ADVERTISEMENT

ಮನೆಗಾಗಿ ವರುಷವಿಡೀ ವರ್ಷಧಾರೆ

ಪ.ರಾಮಕೃಷ್ಣ
Published 24 ಜೂನ್ 2014, 19:30 IST
Last Updated 24 ಜೂನ್ 2014, 19:30 IST

ಒಂದು ವರ್ಷಕ್ಕೆ ಋತುಗಳು ಆರು. ಅದರಲ್ಲಿ ಪ್ರತಿ ಋತುವಿಗೂ ಎರಡು ತಿಂಗಳ ಅವಧಿ. ಹಾಗೆಯೇ ವರ್ಷ ಋತುವಿನದೂ ಎರಡೇ ತಿಂಗಳ ಅವಧಿ. ಆದರೆ, ಈ ಅಲ್ಪ ಅವಧಿಯ ವರ್ಷಧಾರೆಯನ್ನು ಭದ್ರವಾಗಿ ಹಿಡಿದಿಟ್ಟುಕೊಂಡ ಇಡೀ ವರುಷಕ್ಕಾಗುವಷ್ಟು ‘ನೀರು ಸಂಪಾದಿಸಿಕೊಂಡರೆ’ ಹೇಗೆ?

ಬಹಳ ಉತ್ತಮ ಆಲೋಚನೆ. ಆದರೆ, ಅಲ್ಪಾವಧಿಯಲ್ಲಿನ ಮಳೆ ನೀರನ್ನು ಇಡೀ ವರ್ಷಕ್ಕಾಗುವಷ್ಟು ಅಂದರೆ, ಸಾವಿರಾರು ಅಲ್ಲ ಲಕ್ಷಗಟ್ಟಲೆ ಲೀಟರ್‌ಗಳ ಲೆಕ್ಕದಲ್ಲಿ ಸಂಗ್ರಹಿಸಿಡುವುದು, ಅದೂ ವಾಸದ ಮನೆಯಲ್ಲಿ ಸಾಧ್ಯವೇ?

ಅಚ್ಚರಿ, ಅನುಮಾನ ಬೇಡ. ಇದನ್ನೂ ಸಾಧ್ಯವಾಗಿಸಿ ತೋರಿಸಿದ್ದಾರೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಪದವಿಪೂರ್ವ ವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾಗಿರುವ ಎನ್.ಎಂ.ಜೋಸೆಫ್.

ಛಲಬಿಡದ ಭಗೀರತನಂತೆ ವರುಷವಿಡೀ ವರ್ಷಧಾರೆಯ ಬೆನ್ನುಹತ್ತಿ  ಶ್ರಮಿಸಿ ಮನೆಯ ಮಾಡಿನ ತುಂಬಾ ಮಳೆಯ ನೀರನ್ನೇ ಹಿಡಿದಿಟ್ಟಿರುವ ಜೋಸೆಫ್‌, ಈಗ ಜಲ ಸಂಪನ್ಮೂಲದ ಮಿತವಾದ ಬಳಕೆಯ ವಿಷಯವಾಗಿ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಗಳಿಕೆಗೂ ಸಿದ್ಧರಾಗಿದ್ದಾರೆ.

ಸುಲಭಕ್ಕೆ ಲಭ್ಯವಾಗದ ನೀರು ಮತ್ತು ವಿದ್ಯುಚ್ಛಕ್ತಿಯನ್ನು ಆದಷ್ಟೂ ಮಿತವಾಗಿ ಬಳಸಬೇಕು, ಉಳಿಸಬೇಕು ಎನ್ನುವ ಮಹತ್ವದ ಉದ್ದೇಶ ಅವರದು. ಅದೇ ದಿಕ್ಕಿನಲ್ಲಿ ವರ್ಷಗಳಿಂದ ಆಲೋಚಿಸುತ್ತಾ ಶ್ರಮಿಸಿರುವ ಅವರು, ಈಗ ತಾನೇ ಗೃಹಪ್ರವೇಶ ಮಾಡಿದ ಹೊಸ ಮನೆಯಲ್ಲಿ ಮಳೆನೀರಿನ ಸಂಗ್ರಹಕ್ಕೆ ಅಪರೂಪದ ಮಾದರಿಯನ್ನೇ ಅನುಷ್ಠಾನಗೊಳಿಸಿದ್ದಾರೆ.

