ADVERTISEMENT

ಕಪಾಟಿನ ಅಂದಕ್ಕೆ ಹಲವು ಸೂತ್ರಗಳು...

ಒಳಾಂಗಣ

ಕವಿತಾ ಆರ್‌
Published 8 ಡಿಸೆಂಬರ್ 2016, 19:30 IST
Last Updated 8 ಡಿಸೆಂಬರ್ 2016, 19:30 IST
ಕಪಾಟಿನ ಅಂದಕ್ಕೆ ಹಲವು ಸೂತ್ರಗಳು...
ಕಪಾಟಿನ ಅಂದಕ್ಕೆ ಹಲವು ಸೂತ್ರಗಳು...   
ಮನೆಯಲ್ಲಿನ ಬಟ್ಟೆಗಳು ಹಾಗೂ ಇತರ ಪರಿಕರಗಳನ್ನು ಸರಿಯಾದ ರೀತಿ ಜೋಡಿಸುವುದು ಬಹಳ ಕಷ್ಟ. ಕೆಲ ವಸ್ತುಗಳನ್ನು ಕಣ್ಣಿಗೆ ಬೀಳದ ರೀತಿ ಅಡಗಿಸಿಡುವುದು ಸಾಹಸದ ಕೆಲಸವೇ ಸರಿ. ಅದಕ್ಕಾಗಿಯೇ ಮನೆಯಲ್ಲಿ ಒಂದು ಅಚ್ಚುಕಟ್ಟಾದ ಕಪಾಟಿದ್ದರೆ ಅದರಲ್ಲಿ ನಿಮ್ಮ ಬಟ್ಟೆ, ಬ್ಯಾಗ್‌, ಶೂಗಳನ್ನು ಯಾವುದೇ ಗೊಂದಲವಿಲ್ಲದೇ ಜೋಡಿಸಬಹುದು.
 
ಕಪಾಟನ್ನು  ಯಾವ ಸ್ಥಳದಲ್ಲಿರಿಸಬೇಕು, ಕಪಾಟಿನ ಒಳ ಹಾಗೂ ಹೊರ ಭಾಗದ ವಿನ್ಯಾಸ ಹೇಗೆ ಕಾಣಬೇಕು ಎಂಬುದನ್ನು ಮೊದಲೇ ಯೋಚಿಸಿಕೊಳ್ಳಿ. ಸೀರೆ, ಬೆಲ್ಟ್‌ ಹಾಗೂ ಇತರೆ ವಸ್ತುಗಳನ್ನು ಶಿಸ್ತಾಗಿ ಜೋಡಿಸುವ ರೀತಿಯಲ್ಲಿ ಕಪಾಟಿನ ರಚನೆ ಇರಬೇಕು.  ನಿಮ್ಮ ಅಭಿರುಚಿ ಮತ್ತು ಅಗತ್ಯಗಳಿಗೆ ಅನುಗುಣವಾಗಿ ವೃತ್ತಿಪರರ ಸಲಹೆ ಪಡೆದು ಕಪಾಟು ರೂಪಿಸಿಕೊಳ್ಳುವುದು ಒಳಿತು.
 
ಕಪಾಟಿನ ವಿನ್ಯಾಸ ಅಂತಿಮಗೊಳಿಸಿಕೊಳ್ಳುವ ಮೊದಲು ಡ್ರಾಯಿಂಗ್‌ ಶೀಟ್ ನೆರವಿನಿಂದ ಅಂಥದ್ದೇ ಆಕೃತಿ ರಚಿಸಿಕೊಳ್ಳಿ. ಮರದ ಅಥವಾ ಪ್ಲೈವುಡ್‌ ತುಂಡನ್ನು ಕತ್ತರಿಸುವ ಮೊದಲು ಹೀಗೆ ಎರಡು ಬಾರಿ ಅಳೆಯುವುದರಿಂದ ಲಭ್ಯವಿರುವ ಸ್ಥಳಾವಕಾಶವನ್ನು ನಿಖರವಾಗಿ ಬಳಸಿಕೊಳ್ಳಬಹುದು. ಮರಮಟ್ಟುಗಳ ಬಳಕೆಯಲ್ಲಿ ಆಗಬಹುದಾದ ನಷ್ಟವನ್ನೂ ಇದು ಕಡಿಮೆ ಮಾಡುತ್ತದೆ.
 
