ADVERTISEMENT

ದೊಡ್ಡತನದ ಭ್ರಮೆ

ಡಾ. ಗುರುರಾಜ ಕರಜಗಿ
Published 13 ಫೆಬ್ರುವರಿ 2013, 19:59 IST
Last Updated 13 ಫೆಬ್ರುವರಿ 2013, 19:59 IST

ಅದೊಂದು ದಟ್ಟವಾದ ಕಾಡು. ಅಲ್ಲೊಂದು ಸಿಂಹ. ಅದರ ಅಪ್ಪ, ಅಜ್ಜ ಕಾಡಿಗೆ ರಾಜರಾಗಿ ಮೆರೆದವರು. ವಂಶಪಾರಂಪರ್ಯವಾಗಿ ರಾಜತ್ವ ತನಗೇ ಬಂದದ್ದೆಂಬ ನಂಬಿಕೆ ಸಿಂಹಕ್ಕೆ. ಈ ನಂಬಿಕೆ ಅಹಂಕಾರ  ಹುಟ್ಟಿಸಿತ್ತು. ಒಂದು ದಿನ ತನ್ನ ರಾಜತ್ವ  ಪರೀಕ್ಷಿಸಿಯೇ ಬಿಡಬೇಕೆಂದುಕೊಂಡು ಸಿಂಹ ತನ್ನ ಗವಿಯಿಂದ ಹೊರಟಿತು.

ತನ್ನ ಸ್ವಾಭಾವಿಕವಾದ ಗಂಭೀರತೆಗೆ ಇನ್ನಷ್ಟು ಗತ್ತನ್ನು ಬೆರೆಸಿಕೊಂಡು ಗುರುಗುಟ್ಟುತ್ತ ನಡೆಯಿತು. ದಾರಿಯಲ್ಲೊಂದು ಪುಟ್ಟ ಚೆಲುವಾದ ಬಿಳಿ ಮೊಲ ಬಿಸಿಲು ಕಾಯಿಸುತ್ತ ಕುಳಿತಿತ್ತು. ಸಿಂಹವನ್ನು ನೋಡಿದೊಡನೆ ಗಾಬರಿಯಿಂದ ಹಾರುತ್ತ ದೂರ ಹೋಗಲು ನೋಡಿತು. ಅದನ್ನು ಗಮನಿಸಿದ ಸಿಂಹ ಜೋರಾಗಿ ಗುಟುರು ಹಾಕಿ,  ಏ ಮೊಲ, ನಿಂತುಕೋ. ನಿನ್ನ ಪ್ರಕಾರ ಈ ಕಾಡಿನ ರಾಜನಾರು?  ಎಂದು ಕೇಳಿತು. ಮೊದಲೇ ಗಾಬರಿಯಾಗಿದ್ದ ಮೊಲ ಇನ್ನಷ್ಟು ಗಾಬರಿಯಾಗಿ ಒಂದೇ ಉಸುರಿನಲ್ಲಿ ಹೇಳಿತು, 

ನೀನೇ ರಾಜ. ನಿನ್ನ ಹೊರತು ಮತ್ತಾರು ರಾಜರಾದಾರು?  ಸಿಂಹ ತೃಪ್ತಿಯಿಂದ ಹ್ಞೂಂಕರಿಸಿ ಮುಂದೆ ಸಾಗಿತು. ಎದುರಿಗೊಂದು ಜಿಂಕೆ ಕುಣಿಯುತ್ತ ಬಂದು ಸಿಂಹವನ್ನು ನೋಡಿ ಜೀವಭಯದಿಂದ ಗಕ್ಕನೇ ನಿಂತುಬಿಟ್ಟಿತು.  ಗಾಬರಿಯಾಗಬೇಡ. ನಾನು ನಿನಗೇನೂ ಮಾಡುವುದಿಲ್ಲ. ಆದರೆ ನೀನು ಹೇಳು ಕಾಡಿನ ರಾಜನಾರು?  ಕೇಳಿತು ಸಿಂಹ.  ತಾವೇ ಕಾಡಿನ ರಾಜರು. ತಲೆತಲಾಂತರದಿಂದ ನಿಮ್ಮ ಮನೆತನದವರೇ ಅಲ್ಲವೇ ನಮ್ಮನ್ನು ಆಳುವವರು?  ಎಂದಿತು ಜಿಂಕೆ. ತುಂಬ ಸಂತೋಷದಿಂದ ಸಿಂಹ ಮತ್ತೆ ಹೆಜ್ಜೆ ಹಾಕಿತು.

