ADVERTISEMENT

ಮನೆಯೊಳಕ್ಕೂ ಬಂತುಬಿಟ್ಟಿತೇ ಈ ಈಜುಕೊಳ!

ಪ.ರಾಮಕೃಷ್ಣ
Published 21 ಅಕ್ಟೋಬರ್ 2014, 19:30 IST
Last Updated 21 ಅಕ್ಟೋಬರ್ 2014, 19:30 IST
ಮನೆಯೊಳಕ್ಕೂ ಬಂತುಬಿಟ್ಟಿತೇ ಈ ಈಜುಕೊಳ!
ಮನೆಯೊಳಕ್ಕೂ ಬಂತುಬಿಟ್ಟಿತೇ ಈ ಈಜುಕೊಳ!   

ದೇಶ ವಿದೇಶದ ಜೀವನಶೈಲಿಯಲ್ಲಿ ಈಜುಕೊಳ ಎಂಬುದು ಮನೆಯೊಳಕ್ಕೇ ಬಂದಿದೆ. ಇತ್ತೀಚೆಗೆ ಈಜುಕೊಳದ ರಚನೆಯಲ್ಲೂ ಹೊಸ ಪ್ರಯೋಗಗಳು ನಡೆದಿವೆ. ಕಾಂಕ್ರಿಟ್‌ನಿಂದಷ್ಟೆ ಈಜುಕೊಳ ನಿರ್ಮಿಸುತ್ತಿಲ್ಲ, ಲೋಹ, ಪ್ಲಾಸ್ಟಿಕ್‌, ಫೈಬರ್‌ ಮೊದಲಾದ ಸಾಮಗ್ರಿ ಬಳಸಿ ವಿಶಿಷ್ಟ ವಿನ್ಯಾಸ, ಆಕಾರದಲ್ಲಿ ಈಜುಕೊಳಗಳನ್ನು ನಿರ್ಮಿಸಿಕೊಳ್ಳಲಾಗುತ್ತಿದೆ.

ಬದುಕಿನ ಬಹುಕಾಲದ ಕನಸು ಹೊಸ ಮನೆಯ ನಿರ್ಮಾಣ. ಇದು ನನಸಾಗಲು ಪಡುವ ಶ್ರಮ ಅಷ್ಟಿಷ್ಟಲ್ಲ. ಹೊಸಮನೆಯಲ್ಲಿ ಏನೇನೆಲ್ಲ ಇರಬೇಕು ಎಂದು ಯೋಚಿಸುತ್ತ ಹೊರಟರೆ ಕೊನೆ ಮೊದಲಿಲ್ಲದೆ ಅದರ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಹಳ್ಳಿಯ ವಾತಾವರಣದಿಂದ ದೂರವಿರುವವರಿಗೆ ಆಗ ಮೊದಲ ಆದ್ಯತೆಯಾಗುವುದು ಈಜುಕೊಳ ಅಥವಾ ಸ್ವಿಮಿಂಗ್‌ಪೂಲ್. ಬೇಸಗೆಯ ಧಗೆಗೆ ಮೈಯ ಕೊಳೆ, ಮನಸ್ಸಿನ ಆಯಾಸ ಕಳೆಯಲು ತಂಪು ನೀರಿನಲ್ಲಿ ಮುಳುಗೇಳುವುದು, ಕೈಕಾಲು ಬಡಿದು ಈಜುವುದು ಇನ್ನಿಲ್ಲದ ಸಂತೋಷ ನೀಡಿ ಮಾನಸಿಕ ಒತ್ತಡವನ್ನು ನೀಗುತ್ತದೆ.

ಈಜುಕೊಳದ ರಚನೆಯಲ್ಲಿ ಆಧುನಿಕ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಕೇವಲ ಕಾಂಕ್ರೀಟಿನಿಂದ ಮಾತ್ರ ಅದನ್ನು ನಿರ್ಮಿಸುತ್ತಿಲ್ಲ. ಲೋಹ, ಪ್ಲಾಸ್ಟಿಕ್, ಫೈಬರ್ ಇತ್ಯಾದಿಗಳಿಂದಲೂ ವಿಶಿಷ್ಟ ವಿನ್ಯಾಸದ ಕೊಳಗಳನ್ನು ಸೃಷ್ಟಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕಾಂಕ್ರೀಟಿಗಿಂತಲೂ ಫೈಬರ್‌ಗ್ಲಾಸ್ ಕೊಳಗಳು ಹೆಚ್ಚು ಪ್ರಾಶಸ್ತ್ಯ ಪಡೆಯುತ್ತಿವೆ. ಹಣದ ದೃಷ್ಟಿಯಿಂದ ಇದು ತುಂಬ ಅಗ್ಗವೂ ಹೌದು. ಇದರ ಗರಿಷ್ಠ ಉದ್ದ ಹದಿನೆಂಟು ಅಡಿಗಳಾಗಿದ್ದರೂ ಜನಪ್ರಿಯತೆಯಲ್ಲಿ ಇದೇ ಮುಂಚೂಣಿಯಲ್ಲಿದೆ.

