ADVERTISEMENT

ಸಂತೋಷ ಜೀವನದ ಸೂತ್ರ

ಡಾ. ಗುರುರಾಜ ಕರಜಗಿ
Published 28 ಮೇ 2014, 19:30 IST
Last Updated 28 ಮೇ 2014, 19:30 IST

ಉತ್ಸಾಹಿ ಜನರನ್ನು ಕಂಡರೆ ಎಲ್ಲರಿಗೂ ತುಂಬ ಖುಷಿಯಾಗು­ತ್ತದೆ. ಒಮ್ಮೆ ಅಮೆರಿಕದ ಮಿಷಿಗನ್ ಪ್ರಾಂತ್ಯಕ್ಕೆ ಹೋದಾಗ ಕಂಡ ಸಂಗತಿ ಮನ ಸೆರೆಹಿಡಿಯಿತು.

ಒಬ್ಬ ಸ್ನೇಹಿತರು ನನ್ನನ್ನು ಬಂದು ಸುಧಾರಣೆಯ ಶಾಲೆಗೆ ಕರೆದೊಯ್ದರು. ಈ ಶಾಲೆಗಳು ಮೂಲಭೂತವಾಗಿ ದಾರಿತಪ್ಪಿದ ಮಕ್ಕಳನ್ನು ಸರಿಪಡಿಸಲು ಇರುವ ವ್ಯವಸ್ಥೆ.  ಅಲ್ಲಿಗೆ ಬರುವವರೆಲ್ಲ ಸಾಮಾನ್ಯವಾಗಿ ಶಿಕ್ಷೆ ಹೊಂದಿ, ಮನೆ ತೊರೆದು ಸಮಾಜದಲ್ಲಿ ಕೆಟ್ಟ ಹೆಸರನ್ನೇ ಪಡೆದವರು. ಅವರನ್ನು ದಾರಿಗೆ ತರುವುದು ಸುಲಭದ ವಿಷಯವಲ್ಲ.  ಆದರೆ, ನಾನು ನೋಡಿದ ಫ್ಲಾಯ್ಡ್ ಸ್ಟಾರ್ ಶಾಲೆ ವಿಶಿಷ್ಟವಾಗಿತ್ತು. ಅಲ್ಲಿಯ ಮಕ್ಕಳು ತುಂಬ ಕಳೆಕಳೆಯಾಗಿ­ರುವುದಲ್ಲದೆ ಶಿಸ್ತಿನಿಂದಿದ್ದರು. ಈ ಶಾಲೆಗಳನ್ನು ಪ್ರಾರಂಭಿಸಿದವರು

. ಫ್ಲಾಯ್ಡ್ ಸ್ಟಾರ್.  ಆತ ನಾಲ್ಕು ವರ್ಷದವನಿದ್ದಾಗ ಅವನ ಮನೆಗೆ ಬಂದ ಹಿರಿಯರೊಬ್ಬರು ತಾವು ಐವತ್ತು ಅನಾಥ ಮತ್ತು ದಾರಿತಪ್ಪಿದ ಮಕ್ಕಳನ್ನು ಸಾಕುತ್ತಿರುವುದಾಗಿ ಹೇಳಿದರಂತೆ.  ಅಂದೇ ಈ ಹುಡುಗ ತಾಯಿಗೆ  ಹೇಳಿದನಂತೆ, ‘ನಾನೂ ದೊಡ್ಡವನಾದ ಮೇಲೆ ಐವತ್ತು ಮಕ್ಕಳಿಗೆ ಆಶ್ರಯ ಕೊಡುತ್ತೇನೆ’.  ತನ್ನ ಶಿಕ್ಷಣ ಮುಗಿದ ಮೇಲೆ ತಾನು ತೀರ್ಮಾನ ಮಾಡಿದಂತೆ ಈ ಸುಧಾರಣಾ ಶಾಲೆಯನ್ನು ತೆರೆದ.  ಆತ ಅಲ್ಲಿಗೆ ಬಂದ ವಿದ್ಯಾರ್ಥಿಗಳನ್ನು ಹೇಗೆ ಸುಧಾರಿಸಿದರು ಎಂಬುದಕ್ಕೆ ಒಂದು ಉದಾಹರಣೆ ಇದು.