ಜೀವನಶೈಲಿ ಗಮನಿಸಿಕೊಳ್ಳಿ
ನಿಮ್ಮ ಜೀವನ ಶೈಲಿಗೆ ತಕ್ಕಂತೆ ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಕಪಾಟಿನಲ್ಲಿ ಆಭರಣಗಳು, ಸೌಂದರ್ಯವರ್ಧಕಗಳು ಸೇರಿದಂತೆ ಇತರೆ ವಸ್ತುಗಳನ್ನು ಇರಿಸಲು ಮೊದಲೇ ಸ್ಥಳ ನಿಗದಿಪಡಿಸಿಕೊಳ್ಳಿ. ಕಪಾಟಿನಲ್ಲಿ ನೀವು ಇರಿಸುವ ಸಾಮಗ್ರಿಗಳ ಅಳತೆ ಹಾಗೂ ಎತ್ತರವನ್ನು ಕಪಾಟು ವಿನ್ಯಾಸದ ಸಂದರ್ಭದಲ್ಲಿ ಗಮನಿಸಿಕೊಳ್ಳಿ. ಬಟ್ಟೆಗಳನ್ನು ಸಮರ್ಪಕವಾಗಿ  ಇಡಲು ಸರಳುಗಳ ಬಳಕೆ ಒಳಿತು.
 
ಅಳತೆ– ಆಕಾರ
ಮನೆಗೆ ಅಳವಡಿಸುವ ಕಪಾಟಿನ ಸೌಂದರ್ಯ ನಿಮ್ಮ ಅಗತ್ಯಗಳಿಗೆ ಹೊಂದುವಂತೆ ಪ್ರತಿ ಇಂಚನ್ನು ಬಳಸಿಕೊಳ್ಳಿ. ಕೋಣೆಯಲ್ಲಿರುವ ಸ್ಥಳಕ್ಕೆ ತಕ್ಕಂತೆ ಕಪಾಟಿನ ಬಾಗಿಲುಗಳ ಸಂಖ್ಯೆ, ವಿನ್ಯಾಸಗಳ ಅಳತೆಯನ್ನು ನಿರ್ಧರಿಸಬಹುದು. ಸ್ಥಳವನ್ನು ಒಮ್ಮೆ ಗಮನದಲ್ಲಿರಿಸಿಕೊಂಡರೆ ನಂತರ ಅದಕ್ಕೆ ತಕ್ಕಂತೆ ಕಪಾಟಿನ ವಿನ್ಯಾಸದ ಬಗ್ಗೆ ಯೋಚಿಸಬಹುದು.
 
ಇತ್ತೀಚಿನ ದಿನಗಳಲ್ಲಿ ಎರಡು, ಮೂರು, ನಾಲ್ಕು ಹಾಗೂ ಐದು ಬಾಗಿಲುಗಳಿರುವ ಕಪಾಟುಗಳು ಹೆಚ್ಚು ಬಳಕೆಯಲ್ಲಿವೆ. ನಿತ್ಯದ ಬಳಕೆ ವಸ್ತುಗಳ ಬಗೆಗೆ, ಅವುಗಳ ಜೋಡಣೆ ಬಗೆಗೆ ಯೋಚಿಸಿದರೆ ಎಷ್ಟು ದೊಡ್ಡದಾದ ಕಪಾಟು ಅವಶ್ಯ ಎಂದು ತಿಳಿದು ಬರುತ್ತದೆ.
 
ವಿವಿಧ ಮಾದರಿಯ ಬಾಗಿಲುಗಳು
ಬಾಗಿಲುಗಳ ಆಯ್ಕೆ ಅವರವರ ವೈಯಕ್ತಿಕ ಆಸಕ್ತಿಗೆ ಬಿಟ್ಟ ವಿಷಯ. ಮನೆ ಚಿಕ್ಕದಾಗಿದ್ದು, ಕಪಾಟುಗಳ ಬಾಗಿಲು ತೆರೆಯಲು ಸ್ಥಳಾವಕಾಶ ಕಡಿಮೆ ಇದ್ದಲ್ಲಿ  ಸರಿಸುವ  (ಸ್ಲೈಡಿಂಗ್‌) ಬಾಗಿಲುಗಳನ್ನು ಬಳಸಬಹುದು. ಒಂದು ಕಪಾಟಿಗೆ ಹೆಚ್ಚೆಂದರೆ 3 ಸರಿಸುವ ಬಾಗಿಲುಗಳನ್ನು ಮಾತ್ರ ಇಡಲು ಸಾಧ್ಯ. ಸರಿಸುವ ಬಾಗಿಲುಗಳು ನಿಮಗೆ 2 ಮೀಟರ್‌ ಸ್ಥಳಾವಕಾಶವನ್ನು ಉಳಿಸಿಕೊಡುತ್ತದೆ.
 
