ADVERTISEMENT

ನಡೆದು ತೋರಿದ ಭಾಷಣ

ಡಾ. ಗುರುರಾಜ ಕರಜಗಿ
Published 17 ಜನವರಿ 2013, 19:59 IST
Last Updated 17 ಜನವರಿ 2013, 19:59 IST

ಅಸ್ಸಿಸಿಯ ಸಂತ ಫ್ರಾನ್ಸಿಸ್ ಪ್ರಪಂಚದ ಸಂತರ ಪರಂಪರೆಯಲ್ಲಿ ಬಹುದೊಡ್ಡ ಹೆಸರು. ಇಟಲಿಯ ಅಸ್ಸಿಸಿಯಲ್ಲಿ ಪೈಟ್ರೋ ಬೆರ್ನಾರ್‌ಡ್ರೋನ್ ಮತ್ತು ಶ್ರೀಮತಿ ಪಿಕಾ ದಂಪತಿ ಮಗನಾಗಿ 1182 ರಲ್ಲಿ ಹುಟ್ಟಿದ ಬಾಲಕ ಫ್ರಾನ್ಸಿಸ್. ಅವನ ನಿಜವಾದ ಹೆಸರು ಜಿಯೋವನ್ನಿ. ತಂದೆ ಶ್ರೀಮಂತ ಬಟ್ಟೆ ವ್ಯಾಪಾರಿ. ಮಗ ಫ್ರಾನ್ಸಿಸ್ ಕೂಡ ಶ್ರೀಮಂತಿಕೆಯಲ್ಲೆೀ ಬೆಳೆದ. ಆದರೆ ಆತನ ಹೃದಯ ಮಾತ್ರ ತುಂಬ ಮೃದು.

1201 ರಲ್ಲಿ ಆತ ಸೈನ್ಯವನ್ನು ಸೇರಿದ. ಆದರೆ ಯುದ್ಧದಲ್ಲಿ ಕೈದಿಯಾಗಿ ಸೆರೆಸಿಕ್ಕು ಒಂದು ವರ್ಷ ಸೆರೆಯಲ್ಲೇ ಕಳೆದ. ಬಹುಶಃ ಅವನ ಅಧ್ಯಾತ್ಮಿಕ ಚಿಂತನೆಗಳು ಪ್ರಾರಂಭವಾದದ್ದು ಇಲ್ಲೆೀ ಎಂದು ತೋರುತ್ತದೆ. ಮರಳಿ ತನ್ನೂರಿಗೆ ಬಂದ ಮೇಲೆ ಶ್ರೀಮಂತ ಗೆಳೆಯರೊಂದಿಗೆ ವಿನೋದ, ಕಾಲಹರಣಗಳು ದೂರವಾಗತೊಡಗಿದವು.

ದಿನನಿತ್ಯದ ವ್ಯವಹಾರಗಳಲ್ಲಿ ಅನಾಸಕ್ತಿಯನ್ನು ತೋರುತ್ತಿದ್ದುದರಿಂದ ತಂದೆಗೆ ಇವನ ಬಗ್ಗೆ ಚಿಂತೆಯಾಯಿತು. ಒಂದು ದಾಖಲೆಯಂತೆ, ತಂದೆ ಇಪ್ಪತ್ತೈದು ವರ್ಷದ ಮಗನನ್ನು ಊರ ಹಿರಿಯರ ಮುಂದೆ ಕರೆದೊಯ್ದು `ಇಂಥ ಬೇಜವಾಬ್ದಾರಿ ಮಗ ತಮ್ಮ ವ್ಯಾಪಾರವನ್ನು, ಶ್ರೀಮಂತಿಕೆಯನ್ನು ಹೇಗೆ ನಿಭಾಯಿಸಿಯಾನು' ಎಂದು ಆತಂಕ ವ್ಯಕ್ತಪಡಿಸಿದರಂತೆ. ಆಗ ಫ್ರಾನ್ಸಿಸ್ ತಾನು ಹಾಕಿಕೊಂಡಿದ್ದ ಎಲ್ಲ ಬಟ್ಟೆಗಳನ್ನು ಕಳೆದು ತಂದೆಯ ಪಾದಗಳ ಬಳಿ ಇಟ್ಟು, ಇನ್ನು ಮುಂದೆ ತಂದೆಯ ಯಾವ ಆಸ್ತಿಗೂ ತಾನು ಹಕ್ಕುದಾರನಲ್ಲವೆಂದೂ, ಮುಂದೆ ತಾನು ಕೇವಲ ಭಗವಂತನ ಕೃಪೆಯಲ್ಲಿ ಬದುಕುವ ಭಿಕ್ಷುಕ ಎಂದೂ ಘೋಷಿಸಿ ಹೊರಟುಬಿಟ್ಟ.

