ADVERTISEMENT

ಗೃಹಸಾಲ, ಬಡ್ಡಿ ಭಾರಕ್ಕೆ ಪರಿಹಾರ

ಕೆ.ಎಸ್.ಗಿರೀಶ್
Published 15 ಏಪ್ರಿಲ್ 2014, 19:30 IST
Last Updated 15 ಏಪ್ರಿಲ್ 2014, 19:30 IST

ಮನೆಯ ಮೇಲೊಂದು ಮನೆಯ ಮಾಡಿ...
ಆರ್ಥಿಕ ಲೆಕ್ಕಾಚಾರಗಳು ಬುಡಮೇಲಾದಾಗ...
ಸಾಲ ಶೂಲದ ರಕ್ಷಾ ಕವಚ...
ನಮ್ಮದೇ ಪುಟ್ಟ ಮನೆ....

‘ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು’... ಇದು ಹಿರಿಯರು ಬಹಳ ಹಿಂದಿನ ಕಾಲದಿಂದಲೂ ಸುಮ್ಮನೇ ಆಡುತ್ತಾ ಬಂದ ಗಾದೆ ಮಾತಲ್ಲ. ಅನುಭವದ ಪಾತಳಿಯಿದ ಒಡಮೂಡಿದ್ದು.

ಮನೆ ಕಟ್ಟಿ ಪೂರ್ಣಗೊಳಿಸುವ ಕಷ್ಟ ಅನುಭವಿಸಿದರವರಿಗೇ ಗೊತ್ತು. ಮನೆ ಕಟ್ಟುವ ಮುನ್ನ ಎಷ್ಟೆಲ್ಲಾ ಲೆಕ್ಕಾಚಾರ ಹಾಕಿಟ್ಟುಕೊಂಡಿದ್ದರೂ ಮನೆ ಕಾಮಗಾರಿ ಪೂರ್ಣಗೊಂಡ ಗೃಹಪ್ರವೇಶ ಮಾಡುವ ವೇಳೆಗೆ ಒಟ್ಟು ಖರ್ಚು ನೋಡಿದರೆ ಈ ಮೊದಲು ಏನು ಅಂದಾಜು ಮಾಡಿರುತ್ತೇವೆಯೋ ಅದರ ಗಡಿಯನ್ನು ದಾಟಿ ಬಹಳ ಮುಂದೆ ಸಾಗಿಬಿಟ್ಟಿರುತ್ತದೆ. ‘ತಾನೊಂದು ಬಗೆದರೆ ದೈವವೊಂದು ಬಗೆಯಿತು’ ಎಂಬಂತೆ ಕೈಯಲ್ಲಿರುವ ಹಣವೆಲ್ಲಾ ಮುಗಿದು ಸಾಲಕ್ಕೂ ಬಹಳಷ್ಟು ಸಲ ಕೈಚಾಚಬೇಕಾಗಿ ಬರುತ್ತದೆ.

ಸದ್ಯ, ಸರ್ಕಾರಿ ಸ್ವಾಮ್ಯದ ಬ್ಯಾಂಕಿನಲ್ಲಿ ಗೃಹಸಾಲ ಕೈಗೆಟುಕುವ (ಸುಮಾರು ಶೇ 10ರಿಂದ ಶೇ 11ರಷ್ಟು) ಬಡ್ಡಿದರದಲ್ಲಿ ಸಿಗುತ್ತದೆಯಾದರೂ ಆ ಗೃಹ ಸಾಲವನ್ನು ಪಡೆಯಲು ಮುಂದಾದಾಗಲೇ ಅದರ ಕಷ್ಟಗಳು ಅರ್ಥವಾಗುವುದು. ಕೆಲವೊಮ್ಮೆ ಬ್ಯಾಂಕಿನವರು ಕೇಳುವ ದಾಖಲೆಗಳನ್ನು ಒದಗಿಸುವಷ್ಟರಲ್ಲಿ, ಅವರ ವಿಧಿಸುವ ನಿಯಮ, ಷರತ್ತುಗಳನ್ನು ಪಾಲಿಸಲು ದುಸ್ತರವಾಗುತ್ತದೆ.
ಅದು ಹೇಗೋ ನಿಯಮಗಳನ್ನು ಪಾಲಿಸಿದರೂ ಸಾಲ ಮಂಜೂರು ಆಗುವುದು ನಿಧಾನವಾಗಬಹುದು. ಅಥವಾ ಕೈಯಲ್ಲಿರುವ ದುಡ್ಡೇ ಸಾಕಾಗುತ್ತದೆ ಎಂದುಕೊಂಡು ಮನೆ ಕಟ್ಟಲು ತೊಡಗಿದರೆ ಒಂದೊಂದೇ ಒಂದೊಂದೇ ಗೋಡೆಗಳು ನಿರ್ಮಾಣವಾಗುತ್ತಿದ್ದಂತೆ ಕೈಯಲ್ಲಿರುವ ಹಣ ಖಾಲಿಯಾಗುತ್ತಾ ಹೋಗುತ್ತದೆ. ತ್ವರಿತವಾಗಿ ಮನೆ ಕೆಲಸ ಮುಗಿಸಬೇಕು. ಬ್ಯಾಂಕಿನ ಸಾಲಕ್ಕೆ ಕಾಯುತ್ತಾ ಕೂತರೆ ಅರ್ಧದಲ್ಲೇ ನಿಂತುಹೋದ ಮನೆ ಕೆಲಸ ಕಂಡು ಜನ ಗೇಲಿ ಮಾಡಿಯಾರು ಎಂಬ ಕಳವಳ. ಮರ್ಯಾದೆಗಂಜಿ ಸ್ನೇಹಿತರ ಬಳಿಯೋ, ಫೈನಾನ್ಸ್‌ನವರ ಬಳಿಯೋ ಹೆಚ್ಚಿನ ಬಡ್ಡಿದರಕ್ಕೆ ಸಾಲ ಮಾಡಿದರಂತೂ ಮುಗಿದೇ ಹೋಯಿತು.