ಮನೆಯ ತಾರಸಿ ಮೇಲೆ ಬಿದ್ದ ಒಂದು ಹನಿ ನೀರು ಕೂಡ ಕಡಲಿನತ್ತ ಸಾಗದೆ ಮನೆಯ ಸಕಲ ಕೆಲಸ ಕಾರ್ಯಗಳಿಗೂ ಬಳಕೆಯಾಗಬೇಕು ಎಂಬ ಸದುದ್ದೇಶದಿಂದ ನೀರು ಉಳಿಸುವ ಹಲವು ಪ್ರಯೋಗಳನ್ನು ನಡೆಸುತ್ತಿದ್ದಾರೆ. ಅವರ ಪ್ರಯೋಗ, ಪ್ರಯತ್ನಗಳು ಈಗ ಅವರ ಹೊಸ ಮನೆಯಲ್ಲಿ ಫಲ ನೀಡಲಾರಂಭಿಸಿವೆ.

ನೀರು ಸಂಗ್ರಹಕ್ಕಾಗಿಯೇ ಜೋಸೆಫ್ ತಮ್ಮ ಮನೆಯ ವಿಶಾಲವಾದ ತಾರಸಿಯಲ್ಲಿ 2400 ಚದರ ಅಡಿ ವಿಸ್ತಾರದ ವೇದಿಕೆ ನಿರ್ಮಿಸಿದ್ದಾರೆ. ಅದಕ್ಕೆ ಉತ್ತಮ ದರ್ಜೆಯ ತಗಡಿನ ಹೊದಿಕೆಯಿದೆ. ಇದರ ಮೇಲೆ ಬಿದ್ದ ಮಳೆ ನೀರು ಕೊಳವೆಯೊಳಗೆ ಸೇರುತ್ತದೆ. ಅಲ್ಲಿ ಅಳವಡಿಸಿರುವ ಮೈಕ್ರೋಫಿಲ್ಟರ್‌ಗಳ ಮೂಲಕ ಸಾಗಿ ಬಂದು ಪರಿಶುದ್ಧ ಜಲವಾಗಿ ಪ್ಲಾಸ್ಟಿಕ್‌ ಟ್ಯಾಂಕ್‌ಗಳಲ್ಲಿ ಸಂಗ್ರಹವಾಗುತ್ತದೆ.
ತಾರಸಿಯ ಮೇಲಿನ ಈ ವೇದಿಕೆಯಲ್ಲಿ ಬಿಳಿ ಪ್ಲಾಸ್ಟಿಕ್‌ ಉತ್ತಮ ಗುಣಮಟ್ಟದ 11 ಟ್ಯಾಂಕ್‌ಗಳಿವೆ. ಅದರೊಳಗೆ ಸೇರುವ ಶುದ್ಧ ನೀರಿನ ಒಟ್ಟಾರೆ ಪ್ರಮಾಣ 22 ಸಾವಿರ ಲೀಟರ್!

ಜೂನ್ ತಿಂಗಳ ಬಿರು ಮಳೆ ಆರಂಭವಾದ ನಾಲ್ಕೇ ದಿನಗಳಲ್ಲಿ ಇವು ಭರ್ತಿಯಾಗುತ್ತವೆ. ಈ ಪ್ಲಾಸ್ಟಿಕ್‌ ಟ್ಯಾಂಕ್‌್‌ಗಳು ಭರ್ತಿಯಾದ ಮೇಲೆ ಹೆಚ್ಚಾಗುವ ನೀರು ಮತ್ತೆ ಕೊಳವೆಗಳ ಮುಖಾಂತರ ಹರಿದು ಮನೆಯಂಗಳದಲ್ಲಿ ನೆಲದಡಿ ಅಳವಡಿಸಿರುವ ತೊಟ್ಟಿಯೊಳಗೆ ತುಂಬಿಕೊಳ್ಳುತ್ತದೆ.

ಈ ತೊಟ್ಟಿಯ ಸಾಮರ್ಥ್ಯವಂತೂ 50 ಸಾವಿರ ಲೀಟರ್‌ಗಳಷ್ಟು ದೊಡ್ಡ ಪ್ರಮಾಣದ್ದಾಗಿದೆ. ಕಲ್ಲುಗಳಿಂದ ಕಟ್ಟಿದ ತೊಟ್ಟಿಯ ಗೋಡೆಗೆ ಎರಡು ಪದರ ಗಾರೆಯನ್ನೂ ಹಚ್ಚಿಸಿದ್ದಾರೆ.  ನೀರು ಯಾವುದೇ ಕಾರಣಕ್ಕೂ ತೊಟ್ಟಿಯಿಂದ ಸೋರಿಹೋಗದಿರಲಿ ಎಂಬ ಎಚ್ಚರಿಕೆಯ ಕ್ರಮವಿದು.

ಈ ತೊಟ್ಟಿಯಲ್ಲಿ ಸಂಗ್ರಹವಾದ ಬಳಿಕವೂ ಹೆಚ್ಚಾಗಿ ಉಳಿಯುವ ನೀರು ಸಮೀಪದಲ್ಲೇ ಇರುವ ತೆರೆದ ಬಾವಿಗೆ ಹರಿದುಹೋಗುತ್ತದೆ. ಅಲ್ಲೂ ತುಂಬಿದ ಮೇಲೆ 360 ಅಡಿ ಆಳವಿರುವ ಕೊಳವೆ ಬಾವಿಗೆ ಹರಿಯಲು ಸೂಕ್ತ ವ್ಯವಸ್ಥೆ ಮಾಡಿದ್ದಾರೆ ಜೋಸೆಫ್.

