ADVERTISEMENT

ಕಟ್ಟಡ ಪರಿಕರ ದರ ಹೆಚ್ಚಳ?

ಹೇಮಾ ವೆಂಕಟ್
Published 6 ಜುಲೈ 2017, 19:30 IST
Last Updated 6 ಜುಲೈ 2017, 19:30 IST
ಕಟ್ಟಡ ಪರಿಕರ ದರ ಹೆಚ್ಚಳ?
ಕಟ್ಟಡ ಪರಿಕರ ದರ ಹೆಚ್ಚಳ?   

ಗ ಎಲ್ಲರಿಗೂ ಜಿಎಸ್‌ಟಿಯದೇ ಚಿಂತೆ. ನೋಟು ನಿಷೇಧ ತಂದಿಟ್ಟ ತೊಂದರೆಯಿಂದ ರಿಯಲ್‌ ಎಸ್ಟೇಟ್‌ ಉದ್ಯಮ ಚೇತರಿಕೆ ಕಾಣುತ್ತಿದ್ದಂತೆ ಜಿಎಸ್‌ಟಿ ಭೂತ ಹೆಗಲೇರಿ ಕುಳಿತಿದೆ.

ಕಷ್ಟಪಟ್ಟು ನಿವೇಶನ ಖರೀದಿಸಿ ಇನ್ನೇನು ಮನೆ ಕಟ್ಟಬೇಕು ಎಂದುಕೊಂಡವರು ಸ್ವಲ್ಪ ದಿನ ತಮ್ಮ ಯೋಜನೆಯನ್ನು ಮುಂದೂಡಬೇಕಾಗಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾಗಿ ಒಂದು ವಾರವಾಗಿದೆ. ಜಿಎಸ್‌ಟಿ ಬಂದರೆ ಸಹಜವಾಗಿಯೇ ಕಟ್ಟಡ ನಿರ್ಮಾಣ ಪರಿಕರಗಳಾದ ಉಕ್ಕು, ಕಬ್ಬಿಣ, ಸಿಮೆಂಟು, ಪೇಂಟ್‌ ಸೇರಿದಂತೆ ವಿವಿಧ ವಸ್ತುಗಳ ಬೆಲೆ ಏರುವ ಸಾಧ್ಯತೆ ಇದೆ ಎಂದೇ ಊಹಿಸಲಾಗಿತ್ತು. ಕೆಲವು ವಸ್ತುಗಳ ಬೆಲೆ ಕಡಿಮೆಯಾಗುತ್ತದೆ ಎಂಬ ಮಾತುಗಳೂ ಕೇಳಿಬಂದಿತ್ತು.  ಈ ಬಗ್ಗೆ ಇನ್ನೂ ಸ್ಪಷ್ಟತೆ ಯಾರಲ್ಲಿಯೂ ಇಲ್ಲ. ಕಾದು ನೋಡುವ ತಂತ್ರಕ್ಕೆ ರಿಯಲ್‌ ಎಸ್ಟೇಟ್‌ ಮಂದಿ ಮೊರೆ ಹೋಗಿದ್ದಾರೆ. ಆದರೆ ಸಿಮೆಂಟು ದರದಲ್ಲಿ  ಹೆಚ್ಚಳವಾಗಿಲ್ಲ. ಉಕ್ಕಿನ ದರದಲ್ಲಿ ಹೆಚ್ಚಳವಾಗಿದೆ.

ADVERTISEMENT

ಸಿಮೆಂಟು ದರ ಹೆಚ್ಚಳ ಆಗಿಲ್ಲ: ಸಿಮೆಂಟು ದರ ಹೆಚ್ಚಳವಾಗಿಲ್ಲ ಎಂದು ಬಾಲಾಜಿ ಟ್ರೇಡರ್ಸ್‌ನ ಮುರಳೀಕೃಷ್ಣ ಹೇಳುತ್ತಾರೆ.

