ADVERTISEMENT

ಲಗಾಮಿಲ್ಲದ ಅಪೇಕ್ಷೆಗಳು

ಡಾ. ಗುರುರಾಜ ಕರಜಗಿ
Published 29 ಅಕ್ಟೋಬರ್ 2013, 19:30 IST
Last Updated 29 ಅಕ್ಟೋಬರ್ 2013, 19:30 IST

ಆತನ ಕೆಲಸ ನಿತ್ಯ ಕಾಡಿಗೆ ಹೋಗಿ ಸೌದೆಯನ್ನು ಕಡಿದು ತಂದು ಮಾರುವುದು. ಅದರಿಂದ ಬಂದ ದುಡ್ಡಿನಿಂದಲೇ ಜೀವನ ನಡೆಯಬೇಕು. ಒಂದೊಂದು ಬಾರಿ ಕಟ್ಟಿಗೆ ಸಿಕ್ಕುವುದು ಕಷ್ಟ, ಕೆಲವೊಂದು ಸಲ ತಂದ ಕಟ್ಟಿಗೆಗೆ ಗಿರಾಕಿ ದೊರಕುತ್ತಿರಲಿಲ್ಲ. ಮಳೆಗಾಲದಲ್ಲಂತೂ ಬದುಕೇ ದುರ್ಭರವಾಗುತ್ತಿತ್ತು. ಹೀಗಾಗಿ ಅವನಿಗೆ ಜೀವನವೇ ಸಾಕಾಗಿಹೋಗಿತ್ತು.

ಒಂದು ದಿನ ಕಾಡಿಗೆ ಹೋಗಿ ಮರ ಕಡಿಯುವಾಗ ಜಾರಿ ಕೆಳಗೆ ಬಿದ್ದ. ಜೊತೆಗೇ ಕೊಡಲಿ ಅವನ ಕಾಲ ಮೇಲೇ ಬಿತ್ತು. ಗಾಯವಾಗಿ ಬಳಬಳನೇ ರಕ್ತ ಸುರಿಯಿತು. ಮೊದಲೇ ಹಣ್ಣಾಗಿಹೋಗಿದ್ದ ಜೀವ ಕುಸಿದುಹೋಯಿತು. ಬಿಕ್ಕಿ ಬಿಕ್ಕಿ ಅಳತೊಡಗಿದ. ಅಷ್ಟರಲ್ಲಿ ಯಾರೋ ತಲೆಯ ಕೈ ಆಡಿಸಿದಂತಾಯಿತು. ಕಣ್ಣು ತೆರೆದು ನೋಡಿದರೆ ಸನ್ಯಾಸಿಯೊಬ್ಬರು ಮುಂದೆ ನಿಂತಿದ್ದಾರೆ! ಈತ ಅವರ ಕಾಲು ಹಿಡಿದುಕೊಂಡು ಗೋಳು ಹೇಳಿಕೊಂಡ.

ಅವರು ಸಂತೈಸಿ ಹೇಳಿದರು ‘ಮಗೂ ನಿನ್ನ ಕಷ್ಟ ನನಗೆ ಅರಿವಾಗಿದೆ. ಒಂದು ಮಾತಿಗೆ ನೀನು ಒಪ್ಪಿದರೆ ನಾನು ನಿನಗೆ ಸಹಾಯ ಮಾಡಬಲ್ಲೆ. ನೀನು ಅತಿಯಾಸೆ ಪಡದಿದ್ದರೆ ಸಂತೃಪ್ತನಾಗಿ ಬದುಕುವ ವ್ಯವಸ್ಥೆಯಾಗುತ್ತದೆ’. ಆ ಬಡವ ಹೇಳಿದ, ‘ನೀವು ಹೇಗೆ ಹೇಳಿದರೆ ಹಾಗೇ ಮಾಡುತ್ತೇನೆ’ ಸ್ವಾಮಿ.

