ADVERTISEMENT

ಒಮ್ಮೆ ಮುಗಿಯಲಪ್ಪಾ ಮನೆ ಸಾಲ

ಸುಶೀಲಾ ಡೋಣೂರ
Published 10 ಆಗಸ್ಟ್ 2017, 19:30 IST
Last Updated 10 ಆಗಸ್ಟ್ 2017, 19:30 IST
ಒಮ್ಮೆ ಮುಗಿಯಲಪ್ಪಾ ಮನೆ ಸಾಲ
ಒಮ್ಮೆ ಮುಗಿಯಲಪ್ಪಾ ಮನೆ ಸಾಲ   

ಮನೆ ಸಾಲ ಎಂದರೆ ಸುಮ್ಮನೇ ಅಲ್ಲ, ಅದು ಜೀವನದಲ್ಲಿ ತೆಗೆದುಕೊಳ್ಳುವ ಅತಿ ದೊಡ್ಡ ಆರ್ಥಿಕ ಜವಾಬ್ದಾರಿ. ಸಾಮಾನ್ಯವಾಗಿ, ಸಾಲಗಳ ಮೇಲಿನ ಬಡ್ಡಿಯ ಕಾರಣ ಆಸ್ತಿಯ ಮೌಲ್ಯ ಕಡಿಮೆ ಲಾಭದಾಯಕವಾಗಿ ಕಂಡುಬರುತ್ತದೆ. ಹಾಗಾಗಿ ಅನೇಕರು ತಮ್ಮ ಸಾಲವನ್ನು ಮುಂಗಡವಾಗಿ ಪಾವತಿಸಿ ನಿರಾಳರಾಗಲು ಬಯಸುತ್ತಾರೆ.

ಆದರೆ ಮುಂಗಡ ಪಾವತಿಯನ್ನು ಯಾವಾಗ ಮತ್ತು ಹೇಗೆ ಮಾಡಿದರೆ ಇನ್ನೂ ಹೆಚ್ಚಿನ ಲಾಭಗಳನ್ನು ಪಡೆದುಕೊಳ್ಳಬಹುದು. ಯಾರಿಗಿದು ಸೂಕ್ತ, ಯಾರಿಗಲ್ಲ ಎನ್ನುವುದನ್ನು ಗಮನಿಸಬೇಕು.

ಯಾವುದೇ ದೀರ್ಘಾವಧಿಯ ಸಾಲವನ್ನು ಸಾಧ್ಯವಾದಷ್ಟು ಬೇಗ ಮರುಪಾವತಿ ಮಾಡುವುದು ಲಾಭದಾಯಕ ಎನ್ನುವುದು ನಮ್ಮ ನಂಬಿಕೆ. ಅದರಲ್ಲೂ ಆದಾಯದ ದೊಡ್ಡ ಪಾಲನ್ನು ನುಂಗಿಹಾಕುವ ಗೃಹಸಾಲದ ಇಎಂಐ ಯಾರಿಗಾದರೂ ಹೊರೆಯೇ. ಆದಷ್ಟು ಬೇಗ ಸಾಲದಿಂದ ಮುಕ್ತರಾಗಬೇಕು ಎನ್ನುವುದೇ ಅನೇಕರ ಬಯಕೆ. ಆದರೆ ಮುಂಗಡ ಪಾವತಿ ಮಾಡುವಾಗ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ತಜ್ಞರು.

