೆ.
‘ಅಧ್ಯಾತ್ಮ’ ಎಂದರೆ ಆತ್ಮವನ್ನು ಕುರಿತಾದುದು. ಆತ್ಮ ಎಂದರೆ ಮೂಲಚೈತನ್ಯ. ಸೃಷ್ಟಿಯ ಎಲ್ಲ ವಿವರಗಳ ಹಿಂದಿರುವ ಕಾರಣಶಕ್ತಿಯೇ ಅದು. ಅದರ ಹುಡುಕಾಟವನ್ನು ಮಾಡುವ ಎಲ್ಲ ಪ್ರಕ್ರಿಯೆಗಳೂ ಆಧ್ಯಾತ್ಮಿಕತೆ ಎನಿಸಿಕೊಳ್ಳುತ್ತವೆ.
ಇದಿಷ್ಟು ಧರ್ಮ, ಮತ ಮತ್ತು ಅಧ್ಯಾತ್ಮ - ಇವುಗಳ ಬಗ್ಗೆ ಸಂಕ್ಷಿಪ್ತ ಪರಿಚಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.