ಜುಲೈ 1ರಂದು ಜಿಎಸ್‌ಟಿ ಜಾರಿಗೆ ಬರುತ್ತದೆ ಎಂಬುದು ಮೊದಲೇ ಗೊತ್ತಿದ್ದ ಕಾರಣ ಸಿಮೆಂಟು ವ್ಯಾಪಾರಿಗಳು ಜೂನ್‌ 26ರ ನಂತರ ಮಾಲು ತರಿಸಿಕೊಂಡಿಲ್ಲ. ಜಿಎಸ್‌ಟಿ ಬರುವ ಮುನ್ನಾ ದಿನ ಎಲ್ಲಾ ಗೋದಾಮುಗಳನ್ನೂ ಜೀರೋ ಗೋದಾಮುಗಳೆಂದು ಘೋಷಿಸಿದ್ದರು. ದರ ಹೆಚ್ಚಳವಾಗುವ ಭೀತಿಯಿಂದ ಕಟ್ಟಡ ನಿರ್ಮಾಣ ಮಾಡುತ್ತಿದ್ದವರೂ ಹೆಚ್ಚು ಖರೀದಿ ಮಾಡಿಕೊಂಡಿದ್ದಾರೆ. ಜೂನ್‌ 30ರ ವೇಳೆಗೆ ಗೋದಾಮುಗಳು ಖಾಲಿಯಾಗಿವೆ. ಜುಲೈ 6ರಿಂದ ಮತ್ತೆ ಪೂರೈಕೆಯಾಗುತ್ತಿದೆ. ಸಿಮೆಂಟು ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. 43 ಗ್ರೇಡ್‌ನ ಸಿಮೆಂಟು ಬೆಲೆ ಈಗಲೂ ₹375 ಇದೆ. ಹಾಗಾಗಿ ಹಳೆಯ ಸಿಮೆಂಟು, ಹೊಸ ಸಿಮೆಂಟಿನ ದರದಲ್ಲಿ ವ್ಯತ್ಯಾಸವೇನೂ ಆಗಿಲ್ಲ ಎನ್ನುತ್ತಾರೆ ಅವರು.

ಬಿಲ್ಲಿಂಗ್‌ ಸಮಸ್ಯೆ: ಜಿಎಸ್‌ಟಿ ಜಾರಿ ಯಾಗುತ್ತಿದ್ದಂತೆ ವ್ಯಾಪಾರಿಗಳಿಗೆ ಕಾಡಿದ್ದು ಬಿಲ್ಲಿಂಗ್‌ ಸಮಸ್ಯೆ. ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡಲು ಸ್ವಲ್ಪ ಸಮಯ ಬೇಕಿತ್ತು. ಹಾಗಾಗಿ ಗ್ರಾಹಕರಿಗೆ ಸ್ವಲ್ಪ ದಿನ ಸಮಸ್ಯೆಯಾಗಿತ್ತು. ಈಗ ಅದೆಲ್ಲ ಸರಿಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

ನಿವೇಶನ ದರ ಹೆಚ್ಚಳ: ಎನ್‌.ಆರ್‌. ಕಾಲೊನಿಯ ಬಿಲ್ಡರ್‌ ಪಿ.ಎಲ್‌. ವೆಂಕಟರಾಂ ರೆಡ್ಡಿ ಅವರು ಹೇಳುವಂತೆ ನಿವೇಶನ ದರ ಚದರಡಿಗೆ ಕನಿಷ್ಠ ₹200 ಹೆಚ್ಚಾಗುತ್ತದೆ. ‘ಹಿಂದೆ ಶೇ 6 ತೆರಿಗೆ ಇತ್ತು. ಹೇಗೋ ಮ್ಯಾನೇಜ್‌ ಮಾಡುತ್ತಿದ್ದೆವು. ಈಗ ಶೇ 18 ಜಿಎಸ್‌ಟಿ ಆಗಿದೆ. ನಾವು ಸಹಜವಾಗಿಯೇ ನಮ್ಮ ಗ್ರಾಹಕರಿಂದ ವಸೂಲಿ ಮಾಡುತ್ತೇವೆ. ನಾವು ಆರಂಭಿಸಿದ ನಿರ್ಮಾಣವನ್ನು ಅರ್ಧದಲ್ಲಿ ನಿಲ್ಲಿಸುವಂತಿಲ್ಲ. ಸಿಗುವ ಬೆಲೆಗೆ ವಸ್ತುಗಳನ್ನು ಖರೀದಿಸಿ ಯೋಜನೆ ಪೂರ್ಣ ಮಾಡುವುದು ಅನಿವಾರ್ಯ’ ಎನ್ನುತ್ತಾರೆ ಅವರು.