ಮುಂದಿನ ಬದುಕು ಕೇವಲ ಸಂತನದು. ಅವನಿಗೆ ಪ್ರಾಣಿಗಳ ಬಗ್ಗೆ ವಿಶೇಷ ಪ್ರೀತಿ. ಅವನ ಜೀವನವೇ ಪ್ರೇಮದ ಸಂದೇಶ. ಅವನ ಬಗ್ಗೆ ಇದ್ದ ಅನೇಕ ಕಥೆಗಳಲ್ಲಿ ಒಂದು ನನಗೆ ಬಹಳ ಇಷ್ಟವಾದದ್ದು, ಫ್ರಾನ್ಸಿಸ್‌ನ ನೈಜ ಸ್ವಭಾವವನ್ನು ತಿಳಿಸುವಂಥದ್ದು. ಒಂದು ದಿನ ಫ್ರಾನ್ಸಿಸ್ ತನ್ನ ಶಿಷ್ಯನೊಬ್ಬನಿಗೆ ಹೇಳಿದ,  `ನಡೆ ಸ್ನೇಹಿತ, ಇಂದು ಸಂಜೆ ನಗರದ ಮಧ್ಯಭಾಗಕ್ಕೆ ಹೋಗಿ ಜನರನ್ನು ಸೇರಿಸಿ ಪ್ರಾಣಿಗಳನ್ನು ಪ್ರೀತಿಸುವ ಬಗ್ಗೆ, ದೀನ ದಲಿತರಲ್ಲಿ ಅನುಕಂಪ ತೋರುವ ಬಗ್ಗೆ ಒಂದು ಉಪನ್ಯಾಸ ಮಾಡಿ ಬರೋಣ'. ಶಿಷ್ಯ ಗುರುವಿನೊಂದಿಗೆ ನಡೆದ.

ನಗರದ ಮಧ್ಯಭಾಗಕ್ಕೆ ಬರುತ್ತಿದ್ದಂತೆ ಫ್ರಾನ್ಸಿಸ್ ಒಂದು ಕುಂಟುತ್ತಿರುವ ನಾಯಿಯನ್ನು ಕಂಡ. ಯಾರೋ ಕಲ್ಲು ಎಸೆದಿದ್ದರಿಂದ ಅದರ ಕಾಲಿಗೆ ಗಾಯವಾಗಿದೆ. ಫ್ರಾನ್ಸಿಸ್ ಅದನ್ನು ಹಿಡಿದುಕೊಂಡು, ಬೆನ್ನಮೇಲೆ ಕೈಯಾಡಿಸಿ, ಪೆಟ್ಟಾದ ಕಾಲಿಗೆ ಮದ್ದು ಹಾಕಿ ಪಟ್ಟಿ ಕಟ್ಟಿದ. ಪಕ್ಕದ ಅಂಗಡಿಯವನನ್ನು ಬೇಡಿ ಒಂದು ತುಂಡು ರೊಟ್ಟಿಯನ್ನು ತಂದು ಅದಕ್ಕೆ ತಿನ್ನಿಸಿದ. ಮತ್ತೆ ಎದ್ದು ಮುಂದೆ ನಡೆದಾಗ ಕುರುಡು ಮುದುಕಿ ರಸ್ತೆ ದಾಟಲು ಹವಣಿಸುತ್ತಿರುವುದು ಕಂಡಿತು. ತಕ್ಷಣ ಫ್ರಾನ್ಸಿಸ್ ಓಡಿ ಹೋಗಿ ಆಕೆಯ ಕೈ ಹಿಡಿದು ನಿಧಾನವಾಗಿ ರಸ್ತೆ ದಾಟಿಸಿದ.

