ADVERTISEMENT

ಯಾವಾಗ ಸಿಗಲಿದೆ ಎ ಖಾತಾ?

ಪ್ರವೀಣ ಕುಲಕರ್ಣಿ
Published 4 ಫೆಬ್ರುವರಿ 2015, 5:06 IST
Last Updated 4 ಫೆಬ್ರುವರಿ 2015, 5:06 IST

ಬೆಂಗಳೂರಿನಲ್ಲಿ ಕಳೆದ 5–6 ವರ್ಷಗಳಿಂದ ಈಚೆಗೆ ‘ಎ’ ಖಾತಾ, ‘ಬಿ’ ಖಾತಾ ಎಂಬ ಪದಗಳು ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಮತ್ತೆ ಮತ್ತೆ ಕೇಳಿ ಬರುತ್ತಿವೆ. ಹೈಕೋರ್ಟ್‌ ಮುಂದೆ ಇತ್ತೀಚೆಗೆ ಈ ಸಂಬಂಧ ಅರ್ಜಿ ವಿಚಾರಣೆಗೆ ಬಂದಾಗ ‘ಬಿ’ ರಿಜಿಸ್ಟರ್‌ನಲ್ಲಿರುವ ಎಲ್ಲ ಖಾತೆಗಳಿಗೆ ಅಧಿಕೃತ ಖಾತಾ ನೀಡಬೇಕು ಎನ್ನುವ ಆದೇಶ ನೀಡಲಾಗಿದೆ. ಸರ್ಕಾರ ರೂಪಿಸಿದ ನಿಯಮಾವಳಿ ಪ್ರಕಾರ ಆಸ್ತಿಗಳಿಗೆ ಖಾತಾ ನೀಡಲಾಗುತ್ತಿದ್ದು, ಅಲ್ಲಿಂದ ಬರುವ ಆದೇಶಕ್ಕಾಗಿ ಕಾಯಲಾಗುತ್ತಿದೆ. ಅದುವರೆಗೆ ಹಾಲಿ ವ್ಯವಸ್ಥೆಯೇ ಮುಂದುವರಿಯಲಿದೆ ಎಂದು ಬಿಬಿಎಂಪಿ ಆಯುಕ್ತರು ಹೇಳುತ್ತಾರೆ. ಖಾತಾ, ‘ಎ’ ಖಾತಾ, ‘ಬಿ’ ಖಾತಾ, ಅವುಗಳಿಗಿರುವ ಕಾನೂನಿನ ಮಾನ್ಯತೆ ಮೊದಲಾದ ವಿಷಯಗಳನ್ನು ಇಲ್ಲಿ ಪ್ರಶ್ನೋತ್ತರ ರೂಪದಲ್ಲಿ ಚರ್ಚಿಸಲಾಗಿದೆ.

