ADVERTISEMENT

‘ಮದರ್‌ ಚರ್ಚ್‌’ ಸೇಂಟ್‌ ಫ್ರಾನ್ಸಿಸ್‌ ಝೆವಿಯರ್‌ ಕೆಥೆಡ್ರಲ್‌

ರೋಹಿಣಿ ಮುಂಡಾಜೆ
Published 22 ಡಿಸೆಂಬರ್ 2016, 19:30 IST
Last Updated 22 ಡಿಸೆಂಬರ್ 2016, 19:30 IST
‘ಮದರ್‌ ಚರ್ಚ್‌’  ಸೇಂಟ್‌ ಫ್ರಾನ್ಸಿಸ್‌ ಝೆವಿಯರ್‌ ಕೆಥೆಡ್ರಲ್‌
‘ಮದರ್‌ ಚರ್ಚ್‌’ ಸೇಂಟ್‌ ಫ್ರಾನ್ಸಿಸ್‌ ಝೆವಿಯರ್‌ ಕೆಥೆಡ್ರಲ್‌   

ಕೋಲ್ಸ್‌ ಪಾರ್ಕ್‌ನಲ್ಲಿರುವ ‘ಸೇಂಟ್‌ ಝೆವಿಯರ್‌ ಕೆಥೆಡ್ರಲ್‌’ಗೆ ಬೆಂಗಳೂರಿನ ಚರ್ಚ್‌ಗಳ ತಾಯಿ ಸ್ಥಾನ. ಈ ಚರ್ಚ್‌ 1851ರಲ್ಲಿ ಸ್ಥಾಪನೆಯಾದದ್ದು. ಅಷ್ಟು ಎತ್ತರದ ಕಟ್ಟಡವನ್ನು ಸೈಜ್‌ಗಲ್ಲಿನಿಂದ ಕಟ್ಟಿದವರ ಕಸಬುದಾರಿಕೆ ಅರೆಕ್ಷಣ ನೋಡುಗನನ್ನು ವಿಸ್ಮಿತನನ್ನಾಗಿಸುತ್ತದೆ. ಈ ಚರ್ಚ್‌ ರೋಮನ್‌ ಕ್ಯಾಥೊಲಿಕ್‌ ವಾಸ್ತುಶೈಲಿಯಲ್ಲಿ ನಿರ್ಮಾಣಗೊಂಡಿದೆ.

ಕಮಾಂಡರ್‌ ಆಗಿದ್ದ, ದಿವಂಗತ, ಕ್ಯಾಪ್ಟನ್‌ ವಾಟ್ಕಿನ್ಸ್‌ ಅವರ ಪತ್ನಿ ಹಾಗೂ ಫ್ರೆಂಚ್‌ ಕೆಥೊಲಿಕ್‌ ಪ್ರಜೆ ಜೂಲಿಮ್‌ ವಾಟ್ಕಿನ್ಸ್‌ ಅವರಿಂದ ಧರ್ಮಗುರು ಚೇವಲಿಯರ್‌ ಅವರು ಈ ನಿವೇಶನವನ್ನು ₹1,000 ಪಾವತಿಸಿ ಖರೀದಿಸಿದರು. ಆಗಿನ ಬಿಷಪರ ನಿಧನಾನಂತರ ಅಂದರೆ 1873ರಲ್ಲಿ ಮೈಸೂರಿನ ಬಿಷಪರಾಗಿ ನೇಮಕಗೊಂಡರು.

ಚರ್ಚ್‌ನ ಮೂಲ ಕಟ್ಟಡ 550 ಚದರ ಅಡಿ ವಿಸ್ತೀರ್ಣದಲ್ಲಿದ್ದ ಕಾರಣ ಜನಸಂಖ್ಯೆ ಹೆಚ್ಚಿದಂತೆ ಸ್ಥಳದ ಅಭಾವ ಎದುರಾಯಿತು. ಆದರೆ ಹೊಸ ಕಟ್ಟಡ ನಿರ್ಮಾಣಕ್ಕೆ ಆರ್ಥಿಕ ಅಡಚಣೆ ಇದ್ದಿದ್ದರಿಂದ ಸಮಸ್ಯೆ ಬಗೆಹರಿಯಲಿಲ್ಲ.