ಆ ಕಡೆಗೆ ಒಬ್ಬ ರೈತ ತರಕಾರಿಯ ಹೊರೆಯನ್ನು ಹೊರಲು ಕಷ್ಟಪಡುತ್ತಿರುವುದನ್ನು ಕಂಡು, ತಾನೂ ಹೊರೆ ಹೊತ್ತು ರೈತ ಅಪೇಕ್ಷಿಸಿದ ಸ್ಥಳದವರೆಗೂ ಹೋಗಿ ಕೊಟ್ಟು ಬಂದ. ದಾರಿಯಲ್ಲಿ ಬರುವ ಜನರನ್ನು ಪ್ರೀತಿಯಿಂದ ಮಾತನಾಡಿಸಿದ, ಸೂರ್ಯಾಸ್ತವನ್ನು ಬೆರಗಿನಿಂದ ಇದೇ ಮೊದಲನೇ ಬಾರಿಗೆ ಗಮನಿಸುತ್ತಿದ್ದಾನೋ ಎಂಬಂತೆ ನೋಡಿದ, ನಿಸರ್ಗವನ್ನು ಮನಸಾರೆ ಬಣ್ಣಿಸಿದ.

ಈ ಎಲ್ಲ ಕೆಲಸ ಮುಗಿಯುವ ಹೊತ್ತಿಗೆ ಕತ್ತಲೆಯಾಯಿತು. ಆಗ ಶಿಷ್ಯ ಕೇಳಿದ, `ಗುರುಗಳೇ ನಗರ ಮಧ್ಯದಲ್ಲಿ ಇಂದು ಒಂದು ಉಪನ್ಯಾಸ ನೀಡಬೇಕೆಂದು ಬಂದಿದ್ದಲ್ಲವೇ? ಅದು ರದ್ದಾಗಿ ಹೋಯಿತೇ?'. ಆಗ ಫ್ರಾನ್ಸಿಸ್ ನಕ್ಕು ಹೇಳಿದ,  `ಸ್ನೇಹಿತ, ನಾವು ಇದುವರೆಗೂ ಮಾಡಿದ ಕಾರ್ಯಗಳು, ಪ್ರಾಣಿಗೆ ದಯೆ ತೋರಿದ್ದು, ವೃದ್ಧರಿಗೆ, ಬಡವರಿಗೆ ಸಹಾಯ ಮಾಡಿದ್ದು, ನಿಸರ್ಗವನ್ನು ಆನಂದದಿಂದ, ಬೆರಗಿನಿಂದ ಅನುಭವಿಸಿದ್ದು, ಜನರಿಗೆ ಪ್ರೀತಿ ತೋರಿದ್ದು ಇವೆಲ್ಲ ಉಪನ್ಯಾಸದ ಭಾಗಗಳೇ ಅಲ್ಲವೇ?'
ಇದು ನಿಜವಾದ ಸಂತರ ಕೆಲಸ. ಅವರು ಕೇವಲ ಭಾಷಣ ಮಾಡಿ ಹೋಗುವುದಿಲ್ಲ, ತಮ್ಮ ಜೀವನದ ಪ್ರೀತಿಯೊಂದು ನಡತೆಯಲ್ಲಿ ನಡೆದುತೋರುತ್ತಾರೆ. ನಡೆದು ತೋರುವುದಕ್ಕಿಂತ ಪ್ರಭಾವಶಾಲಿ ಭಾಷಣವಿರಲು ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.