ADVERTISEMENT

ಆನ್‌ಲೈನ್‌ನಲ್ಲಿ ಗೃಹಸಾಲ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2016, 19:30 IST
Last Updated 8 ಡಿಸೆಂಬರ್ 2016, 19:30 IST
ಆನ್‌ಲೈನ್‌ನಲ್ಲಿ ಗೃಹಸಾಲ
ಆನ್‌ಲೈನ್‌ನಲ್ಲಿ ಗೃಹಸಾಲ   
ಟಾಟಾ ಸಮೂಹ ಸಂಸ್ಥೆಗಳಲ್ಲಿ ಒಂದಾದ ಹಣಕಾಸು ಸೇವೆಗಳನ್ನು ಒದಗಿಸುತ್ತಿರುವ ಟಾಟಾ ಕ್ಯಾಪಿಟಲ್ ಸಮಗ್ರ ಆನ್‌ಲೈನ್‌ ಹೋಂ ಸ್ಟೋರ್‌ಗೆ ಚಾಲನೆ ನೀಡಿದೆ. ಈ ಯೋಜನೆ ಆನ್‌ಲೈನ್‌ನಲ್ಲಿ (www.tatacapital.com/propertysearch) ಸೂಕ್ತ ಮನೆ ಹುಡುಕಾಟ ನಡೆಸುವವರಿಗೆ ಗೃಹ ಸಾಲ ಸೌಲಭ್ಯಗಳನ್ನು ನೀಡಲಿದೆ. 
 
ಈ ಆನ್‌ಲೈನ್‌ ಹೋಂ ಸ್ಟೋರ್ ಗ್ರಾಹಕರು ಆಯ್ಕೆ ಮಾಡಿಕೊಳ್ಳುವ ನಗರಗಳಲ್ಲಿ ನಿವೇಶನ ಅಥವಾ ಮನೆಗಳ ಸಂಪೂರ್ಣ ಮಾಹಿತಿ ನೀಡಲಿದೆ. ಇದರ ಜತೆಗೆ ಆನ್‌ಲೈನ್‌ನಲ್ಲೇ ಗೃಹಸಾಲಕ್ಕೆ ಅಂಗೀಕಾರವನ್ನೂ ನೀಡಲಿದೆ. ಈ ಟಾಟಾ ಕ್ಯಾಪಿಟಲ್ ಆನ್‌ಲೈನ್‌ ಹೋಂ ಸ್ಟೋರ್ ಡೌನ್‌ಲೋಡ್‌ ಮಾಡಿಕೊಳ್ಳಬಹುದಾದ ಅಪ್ಲಿಕೇಷನ್ ಆಗಿದೆ. ಇದನ್ನು ಗೂಗಲ್ ಪ್ಲೇಸ್ಟೋರ್ ಮತ್ತು ಆ್ಯಪಲ್‌ ಆ್ಯಪ್‌ನಲ್ಲೂ ಸಹ ಡೌನ್‌ಲೋಡ್ ಮಾಡಿಕೊಳ್ಳಬಹುದು.
 
ಈ ಡಿಜಿಟಲ್ ಯೋಜನೆಯ ಮಹತ್ವದ ಬಗ್ಗೆ ಮಾಹಿತಿ ನೀಡಿರುವ ಟಾಟಾ ಕ್ಯಾಪಿಟಲ್‌ನ ರೀಟೇಲ್ ಬ್ಯುಸಿನೆಸ್ ಅಂಡ್ ಹೌಸಿಂಗ್ ಫೈನಾನ್ಸ್‌ ಸಿಒಒ ಗೋವಿಂದ್ ಶಂಕರನಾರಾಯಣ, ‘ಕಳೆದ ವರ್ಷ ಆನ್‌ಲೈನ್‌ ಕಾರ್ ಸ್ಟೋರ್ ಆರಂಭಿಸಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಆನ್‌ಲೈನ್‌ ಹೋಂ ಸ್ಟೋರ್ ಆರಂಭಿಸಿದ್ದೇವೆ. ಈ ಆನ್‌ಲೈನ್‌ ಹೋಂ ಸ್ಟೋರ್ ಮೂಲಕ ಎಲ್ಲಾ ಆಸ್ತಿಗಳ ವಿವರ ಅಂದರೆ, ನಿವೇಶನಗಳು, ಮನೆಗಳ ವಿವರಗಳು ಮತ್ತು ಸೇವೆಗಳನ್ನು ಒದಗಿಸಲಾಗುತ್ತಿದೆ. ಇದರಲ್ಲಿನ ಮಾಹಿತಿ ಆಧಾರದಲ್ಲಿ ಮನೆ ಖರೀದಿಸುವವರು ತಮ್ಮ ಬಂಡವಾಳಕ್ಕೆ ಅನುಗುಣವಾಗಿ ಸುಲಭವಾಗಿ ಮನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ’ ಎಂದಿದ್ದಾರೆ.
 