ಸನ್ಯಾಸಿ ತನ್ನ ಕೊರಳಿನಿಂದ ಒಂದು ಮಣಿಯ ಸರವನ್ನು ತೆಗೆದು ಈತನ ಕೊರಳಲ್ಲಿ ಹಾಕಿದರು. ‘ಇಲ್ಲಿ ಮುಂದೆಯೇ ಬಲಗಡೆಗೆ ಹೋದರೆ ಒಂದು ದೊಡ್ಡ ಆಲದಮರ ಕಾಣುತ್ತದೆ. ಯಾರ ಕೊರಳಲ್ಲಿ ಈ ಸರವಿದೆಯೋ ಅವರಿಗೆ ಮಾತ್ರ ಅದು ಕಾಣುತ್ತದೆ. ನೀನು ಅಲ್ಲಿಗೆ ಹೋಗು. ಮರದ ಬುಡದಲ್ಲಿ ಒಂದು ಚೌಕನಾದ ಕಲ್ಲಿದೆ. ಅದನ್ನು ಸರಿಸಿದರೆ ಅದರ ಕೆಳಗೆ ಮೆಟ್ಟಿಲುಗಳು ಕಾಣುತ್ತವೆ.

ನೀನು ಇಳಿದು ಕೆಳಗೆ ಹೋಗು. ಅಲ್ಲಿ  ಶತಮಾನಗಳ ಹಿಂದೆ ರಾಜಮನೆತನದವರು ಮುಚ್ಚಿಟ್ಟ ಅಪಾರ ಧನರಾಶಿ, ಮಣಿ, ವಜ್ರ ಬಂಗಾರದ ಸಂಗ್ರಹವಿದೆ. ನಿನಗೆಷ್ಟು ಬೇಕೋ ಅಷ್ಟನ್ನು ಮಾತ್ರ ತೆಗೆದುಕೋ. ನೀನು ಆಸೆಯಿಂದ ಹೆಚ್ಚು ತೆಗೆದುಕೊಂಡರೆ ಸರದಲ್ಲಿರುವ ಮಣಿಗಳು ಕೆಂಪಗಾಗುತ್ತವೆ. ಆಗ ನೀನು ತೆಗೆದುಕೊಳ್ಳುವುದನ್ನು ತಕ್ಷಣ ನಿಲ್ಲಿಸಿ ಮನೆಗೆ ಹೋಗಬೇಕು’ ಎಂದರು. ಈತ ಒಪ್ಪಿ ನಡೆದ.

ಸನ್ಯಾಸಿ ಹೇಳಿದಂತೆ ಅಲ್ಲಿ ಸಂಪತ್ತಿನ ರಾಶಿಯೇ ಇತ್ತು. ಈತ ಕೆಲವೊಂದಿಷ್ಟು ಬಂಗಾರವನ್ನು ತೆಗೆದುಕೊಂಡು ಊರಿಗೆ ಹೋದ. ಅದನ್ನು ಮಾರಿ ಸಣ್ಣ ವ್ಯಾಪಾರ ಪ್ರಾರಂಭ ಮಾಡಿದ. ಕೆಲದಿನಗಳಲ್ಲಿ ತಾನು ಮಾಡುತ್ತಿದ್ದ ವ್ಯಾಪಾರ ಬಹಳ ಸಣ್ಣದೆನಿಸಿತು. ಮತ್ತಷ್ಟು ಬಂಗಾರ ತಂದು ಅದನ್ನು ಬೆಳೆಸಿದ. ಜೀವನ ಸುಸೂತ್ರವಾಗಿ ನಡೆಯತೊಡಗಿತು. ಜೀವನದ ಮಟ್ಟವೂ ಬೆಳೆಯಿತು.

