ADVERTISEMENT

ಬಲೂನಿನ ಎತ್ತರ

ಡಾ. ಗುರುರಾಜ ಕರಜಗಿ
Published 17 ಸೆಪ್ಟೆಂಬರ್ 2014, 19:30 IST
Last Updated 17 ಸೆಪ್ಟೆಂಬರ್ 2014, 19:30 IST

ಮೂರು-ನಾಲ್ಕು ವರ್ಷಗಳ ಹಿಂದೆ ನ್ಯಾಷನಲ್ ಜಿಯೊಗ್ರಾಫಿಕ್ ಪತ್ರಿಕೆ­­ಯಲ್ಲಿ ಒಂದು ವಿಶೇಷ ಸಂದರ್ಶನ ಪ್ರಕಟವಾಗಿತ್ತು. ಅದನ್ನು ಮೊದಲು ಓದಿದಾಗ ಒಂದು ಸಾಮಾನ್ಯ ವರದಿ­ಯಂತೆ ತೋರಿದರೂ ನಂತರ ಅದರ ಬಗ್ಗೆ ಚಿಂತಿಸಿದಾಗ ಅದೊಂದು ಜೀವನಕ್ಕೆ ಮಾರ್ಗದರ್ಶನ ಮಾಡ­ಬಲ್ಲ ಸಂಗತಿ ಎನ್ನಿಸಿತು.

ಈ ಸಂದರ್ಶನ ಸ್ಟೀವ್ ಫಾಸೆಟ್ ಎಂಬ ವ್ಯಕ್ತಿಯೊಂದಿಗೆ ನಡೆ­­ದದ್ದು. ಅವನೊಬ್ಬ ವಿಶೇಷ ವ್ಯಕ್ತಿ. ವೃತ್ತಿಯಲ್ಲಿ ಅವನೊಬ್ಬ ಹಣಕಾಸು ವ್ಯವ­ಹಾರ ಮಾಡುವ ಬ್ಯಾಂಕರ್. ಆದರೆ, ಆತ ಒಳ್ಳೆಯ ಈಜುಗಾರ, ಇಂಗ್ಲಿಷ್ ಕಾಲು­ವೆ­ಯನ್ನು ಈಜಿದ್ದಾನೆ. ಅವನಿಗೆ ಕಾರ್ ರೇಸ್ ಕೂಡ ತುಂಬ ಪ್ರಿಯ­ವಾ­ದದ್ದು. ಆ ಪಂದ್ಯಗಳಲ್ಲೂ ಭಾಗವಹಿಸಿ ಅನೇಕ ಪ್ರಶಸ್ತಿ ಪಡೆದಿ­ದ್ದಾನೆ. ಇವೆಲ್ಲ ಸಾಹಸ ಕ್ರೀಡೆಗಳಿಗಿಂತ ಅವನಿಗೆ ಅತ್ಯಂತ ಖುಷಿ ಕೊಡುವುದು ಬಿಸಿ ಗಾಳಿಯ ಬಲೂ­ನಿ­ನಲ್ಲಿ ಕುಳಿತು ಪ್ರಯಾಣ ಮಾಡುವುದು.