ಮನೆಯ ದರ, ಅದಿರುವ ಸ್ಥಳ, ಮಹಡಿಗಳ ಯೋಜನೆಗಳು, ಮನೆಯ ಸುತ್ತಮುತ್ತ ಶಾಲೆ ಮತ್ತು ಆಸ್ಪತ್ರೆಗಳಂತಹ ಸಾಮಾಜಿಕ ಮೂಲಸೌಕರ್ಯಗಳ ಮಾಹಿತಿ, ನಿರ್ಮಾಣ ಸಂಸ್ಥೆಯ ಮಾಹಿತಿ ಮತ್ತು ಟಾಟಾ ಕ್ಯಾಪಿಟಲ್‌ನಿಂದ ಸಾಲ ಮಂಜೂರಾತಿ ಸೇರಿದಂತೆ ಹತ್ತು ಹಲವಾರು ಮಾಹಿತಿಗಳು ಈ ಹೋಂ ಸ್ಟೋರ್‌ನಲ್ಲಿ ಲಭ್ಯವಾಗಲಿವೆ. ಭಾರತದ ಎಂಟು ಮೆಟ್ರೋಗಳಲ್ಲಿರುವ 15,000ಕ್ಕೂ ಅಧಿಕ ವಸತಿ ಯೋಜನೆಗಳ ಬಗ್ಗೆ ಈ ಸ್ಟೋರ್ ಮಾಹಿತಿ ನೀಡಲಿದೆ. ಒಂದು ಬಟನ್ ಒತ್ತುವ ಮೂಲಕ ಗ್ರಾಹಕರು ತಾವು ಆಯ್ಕೆ ಮಾಡುವ ಮನೆಯ ದರ ಮತ್ತು ಸೌಲಭ್ಯಗಳನ್ನು ಇತರೆ ನಗರಗಳ ಮನೆ ಮತ್ತು ಸೌಲಭ್ಯಗಳ ಜತೆ ತುಲನೆ ಮಾಡಬಹುದಾಗಿದೆ. 
 
ಗ್ರಾಹಕರು ಆನ್‌ಲೈನ್‌ನಲ್ಲೇ ಗೃಹಸಾಲಕ್ಕೆ ಅರ್ಜಿ ಹಾಕಿ, ನಿಗದಿತ ಅವಧಿಯೊಳಗೆ ಅಂಗೀಕಾರವನ್ನೂ ಪಡೆಯಬಹುದಾಗಿದೆ. ಆನ್‌ಲೈನ್‌ನಲ್ಲಿ ಅನಿವಾಸಿ ಭಾರತೀಯರಿಗೂ ಗೃಹಸಾಲಕ್ಕೆ ಅರ್ಜಿ ಹಾಕುವ ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ, ಈ ಅನಿವಾಸಿ ಭಾರತೀಯರು ಭಾರತದಲ್ಲಿರುವವರ ಜತೆಯಲ್ಲಿ ಸಹ ಅರ್ಜಿದಾರರಾಗಿ ಅರ್ಜಿ ಸಲ್ಲಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.