1905ರಲ್ಲಿ ಒಂದು ದಿನ ಇದ್ದಕ್ಕಿದ್ದಂತೆ ಚರ್ಚ್‌ನ ಗೋಪುರದಲ್ಲಿ ನೆಟ್ಟಿದ್ದ ಶಿಲುಬೆ ಬೀಳುತ್ತದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಇದು ದೇವರು ತೋರಿಸಿಕೊಟ್ಟ ಅವಕಾಶ ಎಂದು ಪರಿಭಾವಿಸಿದ ಧರ್ಮಗುರುಗಳು 1911ರಲ್ಲಿ ಶಿಲಾನ್ಯಾಸ ಮಾಡಿದರು. ಅಲ್ಲದೆ ಅವರು ಮನೆ ಮನೆಗೆ ಭಿಕ್ಷಾಪಾತ್ರೆ ಹಿಡಿದುಕೊಂಡು ಹೋಗಿ ಹಣ ಸಂಗ್ರಹ ಮಾಡಿದ್ದು ಈ ಚರ್ಚ್‌ನ ಇತಿಹಾಸದಲ್ಲಿ  ದಾಖಲಾಗಿದೆ. ಧರ್ಮಗುರುಗಳು ಮತ್ತು ಕ್ರೈಸ್ತ ಸಮುದಾಯದ ಪರಿಶ್ರಮ ಅಷ್ಟಿದ್ದರೂ ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದು 21 ವರ್ಷಗಳ ನಂತರ!

ಕೆಥೆಡ್ರಲ್‌ ಗೌರವ
ಸೇಂಟ್‌ ಫ್ರಾನ್ಸಿಸ್‌ ಝೆವಿಯರ್‌  ಚರ್ಚ್‌ 1940ರಲ್ಲಿ ‘ಕೆಥೆಡ್ರಲ್‌’ ಆಗಿ ಆಯ್ಕೆಯಾಯಿತು. ಅದಾಗಿ ಎರಡನೇ ವರ್ಷಕ್ಕೆ ರೆವರೆಂಡ್‌ ಡಾ.ಥಾಮಸ್‌ ಪೋತಕಾಮುರಿ ಅವರು ಬೆಂಗಳೂರಿನ ಬಿಷಪ್‌ ಆಗಿ ನೇಮಕಗೊಂಡರು. ಬೆಂಗಳೂರಿಗೆ ನೇಮಕಗೊಂಡ ಮೊದಲ ಭಾರತೀಯ ಬಿಷಪ್‌ ಎಂಬುದು ಅವರ ಹೆಗ್ಗಳಿಕೆಯಾಗಿತ್ತು.

ಅವರ ಆಡಳಿತಾವಧಿಯಲ್ಲಿಯೇ ಈ ಕೆಥೆಡ್ರಲ್‌ಗೆ ಈಗಿನ ರೂಪ ಸಿಕ್ಕಿದ್ದು. ಗ್ರಾನೈಟ್‌ ಕಲ್ಲುಗಳ ಗೋಡೆ, ಭಾರಿ ಗಾತ್ರದ ಕಮಾನುಗಳು ಈ ಕಟ್ಟಡದ ಒಳ ಮತ್ತು ಹೊರಾಂಗಣ ವಿನ್ಯಾಸಕ್ಕೆ ವಿಶಿಷ್ಟ ಛಾಪು ನೀಡಿದವು.

ಅತ್ಯಾಕರ್ಷಕ ವಿನ್ಯಾಸ
ಕೆಥೆಡ್ರಲ್‌ನ ಒಳಗೆ ನಿಂತು ಇಡೀ ಸಭಾಂಗಣವನ್ನು ಕಣ್ತುಂಬಿಕೊಳ್ಳುವುದೇ ಒಂದು ಆನಂದ. ಗ್ರಾನೈಟ್‌ ಕಲ್ಲುಗಳಿಂದ ಕಮಾನುಗಳನ್ನು ಹೇಗೆ ನಿರ್ಮಿಸಿರಬಹುದು ಎಂಬುದು ನಿಜಕ್ಕೂ ಅಚ್ಚರಿಯ ಸಂಗತಿಯೇ.