ಇಟಾಲಿಯನ್, ಫ್ರೆಂಚ್, ಜಪಾನಿ ಮತ್ತು ಮೆಡಿಟರೇನಿಯನ್ ಶೈಲಿಯ ಕೊಳಗಳು ಜಗತ್ತಿನಾದ್ಯಂತ ಜನಾಕರ್ಷಣೆಯಲ್ಲಿ ಮುಂದಿವೆ. ಮನೆಯ ಹೊರಗೆ ಮತ್ತು ಮನೆಯೊಳಗಿನ ಒಳಾಂಗಣ ಈಜುಕೊಳಗಳಲ್ಲೂ ನೂರಾರು ವಿನ್ಯಾಸಗಳು ಕಣ್ಣಳತೆಗೆ ಸಿಗುತ್ತವೆ.
ವಿಶ್ರಾಂತಿ ಮತ್ತು ಮನರಂಜನೆ ಎಂಬ ಎರಡು ಗುರಿಗಳನ್ನಿರಿಸಿಕೊಂಡು ವರ್ತಮಾನದ ಈಜುಕೊಳಗಳ ವಿನ್ಯಾಸ ರೂಪಿಸಲಾಗುತ್ತದೆ. ಹೊರಾಂಗಣ ಕೊಳವನ್ನು ರಚಿಸುವಾಗ ಸೂರ್ಯನ ಬಿಸಿಲು ಅತಿ ಕಡಮೆ ಬೀಳುವ ಜಾಗವನ್ನೇ ಆಯ್ದುಕೊಳ್ಳಲಾಗುತ್ತದೆ.

ಕೊಳ ಸದಾಕಾಲ ತಂಪಾಗಿರಲು ಸ್ಥಳದ ಆಯ್ಕೆ ಮುಖ್ಯವಾಗುತ್ತದೆ. ಅದರಲ್ಲಿಯೂ ಮನಸ್ಸಿಗೆ ಹಿತ ನೀಡುವ ಆಕಾರಗಳೂ ಮುಖ್ಯವಾಗುತ್ತವೆ. ಬಾಗಿದಂತಿರುವ, ಮೂತ್ರಪಿಂಡದ ಆಕೃತಿಯಲ್ಲಿರುವ ಕೊಳಗಳ ವಿನ್ಯಾಸದ ಜೊತೆಗೆ ವಯೊಲಿನ್ ಆಕೃತಿಯೂ ಸ್ಥಾನ ಪಡೆಯುತ್ತಿದೆ. ನೈಸರ್ಗಿಕ ಬಂಡೆಗಳನ್ನು ಉಪಯೋಗಿಸಿ ತಯಾರಾಗುವ ಈಜುಕೊಳದಲ್ಲಿ ಮೇಲಿನಿಂದ ಜಲಪಾತದಂತೆ ನೀರು ಧುಮುಕುವ ವ್ಯವಸ್ಥೆಯೂ ಬಳಕೆಗೆ ಬಂದಿದೆ.

ಯಾವುದರಿಂದ ಈಜುಕೊಳದ ನಿರ್ಮಾಣ ಮಾಡಬೇಕು ಎಂಬುದೂ ಚಿಂತನೆಯ ವಿಷಯ. ಸಿರಾಮಿಕ್ ಟೈಲ್ಸ್, ಬೆಣಚುಕಲ್ಲು, ಗಾಜಿನ ಟೈಲ್ಸ್, ಅಮೃತಶಿಲೆ ಹೀಗೆ ತಳಭಾಗಕ್ಕೆ, ಕೊಳದ ಗೋಡೆಗಳಿಗೆ ಯಾವುದನ್ನು ಮುಚ್ಚುವುದು ಎಂಬುದರಲ್ಲೂ ಆಳವಾಗಿ ಯೋಚಿಸಬೇಕಾಗುತ್ತದೆ. ದೀರ್ಘಕಾಲ ಬಾಳಿಕೆಯ ದೃಷ್ಟಿಯಿಂದ ಗಾಜಿನ ಟೈಲ್ಸ್ ಹೆಚ್ಚು ಸಹಕಾರಿಯಾದರೂ ಈಜುವಾಗ ಜಾರುವ ಅಪಾಯವನ್ನು ಮರೆಯುವಂತಿಲ್ಲ. ಇನ್ನು ಕಣ್ಣಿಗೊಪ್ಪುವಂತಹ ಬಣ್ಣಗಳನ್ನು ಬಳಸಲಾಗುತ್ತದೆ. ಆದರೆ ಅನೇಕ ಬಣ್ಣಗಳು ಶಾಖವನ್ನು ಹೀರಿಕೊಳ್ಳುವುದಿಲ್ಲ. ತಂಪು ನೀಡದ ಕೊಳದಿಂದ ಮನಸ್ಸು ಅರಳುವುದಿಲ್ಲ. ಶಾಖವನ್ನು ಹೊರದೂಡಲು ಬಣ್ಣಗಳ ಆಯ್ಕೆಯೂ ಮುಖ್ಯವಾಗುತ್ತದೆ. ತಂಪನ್ನು ಕಾದಿರಿಸುವಲ್ಲಿ ಕೊಳಕ್ಕೆ ರಬ್ಬರ್ ಕೋಟಿಂಗ್ ನೀಡುವುದರಿಂದ ಅನುಕೂಲವಿದೆ.

