ADVERTISEMENT

ರಿಯಲ್ ಎಸ್ಟೇಟ್‌ನ ‘ರಿಯಲ್‌’ ಬೆಲೆ!

ಸುಚೇತನಾ ನಾಯ್ಕ
Published 30 ಸೆಪ್ಟೆಂಬರ್ 2014, 19:30 IST
Last Updated 30 ಸೆಪ್ಟೆಂಬರ್ 2014, 19:30 IST

ಬೆಂಗಳೂರಿನಲ್ಲಿ ನಿವೇಶನ, ಮನೆ , ಅಪಾರ್ಟ್‌ಮೆಂಟ್... ಇತ್ಯಾದಿಗಳ ನಿಖರವಾದ ಬೆಲೆ ತಿಳಿಯುವುದು ಸದ್ಯದ ಮಟ್ಟಿಗೆ ಕಷ್ಟಸಾಧ್ಯ. ಆದ್ದರಿಂದ ಇವುಗಳಿಗೆ ಸಂಬಂಧಿಸಿದಂತೆ ಜನರಿಂದಲೇ ಮಾಹಿತಿ ಪಡೆದು, ಮುಂಬರುವ ದಿನಗಳಲ್ಲಿ ಈ ಮಾಹಿತಿಯನ್ನು  ಜನಸಾಮಾನ್ಯರಿಗೆ ನೀಡುವ ನೂತನ ವೆಬ್‌ಸೈಟ್‌ಗೆ ಈಗ ಚಾಲನೆ ದೊರೆತಿದೆ.

ಉದ್ಯೋಗ ಅರಸಿಯೋ, ವಿವಾಹವಾದ ಕಾರಣಕ್ಕೋ, ವ್ಯಾಪಾರ, ವಹಿವಾಟು ಮಾಡುವ ಸಂಬಂಧವೋ ಪರ ಊರಿನಿಂದ ಬೆಂಗಳೂರಿಗೆ ಬಂದು ನೆಲೆಸಿದವರಿಗೆ ‘ಬೆಂಗಳೂರು ಹೇಗಿದೆ?’ ಎಂದು ಕೇಳಿದಾಕ್ಷಣ ಬರುವ ಉತ್ತರ, ‘ಅಯ್ಯೋ ಇಲ್ಲಿಯದ್ದು ಯಾಂತ್ರಿಕ ಜೀವನ, ಟ್ರಾಫಿಕ್ ಕಿರಿಕಿರಿ, ರಸ್ತೆಗಿಳಿದರೆ ವಾಹನಗಳ ದೂಳು, ಯಾರಿಗೆ ಬೇಕಪ್ಪ...’ ಎಂಬ ರಾಗ. ‘ಹಾಗಿದ್ದರೆ ಬೆಂಗಳೂರು ಬಿಟ್ಟು ಬರುವುದಿಲ್ಲವೇಕೆ? ’ ಎಂದು ಪ್ರಶ್ನಿಸಿದರೆ ಮಾತ್ರ ಮೌನವೇ ಉತ್ತರ!

ಇದು ಬೆಂಗಳೂರಿನ ಮಹಿಮೆ. ಇಲ್ಲಿಯ ಜೀವನದ ಬಗ್ಗೆ ಎಷ್ಟೇ ಅಸಡ್ಡೆಯ ಮಾತನಾಡಿದರೂ, ಇಲ್ಲಿಗೆ ಬಂದ ಕೆಲವೇ ವರ್ಷಗಳಲ್ಲಿ ‘ನನ್ನದೊಂದು ಸ್ವಂತ ಮನೆಯಿದ್ದರೆ’... ಎಂದು ಯೋಚಿಸುವವರೇ ಹೆಚ್ಚು. ಇನ್ನು, ಪರ ಊರಿನಲ್ಲಿರುವ ಹಲವರಿಗೆ ‘ಬೆಂಗಳೂರಿನಲ್ಲೊಂದು ಕೆಲಸ ಸಿಕ್ಕು, ಅಲ್ಲಿಯೇ ಮನೆಯಿದ್ದರೆ’... ಎಂಬ ಕನಸು.

ಆದರೆ ಹೆಚ್ಚು ಮಾಹಿತಿಯೇ ಇಲ್ಲದೇ ಈ ಮಾಯಾನಗರಿಯಲ್ಲಿ ಎಲ್ಲಿ ಮನೆ ಕೊಳ್ಳುವುದು? ಯಾವ ಪ್ರದೇಶದಲ್ಲಿ ನಿವೇಶನಕ್ಕೆ ಎಷ್ಟು ಬೆಲೆ ಇದೆ? ನಮ್ಮ ಬಜೆಟ್‌ಗೆ ಸರಿ ಹೊಂದುವ ಮನೆ, ನಿವೇಶನ, ಅಪಾರ್ಟ್‌ಮೆಂಟ್‌, ವಿಲ್ಲಾ ಯಾವ ಪ್ರದೇಶದಲ್ಲಿದೆ? ರಿಯಲ್ ಎಸ್ಟೇಟ್ ಉದ್ಯಮಿಗಳು ಹೆಚ್ಚಿಗೆ ಹಣ ಹೇಳಿ ಮೋಸ ಮಾಡಿಬಿಟ್ಟರೆ...? ಹೀಗೆ ಹತ್ತು ಹಲವಾರು ಸಂಶಯ ಮನದಲ್ಲಿ ಸುಳಿಯುವುದು ಸಹಜ.
ಇಂಥ ಸಂದೇಹ ಪರಿಹಾರಕ್ಕಾಗಿ ಭಾರತೀಯ ವಾಣಿಜ್ಯ ಮತ್ತು ನಿರ್ವಹಣೆ ಸಂಸ್ಥೆಯ (ಐಐಎಂಬಿ) ಭಾಗವೇ ಆಗಿರುವ ‘ಸೆಂಚ್ಯುರಿ ರಿಯಲ್ ಎಸ್ಟೇಟ್ ರಿಸರ್ಚ್ ಸೆಂಟರ್’ ವತಿಯಿಂದ ಹೊಸದೊಂದು ವೆಬ್‌ಸೈಟ್‌ಗೆ ಚಾಲನೆ ನೀಡಲಾಗಿದೆ. ಸದ್ಯ, ಜನರಿಂದಲೇ ಮಾಹಿತಿ ಪಡೆಯಲಾಗುತ್ತಿದ್ದು, ಶೀಘ್ರದಲ್ಲಿಯೇ ಬೆಂಗಳೂರಿನ ಎಲ್ಲ ಪ್ರದೇಶಗಳ  ನಿವೇಶನಗಳ (ಬಹುತೇಕ ನಿಖರ) ಬೆಲೆಯನ್ನು ಜನರ ಮುಂದಿಡಲಿದೆ.

ADVERTISEMENT

ವೆಬ್‌ಸೈಟ್ ಕೆಲಸ ಹೀಗಿದೆ:
ಈ ವೆಬ್‌ಸೈಟ್ ವಿಳಾಸ ‘ಐಬಾಟ್ ಪ್ರಾಪರ್ಟಿ ಡಾಟ್ ಕಾಮ್ ’ (http://iboughtproperty.com/). ನೀವು ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನಲ್ಲಿ ನಿವೇಶನ, ಅಪಾರ್ಟ್‌ಮೆಂಟ್‌, ವಿಲ್ಲಾ ಅಥವಾ ನಿವೇಶನದಲ್ಲಿ ಒಂದೇ ಮನೆ ಪ್ರತ್ಯೇಕವಾಗಿ ನಿರ್ಮಾಣಗೊಂಡಿರುವಂ ತಹುದನ್ನು  ಖರೀದಿ ಮಾಡಿದ್ದರೆ ಅಥವಾ ಮಾರಿದ್ದರೆ ಅದರ ಬಗ್ಗೆ ಅಲ್ಲಿ ಮಾಹಿತಿ ಕೇಳಲಾಗುತ್ತದೆ. ಒಂದೆರಡು ನಿಮಿಷಗಳಲ್ಲಿ ಈ ಮಾಹಿತಿಯನ್ನು ಆಯಾ ಕಾಲಂಗಳಲ್ಲಿ ಭರ್ತಿ ಮಾಡಬಹುದು.