‘ಸಾಲವನು ಕೊಂಬಾಗ ಹಾಲೋಗರುಂಡಂತೆ, ಸಾಲಿಗರು ಬಂದು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ’ ಎಂಬ ವಚನದಂತೆಯೇ ಪರಿತಾಪಪಡಬೇಕಾಗುತ್ತದೆ. ಮನೆ ಕಟ್ಟಿದ ಮೇಲೆ ಅಂತೂ ಇಂತೂ ಗೃಹಪ್ರವೇಶ ಮಾಡಿ ಮನೆಯಲ್ಲಿ ತಳವೂರಿದ ಮೇಲಂತೂ ಆರಂಭವಾಗುತ್ತದೆ ಸಾಲ ಕೊಟ್ಟವರ ಕರೆಯ ರಿಂಗಣಗಳು. 

ಖಾಸಗಿ ವ್ಯಕ್ತಿ, ಸಂಸ್ಥೆಗಳ ಬಳಿಯ ಸಾಲವಾಗಿದ್ದರೆ ಪ್ರತಿ ತಿಂಗಳೂ ಶೇ 3 ಅಥವಾ 4ರ ಬಡ್ಡಿದರದಲ್ಲಿ ಬಡ್ಡಿ ಕಟ್ಟುವಾಗ ಆಗುವ ಸಂಕಟ ಅಷ್ಟಿಷ್ಟಲ್ಲ. ‘ಬಡ್ಡಿಮಕ್ಕಳು ಬಡ್ಡಿಯನ್ನು ಬ್ಯಾಂಕಿನ ದರಕ್ಕೆ ಇಳಿಸಬಾರದಾ’ ಎಂದು ಬೈದುಕೊಳ್ಳುತ್ತಲೇ ಬಡ್ಡಿ ತೆರಬೇಕಾಗುತ್ತದೆ.

ಮನೆ ಕಟ್ಟಿ ಮುಗಿಸಿದ ಮೇಲೆ ಮಾಸಿಕ ಆರ್ಥಿಕ ಸಾಮರ್ಥ್ಯದ ಚೌಕಟ್ಟನ್ನೂ ಮೀರಿ ಖರ್ಚು ಹನುಮಂತನ ಬಾಲದ ಹಾಗೆ ಬೆಳೆಯುತ್ತಾ ಇರುತ್ತದೆ. ಆಗ ಬಡ್ಡಿಗೂ ಹಣ ಹೊಂದಿಸಲಾಗದೆ, ಎರಡು ಮೂರು ತಿಂಗಳು ಬಡ್ಡಿಯನ್ನು ಬಾಕಿ ಉಳಿಸಿಕೊಂಡು, ಅದನ್ನು ತೀರಿಸಲು ಮತ್ತೆ ಇನ್ನೊಬ್ಬರ ಬಳಿ ಹೊಸ ಸಾಲಕ್ಕೆ ಕೈಚಾಚುವಾಗಿನ ಪರಿಸ್ಥಿತಿಯನ್ನು ನೆನೆದರೆ, ‘ವೈರಿಗಳಿಗೂ ಇಂತಹ ಪರಿಸ್ಥಿತಿ ಬಾರದಿರಲಿ’ ಎಂದೆನಿಸದೇ ಇರದು.