ಉದ್ದವಿದ್ದಷ್ಟೂ ಒಳ್ಳೆಯದು
ಋತುಮಾನಕ್ಕೆ ತಕ್ಕ ಉಡುಪುಗಳು ನಿಮ್ಮ ಬಳಿ ಇದ್ದರೆ, ಹೆಚ್ಚು ಬೆಲೆ ಬಾಳುವ ಹಾಗೂ ಅಪರೂಪಕ್ಕೆ ಬಳಸುವಂತಹ ಉಡುಪುಗಳಿದ್ದರೆ ಅವುಗಳಿಗಾಗಿ ಉದ್ದ ಮಾದರಿಯ ಕಪಾಟು ರಚಿಸಿಕೊಳ್ಳಬಹುದು. ಅಗಲ ವಿನ್ಯಾಸದ ಕಪಾಟುಗಳಿಗಿಂತ ಉದ್ದ ಮಾದರಿಯ ಕಪಾಟು ಸ್ಥಳಾವಕಾಶ ಸದುಪಯೋಗಕ್ಕೆ ಒದಗಿ ಬರುತ್ತವೆ. 
 
ಇದಕ್ಕಾಗಿಯೇ ಪ್ರತ್ಯೇಕ ಬಾಗಿಲುಗಳು ಇರುವಂತೆ ಎಚ್ಚರವಹಿಸಿ. ಇದರಿಂದ ಯಾವುದೇ ಅಡೆತಡೆಗಳಿಲ್ಲದೇ  ಉಡುಪನ್ನು ಬೇಕಾದ ಸಮಯದಲ್ಲಿ ತೆಗೆಯಬಹುದು.
 
ಕಪಾಟು ಮತ್ತು ವಿಭಾಗಗಳು
ಕಪಾಟಿನ ಯೋಜನೆ ರೂಪಿಸುವಾಗ ನಿಮ್ಮ ಬಳಿ ಇರುವ ಬಟ್ಟೆಗಳು ಹಾಗೂ ಮುಂದಿನ ದಿನಗಳಲ್ಲಿ ಸಂಗ್ರಹಕ್ಕೆ ಎಷ್ಟು ಸೇರಬಹುದು ಎಂಬ ಅಂದಾಜೂ ಇರಲಿ. 
 
ಇದರಿಂದ ಕಪಾಟಿನಲ್ಲಿ ಮಾಡಬಹುದಾದ ವಿಭಾಗಗಳನ್ನು ಸುಲಭವಾಗಿ ನಿರ್ಧರಿಸಬಹುದು. ಉದಾಹರಣೆಗೆ ಸೀರೆ, ಸೂಟ್‌, ಶರ್ಟ್‌ಗಳನ್ನು ಮಡಚಿಡಬಹುದು. ಹ್ಯಾಂಗರ್‌ಗಳನ್ನು ಬಳಸುವುದರಿಂದ ಹೆಚ್ಚಿನ ಸ್ಥಳಾವಕಾಶ ಬೇಕಾಗುತ್ತದೆ. ಶೂ, ಚಪ್ಪಲಿಗಳನ್ನು ಸಹ ಕಪಾಟಿನ ಒಳಗೆ ಇಡಬಹುದು. ಟವೆಲ್‌ಗಳು, ಐರನ್‌ ಆಗಿರದ ಬಟ್ಟೆಗಳನ್ನು ಸಹ ಅಡಗಿಸಿಡಬಹುದು.
 
