ADVERTISEMENT

ಕೋಪಶಮನದ ಬಗೆ

ಡಾ. ಗುರುರಾಜ ಕರಜಗಿ
Published 3 ಏಪ್ರಿಲ್ 2014, 19:30 IST
Last Updated 3 ಏಪ್ರಿಲ್ 2014, 19:30 IST

ಆಕೆ ಒಂದು ಆಮೆಯ ಮರಿ. ಮನುಷ್ಯರಿಗೆ ಹೇಗೆ ಕಲಿಯುವುದಕ್ಕಾಗಿ ಶಾಲೆಗಳಿವೆಯೂ ಹಾಗೆಯೇ ಸಮುದ್ರ­ದಲ್ಲಿ ಆಮೆಗಳಿಗೂ ಶಾಲೆ ಇದೆ. ಈ ಮರಿಯ ತಂದೆ-ತಾಯಿಯರು ಈಕೆ­ಯನ್ನು ಶಾಲೆಗೆ ಕಳುಹಿಸಿದ್ದಾರೆ. ಆಕೆಗೆ ಶಾಲೆಯೆಂದರೆ ಬೇಜಾರು. ಅದೇ ತರಗತಿಯಲ್ಲಿ ಕೂಡ್ರುವುದು, ತಾಸಿಗೊಬ್ಬರಂತೆ ಶಿಕ್ಷಕರು ಬಂದು ತಿರುಗಿ ತಿರುಗಿ ಅದೇ ವಿಷಯವನ್ನು ಕಲಿಸುವುದನ್ನು ಕೇಳಿ ಕೇಳಿ ಆಕೆಗೆ ತಲೆ ಚಿಟ್ಟು ಹಿಡಿದಿತ್ತು.

ಎಲ್ಲ ಶಿಕ್ಷಕರೂ ಕಲಿಸುವುದು ಅದೇ ವಿಷಯ. ನಮ್ಮ ಊಟಕ್ಕೆ ಸಣ್ಣ ಸಣ್ಣ ಪ್ರಾಣಿಗಳನ್ನು ಹೇಗೆ ಹುಡುಕುವುದು, ಹೇಗೆ ದಣಿವಾಗದಂತೆ ಬಹಳ ಹೊತ್ತು ಈಜುವುದು ಮತ್ತು ನಮ್ಮನ್ನು ತಿಂದುಹಾಕುವ ಶಾರ್ಕ್‌ ಮೀನುಗಳಿಂದ ಹೇಗೆ ಪಾರಾಗುವುದು ಇವೇ ಇಂಥ ವಿಷಯಗಳನ್ನು ಪಾಠ ಮಾಡುತ್ತಿದ್ದರು.

ಈ ಆಮೆಯ ಮರಿಗೆ ಬೇಗನೇ ಕೋಪ ಬರುತ್ತಿತ್ತು. ಹಾಗೆ ಕೋಪ ಬಂದ ತಕ್ಷಣ ಇಷ್ಟಗಲ ಬಾಯಿ ತೆರೆದು ಹತ್ತಿರವಿದ್ದವರನ್ನು ಬಲವಾಗಿ ಕಚ್ಚಿಬಿಡುತ್ತಿದ್ದಳು. ಇವಳ ಈ ಕಚ್ಚುವಿ­ಕೆಗಾಗಿ ಉಳಿದ ಮರಿಗಳು ಹೆದರಿ ಅವಳ ಹತ್ತಿರವೂ ಬರುತ್ತಿರಲಿಲ್ಲ. ಇದರಿಂದ ಅವಳಿಗೆ ಮತ್ತಷ್ಟು ಕೋಪ, ಅದರಿಂದ ಮತ್ತಷ್ಟು ಕಚ್ಚುವಿಕೆ ಮುಂದುವರೆ­ಯುತ್ತಿತ್ತು. ಇದು ಯಾವ ಮಟ್ಟಕ್ಕೆ ಹೋಯಿತೆಂದರೆ ಶಿಕ್ಷಕರೂ ಆಕೆಯನ್ನು ತರಗತಿಯಲ್ಲಿ ಬೇರೆಡೆಯಲ್ಲಿ ಕೂಡ್ರಿ­ಸುತ್ತಿದ್ದರು. ಹೀಗೆ ಆಕೆಯನ್ನು ಏಕಾಂಗಿಯನ್ನಾಗಿ ಮಾಡಿದ್ದು ಇನ್ನಷ್ಟು ರೋಷವನ್ನು ತಂದಿತ್ತು.

ಒಂದು ದಿನ ಶಾಲೆ ಮುಗಿದ ಮೇಲೆ ಈ ಪುಟ್ಟ ಆಮೆಯ ಮರಿ ಸಿಟ್ಟಿನಲ್ಲಿ ಕುದಿಯುತ್ತ ಮನೆಗೆ ಹೊರಟಳು. ಕೋಪದಲ್ಲಿ ತಾನು ಮನೆಯ ವಿರುದ್ಧ ದಿಕ್ಕಿನಲ್ಲಿ ಹೊರಟಿದ್ದು ತಿಳಿಯಲಿಲ್ಲ. ಹಾಗೆಯೇ ಮುಂದೆ ಸಾಗಿದಾಗ ನೀರು ಆಳ, ಆಳವಾ­ಗುತ್ತಿರುವುದು ತಿಳಿಯಿತು. ಇನ್ನೇನು ತನ್ನ ಮನೆಯ ದಿಕ್ಕಿಗೆ ಹೊರಳಬೇಕೆನ್ನುವಾಗ ಆಕೆಯ ಮುಂದೆ ಒಂದು ಭಾರಿ ಗಾತ್ರದ ಪ್ರಾಣಿ ತೇಲಿಬರುವುದು ಕಂಡಿತು. ಹತ್ತಿರ ಬಂದಾಗ ಅದೊಂದು ಹಿರಿಯ ಆಮೆಯೆಂದು ತಿಳಿಯಿತು. ಅದರ ಗಾತ್ರ ನೋಡಿದರೆ ಅದಕ್ಕೆ ಕನಿಷ್ಠ ನೂರಿನ್ನೂರು ವರ್ಷ ವಯಸ್ಸಾಗಿದ್ದಿರಬೇಕು. ಮರಿ ತನ್ನ ಅಮ್ಮ ಹೇಳಿದ್ದು ನೆನಪಾಯಿತು. ಈ ಹಿರಿಯ ಆಮೆಗಳಿಗೆ ನೆನಪು ತೀಕ್ಷ್ಣವಾಗಿ­ರುತ್ತದೆ ಅಲ್ಲದೇ ಅವು ತಮ್ಮ ಅನುಭವದಿಂದ ಹೇಳಿದ ಜ್ಞಾನ ಬಹಳ ಪ್ರಯೋಜನಕಾರಿ, ಅವುಗಳಿಂದ ಮಾರ್ಗ­ದರ್ಶನ ಪಡೆಯಬೇಕು, ಎಂದಿದ್ದಳು ತಾಯಿ.

ಆದರೆ, ಮರಿ ಆಮೆ ಮಾತನಾಡು­ವುದಕ್ಕೆ ಮೊದಲೇ ಹಿರಿಯ ಆಮೆ ಹತ್ತಿರ ಬಂದು ತನ್ನ ರೆಕ್ಕೆಯಿಂದ ಈಕೆಯ ಚಿಪ್ಪನ್ನೂ ಮೃದುವಾಗಿ ತಟ್ಟಿ, ‘ಯಾಕಮ್ಮಾ, ಏಕೋ ಬೇಜಾರಿನ­ಲ್ಲಿದ್ದಂತೆ ಕಾಣುತ್ತದೆ’ ಎಂದಿತು. ಮರಿಗೆ ಅಳುವೆ ಬಂದುಬಿಟ್ಟಿತು. ಯಾರೂ ಆಕೆಯನ್ನು ಹೀಗೆ ಹತ್ತಿರಕ್ಕೆ ಕರೆದು ಪ್ರೀತಿಯಿಂದ ಮಾತನಾಡಿಸಿರಲಿಲ್ಲ. ತಕ್ಷಣ ತನ್ನ ಕಷ್ಟಗಳನ್ನೆಲ್ಲ ತೋಡಿ­ಕೊಂಡಿತು. ತನಗೆ ಮೇಲಿಂದ ಮೇಲೆ ಕೋಪ ಬರುವುದು, ಅದರಿಂದ ಉಳಿದ­ವ­­ರನ್ನು ಕಚ್ಚುವುದು, ಅವರೆಲ್ಲರ ತಿರಸ್ಕಾರ ಇವೆಲ್ಲವನ್ನೂ ಹೇಳಿಕೊಂಡು ಪರಿಹಾರ ಕೇಳಿತು.

ಒಂದು ಕ್ಷಣ ಯೋಚಿಸಿದ ಹಿರಿಯ ಆಮೆ ಹೇಳಿತು, ‘ ಹ್ಞೂ ನನಗೂ ಬಾಲ್ಯದಲ್ಲಿ ಹೀಗೆಯೇ ಆಗುತ್ತಿತ್ತು. ಇದಕ್ಕೆ ಪರಿಹಾರವಿದೆ. ನೀನು ಮೂರು ಕೆಲಸ ಮಾಡಬೇಕು. ಮೊದಲನೆಯದು, ಸಿಟ್ಟು ಬರುತ್ತಿದೆ ಎನ್ನಿಸುತ್ತಲೇ ಕುತ್ತಿಗೆಯನ್ನು ಚಿಪ್ಪಿನೊಳಗೆ ಎಳೆದುಕೊಂಡು ಕಣ್ಣುಮುಚ್ಚಿಕೊ. ಎರಡನೆಯದು ಮೂರು ಬಾರಿ ದೀರ್ಘ ಶ್ವಾಸ ತೆಗೆದುಕೊಂಡು ಮನಸ್ಸನ್ನು ನಿರಾಳ ಮಾಡಿಕೋ. ನಂತರ ಮೂರನೆ­ಯದಾಗಿ, ಏನು ಮಾಡಿದರೆ ಮತ್ತೊ­ಬ್ಬರ ಮನಸ್ಸನ್ನು ನೋಯಿಸು­ವುದು ತಪ್ಪುತ್ತದೆ ಎಂಬುದನ್ನು ಯೋಚಿಸಿ ಅದರಂತೆ ನಡೆ’.

ಆಮೆಗೆ ಅರ್ಥ­ವಾಯಿತು. ಅದು ಈ ಮೂರು ಕ್ರಿಯೆಗಳನ್ನು ಮೇಲಿಂದ ಮೇಲೆ ಮಾಡಿ ಅಭ್ಯಾಸ ಮಾಡಿಕೊಂಡಿತು. ಶಾಲೆಯಲ್ಲಿ ಯಾವುದೇ ಘಟನೆಯಿಂದ ಸಿಟ್ಟು ಬರುತ್ತದೆ ಎನ್ನಿಸಿದೊಡನೆ ತಲೆಯನ್ನು ಒಳಗೆಳೆದುಕೊಂಡಿತು, ನಿಧಾನವಾಗಿ ಮನಸ್ಸನ್ನು ತಿಳಿಮಾಡಿಕೊಂಡಿತು. ನಂತರ ತಲೆಯನ್ನು ಹೊರಗೆ ಚಾಚಿ ಸ್ನೇಹಿತರನ್ನು ನೋಡಿ ಮುಗುಳ್ನಕ್ಕಿತು. ಅವರು ಪ್ರತಿಯಾಗಿ ನಕ್ಕರು. ನಗುವಿನಲ್ಲಿ ಸ್ನೇಹ ತುಂಬಿದ್ದು ಕೋಪ ಕರಗಿ ಹೋಯಿತು.

ಬರಬರುತ್ತ ಈ ಆಮೆಯ ಮರಿ ಅತ್ಯಂತ ಜನಪ್ರಿಯವಾಗುವುದರೊಂದಿಗೆ ತಾನೂ ತುಂಬ ಸಂತೋಷವಾಗಿತ್ತು. ಆಮೆಯ ಮರಿಯ ಗತಿ ನಮ್ಮದೂ ಆಗಿದೆ. ನಮಗೆ ಯಾವುದೇ ಪ್ರಸಂಗದಿಂದ ಮನಸ್ಸಿಗೆ ನೋವಾಗಿ, ದುಃಖವಾದರೆ ಅಥವಾ ಕೋಪ ಉಕ್ಕಿದರೆ ಒಂದು ಕ್ಷಣ ಮನಸ್ಸನ್ನು ಒಳಗೆಳೆದುಕೊಂಡು, ದೀರ್ಘ ಶ್ವಾಸದೊಂದಿಗೆ ಕುದಿಯುವ ಮನಕ್ಕೆ ಸ್ವಲ್ಪ ಶಾಂತತೆಯನ್ನು ತಂದುಕೊಂಡರೆ ಕೋಪ ತರುವ ಅನಾಹುತದ ಪರಿಣಾಮ ತುಂಬ ಕಡಿಮೆಯಾಗುತ್ತದೆ. ನಮ್ಮ ಪ್ರತಿಕ್ರಿಯೆ ಉಗ್ರವಾಗಿರುವುದಿಲ್ಲ. ಇದು ನಮಗೂ, ನಮ್ಮ ಸುತ್ತಮುತ್ತ­ಲಿರುವವರಿಗೂ ಒಳ್ಳೆಯದು. ಮನಸ್ಸನ್ನು ಆಂತರ್ಯದೊಳಗೆ ತಿರುಗಿಸಿಕೊ­ಳ್ಳು­ವುದು ಕೋಪಶಮನದ ಒಳ್ಳೆಯ ವಿಧಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.