ಮತ್ತೆ ಕೆಲವು ಸಲ ಗೃಹ ಸಾಲ ಪಡೆಯಲಾಗದೇ ಇರುವವರು ಚಿನ್ನಾಭರಣಗಳನ್ನು ಗಿರವಿ ಇಡುತ್ತಾರೆ. ಬಂಧು ಬಳಗದವರ ಮದುವೆ ಹತ್ತಿರವಾಗುತ್ತಿದ್ದಂತೆ ಆಭರಣವನ್ನು ಗಿರವಿಯಿಂದ ಬಿಡಿಸಿಕೊಂಡು ತರುವಂತೆ ಮನೆಯಲ್ಲಿ ಹೆಂಗಸರ ಒತ್ತಾಯ ಹೆಚ್ಚುತ್ತದೆ. ಅತ್ತ ಬಿಡಿಸಿಕೊಂಡೂ ಬರಲಾಗದೇ, ಇತ್ತ ಮನೆಯವರ ಒತ್ತಡವನ್ನೂ ತಾಳಲಾರದೇ ಮಾನಸಿಕ ಒತ್ತಡಕ್ಕೆ ಒಳಗಾಗಿ ಒದ್ದಾಡಬೇಕಾಗಿ ಬರುತ್ತದೆ. ಕಡೆಗೆ ಅನಿವಾರ್ಯವಾಗಿ ದುಬಾರಿ ಬಡ್ಡಿದರದ ಸಾಲಕ್ಕೆ ಮೊರೆ ಹೋಗಬೇಕಾಗುತ್ತದೆ.

ಇಂತಹ ಕಷ್ಟದ ಪರಿಸ್ಥಿತಿಯನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಲು ಸಾಧ್ಯವಿಲ್ಲವೆ? ಹೊಸದಾಗಿ ಮತ್ತೊಂದೆಡೆ ಸಾಲ ಮಾಡುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೇ?

ಖಂಡಿತಾ ಸಾಧ್ಯವಿದೆ. ನಿಮ್ಮ ಮನೆಯ ಅಂಗಳವನ್ನೋ, ತಾರಸಿಯಲ್ಲಿ ಖಾಲಿ ಇರುವ ಜಾಗವನ್ನೋ, ಮನೆಯ ಮುಂಬದಿ ಇರುವ ಒಂದು ಕೊಠಡಿಯನ್ನೋ ಸರಿಯಾಗಿ ಗಮನವಿಟ್ಟು ನೋಡಿದರೆ, ಆಲೋಚನೆಗೆ ಅವಕಾಶ ನೀಡಿದರೆ ಸುಲಭದ ದಾರಿ ಕಣ್ಣಿಗೆ ಗೋಚರವಾಗುತ್ತದೆ. ಪ್ರತಿ ತಿಂಗಳೂ ನಿಯಮಿತ ಆದಾಯ ಬರುವಂತೆ ಮಾಡಿಕೊಳ್ಳಲೂ ಅಲ್ಲಿ ಅವಕಾಶವಿರುತ್ತದೆ.

ಮನೆ ಮುಂದೆ ಅಥವಾ ಮೇಲೆ ಇರುವ ಖಾಲಿ ಜಾಗದಲ್ಲಿ ಒಂದು ಪುಟ್ಟ ಕೊಠಡಿಯನ್ನು ಕಟ್ಟಿ ಬಾಡಿಗೆಗೆ ಕೊಟ್ಟರೆ ಅದರಿಂದ ನಿಶ್ಚಿತವಾಗಿ ಪ್ರತಿ ತಿಂಗಳೂ ವರಮಾನ ಬರುವಂತಾಗುತ್ತದೆ. ಕನಿಷ್ಠ ಖಾಸಗಿ ವ್ಯಕ್ತಿಗಳ ಬಳಿಯ ಸಾಲದ ಬಡ್ಡಿ ಕಟ್ಟಲಾದರೂ ಒದಗುತ್ತದೆ.