ADVERTISEMENT

ಈಜುಕೊಳಗಳ ದಂಡೆಯಲ್ಲಿ ಆಯಾಸ ಪರಿಹಾರಕ್ಕಾಗಿ ಆರಾಮವಾದ ಆಸನಗಳನ್ನು ಇರಿಸುವ ಕಲ್ಪನೆ ನನಸಾಗುತ್ತಿದೆ. ಕೊಳದ ಪರಿಸರದಲ್ಲಿ ವರ್ಣರಂಜಿತ ಹೂಗಳನ್ನು ಬಿಡುವ ಹೂಗಿಡ ಬಳ್ಳಿಗಳು, ಹಾರುವ ದುಂಬಿಗಳು, ಬಣ್ಣದ ಚಿಟ್ಟೆಗಳು, ಜೇನ್ನೊಣಗಳು ಇವೆಲ್ಲ ನಿಸರ್ಗದ ಸುಂದರ ನೋಟದ ಮೂಲಕ ಮನ ತಣಿಸುತ್ತವೆ.
ಈಜಿದ ಬಳಿಕ ದೂರದರ್ಶನ ವೀಕ್ಷಣೆಗೂ ಅವಕಾಶ ಕಲ್ಪಿಸಲಾಗುತ್ತದೆ. ಬಣ್ಣದ ದೀಪಗಳು, ಮೊಂಬತ್ತಿಗಳು, ಲಾಟೀನುಗಳು ಈಜುಕೊಳದ ಸುಖ ಹೆಚ್ಚಿಸಲು ಸಹಕರಿಸುತ್ತಿವೆ. ಮನೆಯನ್ನು ವೃತ್ತಾಕಾರವಾಗಿ ಸುತ್ತುವರೆಯುವ ಕೊಳವನ್ನೂ ಸೃಜಿಸಬಹುದು.

ಬೇಸಗೆಯಲ್ಲಿ ತಂಪುನೀರಿನ ಸ್ನಾನ. ಜಪಾನೀ ತಂತ್ರಜ್ಞಾನದಲ್ಲಿ ಚಳಿಗಾಲದಲ್ಲಿ ಸೋಲಾರ್ ಪ್ಯಾನೆಲ್ ಮೂಲಕ ಬಿಸಿನೀರು ಹರಿದು ಬರುವ ಕೊಳಗಳು ಜನಪ್ರಿಯವಾಗುತ್ತಿವೆ. ಈಜುಕೊಳ ನಿರ್ಮಾಣ ಮಾತ್ರ ಮನೆ ಮಂದಿಯ ಅಪೇಕ್ಷೆಯ ಬಗೆಯಲ್ಲಿ ಇದ್ದರೆ ಒಳಿತು. ಈಜು ಬರದೆ ಮೋಜಿಗಾಗಿ ನೀರಿನಲ್ಲಿ ಮಲಗಲು ಬಯಸುವವರಿಗೆ ಕಡಿಮೆ ಆಳದ ಕೊಳಗಳಿದ್ದರೆ ಅನುಕೂಲ. ಈಜಲು ಸ್ಥಳದ ಅವಕಾಶವಿರುವ ವಿನ್ಯಾಸಗಳನ್ನು ಆರಿಸಿಕೊಳ್ಳುವುದು ಮುಖ್ಯವಾಗಿರುವಂತೆ ನಿರ್ವಹಣೆಯ ಸಮಸ್ಯೆ, ಶಾಖವು ಹಾಗೆಯೇ ಉಳಿಯುವುದು ಮುಂತಾದ ಕುಂದು ಕೊರತೆಗಳನ್ನೂ ಗಮನಿಸಬೇಕು. ಒಂದು ಚದರಡಿಗೆ ಎರಡು ಸಾವಿರ ರೂ.ಗಳಿಂದ ಆರಂಭವಾಗುವ ನಿರ್ಮಾಣ ವೆಚ್ಚ ನಮ್ಮ ಅಭಿರುಚಿ ಮತ್ತು ಆದ್ಯತೆಗೆ ಹೊಂದಿಕೊಂಡು ಬೆಳೆಯುತ್ತ ಹೋಗುತ್ತದೆ. ಕಿಸೆಗೊಪ್ಪುವ ಕೊಳದ ನಿರ್ಮಾಣವೂ ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.