ಹೊರಗಿನಿಂದ ನೋಡುವಾಗ ಕೆಥೆಡ್ರಲ್‌ ಕಟ್ಟಡದಲ್ಲಿ ಗಮನ ಸೆಳೆಯುವ ಮೂರು ಬೃಹತ್‌ ಗೋಪುರಗಳಿಗೆ ನೀಲಿ ಮತ್ತು ಬಿಳಿ ಬಣ್ಣ ಬಳಿದಿರುವುದು ಆಕಾಶ ಮತ್ತು ಮೋಡಗಳಿಗೆ ಸೆಡ್ಡು ಹೊಡೆಯುವಂತೆ ಭಾಸವಾಗುತ್ತದೆ. ಇದೇ ಗೋಪುರಗಳ ಒಳಭಾಗವನ್ನು ನೋಡಬೇಕಾದರೆ ಆಕಾಶದ ನೆತ್ತಿಯನ್ನು ನೋಡಿದಂತೆ ತಲೆಯನ್ನು ಬೆನ್ನಿನತ್ತ ಚಾಚಬೇಕು.

ಕ್ರಿಸ್‌ಮಸ್‌ ಹಬ್ಬದ ಹಿನ್ನೆಲೆಯಲ್ಲಿ ಪ್ರವೇಶದ್ವಾರದಿಂದ ಆರ್ಚ್‌ ಬಿಷಪರ ಪೀಠದವರೆಗೂ ಮಿನಿಯೇಚರ್‌ ದೀಪಗಳ ಅಲಂಕಾರ ಮಾಡಲಾಗುತ್ತದೆ. ಆಗ ಇಡೀ ಸಭಾಂಗಣದ ಸೌಂದರ್ಯ ದುಪ್ಪಟ್ಟಾಗುತ್ತದೆ.

‘ಐದು ಸಾವಿರ ಮಂದಿ ಆರಾಮವಾಗಿ ಪ್ರಾರ್ಥನೆ ಮಾಡಬಹುದು. ಗುಡ್‌ ಫ್ರೈಡೇ, ಈಸ್ಟರ್, ಕ್ರಿಸ್‌ಮಸ್‌ನಂತಹ ವಿಶೇಷ ದಿನಗಳಲ್ಲಿ ಈಗಲೂ 3,500ರಿಂದ 4,000 ಮಂದಿ ಸೇರುತ್ತಾರೆ. ಹೊಸದಾಗಿ ಬಂದವರು ಮತ್ತು ಈ ಆಸುಪಾಸಿನ ಪ್ರದೇಶಕ್ಕೆ ಬಂದ ಪ್ರವಾಸಿಗಳು ಈ ಚರ್ಚ್‌ ನೋಡಲೆಂದೇ  ಭೇಟಿ ಕೊಡುವುದುಂಟು. ಇಲ್ಲಿಗೆ ಬೇರೆ ಬೇರೆ ಧರ್ಮದವರೂ ಪ್ರಾರ್ಥನೆಗೆ ಬರುವುದು ವಿಶೇಷ’ ಎಂದು ಹೇಳುತ್ತಾರೆ, ಈಗಿನ ಧರ್ಮಗುರು ಅಂತೋಣಿಸ್ವಾಮಿ. 