‘ಇಲ್ಲಿಯವರೆಗೆ ತೆರಿಗೆ ತಪ್ಪಿಸಲು ನಾನಾ ಮಾರ್ಗಗಳಿದ್ದವು. ಈಗ ಅದೆಲ್ಲ ಸಾಧ್ಯವಿಲ್ಲ. ಜಿಎಸ್‌ಟಿ ಮಂಡಳಿಯ ಮೇಲೆ ಯಾರ ಹಿಡಿತವೂ ಇಲ್ಲ. ಎಲ್ಲರೂ ತೆರಿಗೆ ಪಾವತಿಸಲೇಬೇಕು. ಈಗಾಗಲೇ ಮನೆ ಕೊಳ್ಳಲು ಅರ್ಧದಷ್ಟು ಹಣ ಹೂಡಿದವರಿಗೂ ತೆರಿಗೆ ಹೊರೆ ಬೀಳುತ್ತದೆ. ಆದರೆ, ನಮಗೆಲ್ಲ ತೆರಿಗೆಯ ಬಗ್ಗೆ ಒಂದಷ್ಟು ಸ್ಪಷ್ಟತೆ ಸಿಕ್ಕಿದೆ. ಆದರೆ ನಿವೇಶನ ದರ ಇಳಿಯುತ್ತದೆ ಎಂದು ಅನೇಕರು ಕಾಯುತ್ತಿದ್ದಾರೆ. ಹಾಗಾಗಿ ರಿಯಲ್‌ ಎಸ್ಟೇಟ್‌ ವ್ಯವಹಾರದ ವೇಗ ಕುಂಠಿತವಾಗಲಿದೆ’ ಎನ್ನುತ್ತಾರೆ ಅವರು.

‘ಜಿಎಸ್‌ಟಿ ಪರಿಣಾಮದ ಸ್ಪಷ್ಟ ಅರಿವಾಗಲು ಇನ್ನೂ ಐದಾರು ತಿಂಗಳು ಬೇಕು. ಈಗಾಗಲೇ ಶುರುವಾಗಿರುವ ಯೋಜನೆಗಳ ಮೇಲೆ ಅಂತಹ ಪರಿಣಾಮ ಆಗಲ್ಲ. ಆದರೆ ಹೊಸ ಯೋಜನೆಗಳು ದುಬಾರಿಯಾಗಲಿವೆ. ಈಗಾಗಲೇ 4ರಷ್ಟು ದರ ಹೆಚ್ಚಳ ಮಾಡಲಾಗಿದೆ. ಆದರೆ ರೇರಾ ಮತ್ತು ಜಿಎಸ್‌ಟಿ ಸೇರಿ ಕನಿಷ್ಠ ಶೇ 7ರಷ್ಟು ದರ ಹೆಚ್ಚಳವಾಗಲಿದೆ’ ಎನ್ನುತ್ತಾರೆ ರಿಯಲ್‌ ಎಸ್ಟೇಟ್‌ ಕನ್ಸಲ್ಟೆಂಟ್‌ ಹರೀಶ್ ಆಚಾರ್‌.

ಸಿಮೆಂಟು ದರ ಸ್ವಲ್ಪ ಕಡಿಮೆಯಾಗಿದೆ. ಪೇಂಟ್‌, ಮರಳು, ಇಟ್ಟಿಗೆ ದರ ಶೇ 3ರಷ್ಟು ಹೆಚ್ಚಳವಾಗಿದೆ. ಇನ್ನೂ ಸ್ಷಷ್ಟತೆ ಸಿಗುತ್ತಿಲ್ಲ ಎನ್ನುತ್ತಾರೆ ಅವರು.

ಉಕ್ಕು ದುಬಾರಿ: ಪೀಣ್ಯದ ಉಕ್ಕು ವ್ಯಾಪಾರಿ ಮಸೂದ್‌ ಹೇಳುವಂತೆ ಉಕ್ಕು ದುಬಾರಿಯಾಗಿದೆ. ‘ಜಿಎಸ್‌ಟಿ ಜಾರಿಯಾದ ನಂತರ ಒಂದು ಟನ್‌ ಸ್ಟೀಲ್‌ ದರದಲ್ಲಿ ₹1,000 ಹೆಚ್ಚಳವಾಗಿದೆ. ಸದ್ಯ ಇದು ವಹಿವಾಟಿನ ಮೇಲೆ ಪರಿಣಾಮ ಬೀರಲಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.