ಒಂದು ಬಾರಿ ಒಬ್ಬ ತರುಣನನ್ನು ಪೊಲೀಸರು ಈ ಶಾಲೆಗೆ ತಂದು ಬಿಟ್ಟರು. ಯಾರನ್ನು ಸುಧಾರಿಸಿದರೂ ಈತನನ್ನು ಸರಿದಾರಿಗೆ ತರುವುದು ಅಸಾಧ್ಯವೆಂದು ಹೇಳಿ ಹೋದರು. ಅವನು ಮಾಡಿದ ಅಪರಾಧಗಳ ಪಟ್ಟಿಯನ್ನು ನೀಡಿದರು. ಸ್ಟಾರ್ ಅದನ್ನು ಮಡಿಚಿ ಕಪಾಟಿನಲ್ಲಿ­ಟ್ಟುಬಿಟ್ಟರು. ಓದಲೂ ಇಲ್ಲ. ‘ನನಗೆ ಈ ಹುಡುಗರು ಹಿಂದೆ ಏನು ಮಾಡಿದ್ದರೆ ಎಂಬುದನ್ನು ತಿಳಿಯುವುದರಲ್ಲಿ ಆಸಕ್ತಿ ಇಲ್ಲ. ನಾನು ಅವರು ಇಂದು ಏನಾಗಿದ್ದಾರೆ ಮತ್ತು ಮುಂದೆ ಏನಾಗಬೇಕು ಎಂಬುದರಲ್ಲಿ ಆಸಕ್ತಿ ವಹಿಸುತ್ತೇನೆ’ ಎನ್ನುತ್ತಿದ್ದರು ಸ್ಟಾರ್.

 ಒಮ್ಮೆ ಐವತ್ತು ಮೈಲಿ ದೂರದ ಊರಿಗೆ ಹೋಗಬೇಕಾದಾಗ ಈ ಹೊಸ ತರುಣನನ್ನೇ ಕರೆದುಕೊಂಡು ಹೋದರು.  ಅವನೇ ಕಾರು ನಡೆಸುತ್ತಿದ್ದ. ಸ್ಥಳ ಮುಟ್ಟಿದ ಮೇಲೆ ಅವನ ಕೈಗೆ ಐವತ್ತು ಡಾಲರ್ ಹಣ ಕೊಟ್ಟು, ‘ನಾನು ಮೀಟಿಂಗ್ ಮುಗಿಸಿಕೊಂಡು ಬರುವ ಹೊತ್ತಿಗೆ ಊಟ ಮಾಡಿ ಬಾ. ಸರಿಯಾಗಿ ಎಂಟು ಗಂಟೆಗೆ ಬಂದುಬಿಡು’ ಎಂದು ಹೇಳಿದರು. ಸರಿಯಾಗಿ ಎಂಟು ಗಂಟೆಯಾಗುತ್ತಿದ್ದಂತೆ ತರುಣ ಕಾರು ತಂದ. ಸ್ಟಾರ್ ಕಾರು ಹತ್ತಿ, ಮುಂದೆ ಪ್ರವಾಸ ಸಾಗಿದಾಗ ತರುಣ ಕೇಳಿದ, ‘ಅಂಕಲ್, ನೀವು ನನ್ನನ್ನು ನಂಬುತ್ತೀ­ರಲ್ಲವೇ?’ ‘ಹೌದು, ಖಂಡಿತವಾಗಿಯೂ ನಂಬುತ್ತೇನೆ’ ಎಂದರು ಸ್ಟಾರ್.