* ಏನಿದು ಖಾತಾ? ಅದು ಏಕೆ ಬೇಕು?
‘ಖಾತಾ’ ಎಂದರೆ ಶಬ್ದಶಃ ಅರ್ಥ ಖಾತೆ (ಅಕೌಂಟ್‌)ಯೇ. ತೆರಿಗೆ ತುಂಬಿಸಿಕೊಳ್ಳಲು ಪ್ರತಿ ಆಸ್ತಿಗೆ ಸಂಬಂಧಿಸಿದಂತೆ ಈ ಖಾತೆಯನ್ನು ತೆರೆಯಲಾಗುತ್ತದೆ. ವಾಸ್ತವವಾಗಿ ಕೆಎಂಸಿ ಕಾಯ್ದೆಯಲ್ಲಿ ಖಾತೆ ಎನ್ನುವ ಪದಕ್ಕೆ ಯಾವುದೇ ವ್ಯಾಖ್ಯಾನ ಇಲ್ಲವೆ ವಿವರಣೆಯನ್ನು ಕೊಡಲಾಗಿಲ್ಲ. ಆದರೆ, ಕಟ್ಟಡ ಯೋಜನೆಯನ್ನು ಮಂಜೂರು ಮಾಡಲು ಖಾತಾ ದಾಖಲೆಯೂ ಅಗತ್ಯ ಎಂಬ ನಿಯಮ ರೂಪಿಸಲಾಗಿದೆ. ಆಸ್ತಿಯ ಮಾಲೀಕರು, ಅದರ ವಿಸ್ತೀರ್ಣ, ಸ್ಥಳ, ಆಸ್ತಿ ನೋಂದಣಿ ಸಂಖ್ಯೆ ಮತ್ತಿತರ ವಿವರಗಳನ್ನು ಅದು ಒಳಗೊಂಡಿರುತ್ತದೆ. ಬ್ಯಾಂಕ್‌ನಿಂದ ಸಾಲ ಪಡೆಯಲು, ಲೈಸನ್ಸ್‌ಗೆ ಅರ್ಜಿ ಹಾಕಲು, ವಿದ್ಯುತ್‌, ನೀರಿನ ಸಂಪರ್ಕ ಪಡೆಯಲು, ಆಸ್ತಿಯನ್ನು ಮಾರಾಟ ಮಾಡಲು... ಹೀಗೆ ವಿವಿಧ ಉದ್ದೇಶಗಳಿಗೆ ‘ಖಾತಾ’ ಅಗತ್ಯ ದಾಖಲೆಯಾಗಿದೆ. ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಆಸ್ತಿಗಳ ಖಾತೆ ನಿರ್ವಹಣೆ ಹೊಣೆ ಬಿಬಿಎಂಪಿ ಮೇಲಿದೆ.

* ‘ಎ’ ಖಾತಾ ಪಡೆಯಲು ಏನು ಮಾಡಬೇಕು?
ವಾಸ್ತವವಾಗಿ ಖಾತಾದಲ್ಲಿ ‘ಎ’, ‘ಬಿ’ ಎಂಬೆಲ್ಲ ವರ್ಗೀಕರಣ ಇಲ್ಲ. ಆಸ್ತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳು ಕಾನೂನು ಬದ್ಧವಾಗಿದ್ದರೆ ಬಿಬಿಎಂಪಿ ‘ಖಾತಾ’ ದಾಖಲೆಯಲ್ಲಿ ಅದನ್ನು ನೋಂದಣಿ ಮಾಡಿಕೊಳ್ಳಲಾಗುತ್ತದೆ. ಖಾತಾಪತ್ರ ಇದ್ದರೆ ಆ ಆಸ್ತಿಯಿಂದ ಎಲ್ಲ ಕಾನೂನುಬದ್ಧ ಸೌಲಭ್ಯಗಳನ್ನು ಪಡೆಯಲು ಅದರ ಮಾಲೀಕರು ಅರ್ಹರಿರುತ್ತಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಇಲ್ಲವೆ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ)ಯಿಂದ ಹಂಚಿಕೆಯಾದ ಆಸ್ತಿಯಾಗಿದ್ದರೆ ಕ್ರಯ ಒಪ್ಪಂದದ ಪ್ರತಿ, ತೆರಿಗೆ ಪಾವತಿ ದಾಖಲೆ, ಸ್ವಾಧೀನ ಪಡೆದ ಪ್ರಮಾಣ ಪತ್ರ, ಆಸ್ತಿ ಮಾಹಿತಿಯನ್ನು ಒಳಗೊಂಡ ನಕ್ಷೆ – ಇಷ್ಟನ್ನು ಒದಗಿಸಿದರೆ ಖಾತಾದಲ್ಲಿ ಆಸ್ತಿ ವಿವರ ನೋಂದಣಿ ಮಾಡಿಕೊಳ್ಳಲಾಗುತ್ತದೆ.