ಕಳೆಗುಂದಿದ ರಾತ್ರಿಯ ಪ್ರಾರ್ಥನೆ
‘ಜಗತ್ತು ಡಿ. 25ರಂದು ಕ್ರಿಸ್‌ಮಸ್‌ ಹಬ್ಬ ಆಚರಿಸಿದರೂ ಹಬ್ಬದ ಪ್ರಮುಖ ಪ್ರಾರ್ಥನೆ ನಡೆಯುವುದು ಡಿ. 24ರ ಮಧ್ಯರಾತ್ರಿ. ಇದು ಸಾವಿರಾರು ವರ್ಷಗಳಿಂದಲೂ ನಡೆದುಬಂದ ಆಚರಣೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಮಧ್ಯರಾತ್ರಿಯ ಪ್ರಾರ್ಥನೆಗೆ ಬರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ’ ಎಂದು ಆರ್ಚ್‌ ಬಿಷಪ್‌ ಬರ್ನಾಡ್‌ ಮೊರಾಸ್‌ ಅವರು ಕಳೆದ ವಾರ ವಿಷಾದದಿಂದ ಹೇಳಿಕೊಂಡಿದ್ದರು.

‘ರಾತ್ರಿ ವೇಳೆ ವಾಹನಗಳಲ್ಲಿ ಸಂಚರಿಸುವಾಗಲೂ ದರೋಡೆ, ಲೂಟಿ, ಕಳ್ಳತನಗಳು ನಡೆಯುವುದು ಒಂದು ಕಾರಣವಾದರೆ ವಿಶೇಷವಾಗಿ ಹೆಣ್ಣುಮಕ್ಕಳ ರಕ್ಷಣೆ ಇನ್ನೊಂದು ಕಾರಣ. ಹೀಗಾಗಿ ರಾತ್ರಿಯ ಪ್ರಾರ್ಥನೆಯ ಬದಲು 25ರಂದೇ ಬೆಳಗಿನ ಜಾವದ ಪ್ರಾರ್ಥನೆಗೆ  ಭಕ್ತರು ಬರುವುದೇ ಹೆಚ್ಚು’ ಎಂದು ಸೇಂಟ್‌ ಕ್ಸೇವಿಯರ್‌ ಕೆಥೆಡ್ರಲ್‌ನ ಧರ್ಮಗುರು ಅಂತೋಣಿಸ್ವಾಮಿ ಅವರೂ ಬಿಷಪರ ಮಾತನ್ನು ಪುಷ್ಟೀಕರಿಸುತ್ತಾರೆ.

‘ನಮ್ಮ ಈ ಕೆಥೆಡ್ರಲ್‌ ‘ಮದರ್‌ ಚರ್ಚ್‌’ ಆಗಿರುವ ಮತ್ತು ಆರ್ಚ್‌ ಬಿಷಪ್‌ ಅವರು ಪೂಜೆ ನಡೆಸುವ ಚರ್ಚ್‌ ನಡೆಸುವ ಕಾರಣ ಹಬ್ಬದ ದಿನ ಆರ್ಚ್‌ ಬಿಷಪ್‌ ಬರ್ನಾಡ್‌ ಮೊರಾಸ್‌ ಅವರು ಕನ್ನಡ ಭಾಷೆಯ ಪ್ರಾರ್ಥನೆ ವೇಳೆ ಹಾಜರಿರುತ್ತಾರೆ. ಉಳಿದಂತೆ ಇಂಗ್ಲಿಷ್‌, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಪ್ರಾರ್ಥನೆಗಳು ನಡೆಯುತ್ತವೆ’ ಎಂದು ಅಂತೋಣಿಸ್ವಾಮಿ ವಿವರಿಸುತ್ತಾರೆ.

***
* ಶೈಲಿ – ರೋಮನ್‌ ಕ್ಯಾಥೊಲಿಕ್‌

* 1851ರಲ್ಲಿ ಸ್ಥಾಪನೆ

ADVERTISEMENT

* ಮದರ್‌ ಚರ್ಚ್‌ ಎಂದೇ ಜನಪ್ರಿಯ

* ಗ್ರಾನೈಟ್‌ ಕಲ್ಲುಗಳ ಗೋಡೆ

* ಗ್ರಾನೈಟ್‌ ಕಲ್ಲುಗಳಿಂದ ನಿರ್ಮಾಣವಾದ ಕಮಾನು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.