ಒಟ್ಟಾರೆಯಾಗಿ ತಮ್ಮ ಮನೆಯ ಮಾಡಿನದ ಮೇಲೆ ಬಿದ್ದ ನೀರು ವ್ಯರ್ಥವಾಗಿ ಹರಿದುಹೋಗುವುದಕ್ಕೆ ಜೋಸೆಫ್‌ ಅವಕಾಶ ನೀಡಿಲ್ಲ. ಒಂದಲ್ಲ ಎರಡಲ್ಲ ಎಂದು ನಾಲ್ಕೈದು ಬಗೆಯಲ್ಲಿ ವರ್ಷಧಾರೆಯನ್ನು ಭದ್ರವಾಗಿ ಹಿಡಿದಿಟ್ಟಿದ್ದಾರೆ.

ಜೋಸೆಫ್ ಅವರ ಮನೆಯಲ್ಲಿ ಮೂರು ಪಂಪ್‌ಸೆಟ್‌ಗಳು ಇದ್ದರೂ ಮಳೆ ನೀರು ಸಂಗ್ರಹದ ಈ ವ್ಯಾಪಕ ವ್ಯವಸ್ಥೆಯ ಫಲವಾಗಿ ಮೋಟರ್‌ಪಂಪ್‌ಗಳನ್ನು ಚಾಲೂ ಮಾಡುವ ಅಗತ್ಯ ಹೆಚ್ಚಾಗಿ ಬರುವುದಿಲ್ಲ.

ಮಳೆಗಾಲದಲ್ಲಿ ಅಂದರೆ, ಜೂನ್‌ನಲ್ಲಿ ಆರಂಭಗೊಂಡು ನವಂಬರ್‌ವರೆಗೂ ಸುರಿಯುವ ವರ್ಷಧಾರೆಯ ಕಾರಣದಿಂದಾಗಿ ಮನೆಯ ತಾರಸಿ ಮೇಲಿನ 11 ಪ್ಲಾಸ್ಟಿಕ್‌ ಟ್ಯಾಂಕ್‌ಗಳು ಮನೆಯ ಬಳಕೆಗೆ ಬೇಕಾದ ನೀರನ್ನು ಪೂರೈಸುತ್ತಲೇ ಇರುತ್ತವೆ. ಡಿಸೆಂಬರ್‌ ನಂತರ ನೆಲದಡಿ ನಿರ್ಮಿಸಿರುವ ಸಿಮೆಂಟ್‌ ತೊಟ್ಟಿಯ ನೀರನ್ನು ಬಳಸಿಕೊಳ್ಳಲಾಗುತ್ತದೆ. ಈ ತೊಟ್ಟಿಯಿಂದ ನೀರನ್ನು ತಾರಸಿಯಲ್ಲಿನ ಟ್ಯಾಂಕ್‌ಗಳಿಗೆ ಸಾಗಿಸಲು ಮಾತ್ರವೇ ಪಂಪ್ ಬಳಸಬೇಕಾಗುತ್ತದೆ.

ನೆಲದಡಿಯ ತೊಟ್ಟಿಯಲ್ಲಿರುವ ಮಳೆ ನೀರಿನ ಸಂಗ್ರಹ ಮಾರ್ಚ್‌ವರೆಗೂ ಬರುತ್ತದೆ. ಆ ಹೊತ್ತಿಗೆ ಒಂದೆರಡು ಬಾರಿ ಸಣ್ಣಗೆ ಮಳೆ ಬಂದರೂ ಸಾಕು ಮತ್ತೆ ನೀರು ಸಂಗ್ರಹವಾಗುತ್ತದೆ.  ಏಪ್ರಿಲ್‌ ಮೇ ತಿಂಗಳಲ್ಲಿಯೂ ಮಳೆ ನೀರಿನ ಆಶ್ರಯವೇ ಮುಂದುವರಿಯುತ್ತದೆ. ಕೊಳವೆ ಮತ್ತು ತೆರೆದ ಬಾವಿಯ ನೀರು ಹಾಗೆಯೇ ಉಳಿಯುತ್ತದೆ.