 ‘ಅಂಕಲ್, ಯಾಕೆ ನನ್ನನ್ನು ನಂಬುತ್ತೀರಿ? ಇದುವರೆಗೂ ನನ್ನನ್ನು ನಂಬಿದವರು ನೀವೊಬ್ಬರೇ’. ‘ನಿನ್ನನ್ನು ನಾನು ಎಷ್ಟು ಪ್ರೀತಿಸುತ್ತೇನೆಂದರೆ ನಿನ್ನನ್ನು ನಂಬದೇ ನನಗೆ ಬೇರೆ ದಾರಿಯಿಲ್ಲ’. ‘ಅಂಕಲ್, ನನ್ನನ್ನು ಪೊಲೀಸರು ಯಾಕೆ ಇಲ್ಲಿಗೆ ತಂದು ಬಿಟ್ಟಿದ್ದಾರೆ ಎಂಬುದು ನಿಮಗೆ ಗೊತ್ತಿದೆಯಲ್ಲ?’ ಕೇಳಿದ ತರುಣ. ‘ನಿಜವಾಗಿಯೂ ಇಲ್ಲಪ್ಪ.  ನಾನು ಎಂದಿಗೂ ಅವರು ನೀಡಿದ ಕಾರಣಗಳನ್ನು ನೋಡುವುದಿಲ್ಲ. ಕೇವಲ ಹುಡುಗರನ್ನು ನೋಡುತ್ತೇನೆ’. ತರುಣ ಹೇಳಿದ, ‘ಅಂಕಲ್ ನಾನು ಒಂದು ದಿನ ಕಾಲೇಜು ಮುಗಿಸಿಕೊಂಡು ಬರುವಾಗ ಮನೆಯ ಮುಂದೆ ಜನರ ಗುಂಪು. ಒಳಗೆ ಹೋಗಿ ನೋಡಿದರೆ ನನ್ನ ತಂದೆ ಚೆನ್ನಾಗಿ ಕುಡಿದು ಬಂದು ಮತ್ತಿನಲ್ಲಿ ನನ್ನ ತಾಯಿಯ ಹೊಟ್ಟೆಯಲ್ಲಿ ಚೂರಿಯನ್ನು ಚುಚ್ಚಿ, ಚುಚ್ಚಿ ಕೊಂದುಬಿಟ್ಟಿದ್ದಾರೆ.  ಅವರೀಗ ಜೈಲಿನಲ್ಲಿದ್ದಾರೆ. ನಾನು ಉಡಾಳನಾಗಿ ದರೋಡೆ ಮಾಡಿ ನಾಲ್ಕಾರು ಬಾರಿ ಜೈಲಿಗೆ ಹೋದೆ.

ನಂತರ ಹತ್ತಾರು ಕಾರು ಕಳ್ಳತನ ಮಾಡಿ ಸಿಕ್ಕಿಬಿದ್ದೆ. ಕಾರು ಕಳ್ಳತನ ಮಾಡುವವನ ಕೈಯಲ್ಲಿ ನೀವು ನಂಬಿಗೆಯಿಂದ ನಿಮ್ಮ ಕಾರು ಕೊಟ್ಟಿದ್ದೀರಿ. ವಿಚಿತ್ರವಲ್ಲವೇ?’. ಸ್ಟಾರ್, ಹುಡುಗನ ಭುಜ ತಟ್ಟಿ ಹೇಳಿದ, ‘ನನಗೆ ಅಚಲವಾದ ನಂಬಿಕೆ ಇದೆ. ನೀನು ಇನ್ನೆಂದಿಗೂ ಕಾರು ಕಳ್ಳತನ ಮಾಡಲಾರೆ’. ಹತ್ತು ಜನ ಪೊಲೀಸರು ಹೊಡೆದು, ಬಡಿದು, ಶಿಕ್ಷೆ ನೀಡಿ ಹೇಳಿದಾಗಲೂ ನಾಟದ ಮಾತು, ಮೃದುವಾಗಿ ಬೆನ್ನು ತಟ್ಟಿ ಹೇಳಿದ ಮಾತಿನಿಂದ ನಾಟಿತ್ತು.

ಇದಕ್ಕೆ ಮೂಲ ಕಾರಣವಾದದ್ದು ಸ್ಟಾರ್‌ನ ವ್ಯಕ್ತಿತ್ವ. ಆತ ಹೇಳುವ ಮಾತು ಮನನೀಯ.  ‘ಅಸಂತೋಷ ತುಂಬಿದ ಜಗತ್ತಿನಲ್ಲಿ ನೀವು ಸಂತೋಷವಾಗಿರಬೇಕೆಂದು ಬಯ­ಸುತ್ತೀರಾ? ಹಾಗಾದರೆ ಜನರನ್ನು ದ್ವೇಷಿಸು­ವುದನ್ನು ಬಿಡಿ, ಯಾರನ್ನೂ ದ್ವೇಷಿಸಬೇಡಿ. ಯಾರ ಬಗ್ಗೆಯಾದರೂ ದ್ವೇಷ ಬರುವಂತಿದ್ದರೆ ಅವರಿಂದ ಸ್ವಲ್ಪ ಕಾಲ ದೂರವಿರಿ. ಜನರನ್ನು ಪ್ರೀತಿಸುತ್ತ ಸಾಗಿ, ಅವರಲ್ಲಿ ನಂಬಿಕೆ ಇಡಿ. ಆಗ ನೋಡಿ ನೀವು ಕಲ್ಪನೆ ಮಾಡದಷ್ಟು ನಿಮ್ಮ ಬದುಕು ಸಂತೋಷದಾಯಕ­ವಾಗುತ್ತದೆ’. ಈ ಮಾತು ಪ್ರಯತ್ನ ಯೋಗ್ಯವಾದದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.