ಹೆಂಡತಿ, ಮಕ್ಕಳ ಅಪೇಕ್ಷೆಗಳೂ ಬೆಳೆದವು. ಮತ್ತೆ ಅರಣ್ಯಕ್ಕೆ ಹೋಗಿ ಸಾಕಷ್ಟು ವಜ್ರ, ಬಂಗಾರವನ್ನು ತಂದು ದೊಡ್ಡ ಮನೆ ಕಟ್ಟಿಸಿದ. ಮನೆಗೆ ತಕ್ಕದಾದ ವ್ಯವಸ್ಥೆಗಳೂ ಬಂದವು. ಸಮಾಜದಲ್ಲಿ ಅವನ ಮರ್ಯಾದೆ ಹೆಚ್ಚಾಯಿತು. ಮತ್ತೆ ಆ ಮರ್ಯಾದೆಗೆ ತಕ್ಕಂತೆ ಬದುಕಬೇಡವೇ? ಮತ್ತಷ್ಟು ಹಣ, ಆಭರಣಗಳು ಕಾಡಿನಿಂದ ಬಂದವು. ಈಗ ಆತ ಸಮಾಜದಲ್ಲೇ ಅತ್ಯಂತ ಗಣ್ಯ ವ್ಯಕ್ತಿ.

ಈ ಬಾರಿ ಆತ ಚಿಂತಿಸಿದ, ಪ್ರತಿ ಬಾರಿ ಸ್ವಲ್ಪಸ್ವಲ್ಪವೇ ಸಂಪತ್ತನ್ನು ತರುವ ಬದಲು ಹೆಚ್ಚೇ ತಂದರೆ ಮೇಲಿಂದ ಮೇಲೆ ಹೋಗುವ ಗೋಜಿರುವದಿಲ್ಲ. ಆದ್ದರಿಂದ ದೊಡ್ಡ ಚೀಲವನ್ನೇ ಹಿಡಿದು ಕಾಡಿಗೆ ಹೋದ. ಕಲ್ಲು ಸರಿಸಿ ಕೆಳಗಿಳಿದು ವಜ್ರಗಳನ್ನು, ಆಭರಣಗಳನ್ನು ಚೀಲದಲ್ಲಿ ತುಂಬತೊಡಗಿದ.

ಒಂದು ಹಂತಕ್ಕೆ ಕೊರಳಲ್ಲಿದ್ದ ಸರದ ಮಣಿಗಳು ಕೆಂಪಾದವು. ಒಂದು ಮನಸ್ಸು ನಿಲ್ಲಿಸಲು ಹೇಳಿದರೆ ಮತ್ತೊಂದು ಆಸೆಬರುಕ ಮನಸ್ಸು ತುಂಬಿಕೊಳ್ಳಲು ಒತ್ತಾಯಿಸಿತು. ಆತ ಅತಿಆಸೆಯಿಂದ ತುಂಬತೊಡಗಿದ. ಮಣಿ ಸರ ಸದ್ದು ಮಾಡಿ ಎಚ್ಚರಿಸಿತು. ಈತ ಕೋಪದಿಂದ ಅದನ್ನು ತೆಗೆದು ನೆಲಕ್ಕೆಸೆದ. ಕ್ಷಣದಲ್ಲಿ ಮೇಲೆ ಏನೋ ಸದ್ದಾದಂತಾಯಿತು. ಕತ್ತೆತ್ತಿ ನೋಡಿದರೆ ಮೇಲಿದ್ದ ಕಲ್ಲು ತಾನಾಗಿಯೇ ಮುಚ್ಚಿಕೊಂಡಿತ್ತು. ಈ ಶ್ರೀಮಂತನನ್ನು ಜನ ಮತ್ತೆಂದೂ ನೋಡಲೇ ಇಲ್ಲ. ಆತ ಎಲ್ಲಿ ಹೋದನೆಂಬುದೂ ತಿಳಿಯಲಿಲ್ಲ.

ಅಪೇಕ್ಷೆಗಳಿರಬೇಕು ಆದರೆ ಅವುಗಳಿಗೆ ಲಗಾಮೂ ಇರಬೇಕು. ಲಗಾಮಿಲ್ಲದ ಅಪೇಕ್ಷೆಗಳು ನಮ್ಮ ಜೀವಸತ್ವವನ್ನೇ ಹೀರಿಬಿಡುತ್ತವೆ. ಸುಖ ತರುವುದರ ಬದಲಾಗಿ ಆಪತ್ತುಗಳನ್ನೇ ತಂದು ಒಡ್ಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.