ವಾಸ್ತವವಾಗಿ ಇಲ್ಲಿ ವರ್ಷಗಳ ಹಿಂದೆ ಮನೆ ಕಟ್ಟುವಾಗ ೪೦ ಅಡಿ ಆಳದ ಬಾವಿಯಲ್ಲಿ ತೊಟ್ಟು ನೀರೂ ಇರಲಿಲ್ಲ. ಈಗ ಬಿರು ಬೇಸಿಗೆಯಲ್ಲೂ ತೆರೆದ ಬಾವಿ ಬತ್ತುವುದಿಲ್ಲ. ಅಷ್ಟೇ ಅಲ್ಲ, ಅಕ್ಕಪಕ್ಕದ ಹತ್ತಾರು ಮನೆಗಳ ಬತ್ತುವ ಬಾವಿಗಳೂ ತುಂಬಿಕೊಂಡಿವೆ. ಇದಕ್ಕೆಲ್ಲ ಕಾರಣವಾಗಿರುವುದು ಜೋಸೆಫ್‌ ಅವರ ಮಳೆ ನೀರಿನ ಸಂಗ್ರಹ ಯಜ್ಞ.

ಮಳೆ ನೀರು ಸಂಗ್ರಹಿಸುವ ಮಿತವಾಗಿ ಬಳಸುವ ಈ ಇಡೀ ವ್ಯವಸ್ಥೆಯ ಆಲೋಚನೆ. ಯೋಜನೆ ಎಲ್ಲ ಜೋಸೆಫ್ ಅವರದ್ದೇ ಅಗಿದೆ. ಪ್ಲಂಬಿಂಗ್ ಕೆಲಸದಲ್ಲಿ ಮಧುಸೂದನ್ ಕೈಜೋಡಿಸಿದ್ದಾರೆ.

ಮಳೆ ನೀರು ಸಂಗ್ರಹ ಯೋಜನೆ ಅನುಷ್ಠಾನದಿಂದಾಗಿ ಈ ಮೊದಲು ಬಾವಿಯ ನೀರೆತ್ತಲು ಬಳಸುತ್ತಿದ್ದ ವಿದ್ಯುತ್ ಪ್ರಮಾಣದಲ್ಲಿ ಭಾರಿ ಉಳಿತಾಯವಾಗುತ್ತಿದೆ. ವರ್ಷವಿಡೀ ಮನೆಯ ಎಲ್ಲ ಕೆಲಸಗಳ ಬಳಕೆಗೂ ಬೇಕಾದಷ್ಟು ನೀರು ಲಭಿಸುತ್ತಿದೆ. ಕುಡಿಯಲು, ಅಡುಗೆಗೂ ಇದೇ ನೀರು ಉಪಯೋಗಿಸಲಾಗುತ್ತಿದೆ.

‘ಬ್ಯಾರೆಲ್‌ಗಳ ಬಾಯಿಗೆ ಭದ್ರ ಮುಚ್ಚಳವಿರುವ ಕಾರಣ ದೂಳು, ಹಾವಸೆ, ಹುಳ ಬೀಳುವ ಭೀತಿಯೇ ಇಲ್ಲ.  ತಾರಸಿಯ ವೇದಿಕೆ, ತಗಡಿನ ಹೊದಿಕೆ, ಪ್ಲಾಸ್ಟಿಕ್‌ ಟ್ಯಾಂಕ್‌ಗಳು, ಭೂಗತ ತೊಟ್ಟಿ ಎಂದು ದೊಡ್ಡ ಪ್ರಮಾಣದಲ್ಲಿ ಮಾಡಿದ್ದರೂ ಒಟ್ಟಾರೆಯಾಗಿ ₨7 ಲಕ್ಷ ವೆಚ್ಚವಾಗಿದೆ. ಆದರೆ ಇದನ್ನೇ ಕಡಿಮೆ ವೆಚ್ಚದಲ್ಲೂ ಮಾಡಬಹುದಾಗಿದೆ. ಆಸಕ್ತಿ ಇದ್ದವರಿಗೆ ಸಲಹೆ ನೀಡಲು ಸಿದ್ಧ. ನನ್ನಲ್ಲಿರುವ ಪ್ಲಾಸ್ಟಿಕ್‌ ಟ್ಯಾಂಕ್‌ಗಳು  ದೀರ್ಘ ಬಾಳಿಕೆಯ ಭರವಸೆ ಇರುವ ಂತಹವು, ಅತ್ಯುತ್ತಮ ಗುಣಮಟ್ಟದವು. ಹಾಗಾಗಿಯೇ ಈ ಟ್ಯಾಂಕ್‌ಗಳಿಗೇ ₨1.25 ಲಕ್ಷ ಖರ್ಚಾಗಿದೆ. ಅಗತ್ಯ, ಅನುಕೂಲಕ್ಕೆ ತಕ್ಕಂತೆ ಈ ಬೃಹತ್‌ ಮಳೆ ನೀರಿನ ಸಂಗ್ರಹ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ವೆಚ್ಚವನ್ನೂ ಕಡಿಮೆ ಮಾಡಬಹುದು’ ಎನ್ನುತ್ತಾರೆ ಜೋಸೆಫ್‌ (ಮೊ: 9480093347).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.