ಮನೆಯ ಗೋಡೆ ಮತ್ತು ಕಾಂಪೌಂಡ್‌ ನಡುವೆ ಕನಿಷ್ಠ 3 ಅಥವಾ 4 ಅಡಿಗಳಷ್ಟು ಅಗಲದ ಅಂತರ ಇದ್ದೇ ಇರುತ್ತದೆ. ಸೈಟಿನ ಅಳತೆಗೆ ತಕ್ಕಂತೆ ಈ ಖಾಲಿ ಜಾಗ ಉದ್ದವೂ ಇರುತ್ತದೆ. ಮನೆಯ ಪ್ರವೇಶಕ್ಕೆ ಬೇಕಾಗುವಷ್ಟು ಜಾಗವನ್ನು ಖಾಲಿ ಬಿಟ್ಟುಕೊಂಡು ಉಳಿದ ಜಾಗದಲ್ಲಿ ಚಿಕ್ಕದಾದ ಒಂದೆರಡು ಅಂಗಡಿ ಮಳಿಗೆಗಳನ್ನೋ, ಪುಟ್ಟ ಕೊಠಡಿಯನ್ನೋ ಕಟ್ಟಿ ಬಾಡಿಗೆಗೆ ನೀಡಬಹುದಾಗಿದೆ.

ಸರಿ, ಈ ಕೊಠಡಿ, ಅಂಗಡಿ ಮಳಿಗೆ ಕಟ್ಟಲಾದರೂ ಸಾವಿರಾರು ರೂಪಾಯಿ ಹಣ ಬೇಡವೇ? ಖಂಡಿತಾ ಬೇಕು. ಹಣವಿಲ್ಲದ ನಿರ್ಮಾಣ ಕಾಮಗಾರಿ ನಡೆಸುವುದಾದರೂ ಹೇಗೆ? ಅದಕ್ಕೂ ಸಹ ಒಂದೆರಡು ತಿಂಗಳ ಮಟ್ಟಿಗೆ ಸಾಲ ಮಾಡಲೇಬೇಕು. ಈ ಅಂಗಡಿ ಮಳಿಗೆ ಅಥವಾ ತಾರಸಿ ಮೇಲೆ ಕೊಠಡಿ ಕಟ್ಟಿದ ನಂತರ ಬಾಡಿಗೆದಾರರು ನೀಡುವ ಮುಂಗಡ ಹಣದಿಂದಲೇ ಅದರ ನಿರ್ಮಾಣಕ್ಕಾಗಿ ಮಾಡಿದ ಸಾಲದಲ್ಲಿ ಅರ್ಧದಷ್ಟನ್ನಾದರೂ ತೀರಿಸಬಹುದು.

ಪ್ರತಿ ತಿಂಗಳೂ ಬರುವ ಬಾಡಿಗೆಯಿಂದ ಉಳಿದ ಸಾಲಕ್ಕೆ ಬಡ್ಡಿಯನ್ನು ಹೊಂದಿಸಿಕೊಂಡು ಸಾಲವನ್ನು ಕಂತಿನ ರೂಪದಲ್ಲೂ ತೀರಿಸಬಹುದು. ಸ್ವಲ್ಪ ಕಷ್ಟ ಎನಿಸಿದರೂ ನಿಧಾನವಾಗಿಯಾದರೂ ಆರ್ಥಿಕ ಮುಗ್ಗಟ್ಟಿನಿಂದ ಹೊರಬರಬಹುದು. ಒಂದು ವೇಳೆ, ಮತ್ತೊಂದು ಸಣ್ಣ ಕೋಣೆಯನ್ನು ಅಥವಾ ಮನೆಯನ್ನು ಕಟ್ಟಿಸಲು ಹಣದ ತಾಪತ್ರಯವಾದರೆ, ಮನೆಯಲ್ಲಿ ಈಗಿರುವ ಕೋಣೆಯಲ್ಲಿ ಪೇಯಿಂಗ್ ಗೆಸ್ಟ್‌ಗೆ ಅವಕಾಶ ಮಾಡಿಕೊಟ್ಟು ಹೆಚ್ಚುವರಿ ವರಮಾನ ಗಳಿಕೆಗೆ ದಾರಿ ಮಾಡಿಕೊಳ್ಳಬಹುದು.

ಕೆಲವರು ಮುಂಚಿತವಾಗಿ ಮುಂಬರುವ ತಿಂಗಳುಗಳ ಆರ್ಥಿಕ ಸಂಕಷ್ಟ ಗ್ರಹಿಸಿ ಮನೆಯನ್ನು ಬಾಡಿಗೆಗೆ ಕೊಟ್ಟು ತಾವು ಸದ್ಯ ಇರುವ ಚಿಕ್ಕ ಮನೆಯಲ್ಲೇ ಮುಂದುವರಿಯುತ್ತಾರೆ. ಇದು ಸಹ ಮನೆ ಕಟ್ಟಿದ್ದರಿಂದ ಬಂದಂತಹ ಆರ್ಥಿಕ ವಿಪತ್ತಿನ ಪರಿಹಾರೋಪಾಯ.