ಸ್ಟೀವ್ ಫಾಸೆಟ್ ಜನವರಿ ೧೯೯೭ ರಲ್ಲಿ ಅಮೆರಿಕದ ಸೇಂಟ್ ಲೂಯಿಸ್ ಮಿಸೋರಿಯಿಂದ ಹೊರಟು ಭಾರತ­­ವನ್ನು ತಲುಪಿದ. ಅಷ್ಟು ದೂರ ಬಲೂನಿನಲ್ಲಿ ಸಾಗಿ ಬಂದದ್ದು ಒಂದು ವಿಶ್ವ­ದಾಖಲೆಯಂತೆ. ಈ ಪ್ರವಾಸದಲ್ಲಿ ನಡೆದ ಘಟನೆಯೊಂದನ್ನು ಆತ ವಿವರಿಸು­ತ್ತಿದ್ದ. ಆತ ಅಟ್ಲಾಂಟಿಕ್ ಸಮುದ್ರದ ಮೇಲೆ ಪೂರ್ವ ದಿಕ್ಕಿನನೆಡೆಗೆ ಸುಮಾರು ೨೪,೦೦೦ ಅಡಿ ಎತ್ತರದಲ್ಲಿ ಹಾರುತ್ತಿದ್ದ. ಮುಂದೆ ಬರುವ ದೇಶ ಲಿಬಿಯಾ. ಆಗೊಂದು ಸಮಸ್ಯೆ ಬಂತು. ಅವನಿಗೆ ತಕ್ಷಣ ಒಂದು ಸಂದೇಶ ಬಂದಿತು. ಬಲೂನು ಲಿಬಿಯಾದ ವಾಯುಪ್ರದೇಶದ ಮೇಲೆ ಹಾರಲು ಅನುಮತಿ ಇಲ್ಲ. ಅವ­ನೇ­ನಾದರೂ ಈ ಸಂದೇಶವನ್ನು ಉಲ್ಲಂಘಿಸಿ ಹಾರಿದರೆ ಅದನ್ನು ಗುಂಡಿಟ್ಟು ಉರುಳಿ­ಸ­­ಲಾಗು­ವುದು. ಸ್ಟೀವ್‌ನಿಗೆ ಗಾಬರಿಯಾಯಿತು. ಬಲೂನುಗಳನ್ನು ಬೇಕಾದ ಹಾಗೆ ತಿರುಗಿಸಲು ಗಾಲಿಗಳಿಲ್ಲ, ಸ್ಟಿಯರಿಂಗ್ ಇಲ್ಲ. ಅದೇನಿದ್ದರೂ ಬೀಸುವ ಗಾಳಿ­ಯನ್ನೇ ಬಳಸಿಕೊಂಡು ದಿಕ್ಕನ್ನು ಬದಲಿಸಬೇಕು. ಈಗ ಗಾಳಿ ಲಿಬಿಯಾ­­ದತ್ತಲೇ ಬೀಸುತ್ತಿದೆ. ಸ್ಟೀವ್ ಈ ಶಾಸ್ತ್ರದಲ್ಲಿ ಪರಿಣತನಾದ್ದರಿಂದ ಒಂದು ಕ್ಷಣ ಯೋಚಿಸಿದ. ಗಾಳಿಯ ಬೀಸು ಎತ್ತರದ ಮೇಲೆ ಅವಲಂಬಿತ­ವಾ­ಗಿದೆ, ಬೇರೆ ಬೇರೆ ಎತ್ತರದಲ್ಲಿ ಗಾಳಿ ಬೇರೆ ಬೇರೆ ದಿಕ್ಕಿಗೆ ಬೀಸುತ್ತದೆ. ನೀವು ದಿಕ್ಕನ್ನು ಬದಲಿಸಬೇಕಾದರೆ ಬಲೂನಿನ ಎತ್ತರ­ವನ್ನು ಹೆಚ್ಚು ಕಡಿಮೆ ಮಾಡಿಕೊಳ್ಳ­ಬೇಕು. ಹೆಚ್ಚು ಎತ್ತರಕ್ಕೆ ಏರಬೇಕಾದರೆ ಬಲೂನಿನಲ್ಲಿ ಉರಿಯುವ ಜ್ವಾಲೆಯನ್ನು ಹೆಚ್ಚು ಮಾಡಬೇಕು. ಆಗ ಒಳಗಿನ ಒತ್ತಡ ಕಡಿಮೆಯಾಗಿ ಬಲೂನು ಮೇಲಕ್ಕೆ ಏರು­ತ್ತದೆ. ಎತ್ತರವನ್ನು ಕಡಿಮೆ ಮಾಡಬೇಕಾದರೆ ಬಲೂನಿನಲ್ಲಿದ್ದ ಹೀಲಿಯಂ ವಾಯು­ವನ್ನು ಕಡಿಮೆ ಮಾಡಬೇಕು. ಆಗ ತೂಕ ಹೆಚ್ಚಾಗಿ ಕೆಳಗೆ ಬರುತ್ತದೆ.

