ADVERTISEMENT

ಮಾರ್ಗಸೂಚಿ ದರ: ರಿಯಲ್‌ ಎಸ್ಟೇಟ್‌ ಕಂಪನ

ಪ್ರವೀಣ ಕುಲಕರ್ಣಿ
Published 18 ನವೆಂಬರ್ 2014, 19:30 IST
Last Updated 18 ನವೆಂಬರ್ 2014, 19:30 IST
ಮಾರ್ಗಸೂಚಿ ದರ: ರಿಯಲ್‌ ಎಸ್ಟೇಟ್‌ ಕಂಪನ
ಮಾರ್ಗಸೂಚಿ ದರ: ರಿಯಲ್‌ ಎಸ್ಟೇಟ್‌ ಕಂಪನ   

ದಕ್ಷಿಣ ಭಾರತದ ‘ರಿಯಲ್‌ ಎಸ್ಟೇಟ್‌ ಕಣಿವೆ’ ಬೆಂಗಳೂರಿನಲ್ಲಿ ಭೂಕಂಪನ ಸಮಸ್ಯೆ ಇಲ್ಲದಿದ್ದರೂ ಈಗ ಹೊಸ ಆತಂಕದ ಅಲೆ ಎದ್ದಿದೆ. ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಬದಲಾವಣೆಯಿಂದ ಆಸ್ತಿ ಖರೀದಿ ಮೌಲ್ಯ ಶೇ 10ರಿಂದ 30ರಷ್ಟು ಹೆಚ್ಚಿದೆ. ನಿವೇಶನ, ಮನೆ ಖರೀದಿದಾರರು ವಹಿವಾಟಿನಿಂದ ಎಲ್ಲಿ ದೂರ ಉಳಿಯುವರೋ ಎಂಬ ಭೀತಿ ಕಟ್ಟಡ ನಿರ್ಮಾಣ ಉದ್ಯಮ ಕ್ಷೇತ್ರದ್ದಾಗಿದೆ. ನಗರದ ಪ್ರಮುಖ ಪ್ರದೇಶಗಳಲ್ಲಿ ಸ್ಥಿರಾಸ್ತಿ ಚದರಡಿ ಮೌಲ್ಯ ಅಧಿಕೃತವಾಗಿ ರೂ20 ಸಾವಿರದ ಗಡಿ ದಾಟಿದೆ. ಮಾರ್ಗಸೂಚಿ ದರ ಏರಿಸಿದ್ದರಿಂದ ಆಸ್ತಿ ನೋಂದಣಿ, ಮುದ್ರಾಂಕ ಶುಲ್ಕದಲ್ಲೂ ಶೇ 10ರಿಂದ 30ರಷ್ಟು ಹೆಚ್ಚಳವಾಗಲಿದೆ.

ಬೆಂಗಳೂರು ಮಹಾನಗರದಲ್ಲಿ ಕೇವಲ 15 ತಿಂಗಳಲ್ಲಿ ಎರಡನೇ ಸಲ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಹೆಚ್ಚಳ ಮಾಡಲಾಗಿದೆ. ದಕ್ಷಿಣ ಭಾರತದ ಈ ‘ರಿಯಲ್‌ ಎಸ್ಟೇಟ್‌ ಕಣಿವೆ’ಯಲ್ಲಿ ಭೂಕಂಪನದ ಉಪಟಳ ಇಲ್ಲದಿದ್ದರೂ ಆತಂಕದ ಅಲೆ ಎದ್ದಿದೆ. ಮಾರ್ಗಸೂಚಿ ದರದಲ್ಲಿ ಆಗಿರುವ ಬದಲಾವಣೆಯಿಂದ ಆಸ್ತಿ ಖರೀದಿ ಮೌಲ್ಯವು ಶೇ 10ರಿಂದ 30ರಷ್ಟು ಹೆಚ್ಚಾಗಿದೆ. ಖರೀದಿದಾರರು ಎಲ್ಲಿ ವಹಿವಾಟಿನಿಂದ ದೂರ ಉಳಿಯುವರೋ ಎಂಬ ಭೀತಿ ಕಟ್ಟಡ ನಿರ್ಮಾಣ ಉದ್ಯಮ ಕ್ಷೇತ್ರದಲ್ಲಿ ಮನೆಮಾಡಿದೆ.

ನಗರದ ಪ್ರಮುಖ ಪ್ರದೇಶಗಳ ಚದರ ಅಡಿ ಮೌಲ್ಯ ಈಗ ಅಧಿಕೃತವಾಗಿ ರೂ20 ಸಾವಿರದ ಗಡಿ ದಾಟಿದೆ. ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಏರಿಕೆ ಆಗಿದ್ದರಿಂದ ಆಸ್ತಿಗಳ ನೋಂದಣಿ ಮತ್ತು ಮುದ್ರಾಂಕ ಶುಲ್ಕದಲ್ಲೂ ಶೇ 10ರಿಂದ 30ರಷ್ಟು ಹೆಚ್ಚಳವಾಗಲಿದೆ.
ಇನ್ನೂ ಸರಳೀಕರಿಸಿ ಹೇಳುವುದಾದರೆ ಈ ಹಿಂದೆ ಮನೆಯೊಂದನ್ನು ನೀವು ರೂ50 ಲಕ್ಷಕ್ಕೆ ಖರೀದಿಸುವ ಅವಕಾಶ ಇದ್ದರೆ, ಅದಕ್ಕೆ ನೀವೀಗ ರೂ55ಲಕ್ಷದಿಂದ ರೂ65ಲಕ್ಷದವರೆಗೆ ಖರ್ಚು ಮಾಡಬೇಕಾಗುತ್ತದೆ (ಪ್ರದೇಶಕ್ಕೆ ಅನುಗುಣವಾಗಿ ದರದಲ್ಲೂ ವ್ಯತ್ಯಾಸವಾಗುತ್ತದೆ).

ಸದಾಶಿವನಗರಕ್ಕೆ ಅಗ್ರಸ್ಥಾನ
ಮಾರ್ಗಸೂಚಿ ದರಪಟ್ಟಿಯಲ್ಲಿ ಸದಾಶಿವನಗರಕ್ಕೆ ಅಗ್ರಸ್ಥಾನವಿದೆ. ಮಲ್ಲೇಶ್ವರ ಹಾಗೂ ಕನ್ನಿಂಗ್‌ಹ್ಯಾಂ ರಸ್ತೆ ನಂತರದ ಸ್ಥಾನವನ್ನು ಆಕ್ರಮಿಸಿಕೊಂಡಿವೆ.

ಏನಿದು ಮಾರ್ಗಸೂಚಿ ದರ?

ADVERTISEMENT

ಸ್ಥಿರಾಸ್ತಿಗಳು ಇರುವ ಪ್ರದೇಶಕ್ಕೆ ಅನುಗುಣವಾಗಿ ಸರ್ಕಾರ ನಿಗದಿಮಾಡುವ ಪ್ರತಿ ಚದರ ಅಡಿ ಜಾಗದ ಕನಿಷ್ಠ ಮೌಲ್ಯವೇ ಮಾರ್ಗಸೂಚಿ ದರ. ಯಾವುದೇ ಕಾರಣಕ್ಕೂ ಆ ಪ್ರದೇಶದ ಆಸ್ತಿಯನ್ನು ಮಾರ್ಗಸೂಚಿ ದರಕ್ಕಿಂತ ಕಡಿಮೆ ಬೆಲೆಗೆ ನೋಂದಣಿ ಮಾಡಿಸಿಕೊಳ್ಳುವಂತಿಲ್ಲ. ಮಾರ್ಗಸೂಚಿ ದರಕ್ಕಿಂತ ಮಾರುಕಟ್ಟೆ ದರ ಎಷ್ಟು ಹೆಚ್ಚಿದ್ದರೂ ಆಕ್ಷೇಪ ಇಲ್ಲ. ಆದರೆ, ಹೆಚ್ಚಿನ ಮೊತ್ತದ ನೋಂದಣಿ ಹಾಗೂ ಮುದ್ರಾಂಕ ಶುಲ್ಕ ಭರಿಸುವುದನ್ನು ತಪ್ಪಿಸುವ ಸಲುವಾಗಿ ಮಾರುಕಟ್ಟೆ ದರ ಬೇರೆ ಇದ್ದರೂ ಸಾಮಾನ್ಯವಾಗಿ ಮಾರ್ಗಸೂಚಿ ದರದ ಪ್ರಕಾರವೇ ನೋಂದಣಿ ಮಾಡಿಸಲಾಗುತ್ತದೆ.

‘ಮಾರ್ಗಸೂಚಿ ದರ ಮತ್ತು ಮಾರುಕಟ್ಟೆ ದರದ ನಡುವಿನ ಅಂತರವನ್ನು ಕಡಿಮೆ ಮಾಡಲು ಈ ಪರಿಷ್ಕರಣೆ ಮಾಡಲಾಗಿದೆ’ ಎಂದು ಹೇಳುತ್ತಾರೆ ನೋಂದಣಿ ಮಹಾ­ಪರಿವೀಕ್ಷಕ ಎನ್‌.ಪ್ರಕಾಶ್‌.
‘ಬೆಂಗಳೂರು ಮಾತ್ರವಲ್ಲ; ರಾಜ್ಯದಾದ್ಯಂತ ಶೇ 10ರಿಂದ ಶೇ 12ರಷ್ಟು ಮಾರ್ಗಸೂಚಿ ದರ ಹೆಚ್ಚಳ ಮಾಡುತ್ತಿದ್ದೇವೆ’ ಎಂದು ಅವರು ಮಾಹಿತಿ ನೀಡುತ್ತಾರೆ.

‘ಪ್ರಸಕ್ತ ವರ್ಷ ನೋಂದಣಿ ವರಮಾನದಲ್ಲಿ ಶೇ 10ರಿಂದ 15ರಷ್ಟು ಇಳಿಕೆಯಾಗಿದೆ. ಗುರಿ ತಲುಪಲು ಮುಂದಿನ ನಾಲ್ಕು ತಿಂಗಳಲ್ಲಿ ರೂ6,800 ಕೋಟಿ ಸಂಗ್ರಹಿಸಬೇಕಿದೆ. ಪರಿಷ್ಕೃತ ಮಾರ್ಗಸೂಚಿ ದರ ಇದಕ್ಕೆ ನೆರವಾಗಲಿದೆ. ರಿಯಲ್‌ ಎಸ್ಟೇಟ್‌ ಉದ್ಯಮ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವುದನ್ನು ನೋಡಿಕೊಂಡೇ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಹಣಕಾಸು ಇಲಾಖೆ ಮೂಲಗಳು ಹೇಳುತ್ತವೆ.

‘ಮಾರ್ಗಸೂಚಿ ದರದಲ್ಲಿ ಮಾಡಲಾಗಿರುವ ಹೆಚ್ಚಳದಿಂದ ಆಸ್ತಿಯ ಒಟ್ಟಾರೆ ವೆಚ್ಚ ಹೆಚ್ಚಲಿದ್ದು, ಇದು ಖರೀದಿದಾರರ ಮೇಲೆ ಪರಿಣಾಮ ಬೀರಲಿದೆ’ ಎಂದು ಬ್ರಿಗೇಡ್ ಗ್ರೂಪ್‌ನ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ಜೈಶಂಕರ್ ಆತಂಕ ವ್ಯಕ್ತಪಡಿಸುತ್ತಾರೆ.
‘ದೇಶದ ಅನೇಕ ನಗರಗಳಲ್ಲಿ ಕಳೆದ ವರ್ಷದಿಂದ ರಿಯಲ್ ಎಸ್ಟೇಟ್ ಮಾರುಕಟ್ಟೆ ನಿಷ್ಕ್ರಿಯವಾಗಿದೆ. ಆದರೆ ಅದೃಷ್ಟವಶಾತ್ ಬೆಂಗಳೂರು ಈ ಟ್ರೆಂಡ್‌ನಿಂದ ದೂರ ಉಳಿದಿತ್ತು. ಮಾರ್ಗಸೂಚಿ ದರ ಹೆಚ್ಚಳದ ಬಳಿಕ ಬೆಂಗಳೂರಿಗೂ ಆ ನಿಷ್ಕ್ರಿಯದ ಸನ್ನಿ ಹಿಡಿಯುವ ಭೀತಿ ಇದೆ’ ಎಂಬುದು ಅವರು ನೀಡುವ ವಿವರಣೆ.

‘ಖರೀದಿದಾರರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಮುದ್ರಾಂಕ ಶುಲ್ಕದ ಕುರಿತು ಮರು ಚಿಂತನೆ ನಡೆಸಬೇಕು ಮತ್ತು ಮಾರುಕಟ್ಟೆಗೆ ಪುನಃಶ್ಚೇತನ ನೀಡಲು ನೆರವಾಗಬೇಕು’ ಎಂದು ಜೈಶಂಕರ್‌ ಮನವಿ ಮಾಡುತ್ತಾರೆ.

ಅಪಾರ್ಟ್‌ಮೆಂಟ್‌ಗಳಲ್ಲಿ ಮನೆ ಖರೀದಿ ಮಾಡಿದವರು ಈಗ ಅಧಿಕ ಬೆಲೆ ತೆರುವುದು ಅನಿವಾರ್ಯವಾಗಲಿದೆ. ಅದರಲ್ಲೂ ಈ ಹಿಂದೆಯೇ ಮನೆ ಖರೀದಿಸಿ ಇದುವರೆಗೆ ನೋಂದಣಿ ಮಾಡಿಸಿಕೊಳ್ಳದ ಗ್ರಾಹಕರು ಅನಗತ್ಯವಾಗಿ ಹೆಚ್ಚಿನ ಹೊರೆ ಹೊರಲೇಬೇಕಿದೆ. ಮಾರ್ಗಸೂಚಿ ದರದಲ್ಲಿ ಆಗಿರುವ ವ್ಯತ್ಯಾಸದ ಹೊಣೆಯನ್ನು ಡೆವೆಲಪರ್‌ಗಳು ನೇರವಾಗಿ ಗ್ರಾಹಕರ ಮೇಲೆ ವರ್ಗಾವಣೆ ಮಾಡುವುದರಿಂದ ಹೊಸ ಯೋಜನೆಗಳಲ್ಲಿ ಮನೆ ಖರೀದಿಗೆ ನಿಂತವರೂ ಶೇ 15ರಷ್ಟು ಅಧಿಕ ಮೊತ್ತ ತೆರಲು ಸಿದ್ಧವಾಗಿರಬೇಕಿದೆ.

‘ಡೆವಲಪರ್‌ಗಳೇ ಭರಿಸಬೇಕು’

‘ಹಲವು ಯೋಜನೆಗಳು ಮೂರು ವರ್ಷಗಳ ಹಿಂದೆಯೇ ಆರಂಭವಾಗಿವೆ. ಡೆವೆಲಪರ್‌ಗಳೇ ನಿರ್ಮಾಣ ಕಾಮಗಾರಿಯಲ್ಲಿ ವಿಳಂಬ ಮಾಡಿದ್ದಾರೆ. ಈ ಅವಧಿಯಲ್ಲಿ ಮಾರ್ಗಸೂಚಿ ದರ ಎರಡು ಸಲ ಪರಿಷ್ಕರಣೆಯಾಗಿದೆ. ಅದರ ಹೊರೆಯನ್ನು ಡೆವಲಪರ್‌ಗಳು ಹೊರಬೇಕೇ ಹೊರತು ಗ್ರಾಹಕರಲ್ಲ. ‘ಬಳ್ಳಾರಿ ರಸ್ತೆಯಲ್ಲಿ ನಿರ್ಮಾಣ ಆಗುತ್ತಿರುವ ಅಪಾರ್ಟ್‌ಮೆಂಟ್‌ನಲ್ಲಿ ಅವರು ಎರಡು ವರ್ಷಗಳ ಹಿಂದೆಯೇ ಫ್ಲ್ಯಾಟ್‌ ಬುಕ್‌ ಮಾಡಿದ್ದೆ. ನಿರ್ಮಾಣ ಕಾಮಗಾರಿ ಇನ್ನೂ ಮುಗಿದಿಲ್ಲ. ಈಗ ರೂ10 ಲಕ್ಷಕ್ಕೂ ಅಧಿಕ ಹೊರೆಯನ್ನು ಅವರು ಹೊರಬೇಕಿದೆ’.
ಶ್ರೀನಿಧಿ ವಶಿಷ್ಠ, ಸಾಫ್ಟ್‌ವೇರ್‌ ಎಂಜಿನಿಯರ್‌

ಖರೀದಿ ಸಾಮರ್ಥ್ಯ ಇಳಿಕೆ?
ಈ ಮುನ್ನ ಮನೆಗಾಗಿ ರೂ70 ಲಕ್ಷದವರೆಗೆ ಸುರಿಯಲು ಸಿದ್ಧವಿದ್ದವರ ಸಾಮರ್ಥ್ಯ ಈಗ ರೂ60 ಲಕ್ಷಕ್ಕೆ ಕುಸಿಯಲಿದೆ. ಏಕೆಂದರೆ, ನೋಂದಣಿ ಹಾಗೂ ಮುದ್ರಾಂಕ ಶುಲ್ಕದ ಹೊರೆಯನ್ನೂ ಅವರು ಅದರಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ. ಹೀಗಾಗಿ ಹೊಸ ಮನೆಯಲ್ಲಿ ಬೇಕಾದ ಎಲ್ಲ ಸೌಲಭ್ಯ ಹೊಂದಲು ‘ಕುಸಿದ ಸಾಮರ್ಥ್ಯ’ ಅಡ್ಡಗಾಲು ಹಾಕಲಿದೆ.

ಬೆಂಗಳೂರಿನಲ್ಲಿ ಅತ್ಯಂತ ಕಡಿಮೆ ಮೌಲ್ಯದ ಫ್ಲ್ಯಾಟ್‌ಗೂ ರೂ25 ಲಕ್ಷ ತೆರಬೇಕು. ಐಷಾರಾಮಿ ಫ್ಲ್ಯಾಟ್‌ಗಳು ರೂ5 ಕೋಟಿವರೆಗೆ ಬೆಲೆ ಬಾಳುತ್ತವೆ. ಫ್ಲ್ಯಾಟ್‌ಗಳ ಅಳತೆ ಹಾಗೂ ಅಪಾರ್ಟ್‌ಮೆಂಟ್‌ಗಳು ಇರುವ ಪ್ರದೇಶದ ಮೇಲೆ ದರ ನಿಗದಿ ಆಗುತ್ತದೆ. ನಗರದಲ್ಲಿ ಈಗ ಲಕ್ಷಕ್ಕೂ ಅಧಿಕ ಫ್ಲ್ಯಾಟ್‌ಗಳ ನಿರ್ಮಾಣ ನಡೆದಿದ್ದು, ಅರ್ಧದಷ್ಟು ಇದುವರೆಗೆ ಬುಕ್‌ ಆಗಿಲ್ಲ ಎಂಬ ಅಂದಾಜಿದೆ. ಈಗ ಆಗಿರುವ ಮಾರ್ಗಸೂಚಿ ದರದ ಪರಿಷ್ಕರಣೆ ವಹಿವಾಟಿಗೆ ದೊಡ್ಡ ಹೊಡೆತ ನೀಡಲಿದೆ ಎಂಬ ಚಿಂತೆ ಬಹುತೇಕ ಉದ್ಯಮಿಗಳನ್ನು ಕಾಡುತ್ತಿದೆ.

ಹೂಡಿಕೆದಾರರಲ್ಲಿ ದಿಗಿಲು
‘ಈ ಅನಿರೀಕ್ಷಿತ ಏರಿಕೆ ಸಾರ್ವಜನಿಕ ಹೂಡಿಕೆದಾರರಲ್ಲಿ ದಿಗಿಲು ಮೂಡಿಸಿದೆ. ಒಂದೋ ಅವರು ತುರ್ತು ಖರೀದಿಗೆ ಇಳಿಯುತ್ತಾರೆ, ಇಲ್ಲವೇ ತಮ್ಮ ಖರೀದಿ ನಿರ್ಧಾರವನ್ನು ಮುಂದೂಡುತ್ತಾರೆ. ಎರಡೂ ಕೂಡ ಖರೀದಿದಾರ ಹಾಗೂ ಮಾರಾಟಗಾರನಿಗೆ ಉತ್ತಮವಲ್ಲ. ಮಾರ್ಗಸೂಚಿ ದರವು ಖರೀದಿದಾರನಿಗೆ ಮಾರುಕಟ್ಟೆ ಪರಿಸ್ಥಿತಿಯನ್ನು ಅರಿಯುವ ಮಾನದಂಡದಂತೆ ಇರಬೇಕು. ಸರ್ಕಾರವು ಇದನ್ನು ಜನಸಾಮಾನ್ಯರಿಗೆ ಸೇವೆಯ ರೂಪದಲ್ಲಿ ನೀಡಬೇಕು ಮತ್ತು ನೋಂದಣಿ ಜೊತೆಗೆ ಥಳಕು ಹಾಕುವುದನ್ನು ತಪ್ಪಿಸಬೇಕು’ ಎಂದು ಕ್ರೆಡಾಯ್ ಬೆಂಗಳೂರಿನ ಕಾರ್ಯದರ್ಶಿ ಸುರೇಶ್ ಹರಿ ಸಲಹೆ ನೀಡುತ್ತಾರೆ.

ಪರಿಷ್ಕೃತ ದರ ಜಾರಿಯಾಗುವ ಸುದ್ದಿ ಹರಿದಾಡುತ್ತಿದ್ದಂತೆ ಅಕ್ಟೋಬರ್‌ 15ರಿಂದ ನವೆಂಬರ್‌ 13ರ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಆಸ್ತಿಗಳನ್ನು ನೋಂದಣಿ ಮಾಡಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಇದೆ. ಅನಗತ್ಯವಾಗಿ ಏಕೆ ರೂ7–8 ಲಕ್ಷ ಹಣವನ್ನು ಅಧಿಕವಾಗಿ ವ್ಯಯಿಸಬೇಕು ಎನ್ನುವ ಆತುರದಲ್ಲಿ ವಿವಿಧೆಡೆ ಸಾಲ ಮಾಡಿ, ಹಣ ಹೊಂದಿಸಿಕೊಂಡು ಆಸ್ತಿ ನೋಂದಣಿ ಮಾಡಿಸಿಕೊಳ್ಳಲಾಗಿದೆ ಎಂದು ಉದ್ಯಮದ ಮಂದಿ

ವಿವಾದ ಹುಟ್ಟುಹಾಕಿದೆ
ನೂತನ ಮಾರ್ಗಸೂಚಿ ದರ ಮಾರುವವರ ಮತ್ತು ಕೊಳ್ಳುವವರ ನಡುವೆ ವಿವಾದವನ್ನೂ ತಂದಿಟ್ಟಿದೆ. ಖರೀದಿ ಒಪ್ಪಂದ ಆಗಿರುವ ದಿನದ ಮಾರ್ಗಸೂಚಿ ದರದ ಪ್ರಕಾರ ನೋಂದಣಿ ಶುಲ್ಕ ನೀಡುವುದಾಗಿ ಖರೀದಿದಾರ ಹೇಳಿದರೆ, ಹೆಚ್ಚಿನ ಹೊರೆಯನ್ನು ನೀವೇ ಹೊರಬೇಕು ಎಂದು ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಪಟ್ಟು ಹಿಡಿದಿದ್ದಾರೆ.

‘ಮಾರ್ಗಸೂಚಿ ದರ ಪರಿಷ್ಕರಣೆ ಮೂಲಕ ಶುಲ್ಕದ ರೂಪದಲ್ಲಿ ಬರುವ ಸಾವಿರಾರು ಕೋಟಿ ರೂಪಾಯಿ ಮೇಲೆ ಸರ್ಕಾರ ಕಣ್ಣಿಟ್ಟಿದ್ದರೆ, ಆಗಬಹುದಾದ ನಷ್ಟದ ಕುರಿತು ಉದ್ಯಮಿಗಳು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಸೂರಿನ ಕನಸು ನನಸಾಗುವುದು ಯಾವಾಗ ಎಂಬ ಚಿಂತೆ ಜನಸಾಮಾನ್ಯರನ್ನು ಮತ್ತಷ್ಟು ಗಾಢವಾಗಿ ಕಾಡಲು ಆರಂಭಿಸಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.