ಆದರೆ, ಏನೇ ಮಾಡಿ ಕಾನೂನಿನ ಇತಿಮಿತಿಯಲ್ಲಿ ಮಾಡಿದರೆ ಒಳಿತು. ಮನೆ ಬಾಡಿಗೆಗೆ ಕೊಡುವಾಗಲೂ, ಮನೆ ಮೇಲೆ ಕೋಣೆ ನಿರ್ಮಿಸುವಾಗ ಅಥವಾ ಮನೆ ಮುಂದಿನ ಅಂಗಳದಲ್ಲಿ ಅಂಗಡಿ ಮಳಿಗೆಗಳನ್ನು ನಿರ್ಮಾಣ ಮಾಡುವಾಗ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಯ ಅನುಮತಿ ಪಡೆದು ಅಧಿಕೃತವಾಗಿ ನಿರ್ಮಾಣ ಮಾಡಬೇಕು. ಇಲ್ಲದೇ ಇದ್ದರೆ, ಮುಂದೆ ಭಾರಿ ದಂಡ ತೆರಬೇಕಾಗಿ ಬರಬಹುದು.

ಬಾಡಿಗೆಯಿಂದ ಸಾಲ ಮರು ಪಾವತಿ
‘ಮೊದಲು ಮನೆ ಕಟ್ಟಿದೆವು. ಕೈಯಲ್ಲಿರೋ ದುಡ್ಡೇ ಸಾಕಾಗುತ್ತೆ. ಸಾಲ ಮಾಡೋದೇಕೆ ಅನ್ನೋದು ಮೊದಲಿದ್ದ ಅಂದಾಜು. ಆದರೆ, ಬಂಧುಗಳು, ಗೆಳೆಯರು ಹೇಳಿದ ಸಲಹೆಗಳನ್ನು ಪಾಲಿಸುತ್ತಾ ಮನೆಯ ಸ್ವರೂಪದಲ್ಲಿ ಬದಲಾವಣೆ ಮಾಡುತ್ತಾ ಹೋದಂತೆ ಕಾಮಗಾರಿ ಇನ್ನೂ ಅರ್ಧದಷ್ಟು ಆಗಿರುವಾಗಲೇ ದುಡ್ಡು ಖಾಲಿ. ಆಮೇಲೆ, ಪರಿಚಿತರಿಂದ ಸಾಲ ತಗೊಂಡೋ. ಅದನ್ನ ತೀರಿಸೋಕೆ ಅಂತ ಮನೆಯ ಮೇಲೊಂದು ಕೋಣೆ ಕಟ್ಟಿ ಬಾಡಿಗೆಗೆ ಕೊಟ್ಟಿದ್ದೀವಿ. ತಿಂಗಳಿಗೆ ₨3 ಸಾವಿರ ಬಾಡಿಗೆ ಬರುತ್ತದೆ. ಕಂತಿನ ರೂಪದಲ್ಲಿ ಸಾಲವನ್ನು ತೀರಿಸ್ತಾ ಇದ್ದೀವೆ.
–ಅನುಸೂಯಮ್ಮ, ಅಗ್ರಹಾರ, ಮೈಸೂರು

ಬಾಡಿಗೆ ಮನೆಯಲ್ಲಿಯೇ ವಾಸ
ಬ್ಯಾಂಕ್ ಸಾಲ ಮಾಡಿಯೇ ಮನೆ ತಗೊಂಡೆವು. ಆದರೆ, ಸಾಲದ ಬಡ್ಡಿ, ಕಂತು ಕಟ್ಟೋದಕ್ಕೆ ತಿಂಗಳ ಸಂಬಳ ಸಾಕಾಗ್ತಾ ಇರಲಿಲ್ಲ. ಅದಕ್ಕೆ ಅದನ್ನು ಬಾಡಿಗೆಗೆ ಕೊಟ್ಟು ಸಣ್ಣ ಮನೆಯಲ್ಲೇ ಸದ್ಯ ವಾಸವಾಗಿದ್ದೇವೆ. ನಮ್ಮ ಸ್ವಂತ ಮನೆಯ ಬಾಡಿಗೆ ₨8 ಸಾವಿರ ಬರುತ್ತೆ. ಹೇಗೋ ಸಾಲದ ಕಂತು ನಿಧಾನವಾಗಿ ತೀರುತ್ತಾ ಹೋಗುತ್ತಿದೆ.
–ಸೌಜನ್ಯ, ಒಂಟಿಕೊಪ್ಪಲು, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT