ADVERTISEMENT

ಬಜೆಟ್ ಕೈಮೀರಿದರೂ ಅರಳಿದ ಕನಸಿನ ಮನೆ

ತಾರಾ ನಿವಾಸ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2016, 19:30 IST
Last Updated 28 ಏಪ್ರಿಲ್ 2016, 19:30 IST
- ಸುಂದರ್‌ರಾಜ್‌ ಕುಟುಂಬ
- ಸುಂದರ್‌ರಾಜ್‌ ಕುಟುಂಬ   

ಪ್ರಮೀಳಾ ಜೋಶಾಯ್ ಅವರಿಗೆ ಪ್ರಶಸ್ತಿ ಬಂದ ಸಂದರ್ಭದಲ್ಲಿ ಸರ್ಕಾರದಿಂದ ಜೆ.ಪಿ. ನಗರದಲ್ಲಿ ಒಂದು ಸೈಟ್ ಮಂಜೂರಾಯಿತು. ಸೈಟ್ ಅಂತೂ ಸಿಕ್ಕಿತು. ಆದರೆ ಮನೆ ಕಟ್ಟೋಕೆ ಮೂವತ್ತು ಲಕ್ಷ ಬೇಕು ಎಂದರು ಒಬ್ಬರು.

ಅಷ್ಟೊಂದು ಹಣ ತರುವುದು ಎಲ್ಲಿಂದ. ಆಗ ನಮ್ಮ ಕಿವಿಗೆ ತಂಪೆರೆದ ಸುದ್ದಿ, ಸಿ.ಆರ್. ಸಿಂಹ ಅವರ ‘ಗುಹೆ’ಗೆ ತಗುಲಿದ ವೆಚ್ಚ ಬರೀ ಐದು ಲಕ್ಷ ಎಂಬುದು. ಹಾಗಾಗಿ ಅವರ ಮನೆಯ ವಿನ್ಯಾಸ ಮಾಡಿದ ಜಯಸಿಂಹ ಅವರನ್ನೇ ನಮ್ಮ ಮನೆಯನ್ನೂ ವಿನ್ಯಾಸ ಮಾಡಿಕೊಡಲು ಕೇಳಿಕೊಂಡೆವು.

1999ರಲ್ಲಿ ಮನೆ ನಿರ್ಮಾಣ ಕಾರ್ಯ ಆರಂಭವಾಯಿತು. ಅದಕ್ಕೂ ಮೊದಲು ಒಂದು ಮನೆ ಕಟ್ಟಿಸಿದ್ದೆ. ಅಲ್ಲಿ ಹನ್ನೊಂದು ವರ್ಷ ವಾಸವಾಗಿದ್ದೆವು. ಅಲ್ಲಿರುವಾಗಲೇ ಈ ಮನೆ ಕಟ್ಟಿಸಲು ಶುರು ಮಾಡಿದೆವು. ಈ ಮನೆ ಕೆಲಸದ ಸಂದರ್ಭದಲ್ಲಿ ‘ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು’ ಎಂಬ ಮಾತಿನ ಅಕ್ಷರಶಃ ಅನುಭವವಾಯಿತು.

ಮನೆ ಕಟ್ಟಲು ನಮ್ಮ ಬಜೆಟ್ ಹತ್ತು ಲಕ್ಷ ರೂಪಾಯಿಗಳಾಗಿದ್ದವು. ಕಟ್ಟುತ್ತ ಹೋದಂತೆ ಒಂದೊಂದೇ ಕೆಲಸ ಹೆಚ್ಚಾಗುತ್ತಿತ್ತು. ಮನೆ ಕಟ್ಟಿ ಮುಗಿಯುವವರೆಗೆ ಬಜೆಟ್ ಕೈ ಮೀರಿ ಹದಿನೇಳು–ಹದಿನೆಂಟು ಲಕ್ಷಕ್ಕೆ ಬಂದು ನಿಂತಿತು. ಹತ್ತು ಲಕ್ಷಕ್ಕೆ ಬ್ಯಾಂಕ್ ಸಾಲ ಸಿಕ್ಕಿತ್ತು. ಉಳಿದ ಹಣ ಹೊಂದಿಸಲು ಹೈರಾಣಾದೆವು. ಆಗ ನಾನು ಸಿನಿಮಾಗಳಿಗಿಂತ ನಾಟಕಗಳಲ್ಲಿ ಹೆಚ್ಚು ತೊಡಗಿಕೊಂಡಿದ್ದೆ. ನಾಟಕದಿಂದ ಬರುವ ಆದಾಯ ಕೂಡಿಸಿದೆ. ಸಂಬಂಧಿಕರಿಂದ ಹಣ ಪಡೆದೆವು.

ಇನ್ನೊಂದು ದೊಡ್ಡ ಸಮಸ್ಯೆ ಆಗಿದ್ದೆಂದರೆ, 2000ನೇ ಸಾಲಿನಲ್ಲಿ ರಾಜಕುಮಾರ್ ಅವರ ಅಪಹರಣ ಆಯ್ತು. ಆಗ ಬೆಂಗಳೂರಿನಲ್ಲಿ ಆದ ಗಲಾಟೆಗೆ ಹೆದರಿದ ಅನೇಕ ಕಟ್ಟಡ ಕಾರ್ಮಿಕರು ನಗರ ತೊರೆದರು. ಅದರ ಬಿಸಿ ನನ್ನ ಮನೆಗೂ ತಟ್ಟಿತು. ಮೂರು ತಿಂಗಳು ಮನೆ ಕೆಲಸ ನಿಂತುಹೋಯಿತು. ಆಗ ಅರ್ಧಂಬರ್ಧ ಕೆಲಸ ಆಗಿದ್ದ ಮನೆಗೆ ನಾನೇ ಹೋಗಿ ರಾತ್ರಿ ಕಾಯುತ್ತಿದ್ದೆ. ಅಂತೂ 2001ರ ಕೊನೆಯಲ್ಲಿ ಮನೆ ಸಿದ್ಧವಾಯಿತು.

ರಕ್ಷಣೆ, ನೆಮ್ಮದಿ ಮತ್ತು ವಿಳಾಸ
ಮನೆ ಎಂಬುದು ಮನುಷ್ಯನಿಗೆ ಸಕಲವೂ ಆಗಿರುತ್ತದೆ, ಆಗಿರಬೇಕು. ಅಂದರೆ, ಮನೆ ನಮಗೆ ರಕ್ಷಣೆ ಒದಗಿಸುತ್ತದೆ, ಬೆಚ್ಚನೆಯ ಭಾವ ನೀಡುತ್ತದೆ. ಮನೆಯಲ್ಲಿ ಎಲ್ಲವೂ ಸರಿಯಾಗಿದ್ದರೆ ಅಲ್ಲಿ ಸಿಗುವ ಮಾನಸಿಕ ನೆಮ್ಮದಿ ಇನ್ನೆಲ್ಲೂ ಸಿಗಲು ಸಾಧ್ಯವಿಲ್ಲ.

ಹಾಗೇ ಮನೆ ಅಲ್ಲಿರುವವರಿಗೊಂದು ವಿಳಾಸ ನೀಡುತ್ತದೆ. ನೀನು ಇರುವುದೆಲ್ಲಿ ಎಂದು ಯಾರಾದರೂ ಕೇಳಿದರೆ ಇಂಥಲ್ಲಿ ಇದ್ದೇನೆ ಎನ್ನಲು ಮನೆ ನಮಗೊಂದು ಅಡ್ರೆಸ್. ಮನೆ ನಮ್ಮ ಅಸ್ತಿತ್ವದ ಕುರುಹು. ಒಟ್ಟಿನಲ್ಲಿ ಹೊರಗಡೆ ಕೆಲಸಕ್ಕೆ ಹೋದಾಗ ಮನೆಗೆ ಹೋದರೆ ಸಾಕಪ್ಪಾ ಎನ್ನುವಂತೆ ಮನೆಯ ವಾತಾವರಣ ಇರಬೇಕು.

ನಮ್ಮ ಮನೆ ತೆಂಗಿನ ಕಾಯಿಯಂತೆ
ನನಗೆ ಈ ಮಲೆನಾಡಿನಲ್ಲಿ ಇರುವಂಥ ತೊಟ್ಟಿಮನೆಗಳು ಖುಷಿ ಕೊಡುತ್ತವೆ. ಆದರೆ ಬೆಂಗಳೂರಲ್ಲಿ ಅಂಥ ಮನೆ ಕಟ್ಟುವುದು ಸುಲಭವಲ್ಲ. ಮನೆ ನನ್ನ ಪ್ರಕಾರ ತೆಂಗಿನ ಕಾಯಿಯ ಥರ ಇರಬೇಕು. ಅಂದರೆ, ಹೊರಗಿನಿಂದ ಗಟ್ಟಿಯಾಗಿ, ಒಳಗಿನಿಂದ ಮೃದುವಾಗಿ.

ರಕ್ಷಣೆಗಾಗಿ ಮನೆಯ ಹೊರಮೈ ಗಟ್ಟಿಯಾಗಿರಬೇಕು. ಅದೇ ಮನೆಯಲ್ಲಿರುವವರು ಲವಲವಿಕೆಯಿಂದ ಇರಬೇಕು ಎಂದರೆ ಮನೆ ಒಳಗಿನ ವಾತಾವರಣ ತಿಳಿಯಾಗಿ ಇರಬೇಕು. ತಂಪು, ಹಸಿರು, ಬೆಳಕು, ಗಾಳಿ ಎಲ್ಲವೂ ಬೇಕು.

ನಮ್ಮದು ಸಿಂಗಲ್ ಯುನಿಟ್ ಹೌಸ್. ಮಹಡಿಯಿಲ್ಲ. ಮತ್ತೆ ಮಹಡಿ ಕಟ್ಟಿಸುವ ಸಾಧ್ಯತೆಯೂ ಇಲ್ಲ. ಗೋಡೆಗಳಿಗೆ ಸೈಜುಗಲ್ಲು ಬಳಸಿದ್ದೇವೆ. ಒಳಗಡೆಯಿಂದ ಕೆಲವು ಭಾಗಕ್ಕೆ ಮಾತ್ರ ಪ್ಲಾಸ್ಟರ್ ಮಾಡಲಾಗಿದೆ.

ಮನೆಯ ಒಳಗೇ ಚಿಕ್ಕ ಝರಿ ಮಾಡಿದ್ದೆವು. ನಂತರ ಅಲ್ಲಿ ಹುಳುಗಳು ಬರಲು ತೊಡಗಿದ್ದರಿಂದ ಅದನ್ನು ತೆರವುಗೊಳಿಸಬೇಕಾಯಿತು. ಗಾಳಿ ಬೆಳಕು ಬರಲೆಂದು ಗೋಡೆಯಲ್ಲಿ ಸಣ್ಣ ಸಣ್ಣ ಜಾಗ ಬಿಟ್ಟಿದ್ದೆವು.

ಆ ಜಾಗದಿಂದಲೇ ಪಲ್ಲಿ, ಓತಿಕ್ಯಾತಗಳಂಥ ಅನಪೇಕ್ಷಿತ ಅತಿಥಿಗಳ ಆಗಮನವಾಗತೊಡಗಿದಾಗ ಅದಕ್ಕೆ ಜಾಲರಿ ಹಾಕಿದೆವು. ಚಾವಣಿಗೆ ಮೊದಲು ಕೆಂಪು ಬಣ್ಣ ಇತ್ತು. ಆಮೇಲೆ ಬಿಳಿ ಬಣ್ಣ ಚೆನ್ನಾಗಿರುತ್ತದೆ ಎಂದು ಬಿಳಿ ಬಳಿಸಿದೆವು. ನೆಲಕ್ಕೆ ಬಿಳಿಯ ಮಾರ್ಬಲ್ ಹಾಸಲಾಗಿದೆ.

ನಮ್ಮ ಊರು ಕೇರಳದಲ್ಲಿ. ಆ ಊರು ಒಂದು ದ್ವೀಪ. ಹಾಗಾಗಿ ಅಲ್ಲಿ ಊರೆಲ್ಲ ಹಸಿರು. ಹಾಗೆಯೇ ಇಲ್ಲಿಯೂ ನಮ್ಮ ಮನೆ ಸುತ್ತ ಗಿಡ ಮರಗಳಿವೆ. ಮನೆ ಮುಂದೆ ದೊಡ್ಡ ಖಾಲಿ ಜಾಗವಿದೆ.

ಅಲ್ಲಿ ಒಂದು ಮೂವತ್ತು ಅಡಿಗಳ ಮಂಟಪ ಕಟ್ಟಿದ್ದೇವೆ. ಕೆಂಪು ಹೆಂಚಿನ ಚಾವಣಿ ಅದರದ್ದು. ಈ ಹೆಂಚಿನ ಚಾವಣಿಯ ಅಂದವೇ ಬೇರೆ. ಸಂಜೆ ಹೊತ್ತಿಗೆ ಆರಾಮವಾಗಿ ಕೂತು ಮಾತನಾಡಬಹುದು. ಮನೆ ಎದುರು ಏನಿಲ್ಲ ಎಂದರೂ ಆರು ಕಾರುಗಳನ್ನು ನಿಲ್ಲಿಸುವಷ್ಟು ದೊಡ್ಡ ಜಾಗವಿದೆ.

ಈಶಾನ್ಯಕ್ಕೆ ಬಾಗಿಲು. ಒಳಗಡೆ ಬಂದವರು ಹಾಲ್‌ನಲ್ಲಿ ನಿಂತೇ ಇಡೀ ಮನೆ ನೋಡಬಹುದು. ಅಡ್ಡ ಗೋಡೆಗಳಿಲ್ಲ. ಹಾಲ್‌ನಲ್ಲಿ ಕೂತರೆ ನಮಗೆ ನೆಮ್ಮದಿ. ನಮ್ಮ ಕಾಲದ ನಟರೆಲ್ಲ ಈ ಮನೆಗೆ ಬಂದಾಗ ಇಲ್ಲೇ ಒಂದಷ್ಟು ಸಮಯ ಕೂತಿರುತ್ತೇನೆ ಎಂದು ಕೂರುತ್ತಿದ್ದರು.

ಎಲ್ಲರ ಮನೆಯಲ್ಲಿ ಕತ್ತಲಾಗುವ ಸಮಯಕ್ಕಿಂತಲೂ ತಡವಾಗಿ ನಮ್ಮ ಮನೆಯಲ್ಲಿ ಕತ್ತಲಾಗುವುದು. ಬೆಳಿಗ್ಗೆ ಬೇಗ ಬೆಳಕು ಬರುತ್ತದೆ. ಗಾಳಿ ಬೆಳಕು ಅಗಾಧವಾಗಿದೆ. ನಾವು ಹಿಂದೂ–ಕ್ರಿಶ್ಚಿಯನ್ ಎರಡೂ ಧರ್ಮಗಳನ್ನು ಪಾಲಿಸುವುದರಿಂದ ದೇವರ ಮನೆಯಲ್ಲಿ ಕೃಷ್ಣ ಮತ್ತು ಕ್ರಿಸ್ತ ಎರಡೂ ವಿಗ್ರಹಗಳಿವೆ.

ಮನೆಯಲ್ಲೇ ನನ್ನ ಕಚೇರಿಯನ್ನೂ ಮಾಡಿಕೊಂಡಿದ್ದೆ. ನಂತರ ಅದರ ಅವಶ್ಯಕತೆ ಇಲ್ಲ ಎನ್ನಿಸಿತು. ಈಗ ಅದೇ ನಮ್ಮ ಕೋಣೆಯಾಗಿದೆ. ಅಡುಗೆ ಮನೆ ವಿಶಾಲವಾಗಿದೆ. ಖುಲ್ಲಂಖುಲ್ಲ. ಯಾರಿಗಾದರೂ ಅಲ್ಲಿಗೆ ಪ್ರವೇಶವಿದೆ. ಆಗ್ನೇಯಕ್ಕೆ ಅಡುಗೆ ಮನೆ, ನೈರುತ್ಯಕ್ಕೆ ಮಲಗುವ ಕೋಣೆ. ಅಷ್ಟರ ಮಟ್ಟಿಗೆ ವಾಸ್ತುವನ್ನೂ ಪಾಲಿಸಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT