ADVERTISEMENT

ಮನೆಯ ಭಿತ್ತಿಗೆ ಕಲಾಕೃತಿ...

ರೋಹಿಣಿ ಮುಂಡಾಜೆ
Published 9 ನವೆಂಬರ್ 2017, 19:30 IST
Last Updated 9 ನವೆಂಬರ್ 2017, 19:30 IST
ಮನೆಯ ಭಿತ್ತಿಗೆ ಕಲಾಕೃತಿ...
ಮನೆಯ ಭಿತ್ತಿಗೆ ಕಲಾಕೃತಿ...   

ಮನೆ, ಮನೆ ಮಂದಿಯ ಅಭಿರುಚಿಯ ಅಭಿವ್ಯಕ್ತಪಡಿಸುವ ಕ್ಯಾನ್ವಾಸು. ಬಿಳಿಯ ಕ್ಯಾನ್ವಾಸಿನಲ್ಲಿ ಕಲ್ಪನೆಯನ್ನು, ಕನಸನ್ನು ಪಡಿಮೂಡಿಸುವ ಕಲಾವಿದ, ಪ್ರತಿಯೊಬ್ಬ ನೋಡುಗನಲ್ಲೂ ಒಳನೋಟ ಸ್ಫುರಿಸುವಂತೆ ಮಾಡುತ್ತಾನೆ. ಹಾಗೇ, ಮನೆಯ ಬಾಹ್ಯ ಮತ್ತು ಒಳ ನೋಟಗಳನ್ನು ಸದ್ದಿಲ್ಲದೇ ಕಟ್ಟಿಕೊಡುವಲ್ಲಿ ಒಳಾಂಗಣ ವಿನ್ಯಾಸ ಬಹುಮುಖ್ಯ ಪಾತ್ರ ವಹಿಸುತ್ತದೆ.

ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಬಳಸಿ ಒಳಾಂಗಣ ವಿನ್ಯಾಸ ಮಾಡುವುದು, ಬಗೆ ಬಗೆಯ ಚಮತ್ಕಾರಿ ನೋಟ ನೀಡುವ ವಿದ್ಯುದ್ದೀಪಗಳನ್ನು ಅಳವಡಿಸುವುದು ಸಾಮಾನ್ಯ. ವಿಶಾಲವಾದ ಗೋಡೆಗಳನ್ನು ಉದ್ದುದ್ದ ಅಥವಾ ಅಡ್ಡಡ್ಡಕ್ಕೆ ಖಾಲಿ ಬಿಡುವುದು, ಅಲ್ಲೊಂದು ಇಲ್ಲೊಂದು ಫೋಟೊ ಕ್ಯಾಲೆಂಡರ್‌ ತೂಗಿಹಾಕುವ ಬುದ್ಧಿವಂತಿಕೆಯನ್ನು ಪ್ರದರ್ಶಿಸುವವರೂ ಇದ್ದಾರೆ. ಆ ಗೋಡೆಗೊಂದು, ಈ ಗೋಡೆಗೊಂದು ಬಣ್ಣ ಬಳಿಯುವುದು, ಮುಖಾಮುಖಿ ಗೋಡೆಗಳಿಗೆ ಒಂದೇ ಬಣ್ಣವನ್ನು ತೆಳು ಮತ್ತು ಗಾಢ ಬಣ್ಣ ಬಳಿದು ಗಮನ ಸೆಳೆಯುವಂತೆ ಮಾಡುವುದೂ ಸಾಮಾನ್ಯ.

ಆದರೆ ನಿಮ್ಮ ಅಭಿರುಚಿಯನ್ನು ಪ್ರಸ್ತುತಪಡಿಸಲು ಅಥವಾ ಪ್ರದರ್ಶಿಸಲು ಕಲಾಕೃತಿಗಳ ಬಳಕೆ ಶ್ರೇಷ್ಠವಾದ ಆಯ್ಕೆಯಾದೀತು. ಯಾವ ಗೋಡೆಗೆ, ಯಾವ ಕೋಣೆಗೆ ಎಂತಹ ಕಲಾಕೃತಿ ಎಂಬುದನ್ನು ಜಾಣತನ ಮತ್ತು ಒಂದಿಷ್ಟು ಸೌಂದರ್ಯಪ್ರಜ್ಞೆಯಿಂದ ನಿರ್ಧರಿಸಿಬಿಟ್ಟರೆ ಮನೆಗೆ ಬಂದ ಅತಿಥಿ ಮೆಚ್ಚುಗೆಯ ನೋಟ ಬೀರುವುದು ಖಚಿತ.

ADVERTISEMENT

ಸೀಲಿಂಗ್‌ಗೆ ಪಿಒಪಿಯಿಂದ ಸರಳವಾಗಿ ವಿನ್ಯಾಸ ಮಾಡಿ ಗೋಡೆಗಳನ್ನು ಕಲಾಕೃತಿಗಿಳಿಂದ ಅಲಂಕರಿಸಿದರೆ ಮನೆಯ ಒಳಾಂಗಣದ ನೋಟ ಶ್ರೀಮಂತವಾಗಿರುತ್ತದೆ. ವಿಶೇಷವಾಗಿ, ಇಳಿಸಂಜೆ ಅಥವಾ ಮಬ್ಬುಗತ್ತಲಿನಲ್ಲಿ ಆ ಕಲಾಕೃತಿ ಹೇಗೆ ಕಾಣಿಸುತ್ತದೆ ಎಂಬುದನ್ನು ಮೊದಲೇ ಯೋಚಿಸುವುದು ಸೂಕ್ತ. ಗೋಡೆಗೆ ತಿಳಿ ಬಣ್ಣ ಈಗಾಗಲೇ ಬಳಿದಿದ್ದರೆ ಅಥವಾ ಬಳಿಯುವ ನಿರ್ಧಾರ ಮಾಡಿದ್ದರೆ ವಿರುದ್ಧ ಬಣ್ಣದ ಕಲಾಕೃತಿಯನ್ನು ಆರಿಸಬಹುದು. ಇಲ್ಲವೇ ತಿಳಿ ಬಣ್ಣದ ಕಲಾಕೃತಿಗೆ ಕಪ್ಪು, ಕಾಫಿ, ಹವಳದಂತಹ ಗಾಢ ಬಣ್ಣದ ಚೌಕಟ್ಟು ಹಾಕಬಹುದು.

ಒಂದು ಮಾತು ನೆನಪಿನಲ್ಲಿರಲಿ. ಕಲಾಕೃತಿಗಳನ್ನು ಬಳಸಿದಾಕ್ಷಣ ನಿಮ್ಮ ಅಭಿರುಚಿಗೆ ಅದು ಮಾನದಂಡವಾಗುವುದಿಲ್ಲ. ಕಲಾಕೃತಿಯ ವಸ್ತು ಅಥವಾ ವಿಷಯ ಏನು ಮತ್ತು ವರ್ಣ ಸಂಯೋಜನೆ ಹೇಗಿದೆ ಎಂಬುದೇ ಇಲ್ಲಿ ಮುಖ್ಯ. ಎತ್ತರದ (ಉದ್ದನೆಯ) ಗೋಡೆಗಳಿಗೆ ನಮಗೆ ನಿಲುಕುವಷ್ಟು ಎತ್ತರದಲ್ಲಿ ಚೌಕಾಕಾರದ ಇಲ್ಲವೇ ಹತ್ತು ಅಡಿಗಿಂತಲೂ ಹೆಚ್ಚು ಉದ್ದದ ಕಲಾಕೃತಿಗಳನ್ನು ಬಳಸಿದರೆ ಇಡೀ ಗೋಡೆಗೆ ಎರಡು ಆಯಾಮ ಸಿಗುತ್ತದೆ. ಡ್ಯೂಪ್ಲೆಕ್ಸ್‌ ಮನೆಗಳಲ್ಲಿ ಒಂದೋ ಎರಡೋ ಗೋಡೆಗಳನ್ನು ಹೀಗೆ ಅಲಂಕರಿಸಿದರೆ ಮೇಲಿನ ಸ್ತರಕ್ಕೆ ವಿಶಿಷ್ಟ ನೋಟ ಕಟ್ಟಿಕೊಟ್ಟಂತಾಗುತ್ತದೆ. ನೆಲದಿಂದ 20 ಅಡಿಗಿಂತಲೂ ಹೆಚ್ಚು ಎತ್ತರದ ಗೋಡೆ ಕಟ್ಟಿದ ಸ್ವತಂತ್ರ ಮನೆಗಳಲ್ಲಿ (ಇಂಡಿಪೆಂಡೆಂಟ್‌) ಸಹ ಇಂತಹ ಹಾಲ್‌ ಇಲ್ಲವೇ ಲಿವಿಂಗ್‌ ರೂಂನಲ್ಲಿ ವಿಶಾಲವಾದ ಆಲಂಕಾರಿಕ ವಿದ್ಯುದ್ದೀಪದ ಜತೆಗೆ ಬೃಹತ್‌ ಕ್ಯಾನ್ವಾಸ್‌ಗಳನ್ನು ಅಳವಡಿಸಿದರೆ ಅಪರೂಪದ ಮನೆ ಎನಿಸಿಕೊಳ್ಳುವುದು ಖಂಡಿತ.