ಹಣದ ವಿಚಾರ ಅಲ್ಲವೇ? ಆದಾಯ ತೆರಿಗೆ ಇತ್ಯಾದಿಗಳ ಭಯದಲ್ಲಿ ಅವುಗಳಿಂದ ತಪ್ಪಿಸಿಕೊಳ್ಳಲು ತಪ್ಪು ಮಾಹಿತಿ ನೀಡುವ ಎಲ್ಲ ಸಾಧ್ಯತೆಗಳೂ ಇರುತ್ತದೆ. ಆದರೆ  ವಿವರ ನೀಡುವ ಮಾಲೀಕರು ಇಲ್ಲಿ ಹೆದರಬೇಕಾದ ಅಗತ್ಯವಿಲ್ಲ. ಏಕೆಂದರೆ ಇಲ್ಲಿ ನಿಮ್ಮ ವೈಯಕ್ತಿಕವಾದ ಯಾವುದೇ ರೀತಿಯ ಮಾಹಿತಿ ಕೇಳಲಾಗುವುದಿಲ್ಲ. ನಿಮ್ಮ ಮೇಲ್ ಐ.ಡಿ, ದೂರವಾಣಿ ಸಂಖ್ಯೆ, ಮನೆಯ ವಿಳಾಸ... ಹೀಗೆ ಯಾವುದೇ ರೀತಿಯ ದಾಖಲೆ ನೀಡುವ ಅಗತ್ಯವಿಲ್ಲ.

ನೇರವಾಗಿ ವೆಬ್‌ಸೈಟ್‌ಗೆ ಲಾಗಿನ್ ಆದರೆ ಮುಗಿಯಿತು. ಕಂಪ್ಯೂಟರ್‌ ಪರದೆ ಮೇಲೆ ಮೂಡುವ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದರೆ ಆಯಿತು ಅಷ್ಟೆ. ಯಾವುದನ್ನು ಖರೀದಿ/ ಮಾರಾಟ ಮಾಡಲಾಗಿದೆ? ಆ ಸ್ತಿರಾಸ್ತಿ ಯಾವ ಪ್ರದೇಶದಲ್ಲಿದೆ? ಯಾವ ಇಸವಿಯಲ್ಲಿ ಖರೀದಿ/ಮಾರಾಟ ಮಾಡಿದ್ದು? ಆಗ ಅದಕ್ಕೆ ನೀವು ನೀಡಿರುವ/ಪಡೆದ ಬೆಲೆ ಎಷ್ಟು? ಇಷ್ಟೇ ಪ್ರಶ್ನೆಗಳಿಗೆ ಉತ್ತರಿಸಿದರೆ ಸಾಕು, ಎಲ್ಲ  ದಾಖಲೆ ಅಂತರ್ಜಾಲ ತಾಣದಲ್ಲಿ ದಾಖಲಾಗುತ್ತದೆ. 