ADVERTISEMENT

ಆರ್‌ಬಿಐನ ಹೊಸ ನೀತಿಗಳಿಂದಾಗಿ ಗೃಹಸಾಲಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿವೆ. 8.35ರಿಂದ 8.90ರ ನಡುವೆ ಈಗ ಗೃಹಸಾಲಗಳ ಬಡ್ಡಿ ದರಗಳು ಓಲಾಡುತ್ತಿವೆ. ಇಂತಹ ಸಮಯದಲ್ಲಿ ಈಗಾಗಲೇ ಪಡೆದ ಸಾಲಗಳನ್ನು ಮುಂಗಡ ಪಾವತಿ ಮಾಡುವುದರಿಂದ ಆಗಬಹುದಾದ ಲಾಭ–ನಷ್ಟಗಳ ಬಗ್ಗೆ ಚರ್ಚಿಸುವುದು ಅಗತ್ಯ.
ಸಾಲಗಾರರು ತಿಂಗಳ ಕಂತನ್ನು ಹೊರತುಪಡಿಸಿ, ತಮ್ಮ ಉಳಿತಾಯ ಅಥವಾ ಗಳಿಕೆಯ ಹಣವನ್ನು ಗೃಹಸಾಲಕ್ಕೆ ತುಂಬುತ್ತಾರೆ. ಮುಂಗಡಪಾವತಿ ಬಡ್ಡಿ ಹಾಗೂ ಸಾಲದ ಅವಧಿಯನ್ನು ಕಡಿಮೆ ಮಾಡುತ್ತದೆ ಮತ್ತು ದೀರ್ಘಾವಧಿಯ ಉಳಿತಾಯವನ್ನು ಖಾತರಿಗೊಳಿಸುತ್ತದೆ. ಆದರೆ ಬಡ್ಡಿ ದರ ಕಡಿಮೆ ಇರುವಾಗ ಸಾಲವನ್ನು ಮುಂಗಡ ಪಾವತಿ ಮಾಡುವುದರಿಂದ ದೀರ್ಘಾವಧಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ತಿಂಗಳ ಸಂಬಳ ಅಥವಾ ವರಮಾನದ ಹೊರತಾಗಿ ಬೇರೆ ಮೂಲಗಳಿಂದ (ಬೋನಸ್‌, ಇನ್‌ಕ್ರಿಮೆಂಟ್‌, ಅರಿಯರ್ಸ್‌, ಸೇವಿಂಗ್ಸ್‌) ಹಣ ಬಂದಾಗ, ಚಿಕ್ಕ ಚಿಕ್ಕ ಪಾವತಿಗಳನ್ನು ಮಾಡುವ ಬದಲು, ನಿಮ್ಮ ಎಲ್ಲ ಹೆಚ್ಚುವರಿ ಹಣವನ್ನು ಒಟ್ಟುಗೂಡಿಸಿ ಬಡ್ಡಿದರಗಳು ಕಡಿಮೆಯಾಗಿರುವುದನ್ನು ನೋಡಿಕೊಂಡು ಸಾಲದ ಮೊತ್ತವನ್ನು ಕಟ್ಟುವುದು ಉತ್ತಮ.
ಒಟ್ಟಿಗೇ ದೊಡ್ಡ ಮೊತ್ತದ ಹಣ ಕೈಸೇರಿದಾಗ ಅದನ್ನು ಗೃಹಸಾಲ ತೀರಿಸಲು ಬಳಸುವುದೊ ಅಥವಾ ಅದಕ್ಕಿಂತಲೂ ಹೆಚ್ಚು ಲಾಭವಾಗುವ ಬೇರೆ ಯಾವುದಾದರೂ ಯೋಜನೆಯಲ್ಲಿ ತೊಡಗಿಸುವುದು ಸರಿಯೊ ಎಂಬ ಬಗ್ಗೆ ಅನೇಕರಲ್ಲಿ ಗೊಂದಲವಿರುತ್ತದೆ.

ಗೃಹಸಾಲವನ್ನು ಅವಧಿಗೆ ಮುನ್ನವೇ ಪಾವತಿ ಮಾಡುವುದು ಎಲ್ಲರಿಗೂ ಲಾಭದಾಯಕವವಲ್ಲ ಎನ್ನುತ್ತಾರೆ ತಜ್ಞರು.

‘ನೀವು ತೆರಿಗೆ ಕಟ್ಟುವ ಉದ್ಯೋಗಸ್ಥರಾದರೆ ಮನೆ ಸಾಲವನ್ನು ಮುಂಗಡವಾಗಿಯೇ ತೀರಿಸಲು ಅವಸರ ಮಾಡಬೇಡಿ’ ಎನ್ನುತ್ತಾರೆ ಹೂಡಿಕೆ ಸಲಹೆಗಾರ ಯು.ಪಿ. ಪುರಾಣಿಕ್.
‘ಗೃಹಸಾಲ ಒಬ್ಬ ವ್ಯಕ್ತಿಗೆ ಒಂದು ಬಾರಿ ಮಾತ್ರ ಸಿಗುವಂಥದ್ದು. ಮುಂದೆ ಯಾವುದೇ ರೀತಿಯ ಅಗತ್ಯಗಳಿಗೆ ಗೃಹಸಾಲದ ಬಡ್ಡಿದರದಲ್ಲಿ ಮತ್ತೆ ಸಾಲ ದೊರಕುವುದಿಲ್ಲ. ಅದೂ ಅಲ್ಲದೇ, ಗೃಹಸಾಲ ನಿಮಗೆ ತೆರಿಗೆ ವಿನಾಯಿತಿ ಲಾಭವನ್ನು ನೀಡುತ್ತದೆ. ಹೀಗಾಗಿ ತೆರಿಗೆ ಕಟ್ಟುವ ವರ್ಗದವರು ಗೃಹಸಾಲವನ್ನು ಉಳಿಸಿಕೊಂಡು, ಅದಕ್ಕಿಂತಲೂ ಉತ್ತಮ ಯೋಜನೆಗಳಲ್ಲಿ ಹಣ ತೊಡಗಿಸುವುದು ಉತ್ತಮ’ ಎನ್ನುತ್ತಾರೆ ಅವರು.