ಕಲಾಕೃತಿಗಳು ಎದ್ದುಕಾಣುವಂತೆ ಮಾಡುವುದು ಚೌಕಟ್ಟು. ದಪ್ಪನೆಯ ಅಥವಾ ಸಮಾನಾಂತರ ಅಳತೆ ಇಲ್ಲದ ಚೌಕಟ್ಟು, ಎಂಬೋಸಿಂಗ್‌ ಅಥವಾ ಮ್ಯೂರಲ್‌ನಂತಹ ನೋಟ ನೀಡುವಂತಹ ಚೌಕಟ್ಟುಗಳೂ ಗೋಡೆಗೆ ವಿಭಿನ್ನ ನೋಟ ನೀಡುತ್ತವೆ. ಮನುಷ್ಯ, ಪ್ರಾಣಿ, ಹಕ್ಕಿ, ಬಿಸಿಲು, ಬೆಳದಿಂಗಳು, ಪ್ರತಿಫಲನದ ಸನ್ನಿವೇಶ ಇದ್ದರೆ ಅದು ಹಗಲು ಮತ್ತು ರಾತ್ರಿಯ ಎಲ್ಲಾ ಬೆಳಕಿನಲ್ಲಿ ಎದ್ದುಕಾಣುವಂತೆ ವಿದ್ಯುದ್ದೀಪ ಅಳವಡಿಸಬೇಕು.

ಕೆಂಪು ಕಲ್ಲು ಅಥವಾ ಆವೆಮಣ್ಣಿನ ಇಟ್ಟಿಗೆ, ಸುಟ್ಟ ಇಟ್ಟಿಗೆಯ ಗೋಡೆಗೆ ಚಾಪೆ ಹುಲ್ಲು, ಸೆಣಬಿನ ನಾರು, ಮರದ ಚೌಕಟ್ಟು, ಬಿದಿರು ಬಳಸಿ ಮಾಡಿದ ಕಲಾಕೃತಿ ಇಲ್ಲವೇ ಇವುಗಳ ಚೌಕಟ್ಟು ಇರುವ ಕಲಾಕೃತಿಗಳ ಬಳಕೆ, ಹಸೆ ಚಿತ್ರದಂತಹ ಜಾನಪದೀಯ ಚಿತ್ತಾರಗಳು ಮನೆಯ ಒಳಾಂಗಣಕ್ಕೆ ಸೃಜನಶೀಲತೆಯ ಸ್ಪರ್ಶ ನೀಡುತ್ತವೆ.

ಮನೆಮಂದಿಯೆಲ್ಲಾ ವಿರಾಮದ ವೇಳೆ ಒಟ್ಟಾಗಿ ಕುಳಿತುಕೊಳ್ಳುವ ಯಾವುದೇ ಕೊಠಡಿಯ ಗೋಡೆಗೆ, ಮನಸ್ಸು ಪ್ರಫುಲ್ಲಗೊಳಿಸುವಂತಹ ಯಾವುದೇ ಕಲಾಕೃತಿ ಸೂಕ್ತ. ಮಲಗುವ ಕೋಣೆಗೆ ಶೃಂಗಾರ ರಸ ಸ್ಫುರಿಸುವ, ಕಣ್ಮನ ತಂಪುಗೊಳಿಸುವ ಇಲ್ಲವೇ ಮನಸ್ಸನ್ನು ಪ್ರಶಾಂತಗೊಳಿಸುವಂತಹ ಕಲಾಕೃತಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.