ಬಣ್ಣವೂ ಮುಖ್ಯ
ಕಪಾಟು ಹಾಗೂ ಕನ್ನಡಿಗೆ  ಸಾಧ್ಯವಾದಷ್ಟೂ ದಂತದ ಬಣ್ಣ, ಪುದೀನಾ ಹಸಿರು. ಬೂದು ಬಣ್ಣವನ್ನು ಬಳಸುವುದು ಒಳಿತು.
 
ನಿಮ್ಮ ಕೊಠಡಿಗೆ ಹೊಸ ರೂಪ ನೀಡುವಂತಹ ಪ್ರಸ್ತುತ ಬಳಕೆಯಲ್ಲಿರುವ ಬಣ್ಣಗಳನ್ನು ಆಯ್ಕೆ ಮಾಡಿ. ಬೆಡ್‌ ರೂಂ ಚಿಕ್ಕದಾಗಿದ್ದರೆ ತಿಳಿ ಬಣ್ಣವನ್ನು ಬಳಸಿ ಇದರಿಂದ ಕೊಠಡಿ ದೊಡ್ಡದಾಗಿರುವಂತೆ ಭಾಸವಾಗುತ್ತದೆ.  ಗಾಢ ಬಣ್ಣದ ಆಯ್ಕೆ ನಿಮ್ಮದಾಗಿದ್ದರೆ ಗಾಜು ಅಥವಾ ಫ್ರೋಸ್ಟೆಡ್ ಗಾಜಿನ ಬಳಕೆಯು ಸಹ ಉತ್ತಮ ಆಯ್ಕೆ ಆಗಬಲ್ಲದು.
 
ಕಪಾಟಿಗೆ ಯಾವುದೇ ಬಣ್ಣಗಳನ್ನು ಆಯ್ಕೆ ಮಾಡಿದ್ದರೂ ಅದನ್ನು ಹೇಗೆ ನಿರ್ವಹಿಸುತ್ತೀರಿ ಎಂಬುದು ಮುಖ್ಯ. ನಿಯಮಿತವಾಗಿ ಕಪಾಟಿನ ಬಾಗಿಲುಗಳನ್ನು ಸ್ವಚ್ಛಗೊಳಿಸುವುದು ಸಾಧ್ಯ ಎಂದಾದಲ್ಲಿ ಕನ್ನಡಿ ಉಳ್ಳ ಬಾಗಿಲು ಆಯ್ಕೆ ಮಾಡಿಕೊಳ್ಳಬಹುದು. ಇದರಿಂದ ಕಪಾಟು ಆಕರ್ಷಕವಾಗಿ ಕಾಣುತ್ತವೆ.
ಕಪಾಟಿಗೆ ಕನ್ನಡಿಗಳಿರುವ ಬಾಗಿಲು ಬಳಸುವುದರಿಂದ ಮಲಗುವ ಕೋಣೆಯು ಇರುವುದಕ್ಕಿಂತಲೂ ದುಪ್ಪಟ್ಟು ದೊಡ್ಡದಾಗಿರುವಂತೆ ಭಾಸವಾಗುತ್ತದೆ.
 
ಕಪಾಟು ಕೇವಲ ಉಪಯೋಗಕರವಾದುದಲ್ಲದೇ, ಅದು ನಿಮ್ಮ ಕೊಠಡಿಯನ್ನು ಸುಂದರವಾಗಿ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಅಲ್ಲದೇ ವೈಯಕ್ತಿಕವಾಗಿ ಅತ್ಯಂತ ಸಂತೋಷಕರ ಅನುಭವ ನೀಡುವಲ್ಲಿ ಕಪಾಟುಗಳು ಪ್ರಮುಖ ಪಾತ್ರ ವಹಿಸುತ್ತವೆ. ಕೆಲವೊಮ್ಮೆ ಕ್ರಿಯಾತ್ಮಕ ದೃಷ್ಟಿಕೋನದಿಂದ ಸೂಕ್ಷ್ಮವಾದ ವಿಚಾರಗಳನ್ನು ನಿರ್ಲಕ್ಷಿಸುವುದುಂಟು. ಇದು ತಪ್ಪು. ಉತ್ತಮ ಯೋಜನೆಗಳಿಂದ ರೂಪುಗೊಂಡ ಕಪಾಟುಗಳು ಸುಂದರವಾಗಿ ಕಾಣುವುದಲ್ಲದೆ, ದೀರ್ಘಕಾಲ ಬಾಳಿಕೆಯೂ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.