ಸ್ಟೀವ್ ಬಲೂನಿನಲ್ಲಿದ್ದ ಹೀಲಿ­ಯಂನ್ನು ಕಡಿಮೆ ಮಾಡತೊಡಗಿದ. ನಿಧಾನ­ವಾಗಿ ಸುಮಾರು ಆರು ಸಾವಿರ ಅಡಿ ಕೆಳಗೆ ಬಂತು ಬಲೂನು. ಆಗ ಅದಕ್ಕೆ ದಕ್ಷಿಣ­ದೆಡೆಗೆ ಬೀಸುವ ಗಾಳಿ ದೊರಕಿತು. ಆಗ ಬಲೂನು ಲಿಬಿಯಾದ ವಾಯು­ಪ್ರದೇಶ­ವನ್ನು ಪ್ರವೇಶಿಸದೇ ಸಾಗಿ ಮುಂದೆ ಬಂದಿತು. ಲಿಬಿಯಾ ಪ್ರದೇಶ ದಾಟಿದ ಮೇಲೆ ಮತ್ತೆ ಜ್ವಾಲೆಯನ್ನು ಹೆಚ್ಚು ಮಾಡಿದ. ಆಗ ಅದು ಮತ್ತೆ ಮೊದಲಿನಂತೆ ಅಡಿಗೆ ಏರಿ ಪೂರ್ವಕ್ಕೆ ಬೀಸುವ ಗಾಳಿಯಲ್ಲಿ ಸೇರಿ ಭಾರತದೆಡೆಗೆ ಸಾಗಿತು. ಅವನು ಹೇಳಿದ ಒಂದು ಮಾತು ನನ್ನ ತಲೆಯಲ್ಲಿ ಚಿಂತನೆ ಮೂಡಿಸಿತು.

ಆತ ಹೇಳಿದ, ‘ನಮ್ಮ ಎತ್ತರ ನಮ್ಮ ದಿಕ್ಕನ್ನು ತೀರ್ಮಾನಿ­ಸುತ್ತದೆ’. ಹೌದಲ್ಲವೇ? ನಮ್ಮ ಜೀವನದ ಗತಿ, ದಿಕ್ಕು ನಮ್ಮ ಎತ್ತರದ ಮೇಲೆ ನಿಂತಿದೆ! ನಮ್ಮ ಚಿಂತನೆಗಳು, ಧೋರಣೆ­ಗಳು, ವಿಚಾರಗಳು ಎಷ್ಟು ಎತ್ತರದಲ್ಲಿರುತ್ತವೆಯೋ ಅಷ್ಟು ಎತ್ತರಕ್ಕೇ ನಮ್ಮ ಬದುಕು ಏರುತ್ತದೆ. ನಮ್ಮ ವಿಚಾರಗಳು, ಚಿಂತನೆಯ ವಿಧಾನ ಸಂಕುಚಿತ­ವಾದಷ್ಟು ಜೀವನ ಕೆಳಮಟ್ಟಕ್ಕೆ ಕುಸಿಯುತ್ತದೆ. ಹಾಗಾದರೆ ನಮ್ಮ ಜೀವನದ ಮಟ್ಟವನ್ನು ಎತ್ತರಿಸಲು, ಉದಾತ್ತಗೊಳಿಸಲು ಬೇಕಾದ ಮೂಲ­ಸಾಮಗ್ರಿ­ಯೆಂದರೆ ನಮ್ಮ ಚಿಂತನಾ ವಿಧಾನ. ನಾವು ಎಷ್ಟು ಒಳ್ಳೆಯ­ದಾದದ್ದನ್ನು ಚಿಂತಿಸು­ತ್ತೇವೋ ಯೋಚಿ­ಸುತ್ತೇವೋ ಹಾಗೆಯೇ ನಡೆಯುತ್ತೇವೋ ಹಾಗೆಯೇ ನಮಗೆ ಅರಿ­ವಿಲ್ಲ­ದಂತೆ ನಮ್ಮ ಜೀವನ ಅಷ್ಟು ಎತ್ತರಕ್ಕೆ ಏರುತ್ತದೆ, ಸಮಾಜಕ್ಕೆ ಪ್ರಯೋಜನಕಾರಿ­ಯಾಗು­ತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.