ಹೀಗೆ ಎಲ್ಲರೂ ನೀಡುವ ಮಾಹಿತಿಗಳನ್ನು  ಕಲೆ ಹಾಕಿ ಆಯಾ ಪ್ರದೇಶದ ನಿಜವಾದ ಬೆಲೆ ನಿಗದಿ ಮಾಡಲಾಗುತ್ತದೆ. ‘ಈ ರೀತಿ ಮಾಡಿದರೆ ಮುಂದೆ ನಿವೇಶನ, ಮನೆ, ಅಪಾರ್ಟ್‌ಮೆಂಟ್‌, ವಿಲ್ಲಾ ಖರೀದಿ ಮಾಡುವವರಿಗೆ ಇದು ಅನುಕೂಲ ಆಗುತ್ತದೆ’ ಎನ್ನುತ್ತಾರೆ ಈ ಅಂತರ್ಜಾಲ ತಾಣದ ಉಸ್ತುವಾರಿ ವಹಿಸಿಕೊಂಡಿರುವ ಐಐಎಂಬಿ ಸಹ ಉಪನ್ಯಾಸಕ ವೆಂಕಟೇಶ್ ಪಂಚಾಪಕೇಷನ್.
ಬಿಬಿಎಂಪಿ ವ್ಯಾಪ್ತಿಗೆ ಬರುವ ಸುಮಾರು 300 ಪ್ರದೇಶಗಳನ್ನು ಈ ವೆಬ್‌ಸೈಟ್‌ನಲ್ಲಿ ಅಳವಡಿಸಲಾಗಿದೆ. ವೆಬ್‌ತಾಣದಲ್ಲಿಯೇ ಬೆಂಗಳೂರಿನ ಸಂಪೂರ್ಣ ನಕ್ಷೆಯೂ ಇರುತ್ತದೆ. ಯಾವ ಸ್ಥಳದಲ್ಲಿ ಮನೆ, ನಿವೇಶನ ಇತ್ಯಾದಿ ಖರೀದಿ ಅಥವಾ ಮಾರಾಟ ಮಾಡಲಾಗಿದೆಯೋ  ಆ ಸ್ಥಳಗಳ ಮೇಲೆ ಕ್ಲಿಕ್‌ ಮಾಡಿಯೂ ಮಾಹಿತಿ ನೀಡಬಹುದು.

ಸುಳ್ಳಿಗೂ ಅವಕಾಶ:
ವೆಬ್‌ಸೈಟ್‌ನಲ್ಲಿ ಮನೆ/ ನಿವೇಶನಗಳ ಕುರಿತಾಗಿ ಈ ರೀತಿ ಮಾಹಿತಿ ನೀಡುವಾಗ ವೈಯಕ್ತಿಕ ವಿವರ ನೀಡುವ ಅಗತ್ಯವಿಲ್ಲದ ಕಾರಣ, ಅಲ್ಲಿ ಪರೀಕ್ಷೆ ಮಾಡುವ ಉದ್ದೇಶದಿಂದಲೋ, ಕೀಟಲೆಗೆಂದೋ ಸುಳ್ಳು ಮಾಹಿತಿ ನೀಡುವ ಸಾಧ್ಯತೆಗಳೂ ಇವೆ. ಈ ಬಗ್ಗೆ ವೆಬ್‌ಸೈಟ್‌ನ ‘ಲೀಡ್ ರಿಸರ್ಚರ್’ ಉಮಾ ಸೀತಾರಾಮನ್ ಉತ್ತರಿಸುವುದು ಹೀಗೆ: ‘ಇಲ್ಲಿ ತಪ್ಪು ಮಾಹಿತಿ ನೀಡುವ ಸಾಧ್ಯತೆಗಳು ಖಂಡಿತಾ ಇವೆ. ಆದರೆ ಸಾವಿರಾರು ಮಂದಿ ಇಲ್ಲಿ ಮಾಹಿತಿ ನೀಡುವಾಗ ಅದರಲ್ಲಿ ಶೇ 10ರಿಂದ 12ರಷ್ಟು ಸುಳ್ಳು ಮಾಹಿತಿ ಇರಬಹುದು. ಅದರ ಬಗ್ಗೆ ತಿಳಿದುಕೊಳ್ಳುವುದು ಕಷ್ಟದ ವಿಚಾರವೇನೂ ಅಲ್ಲ. ಸಾಮಾನ್ಯವಾಗಿ ಯಾವ ಪ್ರದೇಶದಲ್ಲಿ ಎಷ್ಟು ಬೆಲೆ ಇದೆ ಎನ್ನುವುದು ನಮಗೆ ಈಗಾಗಲೇ ತಿಳಿದಿದೆ. ಆದ್ದರಿಂದ ತಮಾಷೆಗೋ,  ಪರೀಕ್ಷೆ ಮಾಡಲೆಂದೋ, ಕಂಪ್ಯೂಟರ್‌ ಕೀಲಿಮಣೆ ಮೇಲೆ ಬೆರಳಿಡುವಾಗ ಅಪ್ಪಿತಪ್ಪಿಯೋ ತೀರಾ ಕಡಿಮೆ ಅಥವಾ ತೀರಾ ಹೆಚ್ಚು ಮೊತ್ತ ದಾಖಲಿಸಿದರೆ ಅದರ ಸತ್ಯಾಸತ್ಯತೆಯನ್ನು ನಾವು ಪರೀಕ್ಷಿಸುತ್ತೇವೆ. ಅಂಥವುಗಳನ್ನು ಬೇರ್ಪಡಿಸಿ ನಿಜವಾಗಿರುವ ಮೊತ್ತವನ್ನು ಮಾತ್ರ  ಅಂತಿಮವಾಗಿ ಜನರಿಗೆ ನೀಡಲಾಗುವುದು’.

‘ಒಟ್ಟಾರೆ, ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಪಾರದರ್ಶಕತೆ ತರುವುದು ನಮ್ಮ ಉದ್ದೇಶ. ಸದ್ಯದ ಪರಿಸ್ಥಿತಿಯಲ್ಲಿ ರಿಯಲ್‌ ಎಸ್ಟೇಟ್‌ಗೆ ಸಂಬಂಧಿಸಿದ ಯಾವುದೇ ಮಾಹಿತಿ ಬೇಕಿದ್ದರೂ ರಿಯಲ್‌ ಎಸ್ಟೇಟ್‌ ಉದ್ಯಮಿಗಳನ್ನು ಕೇಳಬೇಕು ಇಲ್ಲವೇ ಸರ್ಕಾರದಿಂದ ಮಾಹಿತಿ ಪಡೆಯಬೇಕು. ಇದು ಎಷ್ಟೋ ಮಂದಿ ಜನಸಾಮಾನ್ಯರಿಗೆ ಸಾಧ್ಯವಾಗದ ಮಾತು. ಆದ್ದರಿಂದ ಜನರಿಂದ, ಜನರಿಗಾಗಿ ಇರುವ ನೂತನ ಯೋಜನೆ ಇದು. ಇಂಥ ಪ್ರಯೋಗ ದೇಶದಲ್ಲಿಯೇ ಪ್ರಥಮ. ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಇದನ್ನು ಆರಂ ಭಿಸಲಾಗಿದೆ.

ಆರಂಭಿಸಿರುವ ಒಂದು ವಾರದಲ್ಲಿಯೇ ಸುಮಾರು ಒಂದೂವರೆ ಸಾವಿರದಷ್ಟು ಮಂದಿ ಮಾಹಿತಿ ನೀಡಿದ್ದಾರೆ. ಇದು ಇಲ್ಲಿ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಬೇರೆ ಬೇರೆ ಮಹಾನಗರಗಳಲೂ ಇದನ್ನು ವಿಸ್ತರಿಸುವ ಯೋಚನೆ ಇದೆ ’ ಎನ್ನುತ್ತಾರೆ ವೆಂಕಟೇಶ್. ಮೂರು ತಿಂಗಳಿಗೊಮ್ಮೆ ಎಲ್ಲ ಮಾಹಿತಿಗಳನ್ನು ಕೆಲಹಾಕಿ ನಿಜವಾದ ಬೆಲೆಯ ಬಗ್ಗೆ ಜನರಿಗೆ ತಿಳಿಸುವ ಯೋಚನೆ ಈ ‘ಗ್ರೂಪ್‌’ಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.