ಆದರೆ ಬೇರೆ ಯಾವ ಯೋಜನೆ ಉತ್ತಮ ಎನ್ನುವುದಕ್ಕೆ ಒಂದೇ ಉತ್ತರವಿಲ್ಲ. ಉತ್ತಮ ಯೋಜನೆಯ ಆಯ್ಕೆಯಲ್ಲಿ ಶಿಸ್ತು, ಸಂಯಮ, ಸಿದ್ಧತೆ, ತಯಾರಿಯ ಅಗತ್ಯವಿರುತ್ತದೆ. ಯಾಕೆಂದರೆ ಮಾರುಕಟ್ಟೆಯಲ್ಲಿ ಸಾಕಷ್ಟು ಯೋಜನೆಗಳಿವೆ. ಆಯಾ ಕಂಪೆನಿಗಳು ತಂತಮ್ಮ ಯೋಜನೆಗಳೇ ಉತ್ತಮ ಎಂದೂ ಹೇಳುತ್ತಾರೆ.

ಈಕ್ವಿಟಿಗಳು, ಮ್ಯೂಚುವಲ್‌ ಫಂಡ್‌ಗಳು, ಕಾರ್ಪೊರೇಟ್‌ ಫಿಕ್ಸೆಡ್‌ ಡಿಪಾಸಿಟ್‌ ಸೇರಿದಂತೆ ಅನೇಕ ಆಯ್ಕೆಗಳಿವೆ. ಕೆಲವೊಂದು ಕಂಪೆನಿಗಳು 10, 15, 20 ವರ್ಷಗಳ ಅವಧಿಗೆ ಹಣ ಹೂಡುವುದರಿಂದ ಶೇ 12, ಶೇ 15ರಷ್ಟು ಬಡ್ಡಿ ಲಾಭ ಪಡೆಯಬಹುದು ಎಂದೂ ಹೇಳುತ್ತಾರೆ. ಆದರೆ ಇದ್ಯಾವುದೂ ಖಚಿತವಲ್ಲ. ಕೆಲವೊಮ್ಮೆ ಹೂಡಿದ ಹಣವೇ ಬರದೇ ಹೋಗುವ ಅಪಾಯವೂ ಉಂಟು.

‘ಮ್ಯೂಚುವಲ್‌ ಫಂಡ್‌ಗಳಲ್ಲಿ ಡೆಡ್‌ ಫಂಡ್‌ ಅಂತ ಒಂದಿದೆ. ಸರ್ಕಾರದ ಭದ್ರತೆ ಇರುವ ಯೋಜನೆ ಇದು. ಇಲ್ಲಿ ನಿಮಗೆ ಶೇ 8.50ರವರೆಗೆ ಬಡ್ಡಿಯೂ ಸಿಗುತ್ತದೆ. ಸುರಕ್ಷಿತವಾಗಿಯೂ ಇರುತ್ತದೆ. ಅಲ್ಲದೇ, ಇದರಿಂದ ಬರುವ ಬಡ್ಡಿ ಹಣಕ್ಕೆ ತೆರಿಗೆ ವಿನಾಯಿತಿಯೂ ಉಂಟು’ ಎಂದು ಮಾಹಿತಿ ನೀಡುತ್ತಾರೆ ಪುರಾಣಿಕ್‌. 

***

ಮುಂಗಡ ಪಾವತಿ ಶುಲ್ಕ

ಗೃಹಸಾಲವನ್ನು ಮುಂಗಡ ಪಾವತಿ ಮಾಡುವವರಿಗೆ ಶುಲ್ಕ ವಿಧಿಸಬೇಕೊ ಬೇಡವೊ. ಪಡೆಯುವುದಾದರೂ ಎಷ್ಟು ಶುಲ್ಕವನ್ನು ಪಡೆಯಬಹುದು ಎನ್ನುವುದು ಆಯಾ ಬ್ಯಾಂಕುಗಳಿಗೆ ಸೇರಿದ್ದು. ಇದಕ್ಕೆ ನಿಖರವಾದ ಶುಲ್ಕ ಇರುವುದಿಲ್ಲ. ನಿಮ್ಮ ಸಾಲ ಮರುಪಾವತಿಯ ಇತಿಹಾಸವನ್ನು ಗಮನಿಸಿ ಅದನ್ನು ಹೆಚ್ಚೂ–ಕಡಿಮೆ ಮಾಡುವ ಅಥವಾ ಶುಲ್ಕವನ್ನೇ ರದ್ದು ಮಾಡುವ ಸ್ವಾತಂತ್ರ್ಯ ಬ್ಯಾಂಕುಗಳಿಗೆ ಇರುತ್ತದೆ. ಹೀಗಾಗಿ ಈ ಬಗ್ಗೆ ನಿಮ್ಮ ಬ್ಯಾಂಕ್‌ ಅಧಿಕಾರಿಯ ಜೊತೆಗೆ ಮಾತನಾಡಿ ಶುಲ್ಕವನ್ನು ಕಡಿಮೆ ಮಾಡಿಕೊಳ್ಳಬಹುದು ಅಥವಾ ಕೈಬಿಡುವಂತೆ ಕೇಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.