ಕಂದಾಯ ಬಡಾವಣೆ, ಗ್ರಾಮಠಾಣಾ, ಅಪಾರ್ಟ್‌ಮೆಂಟ್‌ಗಳ ಆಸ್ತಿಯಾಗಿದ್ದರೆ ಕ್ರಯ ಒಪ್ಪಂದದ ಪ್ರತಿ, ಹಿಂದಿನ ಕ್ರಯದ ಪೂರ್ಣ ವಿವರ, ಭೂಪರಿವರ್ತನೆ ಪ್ರಮಾಣಪತ್ರ, ತೆರಿಗೆ ಪಾವತಿ ದಾಖಲೆ, ಅಭಿವೃದ್ಧಿ ಶುಲ್ಕ ಪಾವತಿ ವಿವರ, ಖಾತಾ ದಾಖಲೆ, ಆಸ್ತಿ ಮಾಹಿತಿಯನ್ನು ಒಳಗೊಂಡ ನಕ್ಷೆ – ಇಷ್ಟನ್ನು ಒದಗಿಸಿದರೆ ಖಾತಾ ದೊರೆಯುತ್ತದೆ.

* ‘ಬಿ’ ಖಾತಾವನ್ನು ಯಾವಾಗ ನೀಡಲಾಗುತ್ತದೆ? ಅದಕ್ಕೆ ಇರುವ ಕಾನೂನಿನ ಮಾನ್ಯತೆ ಏನು?
ಬಿಬಿಎಂಪಿ,  ಬಿಡಿಎ, ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ಮೊದಲಾದ ಕಾಯ್ದೆಗಳನ್ನು ಉಲ್ಲಂಘಿಸಿ ನಿರ್ಮಾಣ ಮಾಡಿದ ಬಡಾವಣೆಗಳ ನಿವೇಶನ ಇಲ್ಲವೆ ಕಟ್ಟಡಗಳಿಗೆ ಕಾನೂನಿನ ಪ್ರಕಾರ ಅಧಿಕೃತ ಖಾತೆ ನೀಡಲಾಗುವುದಿಲ್ಲ.

ಬೊಮ್ಮನಹಳ್ಳಿ, ದಾಸರಹಳ್ಳಿ, ಕೃಷ್ಣರಾಜಪುರ, ರಾಜರಾಜೇಶ್ವರಿನಗರ, ಮಹದೇವಪುರ, ಬ್ಯಾಟರಾಯನಪುರ ಮತ್ತು ಯಲಹಂಕ ನಗರಸಭೆ ಮತ್ತು ಕೆಂಗೇರಿ ಪುರಸಭೆಗಳಲ್ಲದೆ 110 ಹಳ್ಳಿಗಳು ಬೆಂಗಳೂರಿನಲ್ಲಿ ಒಂದಾಗಿ 2007ರಲ್ಲಿ ಬಿಬಿಎಂಪಿ ಉದಯವಾಯಿತು. ಈ ನಗರಸಭೆ, ಪುರಸಭೆ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಆಸ್ತಿ ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ.

ಭೂ ಅಭಿವೃದ್ಧಿ ಪ್ರಾಧಿಕಾರಗಳ ಅನುಮತಿ ಇಲ್ಲದೆ ನಿರ್ಮಾಣವಾದ ಬಡಾವಣೆಗಳು, ಕಂದಾಯ ಭೂಮಿ ಹಾಗೂ ಭೂಪರಿವರ್ತನೆಯಾಗದ
ಪ್ರದೇಶದಲ್ಲಿ ನಿರ್ಮಿಸಿದ ಕಟ್ಟಡಗಳ ಮಾಹಿತಿಯನ್ನು ‘ಬಿ’ ರಿಜಿಸ್ಟರ್‌ ತೆರೆದು, ಅದರಲ್ಲಿ ದಾಖಲಿಸಲು ನಿರ್ಧರಿಸಲಾಯಿತು. ತೆರಿಗೆ ಸಂಗ್ರಹದ ಉದ್ದೇಶದಿಂದಷ್ಟೇ ಈ ವ್ಯವಸ್ಥೆಯನ್ನು ಮಾಡಲಾಯಿತು. ಅದನ್ನೇ ಸಾರ್ವಜನಿಕರು ‘ಬಿ’ ಖಾತಾ ಎಂದೇ ಕರೆಯುತ್ತಾರೆ. ‘ಬಿ’ ರಿಜಿಸ್ಟರ್‌ನಲ್ಲಿ ಇರುವ ಆಸ್ತಿಗಳ ವ್ಯವಹಾರಕ್ಕೆ ಕಾನೂನಿನಲ್ಲಿ ಯಾವುದೇ ಮಾನ್ಯತೆ ಇಲ್ಲ. ಕಟ್ಟಡದ ಯೋಜನೆಗೂ ಮಂಜೂರಾತಿ ಸಿಗುವುದಿಲ್ಲ. ಬ್ಯಾಂಕ್‌ನಿಂದ ಸಾಲ ದೊರೆಯುವುದಿಲ್ಲ. ‘ಬಿ’ ರಿಜಿಸ್ಟರ್‌ನಲ್ಲಿ ನೋಂದಣಿಯಾದ ಆಸ್ತಿಗಳನ್ನು ಖಾತಾದಲ್ಲಿ ನಮೂದಿಸಲು ಸರ್ಕಾರದ ಅಧಿಕೃತ ಮಾರ್ಗಸೂಚಿಗಾಗಿ (ಅಕ್ರಮ ಸಕ್ರಮ ಯೋಜನೆ) ಕಾಯಲಾಗುತ್ತಿದೆ.

* ಕೆಎಂಸಿ 108ಎ (3) ಮತ್ತು 114 ನಿಯಮಗಳು ಏನು ಹೇಳುತ್ತವೆ?
ಕಾನೂನುಬದ್ಧವಲ್ಲದ ಆಸ್ತಿಗಳಿಗೆ ಅಧಿಕೃತ ಖಾತೆ ನೀಡದೆ ತೆರಿಗೆ ಸಂಗ್ರಹದ ಏಕೈಕ ಉದ್ದೇಶಕ್ಕಾಗಿ ಅವುಗಳನ್ನು ಪ್ರತ್ಯೇಕ ರಿಜಿಸ್ಟರ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎನ್ನುತ್ತದೆ 108ಎ (3) ನಿಯಮ. ಆಸ್ತಿ ಮಾಲೀಕರು ಸಾವನ್ನಪ್ಪಿದರೆ ಇಲ್ಲವೆ ಆಸ್ತಿಯನ್ನು ಪಾಲು ಮಾಡಿಕೊಂಡರೆ ನೋಂದಣಿ ಮಾಡಲು ಅವಕಾಶ ಕಲ್ಪಿಸುವುದು 114ರ ನಿಯಮ. 108ಎ (3) ನಿಯಮದಲ್ಲಿ ಬರುವ ಆಸ್ತಿಗಳಿಗೆ 114ರ ನಿಯಮ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

* ‘ಬಿ’ ರಿಜಿಸ್ಟರ್‌ನಲ್ಲಿ ನೋಂದಣಿಯಾದ ಆಸ್ತಿಗಳನ್ನು ಖರೀದಿ ಮಾಡಬಹುದೇ?
‘ಬಿ’ ರಿಜಿಸ್ಟರ್‌ನಲ್ಲಿ ನೋಂದಣಿಯಾದ ಆಸ್ತಿಗಳ ವ್ಯವಹಾರಗಳಿಗೆ ಸದ್ಯದ ಸನ್ನಿವೇಶದಲ್ಲಿ ಕಾನೂನಿನ ಮಾನ್ಯತೆ ಇಲ್ಲ.

* ಕ್ರಯ ಒಪ್ಪಂದದ ಮಹತ್ವವೇನು?
ಬಿಬಿಎಂಪಿ ‘ಖಾತಾ’ ನೋಂದಣಿಗೂ ಕ್ರಯ ಒಪ್ಪಂದ ಪತ್ರಕ್ಕೂ ವ್ಯತ್ಯಾಸವಿದೆ. ಆಸ್ತಿಯನ್ನು ಕೊಳ್ಳುವವರು ಮತ್ತು ಮಾರುವವರ ಮಧ್ಯೆ ಕ್ರಯ ಒಪ್ಪಂದ ಏರ್ಪಟ್ಟಿರುತ್ತದೆ. ಮಾಲೀಕತ್ವವನ್ನು ಸಾಬೀತು ಮಾಡಲು ಆ ದಾಖಲೆಯೇ ಮುಖ್ಯ. ‘ಖಾತಾ’ ನೋಂದಣಿಯು ತೆರಿಗೆ ಸಂಗ್ರಹಕ್ಕೆ ಮಾಡಲಾದ ವ್ಯವಸ್ಥೆಯಷ್ಟೇ. ಆದರೆ, ಆಸ್ತಿಗೆ ಸಂಬಂಧಿಸಿದ ಪ್ರತಿ ವ್ಯವಹಾರಕ್ಕೂ ಅದು ಬೇಕೇಬೇಕು.

* ಅಕ್ರಮ ಸಕ್ರಮ ಯೋಜನೆ ಯಾವಾಗ ಜಾರಿಗೆ ಬರುತ್ತದೆ?
ಅಕ್ರಮ ಸಕ್ರಮ ಯೋಜನೆಯನ್ನು ಸರ್ಕಾರ ಈ ಹಿಂದೆಯೇ ಜಾರಿಗೆ ತರಲು ಹೊರಟಿತ್ತು. ಆದರೆ, ನಗರ ಈಗಾಗಲೇ ಕಿಷ್ಕಿಂಧೆಯಾಗಿದ್ದು ಕಟ್ಟಡ ನಿಯಮಾವಳಿ ಉಲ್ಲಂಘನೆಯನ್ನು ಕಾನೂನುಬದ್ಧಗೊಳಿಸಿದರೆ ಸಮಸ್ಯೆ ಇನ್ನಷ್ಟು ಹೆಚ್ಚಲಿದೆ ಎಂಬ ಭೀತಿ ವ್ಯಕ್ತಪಡಿಸಿ ಕೆಲವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ಹೀಗಾಗಿ ಯೋಜನೆ ಅನುಷ್ಠಾನ ನನೆಗುದಿಗೆ ಬಿತ್ತು. ‘ಬಿ’ ರಿಜಿಸ್ಟರ್‌ನಲ್ಲಿರುವ ಆಸ್ತಿಗಳ ಮಾಲೀಕರ ಪರವಾಗಿ ಇತ್ತೀಚೆಗೆ ದಾಖಲಾಗಿದ್ದ ಅರ್ಜಿ ವಿಚಾರಣೆ ಮಾಡುವಾಗ ‘ಬಿ’ ರಿಜಿಸ್ಟರ್‌ ಆಸ್ತಿಗಳಿಗೂ ಖಾತೆ ನೀಡುವಂತೆ ಹೈಕೋರ್ಟ್‌ ಆದೇಶಿಸಿದೆ. ಸರ್ಕಾರದ ಆದೇಶಕ್ಕಾಗಿ ಬಿಬಿಎಂಪಿ ಕಾಯುತ್ತಿದೆ.

* ಬಿಬಿಎಂಪಿ ‘ಬಿ’ ರಿಜಿಸ್ಟರ್‌ನಲ್ಲಿ ಎಷ್ಟು ಆಸ್ತಿಗಳಿವೆ?
2ಲಕ್ಷಕ್ಕೂ ಅಧಿಕ ಆಸ್ತಿಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.