ADVERTISEMENT

ದಾರಿಯಲ್ಲಿ ತಲೆ ಎತ್ತಿ ನೋಡಿದಾಗ ದೊಡ್ಡ ಮಂಗವೊಂದು ಮರದ ಮೇಲೆ ಬಾಲವನ್ನು ಕೆಳಗೆ ಬಿಟ್ಟುಕೊಂಡು ಕುಳಿತಿತ್ತು. ಅಷ್ಟು ಎತ್ತರದ ಮೇಲಿದ್ದ ಕೋತಿಯನ್ನು ನೋಡಿ ಸಿಂಹಕ್ಕೊಂದು ಸಂಶಯ ಬಂತು. ತಾನು ಮರವನ್ನು ಹತ್ತಲಾರೆ, ಕೋತಿಯಂತೆ ಸರಸರನೇ ಮರದಿಂದ ಮರಕ್ಕೆ ಹಾರಲಾರೆ. ಹಾಗಾದರೆ ಕೋತಿಗೆ ತನ್ನ ಭಯವಿರಲಾರದು ಎಂದುಕೊಂಡು ಆದಷ್ಟು ಧ್ವನಿಯನ್ನು ಗಡಸು ಮಾಡಿಕೊಂಡು ಮುಖ ಮೇಲೆತ್ತಿ ಕೂಗಿತು,  ಕೋತಿ, ಕಾಡಿನ ರಾಜನಾರು?  ಕೋತಿ ಕೆಳಗೆ ಬಗ್ಗಿ ನಿಂತಿದ್ದ ಸಿಂಹವನ್ನು ನೋಡಿತು. ಅದು ಬುದ್ಧಿವಂತ ಪ್ರಾಣಿ. ಸುಮ್ಮನೇ ಬಲಿಷ್ಠರನ್ನು ಏಕೆ ಎದುರು ಹಾಕಿಕೊಳ್ಳುವುದು ಎಂದುಕೊಂಡು,  ಸಿಂಹರಾಜಾ, ಇಂಥ ಪ್ರಶ್ನೆಗಳನ್ನು ತಾವು ಕೇಳಬಾರದು. ಎಂದಿಗಿದ್ದರೂ ಈ ಕಾಡಿನ ಪ್ರಭುತ್ವ ತಮ್ಮದೇ  ಎಂದು ಹಲ್ಲು ಕಿರಿಯಿತು. ಸಿಂಹಕ್ಕೆ ಹೆಚ್ಚು ಸಂತೋಷವಾಯಿತು.

ಮುಂದೆ ನಡೆಯುತ್ತಿದ್ದಾಗ ಮರಗಳ ಕೊಂಬೆಗಳು ಮುರಿಯುತ್ತಿದ್ದ ಸದ್ದಾಯಿತು. ಅದೇನು ಎಂದು ಆ ದಿಕ್ಕಿನಡೆಗೆ ನೋಡಿದರೆ ಒಂದು ಪರ್ವತಗಾತ್ರದ ಸಲಗ ಮರ ಮುರಿಯುತ್ತಿದೆ. ಅದರ ಕೋರೆದಾಡಿಗಳೇ ಸುಮಾರು ಎಂಟು-ಹತ್ತು ಅಡಿ ಉದ್ದವಾಗಿವೆ. ಇದುವರೆಗೂ ಸಣ್ಣಪುಟ್ಟ ಪ್ರಾಣಿಗಳನ್ನು ಮಾತನಾಡಿಸಿ ಅವುಗಳಿಂದ ತಾನೇ ರಾಜನೆಂಬ ಮಾತುಗಳನ್ನು ಕೇಳಿ ಗರ್ವದಿಂದ ಬೀಗುತ್ತಿದ್ದ ಸಿಂಹ ಆನೆಯ ಮುಂದೆ ಹೋಗಿ,  ಏ ಆನೆ, ನನ್ನ ಅಪ್ಪಣೆ ಇಲ್ಲದೇ ಮರ ಮುರಿಯುತ್ತಿದ್ದೀಯಾ. ಈ ಕಾಡಿನ ರಾಜನಾರು ಗೊತ್ತೇ  ಎಂದು ಸೊಕ್ಕಿನಿಂದ ಕೇಳಿತು. ಆ ಭಾರಿ  ಆನೆಗೆ ಉತ್ತರ ಕೊಡುವಷ್ಟು ಮರುಸೊತ್ತಿಲ್ಲ, ಬೇಜಾರು. ಒಂದು ಕ್ಷಣ ಸಿಂಹವನ್ನು ದಿಟ್ಟಿಸಿನೋಡಿ, ತನ್ನ ಉದ್ದವಾದ ಸೊಂಡಿಲನ್ನು ಅಷ್ಟು ದೂರಕ್ಕೆ ಚಾಚಿ ಅದನ್ನು ಸಿಂಹದ ಸೊಂಟಕ್ಕೆ ಸುತ್ತಿತು.

ಬಲವಾಗಿ ಹಿಡಿದು ಸಿಂಹವನ್ನು ಮೇಲಕ್ಕೆತ್ತಿ ಗರಗರನೇ ತಿರುವಿ ಆಕಾಶದೆಡೆಗೆ ಬೀಸಿ ಒಗೆದುಬಿಟ್ಟಿತು. ಸಿಂಹ ಅಷ್ಟು ದೂರ ಹಾರಿ ಪರ್ವತದ ಬದಿಗೆ ಅಪ್ಪಳಿಸಿ ಬಿದ್ದಿತು. ಒಂದು ಕ್ಷಣ ಅದಕ್ಕೆ ತಾನು ಬದುಕಿದ್ದೂ ತಿಳಿಯಲಿಲ್ಲ. ನಿಧಾನವಾಗಿ ಮೇಲಕ್ಕೆದ್ದು ನಜ್ಜುಗುಜ್ಜಾಗಿದ್ದ ದೇಹವನ್ನು ಸರಿಮಾಡಿಕೊಂಡು, ಕೊಡವಿ ಜೋರಾಗಿ ಕೇಳದಂತೆ ಗೊಣಗಿತು,  ಅಯ್ಯೊ, ನಾನು ಕೇಳಿದ ಪ್ರಶ್ನೆ ನಿನಗೆ ಅರ್ಥವಾಗದಿದ್ದರೆ, ಅಥವಾ ನಿನಗೆ ಉತ್ತರ ಗೊತ್ತಿಲ್ಲದಿದ್ದರೆ ಹುಚ್ಚನಂತೆ ಸಿಟ್ಟುಮಾಡಿಕೊಳ್ಳುವುದೇಕೆ? ಆಗಲಿ ಬಿಡು, ರಾಜನಾದ ನಾನೇ ನಿನ್ನನ್ನು ಕ್ಷಮಿಸಿದ್ದೇನೆ. ತಲೆ ತಗ್ಗಿಸಿ ನಿಧಾನವಾಗಿ ಅಲ್ಲಿಂದ ಹೊರಟಿತು. ಒಂದು ನಾಲ್ಕಾರು ಜನ ನಾವು ದೊಡ್ಡವರೆಂದು ಹೇಳಿದೊಡನೆ ನಾವು ನಿಜವಾಗಿಯೂ ದೊಡ್ಡವರು ಎಂದು ಭಾವಿಸುವುದು ಭ್ರಮೆ. ಆ ಭ್ರಾಂತಿ ಬೇಗ ಕರಗದಿದ್ದರೆ ಪೆಟ್ಟು ಬೀಳುವುದು ತಪ್ಪಿದ್ದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.